ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | ಗಬ್ಬು ನಾರುತ್ತಿರುವ ರಂಗ ಮಂದಿರ: ಜನಪ್ರತಿನಿಧಿಗಳ ಜಾಣ ಮೌನ

Last Updated 19 ಮಾರ್ಚ್ 2023, 6:19 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲಾ ಕೇಂದ್ರದಲ್ಲಿರುವ ಏಕೈಕ ಸಾಂಸ್ಕೃತಿಕ ಭವನ ‘ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರ’ ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿದೆ. ಹಲವು ಸಮಸ್ಯೆಗಳ ಕೂಪವಾಗಿದ್ದು, ಶೌಚಾಲಯದ ನೀರು ಸಹ ಹರಿದು ಹೋಗದೇ ಆವರಣ ಗಬ್ಬು ನಾರುತ್ತಿದೆ.

ರಂಗ ಮಂದಿರದಲ್ಲಿ ನಿತ್ಯ ಒಂದಿಲ್ಲೊಂದು ಕಾರ್ಯಕ್ರಮ ಇದ್ದೇ ಇರುತ್ತದೆ. ಅತಿ ಹೆಚ್ಚು ಸರ್ಕಾರಿ ಕಾರ್ಯಕ್ರಮಗಳು, ಸಭೆಗಳು, ಜಯಂತಿಗಳು ಇಲ್ಲಿ ನಡೆಯುತ್ತವೆ. ನಿತ್ಯ ಸಾವಿರಾರು ಜನರು ಇಲ್ಲಿಗೆ ಬಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೋಗುತ್ತಾರೆ. ಆದರೆ, ಇಲ್ಲಿ ಸರಿಯಾದ ಸೌಲಭ್ಯ ಇಲ್ಲದ ಕಾರಣ ಪ್ರೇಕ್ಷಕರು ತೊಂದರೆ ಅನುಭವಿಸಬೇಕಾಗಿದೆ.

ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರ ಪ್ರವೇಶ ದ್ವಾರದಿಂದಲೇ ಸಮಸ್ಯೆಗಳು ಶುರುವಾಗುತ್ತವೆ. ಪ್ರವೇಶ ದ್ವಾರದಲ್ಲಿ ನೀರು ಹರಿದು ಹೋಗಲು ಸರಿಯಾದ ಗಟಾರು ಇಲ್ಲ. ಮಳೆಯ ನೀರು ಅಪಾರ ಪ್ರಮಾಣದಲ್ಲಿ ನಿಂತುಕೊಂಡಿರುತ್ತದೆ. ರಂಗ ಮಂದಿರಕ್ಕೆ ನಡೆದುಕೊಂಡು ಬರುವವರು ಬಟ್ಟೆ ಕೊಳೆ ಮಾಡಿಕೊಂಡು ಬರಬೇಕಾಗಿದೆ. ಬೂಟು ಹಾಕಿಕೊಂಡವರ ಗೋಳು ಹೇಳ ತೀರದು. ಬೂಟಿನಲ್ಲಿ ನೀರು ಸೇರಿ ಸಾಕ್ಸ್ ಒದ್ದೆಯಾಗಿ ಹಿಂಸೆ ಅನುಭವಿಸಬೇಕಾಗಿದೆ.

ಕಾರಿನಲ್ಲಿ ಬಂದು ರಂಗ ಮಂದಿರದ ಪ್ರವೇಶ ದ್ವಾರದ ಮುಂದೆ ಇಳಿಯುವ ಸಚಿವರು, ಶಾಸಕರು ಹಾಗೂ ಜಿಲ್ಲೆಯ ಹಿರಿಯ ಅಧಿಕಾರಿಗಳು ಕಣ್ಣಾರೆ ಕಂಡರೂ ಜಾಣ ಮೌನ ವಹಿಸಿದ್ದಾರೆ.

ರಂಗ ಮಂದಿರ ಆವರಣದಲ್ಲಿ ಮೂತ್ರ ಸಂಗ್ರಹ

ರಂಗ ಮಂದಿರದಲ್ಲಿರುವ ಶೌಚಾಲಯಗಳು ಹಾಳಾಗಿವೆ. ಒಳಗಡೆ ಸರಿಯಾದ ವ್ಯವಸ್ಥೆ ಇಲ್ಲ. ಮೂತ್ರಾಲಯಕ್ಕೆ ಜೋಡಿಸಿರುವ ಪೈಪ್‌ಗಳು ಹಾಳಾಗಿವೆ. ಇಲ್ಲಿಯ ಹೊಲಸು ನೀರು ಸರಿಯಾಗಿ ಹರಿದು ಹೋಗುತ್ತಿಲ್ಲ. ಪುರುಷರ ಮೂತ್ರಾಲಯದಿಂದ ಹರಿದು ಬರುವ ಹೊಲಸು ನೀರು ಆವರಣದಲ್ಲೇ ಸಂಗ್ರಹವಾಗಿದೆ. ಆವರಣ ಗಬ್ಬು ನಾರುತ್ತಿದೆ.

ಮಹಿಳೆಯರ ಶೌಚಾಲಯದಲ್ಲೂ ಸ್ವಚ್ಛತೆ ಇಲ್ಲ. ಪಕ್ಕದಲ್ಲಿ ಸೆಫ್ಟಿ ಟ್ಯಾಂಕ್‌ ಇದ್ದರೂ ಶೌಚಾಲಯಗಳು ಕೆಳಮಟ್ಟದಲ್ಲಿರುವ ಕಾರಣ ಹೊಲಸು ನೀರು ನಿಂತಲ್ಲೇ ನಿಲ್ಲುತ್ತಿದೆ. ರಂಗ ಮಂದಿರದಲ್ಲಿ ಸಭೆ, ಸಮಾರಂಭಗಳು ಇದ್ದಾಗ ಮಹಿಳಾ ಶೌಚಾಲಯ ಹಾಗೂ ಸೆಫ್ಟಿ ಟ್ಯಾಂಕ್‌ ಬಳಿಯೇ ಅಡಿಗೆ ಮಾಡಿ ಪ್ರೇಕ್ಷಕರಿಗೆ ಉಣಬಡಿಸಲಾಗುತ್ತಿದೆ.

ಸೆಫ್ಟಿ ಟ್ಯಾಂಕ್‌ ಮೇಲೆ ಕುಳಿತು ಊಟದ ತಟ್ಟೆಗಳನ್ನು ತೊಳೆದು ಇಡಲಾಗುತ್ತಿದೆ. ಅಲ್ಲಿಯೂ ಮುಸುರೆ ನೀರು, ಜನರು ಕೈತೊಳೆದ ನೀರು ಸಂಗ್ರಹವಾಗಿದೆ. ನೀರು ಹರಿದು ಹೋಗುತ್ತಿಲ್ಲ. ಇದರಿಂದ ಅಪಾರ ಪ್ರಮಾಣದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಕಾರ್ಯಕ್ರಮ ಇದ್ದಾಗ ಸ್ವಚ್ಛತಾ ಸಿಬ್ಬಂದಿ ಒಂದು ಬಾರಿ ಬ್ಲೀಚಿಂಗ್‌ ಪೌಡರ್‌ ಎಸೆದು ಹೋಗುತ್ತಾರೆ. ಇನ್ನೊಂದು ಕಾರ್ಯಕ್ರಮ ನಿಗದಿಯಾಗುವವರೆಗೂ ಬರುವುದಿಲ್ಲ.

ರಂಗ ಮಂದಿರದ ಆವರಣದಲ್ಲಿ ಎಡ ಬದಿಗೆ ಒಂದು ದೊಡ್ಡ ಬಾವಿ ಇದೆ. ನೀರಿ ಕೊರತೆ ಇಲ್ಲ. ಆದರೆ, ಅದರಿಂದ ನೀರೆತ್ತಿ ಟ್ಯಾಂಕ್‌ಗೆ ಸರಿಯಾಗಿ ತುಂಬಿಸುವುದಿಲ್ಲ. ಇದರಿಂದ ಶೌಚಾಲಯಗಳು ಗಬ್ಬು ನಾರುತ್ತಿವೆ. ಚುನಾವಣೆ ಕಾರ್ಯದ ಸಿದ್ಧತೆಗೆ ರಂಗ ಮಂದಿರದಲ್ಲೇ ಸಭೆಗಳು ನಡೆಯುತ್ತವೆ. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಗಬ್ಬು ವಾಸನೆ ಅನುಭವಿಸುತ್ತಲೇ ಸಭೆಗೆ ಬರುತ್ತಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ರಂಗ ಮಂದಿರದಲ್ಲೇ ಇರುತ್ತಾರೆ. ಆದರೆ, ವ್ಯವಸ್ಥೆ ಸುಧಾರಣೆಗೆ ಪ್ರಯತ್ನಿಸುತ್ತಿಲ್ಲ. ಸರ್ಕಾರದ ಅನುದಾನ ಇಲ್ಲ ಎಂದು ಹೇಳುತ್ತ ಕೈಚೆಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ಅವರ ಕಚೇರಿಯಲ್ಲೂ ಪುಸ್ತಕಗಳನ್ನು ಇಡಲು ಸರಿಯಾದ ವ್ಯವಸ್ಥೆ ಇಲ್ಲ. ಪುಸ್ತಕಗಳ ಮೇಲೆ ಅಪಾರ ಪ್ರಮಾಣದಲ್ಲಿ ದೂಳು ಬಿದ್ದಿದೆ. ಕಟ್ಟಡದೊಳಗೆ ಜೇಡ ಬಲೆ ಕಟ್ಟಿದೆ. ಕೇಳುವವರೇ ಇಲ್ಲ.

ರಂಗ ಮಂದಿರದಲ್ಲಿ ಒಟ್ಟು 8 ಜನ ಹೊರ ಗುತ್ತಿಗೆ ನೌಕರರು ಇದ್ದಾರೆ. ರಾಜ್ಯ ಸರ್ಕಾರದಿಂದ ಆರು ತಿಂಗಳಿಂದ ವೇತನವನ್ನೇ ಬಿಡುಗಡೆ ಮಾಡಿಲ್ಲ. ಸರ್ಕಾರ, ಇಂದಿಲ್ಲ. ನಾಳೆ ವೇತನ ಬಿಡುಗಡೆ ಮಾಡಲಿದೆ ಎನ್ನುವ ಭರವಸೆಯೊಂದಿಗೆ ಇಲ್ಲಿನ ನೌಕರರು ಕೆಲಸ ಮಾಡುತ್ತಿದ್ದಾರೆ.

‘ಶೌಚಾಲಯದಿಂದಾಗಿ ಪ್ರೇಕ್ಷಕರಿಗೆ ತೊಂದರೆಯಾಗುತ್ತಿರುವುದು ನಿಜ. ನಾನು ಈಚೆಗಷ್ಟೇ ಅಧಿಕಾರ ವಹಿಸಿಕೊಂಡಿರುವೆ. ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡು ಸಮಸ್ಯೆ ನಿವಾರಣೆಗೆ ಸಾಧ್ಯವಿರುವ ಪ್ರಯತ್ನ ಮಾಡುವೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಹೇಳುತ್ತಾರೆ.

ಹೊಸ ಶೌಚಾಲಯ ನಿರ್ಮಿಸಿ

ರಂಗ ಮಂದಿರದ ಹಿಂದೆ ಮಣ್ಣು ಹಾಕಿ ಎತ್ತರಿಸಿ ನೀರು ನಿಲ್ಲದಂತೆ ಮಾಡಬೇಕು. ಜನರು ಕೈತೊಳೆದುಕೊಳ್ಳಲು ಅನುಕೂಲವಾಗುವಂತೆ ಕನಿಷ್ಠ 10 ನಳಗಳನ್ನು ಅಳವಡಿಸಿಬೇಕು ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು. ಪಕ್ಕದಲ್ಲಿ ಅಚ್ಚುಕಟ್ಟಾದ ಪಾಕ ಶಾಲೆ ನಿರ್ಮಿಸಬೇಕು ಎಂದು ಜಿಲ್ಲೆಯ ಜನ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ರಂಗ ಮಂದಿರದ ಎಡ ಹಾಗೂ ಬಲಕ್ಕೆ ಹೊಂದಿಕೊಂಡಿರುವ ಶೌಚಾಲಯಗಳನ್ನು ಹಿಂದೆ ಸ್ಥಳಾಂತರಿಸಬೇಕು. ಹೊಸ ಶೌಚಾಲಯಗಳನ್ನು ನಿರ್ಮಿಸಿ ಪಕ್ಕದಲ್ಲೇ ಹಾದು ಹೋಗಿರುವ ಒಳ ಚರಂಡಿಗೆ ಸಂಪರ್ಕ ಕಲ್ಪಿಸಬೇಕು. ಶೌಚಾಲಯದ ನೀರಿನ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಖಾತೆಯಲ್ಲೇ ಬಿದ್ದ ₹ 7 ಲಕ್ಷ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬರುವ ಪುಸ್ತಕಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಇಡಲು ಮಳಿಗೆ ನಿರ್ಮಿಸಲು ಹಿಂದೆ ರಾಜ್ಯ ಸರ್ಕಾರ ₹ 7 ಲಕ್ಷ ಬಿಡುಗಡೆ ಮಾಡಿದೆ. ಜಾಗದ ಸಮಸ್ಯೆಯಿಂದಾಗಿ ಇನ್ನೂ ಮಳಿಗೆ ನಿರ್ಮಿಸಿಲ್ಲ. ಜಿಲ್ಲಾಧಿಕಾರಿ ಬ್ಯಾಂಕ್‌ ಖಾತೆಯಲ್ಲೇ ಹಣ ಉಳಿದುಕೊಂಡಿದೆ. ಇಲ್ಲಿ ಪುಸ್ತಕಗಳನ್ನು ಸರಿಯಾಗಿ ಇಡಲು ಜಾಗ ಇಲ್ಲದೇ ದೂಳು ತಿನ್ನುತ್ತಿವೆ.

ಇಲ್ಲಿ ಬರುವ ಅಧಿಕಾರಿಗಳು ಆಸಕ್ತಿಯಿಂದ ಕೆಲಸ ಮಾಡಿದ ಉದಾಹರಣೆ ಇಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹ ಬೀದರ್‌ಗೆ ಅನುದಾನ ಕೊಡಲು ಹಿಂದೇಟು ಹಾಕುತ್ತಿದೆ. ಮಲತಾಯಿ ಧೋರಣೆ ಮುಂದುವರಿದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ ಹಿಂದೆ ಮನವಿ ಮಾಡಲಾಗಿತ್ತು. ಆದರೆ, ಇಲ್ಲಿಯ ಜನರ ಮಾತಿಗೆ ಕವಡೆ ಕಾಸಿನ ಬೆಲೆ ಕೊಟ್ಟಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಇದ್ದೂ ಇಲ್ಲದ ಸ್ಥಿತಿಯಲ್ಲಿ ಇದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರೇ ಜಿಲ್ಲೆಗೆ ಬರುವುದು ಅಪರೂಪ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವವರು ಯಾರು? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಧ್ವನಿ, ಫೋಕಸ್‌ ಲೈಟ್‌ ವ್ಯವಸ್ಥೆ ಸರಿ ಇಲ್ಲ

ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಧ್ವನಿ ಹಾಗೂ ಫೋಕಸ್‌ ಲೈಟ್‌ ವ್ಯವಸ್ಥೆಯೂ ಸರಿ ಇಲ್ಲ. ಫೋಕಸ್‌ ಲೈಟ್‌ಗಳು ಹಾಳಾಗಿ ಹಲವು ವರ್ಷಗಳಾಗಿವೆ. ಯಾವುದೇ ರೀತಿಯ ಸಂಗೀತ ಕಾರ್ಯಕ್ರಮ ಆಯೋಜಿಸುವ ಸ್ಥಿತಿ ಇಲ್ಲ. ಗಾಯಕರು ಒಂದು ಹಾಡು ಹಾಡಲು ಶುರು ಮಾಡಿದರೆ ಅನೇಕ ಬಾರಿ ಮೈಕ್‌ ಕೈಕೊಡುತ್ತದೆ.

ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಪ್ರೇಕ್ಷಕರು ಬಹಳಷ್ಟು ಕಿರಿಕಿರಿ ಅನುಭವಿಸಬೇಕಾಯಿತು. ಪದೇ ಪದೇ ಸೌಂಡ್‌ ಬಾಕ್ಸ್‌ಗಳು ಕೈಕೊಡುತ್ತಿದ್ದರೆ ಹಾಡುವವರಿಗೆ ಮುಜುಗರ ಉಂಟಾಗುತ್ತಿತ್ತು. ರಂಗ ಮಂದಿರದಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದಾಗ ನಟ, ನಿರ್ಮಾಪಕ ವಿಷ್ಣುಕಾಂತ ಬಿ.ಜೆ. ಅವರು ಸಭಿಕರ ಮಧ್ಯೆ ಎದ್ದು ನಿಂತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಸೌಂಡ್‌ ಸಿಸ್ಟಮ್‌ ತಕ್ಷಣ ಸರಿ ಪಡಿಸಬೇಕು. ಕಲಾವಿದರಿಗೆ ಅವಮಾನ ಮಾಡುವುದನ್ನು ನಿಲ್ಲಿಸಬೇಕು ಎಂದು ಗಟ್ಟಿಧ್ವನಿಯಲ್ಲೇ ಹೇಳಿದ್ದರು. ಆದರೆ, ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT