ಗುರುವಾರ , ಮಾರ್ಚ್ 30, 2023
23 °C
ಜಿಲ್ಲೆಯ ವಿವಿಧೆಡೆ ಕರ್ನಾಟಕ ರಾಜ್ಯೋತ್ಸವ ಆಚರಣೆ: ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ

‘ಜಿಲ್ಲೆಯ ಸಮಗ್ರ ಪ್ರಗತಿಗೆ ಶ್ರಮಿಸೋಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ‘ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಶ್ರಮಿಸೋಣ. ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಸಮೃದ್ಧ ಹಾಗೂ ಸ್ವಾವಲಂಬಿ ನಾಡು ನಿರ್ಮಿಸಲು ಸಂಕಲ್ಪ ಮಾಡೋಣ’ ಎಂದು ನೂತನ ಜಿಲ್ಲಾಧಿಕಾರಿ ಡಾ.ಅವಿನಾಶ ಮೆನನ್‌ ಹೇಳಿದರು.

ನಗರದ ಡಿ.ಎ.ಆರ್ ಪೊಲೀಸ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

ಕನ್ನಡನಾಡಿನ ಇತಿಹಾಸ, ಪರಂಪರೆ, ಸಾಂಸ್ಕೃತಿಕ ಹಿರಿಮೆ ವೈಶಿಷ್ಟ್ಯಗಳಿಂದ ಕೂಡಿದೆ. ಅನೇಕ ಸುಪ್ರಸಿದ್ಧ ರಾಜಮನೆತನದವರು, ಧೀರರು ಈ ನಾಡಿನಲ್ಲಿ ಆಳ್ವಿಕೆ ನಡೆಸಿ ಅನೇಕ ಅಮೂಲ್ಯ ಮತ್ತು ಜನಪರವಾದ ಕೊಡುಗೆಗಳನ್ನು ನೀಡಿದ್ದಾರೆ. ಭಾವೈಕ್ಯದ ಸ್ವರ್ಗವಾಗಿರುವ ಕರ್ನಾಟಕದಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕುತ್ತಿದ್ದಾರೆ ಎಂದರು.

ಕನ್ನಡ ನುಡಿ, ಸಾಹಿತ್ಯ ಹಾಗೂ ಏಕೀಕರಣ ಚಳವಳಿಗೆ ರಾಯಚೂರಿನ ಕೊಡುಗೆ ಸ್ಮರಣೀಯವಾಗಿದೆ. ಕನ್ನಡ ಭಾಷೆಯನ್ನು ಈ ಭಾಗದ ದಾಸರು, ಸಾಹಿತಿಗಳು, ವಚನಕಾರರು, ಜನಪದರು ಶ್ರೀಮಂತಗೊಳಿಸಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಪಂಡಿತ್ ಸಿದ್ದರಾಮ ಜಂಬಲದಿನ್ನಿ, ನರಸಿಂಹಲು ವಡವಾಟಿ, ಗಜಲ್ ಗುಂಡಮ್ಮ, ಪಂಡಿತ್ ಮಾಣಿಕರಾವ್ ರಾಯಚೂರಕರ್, ಚನ್ನಬಸಪ್ಪ ಬೆಟ್ಟದೂರು, ಶಂಕರಗೌಡ ಬೆಟ್ಟದೂರು ಸೇರಿದಂತೆ ಹಲವರು ಈ ನೆಲದ ಪರಂಪರೆಯನ್ನು ಗಟ್ಟಿಗೊಳಿಸಿದ್ದಾರೆ ಎಂದು ಸ್ಮರಿಸಿದರು.

ಕನ್ನಡದ ಮೇಲೆ ಅನ್ಯ ಭಾಷೆಗಳು ದಾಳಿ ಮಾಡುತ್ತಿವೆ. ಮಕ್ಕಳಿಗೆ ಕನ್ನಡದ ಕುರಿತ ಪ್ರೀತಿ ಬೆಳೆಸಬೇಕು ಎಂದು ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 13 ಸಾಧಕರಿಗೆ ಜಿಲ್ಲಾಧಿಕಾರಿಯು ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು.

ನಗರಸಭೆ ಅಧ್ಯಕ್ಷ ಈ.ವಿನಯ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್‌.ಬಿ. ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್.ದುರುಗೇಶ, ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ತಹಶೀಲ್ದಾರ್ ಡಾ.ಹಂಪಣ್ಣ ಸಜ್ಜನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯಕ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಶಿಕ್ಷಕ ದಂಡಪ್ಪ ಬಿರದಾರ ನಿರೂಪಿಸಿದರು.

ನಗರದ ವಿವಿಧೆಡೆ ರಾಜ್ಯೋತ್ಸವ

ಕರ್ನಾಟಕ ಸಂಘದ ಆವರಣದಲ್ಲಿ ರಾಜ್ಯೋತ್ಸವದ ನಿಮಿತ್ತ ಜಿಲ್ಲಾಧಿಕಾರಿ ಡಾ.ಅವಿನಾಶ ಮೆನನ್‌ ಅವರು ಧ್ವಜಾರೋಹಣ ನೆರವೇರಿಸಿದರು.

ಭುವನೇಶ್ವರಿ ದೇವಿಯ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಶಾಸಕರಾದ ಡಾ.ಶಿವರಾಜ ಪಾಟೀಲ, ಬಸನಗೌಡ ದದ್ದಲ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ನವಯುಗ ಶಿಕ್ಷಣ ಸಂಸ್ಥೆ: ನಗರದ ನವಯುಗ ಪದವಿಪೂರ್ವ ಕಾಲೇಜು, ನವಯುಗ ಪದವಿ ಮಹಾವಿದ್ಯಾಲಯ, ನವಯುಗ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಸೋಮವಾರ ರಾಜ್ಯೋತ್ಸವ ಆಚರಿಸಲಾಯಿತು.

ಕಲಾ ಮತ್ತು ಶಿಕ್ಷಣ ವಿಭಾಗದ ಮುಖ್ಯಸ್ಥ ರಮೇಶ ಉಪ್ರಾಳ್ ಹಾಗೂ ಕಾಲೇಜಿನ ಉಪಪ್ರಾಚಾರ್ಯೆ ರಿಜ್ವಾನಾ ಪರ್ವಿನ್ ಅವರು ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ನವಯುಗ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಘ್ನೇಶ್ವರನ್, ಆಡಳಿತಾಧಿಕಾರಿ ನರಸಿಂಹಲು ಎನ್., ಆಡಳಿತ ಮಂಡಳಿ ಸದಸ್ಯ ನಾಯಿದ್ ಪಾಷಾ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಈರಣ್ಣ ಪೂಜಾರಿ ಇದ್ದರು.

ರಾಯಚೂರು ಕೃಷಿ ವಿವಿ: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಲಾಯಿತು.

ಕುಲಪತಿ ಡಾ.ಕೆ.ಎನ್. ಕಟ್ಟಿಮನಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ವ್ಯವಸ್ಥಾಪನಾ ಮಂಡಳಿ ಸದಸ್ಯ ಕೊಟ್ರಪ್ಪ ಕೊರೇರ್‌ ಮಾತನಾಡಿ,‘ಹಿರಿ ಯರು ಹಾಕಿಕೊಟ್ಟಿರುವ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು. ಭಾಷಾ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ವ್ಯವಸ್ಥಾಪನಾ ಮಂಡಳಿ ಸದಸ್ಯ ತ್ರಿವಿಕ್ರಮ ಜೋಷಿ ಮಾತನಾಡಿದರು.

ಬಳ್ಳಾರಿಯ ತೋರಣಗಲ್‌ನಲ್ಲಿ ನಡೆದ ಎನ್‌ಸಿಸಿ ಆರ್‌ಡಿಸಿ-I ಕ್ಯಾಂಪ್ ತರಬೇತಿ ಶಿಬಿರದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಎನ್‌ಸಿಸಿ ವಿದ್ಯಾರ್ಥಿಗಳಾದ ಸೃಷ್ಟಿಗೌಡ, ಪಿ.ದಿವ್ಯಾ ಮತ್ತು ಶ್ರಮೋದಯ ಅವರಿಗೆ ಪಾರಿತೋಷಕ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಅಭಿನಂದಿಸಲಾಯಿತು.

ವ್ಯವಸ್ಥಾಪನಾ ಮಂಡಳಿಯ ಸದಸ್ಯ ಸುನಿಲಕುಮಾರ, ಶಿಕ್ಷಣ ನಿರ್ದೇಶಕ ಡಾ. ಎಂ.ಜಿ. ಪಾಟೀಲ ಮತ್ತು ಡಾ. ಎಸ್. ಬಿ.ಗೌಡಪ್ಪ ಇದ್ದರು. ಚಿತ್ರನಟ ಪುನೀತ್ ರಾಜ್‌ಕುಮಾರ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಮೆಕ್ಕಾ ದರವಾಜಾ ಕೋಟೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ರಿಮ್ಸ್ ವೈದ್ಯಕೀಯ ಕಾಲೇಜಿನ ಉಪ ಪ್ರಾಚಾರ್ಯ ಡಾ.ಬಸವರಾಜ ಪಾಟೀಲ ಧ್ವಜಾರೋಹಣ ನೆರವೇರಿಸಿದರು.

ಸಂಘದ ಗೌರವಾಧ್ಯಕ್ಷ ಬಸವರಾಜ ಕಳಸ, ಸಾಹಿತಿ ವೀರಹನುಮಾನ್, ಶೇಖರ್ ಅರ್ಕಸಾಲಿ, ಬಾಬುರಾವ್ ಶೇಗುಣಸಿ, ಸುಲೋಚನಾ ಸಂಘ, ನಂದಿನಿ ಕಳಸ, ಶ್ರೀಗಂಗಾ ಕಳಸ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.