371(ಜೆ) ಸಮರ್ಪಕ ಅನುಷ್ಠಾನಕ್ಕೆ ಆಗ್ರಹ

7
ಉಪ ವಿಭಾಗಾಧಿಕಾರಿಗೆ ಎಸ್‌ಎಫ್‌ಐ ಪದಾಧಿಕಾರಿಗಳ ಮನವಿ ಪತ್ರ

371(ಜೆ) ಸಮರ್ಪಕ ಅನುಷ್ಠಾನಕ್ಕೆ ಆಗ್ರಹ

Published:
Updated:
Prajavani

ಬೀದರ್: ಹೈದರಾಬಾದ್ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ಜಾರಿಗೊಳಿಸಿರುವ ಸಂವಿಧಾನದ ಕಲಂ 371(ಜೆ) ತಿದ್ದುಪಡಿ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ಒತ್ತಾಯಿಸಿದೆ.

ಫೆಡರೇಷನ್ ಜಿಲ್ಲಾ ಘಟಕದ ಅಧ್ಯಕ್ಷ ಅರುಣ ಕೋಡಗೆ ನೇತೃತ್ವದಲ್ಲಿ ಪದಾಧಿಕಾರಿಗಳು ನಗರದಲ್ಲಿ ಶುಕ್ರವಾರ ನಿಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಿಗೆ ಬರೆದ ಮನವಿ ಪತ್ರವನ್ನು ಉಪ ವಿಭಾಗಾಧಿಕಾರಿ ಶಿವಕುಮಾರ ಶಿವಲಂತ ಅವರಿಗೆ ಸಲ್ಲಿಸಿದರು.

ಕೇಂದ್ರ ಸರ್ಕಾರ 371(ಜೆ) ತಿದ್ದುಪಡಿ ಕಾಯ್ದೆ ಜಾರಿಗೊಳಿಸಿ ಐದು ವರ್ಷ ಕಳೆದರೂ ಉದ್ಯೋಗ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿಲ್ಲ. ಈ ತಿದ್ದುಪಡಿ ಕಾಯ್ದೆಯು ಈ ಭಾಗದ ರಾಜಕಾರಣಿಗಳ ರಾಜಕೀಯ ದಾಳವಾಗಿದೆಯೇ ಹೊರತು ಅವರು ಅದರೊಳಗಿನ ನ್ಯೂನ್ಯತೆಗಳನ್ನು ಸರಿಪಡಿಸಲು ಮುಂದಾಗುತ್ತಿಲ್ಲ ಎಂದು ಅರುಣ ಕೋಡಗೆ ಬೇಸರ ವ್ಯಕ್ತಪಡಿಸಿದರು.

12 ಇಲಾಖೆಗಳು ಹಾಗೂ ಅವುಗಳ ಅಧೀನದಲ್ಲಿರುವ ನಿಗಮ, ಮಂಡಳಿ, ಪ್ರಾಧಿಕಾರಗಳಲ್ಲಿ ಹುದ್ದೆ ಗುರುತಿಸಿ ಸ್ಥಳೀಯ ವೃಂದ ರಚಿಸಿ, ಅಧಿಸೂಚನೆ ಹೊರಡಿಸುವ ಕೆಲಸ ಆಗಿಲ್ಲ. ನೇರ ನೇಮಕಾತಿ ಹುದ್ದೆಗಳಲ್ಲಿ 12 ಇಲಾಖೆಗಳಲ್ಲಿ 35 ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. 37 ಸಾವಿರ ಹುದ್ದೆಗಳನ್ನು ಬಡ್ತಿ ಮೂಲಕ ತುಂಬಬೇಕಾಗಿದೆ ಎಂದು ಒತ್ತಾಯಿಸಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಲ್ಲಿ 6,728, ಆರೋಗ್ಯ ಮತ್ತು ಕುಟುಂಬ ಕಲ್ಯಾಣ 4,780, ನಗರಾಭಿವೃದ್ಧಿ 4,870 ಹಾಗೂ ಸಮಾಜ ಕಲ್ಯಾಣ ಇಲಾಖೆಯಲ್ಲಿ 3,600 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯೊಂದರಲ್ಲೇ ಬಡ್ತಿ ಮೂಲಕ ತುಂಬಬೇಕಾದ ಹುದ್ದೆಗಳ ಸಂಖ್ಯೆ 30,173 ಇದೆ ಎಂದು ತಿಳಿಸಿದರು.

ಹೈದರಾಬಾದ್ ಕರ್ನಾಟಕ ಭಾಗದ ಆರು ಜಿಲ್ಲೆಗಳ ಅಭಿವೃದ್ಧಿಗಾಗಿ ಸ್ಥಾಪಿಸಲಾದ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಸಾಕಷ್ಟು ಅನುದಾನ ಬರುತ್ತಿದೆ. ಆದರೆ, ಅದನ್ನು ಬಳಸುವಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ ಎಂದು ದೂರಿದರು.

2018-19ನೇ ಸಾಲಿಗೆ ಮಂಡಳಿ ವ್ಯಾಪ್ತಿಯ ಜಿಲ್ಲೆಗಳಿಗೆ ಅನುದಾನ ಹಂಚಿಕೆ ಮಾಡಿದರೂ ಈವರೆಗೆ ಕ್ರಿಯಾ ಯೋಜನೆ ನೀಡಿಲ್ಲ ಎಂದು ಆಪಾದಿಸಿದರು.

ಈ ವರ್ಷ ಮಂಡಳಿ ಅನುದಾನದಡಿಯ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಘಟಕದ ಉಪಾಧ್ಯಕ್ಷ ಅಮರ ಗಾದಗಿ, ಕಾರ್ಯದರ್ಶಿ ಅವಿನಾಶ ಪಾಟೀಲ ನಿಯೋಗದಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !