ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಬ್ರುವರಿಯಲ್ಲಿ ಬೀದರ್‌ನಲ್ಲಿ ಅಂತರರಾಷ್ಟ್ರೀಯ ಜನಪದ ಉತ್ಸವ, ಮೋದಿಗೆ ಆಹ್ವಾನ

Last Updated 21 ಸೆಪ್ಟೆಂಬರ್ 2019, 12:39 IST
ಅಕ್ಷರ ಗಾತ್ರ

ಬೀದರ್: ‘2020ರ ಫೆಬ್ರುವರಿ ಕೊನೆಯ ವಾರದಲ್ಲಿ ಬೀದರ್‌ನ ಬಿ.ವಿ.ಭೂಮರೆಡ್ಡಿ ಕಾಲೇಜಿನ ಆವರಣದಲ್ಲಿ ಐದು ದಿನಗಳ ಅಂತರರಾಷ್ಟ್ರೀಯ ಜನಪದ ಉತ್ಸವ ನಡೆಸಲಾಗುವುದು. ಪ್ರಧಾನಮಂತ್ರಿ ನರೇಂದ್ರ ಮೋದಿ ಅಥವಾ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಉತ್ಸವದ ಉದ್ಘಾಟನೆಗೆ ಆಹ್ವಾನಿಸಲಾಗುವುದು’ ಎಂದು ನವದೆಹಲಿಯ ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ ಪ್ರಧಾನ ಕಾರ್ಯದರ್ಶಿ ಹಾಸನ ರಘು ಹೇಳಿದರು.

ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಜಾನಪದ ಪರಿಷತ್‌ ಸಹಕಾರದೊಂದಿಗೆ ಉತ್ಸವ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಇದಕ್ಕೆ ಅಂದಾಜು ₹ 4 ಕೋಟಿ ಖರ್ಚಾಗಲಿದೆ’ ಎಂದು ನಗರದಲ್ಲಿ ಶನಿವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

‘ಉತ್ಸವಕ್ಕೆ ಸಾರ್ಕ್‌ ದೇಶಗಳ 15 ಕಲಾ ತಂಡಗಳನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ. ದೇಶದ ಪ್ರತಿಯೊಂದು ರಾಜ್ಯದ ಕಲಾವಿದರ ತಂಡ ಭಾಗವಹಿಸಲಿದೆ. ಕರ್ನಾಟಕ ರಾಜ್ಯ ಹಾಗೂ ಬೀದರ್‌ ಜಿಲ್ಲೆಯಿಂದ ತಲಾ 10 ತಂಡಗಳು ಪಾಲ್ಗೊಳ್ಳಲಿವೆ’ ಎಂದು ಹೇಳಿದರು.

‘ಮೂರು ಸಮನಾಂತರ ವೇದಿಕೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು. ಜನಪದ ಕಲಾ ಪ್ರದರ್ಶನದ ಜತೆಗೆ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪರಿಚಯಿಸುವ ದಿಸೆಯಲ್ಲಿ ಉಪನ್ಯಾಸ ಕಾರ್ಯಕ್ರಮ ಸಹ ನಡೆಯಲಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ಅನುಮತಿ ಕೊಟ್ಟರೆ ಬೀದರ್‌ ಕೋಟೆಯ ಆವರಣದಲ್ಲೂ ಒಂದು ವೇದಿಕೆಯನ್ನು ಸಿದ್ಧಪಡಿಸಲಾಗುವುದು’ ಎಂದು ಹೇಳಿದರು.

‘ಗ್ರಾಮೀಣ ಪ್ರದೇಶದ ಕಲೆ, ಕೃಷಿ, ಆಹಾರ, ಉಡುಗೆ ಪ್ರದರ್ಶನ ಏರ್ಪಡಿಸಲು ನಿರ್ಧರಿಸಲಾಗಿದೆ. ದೇಶದ ಏಳು ಸಾಂಸ್ಕೃತಿಕ ವಲಯಗಳು ಕಲಾ ತಂಡಗಳನ್ನು ಪ್ರಾಯೋಜಿಸಲಿವೆ. ಸರ್ಕಾರದ ವಿವಿಧ ಅಂಗ ಸಂಸ್ಥೆಗಳ ಜತೆಗೆ ದೇಣಿಗೆ ರೂಪದಲ್ಲೂ ಹಣ ಸಂಗ್ರಹಿಸಲಾಗುವುದು’ ಎಂದು ತಿಳಿಸಿದರು.

‘ಅಂತರರಾಷ್ಟ್ರೀಯ ಜನಪದ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲು ಕನಿಷ್ಠ ಏಳು ತಿಂಗಳು ಬೇಕು. ನಮ್ಮ ಬಳಿ ಐದು ತಿಂಗಳ ಅವಧಿ ಮಾತ್ರ ಇದೆ. ಹೀಗಾಗಿ ವಿವಿಧ ಸಮಿತಿಗಳನ್ನು ರಚಿಸಿ ಆ ಮೂಲಕ ಉತ್ಸವವನ್ನು ಯಶಸ್ವಿಗೊಳಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

ನವದೆಹಲಿಯ ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ ಅಧ್ಯಕ್ಷ ನಿರ್ಮಲ ವೈದ್ಯ ಮಾತನಾಡಿ, ‘ಬೀದರ್‌ ಜಿಲ್ಲೆಯಲ್ಲಿ ಜನಪದ ಕಲಾವಿದರ ಸಂಖ್ಯೆ ಅಧಿಕ ಇದೆ. ಇಲ್ಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು ಅವಕಾಶ ಇದೆ. ಇದರ ಪೂರ್ಣ ಸದುಪಯೋಗ ಪಡೆಯಲಾಗುವುದು’ ಎಂದು ತಿಳಿಸಿದರು.

ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಬಿ. ನಾಯಕ್‌ ಮಾತನಾಡಿ, ‘ಭಾರತದ ಜನಪದದಲ್ಲಿ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಬಹುದಾಗಿದೆ. ಬಹು ಸಂಸ್ಕೃತಿಯಿಂದ ಏಕ ಸಂಸ್ಕೃತಿಯ ಕಡೆಗೆ ಸಾಗುತ್ತಿರುವ ಇಂದಿನ ಪೀಳಿಗೆಯಲ್ಲಿ ಸಂಸ್ಕೃತಿ ಜಾಗೃತಿ ಮೂಡಿಸಲು ಉತ್ಸವ ನೆರವಾಗಲಿದೆ’ ಎಂದರು.

‘ಅಂತರರಾಷ್ಟ್ರೀಯ ಉತ್ಸವ ರಾಜ್ಯದ ನೆಲದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. 2011ರಲ್ಲಿ ದಾನಿಗಳಿಂದ ₹ 1 ಕೋಟಿ ಸಂಗ್ರಹಿಸಲಾಗಿತ್ತು. ಅದರಲ್ಲಿ ₹ 74 ಲಕ್ಷ ಖರ್ಚಾಗಿತ್ತು. ಉಳಿದ ಹಣವನ್ನು ಕಲಾ ಪರಿಷತ್‌ಗೆ ಒಪ್ಪಿಸಲಾಗಿತ್ತು’ ಎಂದು ತಿಳಿಸಿದರು.

ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಎಚ್‌.ಎಂ.ಮಹೇಶ್ವರಯ್ಯ, ಇಟಲಿಯ ಅಂತರರಾಷ್ಟ್ರೀಯ ಜನಪದ ಕಲಾ ಸಂಸ್ಥೆಯ ದೀಪಕ ತೋಮರ್, ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಾದೇಶಿಕ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಜಗನ್ನಾಥ ಹೆಬ್ಬಾಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT