ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವಾಡ, ವಿಳಾಸಪುರ ಕರೆ ಭರ್ತಿ

ಜಿಲ್ಲೆಯಲ್ಲಿ ದಿನವಿಡೀ ದರ್ಶನ ನೀಡದ ಸೂರ್ಯ
Last Updated 19 ಸೆಪ್ಟೆಂಬರ್ 2020, 14:32 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯಲ್ಲಿ 24 ಗಂಟೆಗಳ ಅವಧಿಯಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಿದೆ. ಬೀದರ್‌ ತಾಲ್ಲೂಕಿನ ಜನವಾಡದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಮೀಪದ ಮನೆಯೊಂದರ ಗೋಡೆ ಕುಸಿದು ಗುರಮ್ಮ ಹಣಮಂತ (77) ಮೃತಪಟ್ಟಿದ್ದಾರೆ.

ತೆಲಂಗಾಣದ ಗಡಿ ಹಾಗೂ ಕಾರಂಜಾ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಕಾರಂಜಾ ಜಲಾಶಯಕ್ಕೆ ನಿತ್ಯ 1,851 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದಲ್ಲಿ ಶನಿವಾರ ಸಂಜೆಯ ವೇಳೆಗೆ 3.508 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಬಸವಕಲ್ಯಾಣದ ಚುಳಕಿನಾಲಾ ಬ್ಯಾರೇಜ್, ಬೀದರ್ ತಾಲ್ಲೂಕಿನ ವಿಳಾಸಪುರ ಹಾಗೂ ಜನವಾಡದ ಪೂರ್ವ ಕೆರೆ ಭರ್ತಿಯಾಗಿದೆ.

ಬೀದರ್ ತಾಲ್ಲೂಕಿನ ಜನವಾಡದಲ್ಲಿ 112 ಮಿ.ಮೀ, ಚಿಟಗುಪ್ಪದಲ್ಲಿ 70 ಮಿ.ಮೀ, ತಾಲ್ಲೂಕಿನ ರಾಮಪುರದಲ್ಲಿ 66 ಮಿ.ಮೀ, ಹುಮನಾಬಾದ್‌ನಲ್ಲಿ 64 ಮಿ.ಮೀ, ಬೀದರ್‌ ದಕ್ಷಿಣದಲ್ಲಿ 24 ಮಿ.ಮೀ, ಬಸವಕಲ್ಯಾಣ ತಾಲ್ಲೂಕಿನ ಕೊಹಿನೂರಲ್ಲಿ 8 ಮಿ.ಮೀ, ರಾಜೇಶ್ವರದಲ್ಲಿ 46 ಮಿ.ಮೀ, ಹುಲಸೂರಲ್ಲಿ 20 ಮಿ.ಮೀ, ಭಾಲ್ಕಿ ತಾಲ್ಲೂಕಿನ ಹಲಬರ್ಗಾದಲ್ಲಿ 11 ಮಿ.ಮೀ, ಸಾಯಿಗಾಂವದಲ್ಲಿ 35 ಮಿ.ಮೀ ಹಾಗೂ ಲಖನಗಾಂವದಲ್ಲಿ 14 ಮಿ.ಮೀ
ಮಳೆಯಾಗಿದೆ.

ಮಳೆಯ ಅಬ್ಬರಕ್ಕೆ ಜಿಲ್ಲೆಯ ಸಾವಿರಾರು ಹೆಕ್ಟೇರ್‌ ಬೆಳೆ ನೀರು ಪಾಲಾಗಿದೆ. ರಸ್ತೆಗಳು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿವೆ. ಶನಿವಾರ ಆಯಾ ತಾಲ್ಲೂಕುಗಳ ತಹಶೀಲ್ದಾರರು ಕಂದಾಯ ಅಧಿಕಾರಿಗಳ ಸಭೆ ನಡೆಸಿ ಹಾನಿಯ ಪ್ರಾಥಮಿಕ ಮಾಹಿತಿ ಪಡೆದುಕೊಂಡರು.

ಭಾರಿ ಮಳೆಗೆ ನಗರದ ರಸ್ತೆಗಳು ಹಾಳು

ಬೀದರ್‌: ನಗರದ ಎಸ್.ಪಿ. ಕಚೇರಿ, ಲೋಕೋಪಯೋಗಿ ಇಲಾಖೆಯ ಕಚೇರಿಯಿಂದ ಹಬ್ಸಿಕೋಟ್ ಅತಿಥಿಗೃಹಕ್ಕೆ ಹೋಗುವ ರಸ್ತೆ ಮಳೆಯಿಂದ ಸಂಪೂರ್ಣ ಹಾಳಾಗಿದೆ. ಚೌಬಾರಾದಿಂದ ಮಂಗಲಪೇಟ್‌ ದರ್ವಾಜಾ ಮಾರ್ಗವಾಗಿ ಹೋಗುವ ರಸ್ತೆಯೂ ಕಿತ್ತುಕೊಂಡು ಹೋಗಿದೆ.

ಕೆಇಬಿ ಕಚೇರಿಯಿಂದ ವಿಆರ್‌ಎಲ್‌ ಬಸ್‌ ನಿಲ್ದಾಣ ಕಡೆಗೆ ಹೋಗುವ ರಸ್ತೆಯ ಮೇಲಿನ ಡಾಂಬರ್‌ ಕಿತ್ತುಕೊಂಡು ಹೋಗಿದೆ. ವಿದ್ಯಾನಗರದ ರಸ್ತೆಗಳು ಹಾಳಾಗಿವೆ. ಮಳೆಗೆ ಗ್ರಾಮೀಣ ರಸ್ತೆಗಳು ಕಿತ್ತುಕೊಂಡು ಹೋಗಿವೆ.

ಅಧಿಕಾರಿ ಮಾಹಿತಿ ಪಡೆದ ಡಿಸಿ

ಬೀದರ್‌: ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಅವರು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿ ಮಳೆಯಿಂದಾದ ಹಾನಿಯ ಬಗ್ಗೆ ಮಾಹಿತಿ ಪಡೆದರು.

ಮಳೆಯ ಅಬ್ಬರಕ್ಕೆ ಜಿಲ್ಲೆಯ ವಿವಿಧೆಡೆ ಮನೆಗಳು ಭಾಗಶಃ ಹಾಗೂ ಪೂರ್ಣ ಕುಸಿದಿವೆ. ರಸ್ತೆ ಮತ್ತು ಸೇತುವೆಗಳು ಹಾಳಾಗಿವೆ. ಮನೆ ಹಾನಿ ಆಗಿರುವ ಬಗ್ಗೆ ನೋಟ್ ಕ್ಯಾಮ್ ಆ್ಯಪ್ ಮೂಲಕ ಛಾಯಾಚಿತ್ರಗಳೊಂದಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಮಾಂಜ್ರಾ ನದಿ ತಟದಲ್ಲಿರುವ ಭಾಲ್ಕಿ, ಔರಾದ್ ಹಾಗೂ ಕಮಲನಗರ ಗಡಿ ಗ್ರಾಮಗಳ ಮೇಲೆ ವಿಶೇಷ ನಿಗಾ ಇಡಬೇಕು. ಬ್ರಿಜ್ ಕಂ ಬ್ಯಾರೇಜ್, ಕೆರೆ ಹಳ್ಳಗಳ ಸಂಪೂರ್ಣ ಮಾಹಿತಿಯನ್ನು ದಾಖಲಿಸಬೇಕು ಎಂದು ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.
ಪ್ರವಾಹದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕು. ಕಲುಷಿತ ನೀರು ಸೇವನೆಯಿಂದ ಸಾಂಕ್ರಾಮಿಕ ರೋಗಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪರಿಹಾರ ಕೇಂದ್ರಗಳಲ್ಲಿ ಆಹಾರ, ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು ಸೂಚಿಸಿದರು.

ಪ್ರಕೃತಿ ವಿಕೋಪ ಪ್ರದೇಶಗಳಲ್ಲಿ ತುರ್ತು ಸಲಕರಣೆಗಳು ಬೇಕಾದಲ್ಲಿ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಯಿಂದ ಖರೀದಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್, ಜಿ.ಪಂ. ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಬೀದರ್ ಉಪ ವಿಭಾಗಾಧಿಕಾರಿ ಗರೀಮಾ ಪನ್ವಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT