ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳ ಅನೇಕ ಕಟ್ಟಡ ಶಿಥಿಲಾವಸ್ಥೆಯಲ್ಲಿ

ಶಾಲೆ ಆರಂಭವಾದರೂ ಪುಸ್ತಕ, ಸಮವಸ್ತ್ರ ಇಲ್ಲ
Last Updated 22 ಮೇ 2022, 7:40 IST
ಅಕ್ಷರ ಗಾತ್ರ

ಬೀದರ್‌: ಹನ್ನೆರಡನೆಯ ಶತಮಾನದಲ್ಲೇ ಜನ ಸಾಮಾನ್ಯರಲ್ಲಿ ಜ್ಞಾನ ಬಿತ್ತಿದ ನಾಡು ಇದು. ಹಲವು ರಾಜಮನೆತನಗಳು ಆಳಿ ಹೋದ ಕಾರಣ ಇಲ್ಲಿರುವಷ್ಟು ಬಹುಭಾಷಿಕರು ಕಲ್ಯಾಣ ಕರ್ನಾಟಕದ ಯಾವ ಜಿಲ್ಲೆಗಳಲ್ಲೂ ಕಾಣಸಿಗುವುದಿಲ್ಲ. ಆದರೆ, ರಾಜಕಾರಣಿಗಳು, ಅಧಿಕಾರಿಗಳು, ಶಿಕ್ಷಕರು ಹಾಗೂ ಗುತ್ತಿಗೆದಾರರಲ್ಲಿನ ಪ್ರಾಮಾಣಿಕತೆ ಹಾಗೂ ಕಾಯಕ ಬದ್ಧತೆಯ ಕೊರತೆಯಿಂದಾಗಿ ಶಿಕ್ಷಣ ಕ್ಷೇತ್ರ ಕಳೆ ಗುಂದಿದೆ.

ಮುಂಬೈ ಕರ್ನಾಟಕದಲ್ಲಿ ಬ್ರಿಟಿಷರ ಅವಧಿಯಲ್ಲಿ ಕಟ್ಟಿದ ಶಾಲೆಗಳು ಶತಮಾನೋತ್ಸವ ಆಚರಿಸಿಕೊಂಡಿವೆ. ಆದರೆ, ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಕಟ್ಟಡ ಬೆಳ್ಳಿ ಮಹೋತ್ಸವ ಆಚರಿಸಿದ ಉದಾಹರಣೆಯೂ ಸಿಗುವುದಿಲ್ಲ. ಕಳಪೆ ಗುಣಮಟ್ಟದ ಕಾಮಗಾರಿಯಿಂದಾಗಿ ಐದು ವರ್ಷಗಳ ಅವಧಿಯಲ್ಲಿ ನೂರಕ್ಕೂ ಹೆಚ್ಚು ಶಾಲಾ ಕೊಠಡಿಗಳು ನೆಲಕ್ಕುರುಳಿವೆ. ಈಗಲೂ ನೆಲಕ್ಕೆ ಬೀಳುತ್ತಿವೆ.

ಮಣ್ಣು ಹಾಕಿ ಗೋಡೆ ಕಟ್ಟಿ ಅದಕ್ಕೆ ಹೊರಗಿನಿಂದ ಪ್ಲಾಸ್ಟರ್‌ ಮಾಡಿರುವುದು ಹಳೆಯ ಶಾಲೆ ಕಟ್ಟಡಗಳಲ್ಲಿ ಕಾಣ ಸಿಗುತ್ತದೆ. ಬಿರುಕು ಬಿಟ್ಟಿರುವ ಗೋಡೆಗಳು ಬಹುತೇಕ ಎಲ್ಲ ಶಾಲೆಗಳಲ್ಲಿ ಸಾಮಾನ್ಯವಾಗಿವೆ. ಕಟ್ಟಡಗಳ ಕಳಪೆ ಕಾಮಗಾರಿ ಶಾಲೆಗಳಿಗೆ ಕೊಡಲಿ ಪೆಟ್ಟು ಹಾಕುತ್ತಿದೆ.

ಬೀದರ್‌ ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳ 1,541 ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. 1,548 ಕೊಠಡಿಗಳು ಸಣ್ಣಪುಟ್ಟ ದುರಸ್ತಿಗೆ ಕಾದಿವೆ. ಸರ್ಕಾರಿ ಪ್ರೌಢ ಶಾಲೆಗಳ 193 ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದರೆ, 258 ಕೊಠಡಿಗಳಿಗೆ ಸಣ್ಣಪುಟ್ಟ ದುರಸ್ತಿ ಮಾಡಬೇಕಿದೆ. ಅನುದಾನ ರಹಿತ 25 ಶಾಲೆಗಳ ಕೊಠಡಿಗಳು ದುಃಸ್ಥಿತಿಯಲ್ಲಿವೆ.

ಹುಲಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ, ಮರಾಠಿ, ಇಂಗ್ಲಿಷ್ ಮಾಧ್ಯಮಗಳಲ್ಲಿ ಪಾಠ ಬೋಧನೆ ನಡೆಯುತ್ತಿದೆ. 204 ವಿದ್ಯಾರ್ಥಿಗಳು ಶಾಲೆಯಲ್ಲಿ ಓದುತ್ತಿದ್ದಾರೆ. ಕೊಠಡಿಗಳು ಇಲ್ಲದ ಕಾರಣ ಅಡುಗೆ ಕೋಣೆಯಲ್ಲಿ ತರಗತಿ ನಡೆಸಲಾಗುತ್ತಿದೆ.

ಬೀದರ್, ಔರಾದ್‌ ಹಾಗೂ ಕಮಲನಗರ ಗಡಿಗಳಲ್ಲಿ ಶಾಲೆ ಹಾಗೂ ತಾಂಡಾಗಳಲ್ಲಿರುವ ಶಾಲೆಗಳಲ್ಲಿ ಶಿಕ್ಷಕರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಒಂದು ಶಾಲೆಯಲ್ಲಿ ನಾಲ್ವರು ಶಿಕ್ಷಕರಿದ್ದರೆ, ಅದರಲ್ಲಿ ಕನಿಷ್ಠ ಒಬ್ಬರು ಶಾಲೆಗೆ ಬರುವುದಿಲ್ಲ. ಆದರೆ, ದಿನಾಂಕ ಬರೆಯದ ರಜೆ ಚೀಟಿ ಶಾಲೆಯಲ್ಲಿ ಯಾವಾಗಲೂ ಇರುತ್ತದೆ ಎಂದು ಗಡಿ ಗ್ರಾಮಗಳ ಜನರು ಹೇಳುತ್ತಾರೆ.

ಸರ್ಕಾರಿ ಶಾಲೆಯ ಮಕ್ಕಳಿಗೆ ಈವರೆಗೂ ಪುಸ್ತಕ ಹಾಗೂ ಸಮವಸ್ತ್ರ ವಿತರಿಸಿಲ್ಲ. ಕೆಲ ಶಾಲೆಗಳಲ್ಲಿ ಹಿಂದಿನ ವರ್ಷದ ಪುಸ್ತಕಗಳನ್ನೇ ಮಕ್ಕಳಿಗೆ ಕೊಡಲಾಗಿದೆ. ಕೆಲ ಮಕ್ಕಳು ಹಳೆಯ ಸಮವಸ್ತ್ರ ಧರಿಸಿ ಶಾಲೆಗೆ ಬರುತ್ತಿದ್ದಾರೆ. ಶಿಕ್ಷಕರು ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿದ್ದಾರೆ.

ತಗಡಿನ ಶೆಡ್‌ಗಳಲ್ಲಿ ನಡೆಯುತ್ತಿರುವ ಶಾಲೆಗಳು ಬಸ್‌ಗಳ ವ್ಯವಸ್ಥೆ ಮಾಡಿಕೊಂಡಿವೆ. ಗ್ರಾಮದಿಂದ ಹೊರಗೆ 2 ರಿಂದ 5 ಕಿ.ಮೀ ಅಂತರದಲ್ಲಿರುವ ಶಾಲೆಗೆ ಬರಲು ಬಸ್ಸಿನ ವ್ಯವಸ್ಥೆ ಇರುವ ಪಾಲಕರು ವಾರ್ಷಿಕ ವಾಹನ ಶುಲ್ಕ ₹ 4,440 ಕೊಟ್ಟು ಶಾಲೆಗೆ ಕಳಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸಾರಿಗೆ ಸಂಪರ್ಕದ ಕೊರತೆ ಇದೆ. ಬಸ್‌ ಸಂಚಾರವೂ ಇಲ್ಲ. ಹೀಗಾಗಿ ಪಾಲಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸುತ್ತಿಲ್ಲ.

‘ಸರ್ಕಾರಿ ಶಾಲೆಗಳಲ್ಲಿರುವ ಕೆಲ ಶಿಕ್ಷಕರಿಗೆ ಕನ್ನಡ, ಇಂಗ್ಲಿಷ್‌ ಬರುವುದಿಲ್ಲ. ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಅನುರಾಗ ತಿವಾರಿ ಹಾಗೂ ಅಂದಿನ ಜಿಲ್ಲಾ ಪಂಚಾಯಿತಿ ಸಿಇಒ ಶರತ್‌ ಅವರು ಗ್ರಾಮೀಣ ಶಾಲೆಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದಾಗ ಶಿಕ್ಷಕರಿಗೆ ಫಲಕದ ಮೇಲೆ ಸ್ಪೆಲ್ಲಿಂಗ್‌ ಬರೆಯಲು ಬರದೆ ಇರುವುದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದರು. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯದ ಕಾರಣ ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಹೇಳುತ್ತಾರೆ.

‘ಪ್ರಸಕ್ತ ವರ್ಷ ಮಕ್ಕಳಿಗೆ ಸಮವಸ್ತ್ರ ಬಂದಿಲ್ಲ. ಶೇಕಡ 40ರಷ್ಟು ಪುಸ್ತಕಗಳು ಬಂದಿವೆ. ಶೀಘ್ರದಲ್ಲೇ ಎಲ್ಲ ಶಾಲಾ ಮಕ್ಕಳಿಗೆ ಪುಸ್ತಕ ವಿತರಿಸಲಾಗುವುದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಣಪತಿ ಬಾರಾಟಕ್ಕೆ ತಿಳಿಸುತ್ತಾರೆ.

* * *

ಗೌರ: ಶಿಥಿಲಾವಸ್ಥೆಯಲ್ಲಿ ಶಾಲಾ ಕಟ್ಟಡ

ಬಸವಕಲ್ಯಾಣ: ತಾಲ್ಲೂಕಿನ ಗೌರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಹಳೆಯ ಕೆಲ ಕೊಠಡಿಗಳು ಶಿಥಿಲಗೊಂಡಿದ್ದು, ಮಕ್ಕಳಿಗೆ ಅಪಾಯ ಕಾದಿದೆ.

ಒಟ್ಟು 255 ವಿದ್ಯಾರ್ಥಿಗಳಿದ್ದಾರೆ. 12 ಕೊಠಡಿಗಳು ಬೇಕು. 8 ಮಾತ್ರ ಸುಸ್ಥಿತಿಯಲ್ಲಿದ್ದು ಇನ್ನುಳಿದ 4 ಕೊಠಡಿಗಳ ಗೋಡೆಗಳು ಬಿದ್ದಿದ್ದರಿಂದ ಅವು ಉಪಯೋಗಕ್ಕೆ ಬರುತ್ತಿಲ್ಲ. ಅಷ್ಟೇ ಅಲ್ಲ, ಅವುಗಳ ಹತ್ತಿರವೇ ಮಕ್ಕಳು ಆಟ ಆಡುತ್ತಾರೆ. ಅದರ ಪಕ್ಕದಲ್ಲಿಯೇ ಇರುವ ಶೌಚಾಲಯ, ಮೂತ್ರಾಲಯಕ್ಕೆ ಹೋಗುತ್ತಾರೆ. ಹೀಗಾಗಿ ಯಾವಾಗ ಏನಾಗುತ್ತದೋ ಎಂದು ಶಿಕ್ಷಕರು ಆ ಕಡೆ ಸದಾ ನಿಗಾ ವಹಿಸಬೇಕಾಗುತ್ತಿದೆ.

ಈ ಸ್ಥಳದಲ್ಲಿಯೇ ಹಳೆಯ ಶಿಥಿಲಗೊಂಡಿರುವ ನೀರಿನ ಓವರ್ ಹೆಡ್ ಟ್ಯಾಂಕ್ ಕೂಡ ಇದೆ. ಇದೂ ಯಾವಾಗ ನೆಲಕ್ಕೆ ಉರುಳುತ್ತದೋ ಎಂಬಂತಹ ಪರಿಸ್ಥಿತಿ ಇದೆ. ಇವೆಲ್ಲವನ್ನು ನೆಲಸಮಗೊಳಿಸಲು ಸಂಬಂಧಿತರಿಗೆ ಕೇಳಿಕೊಂಡರೂ ಪ್ರಯೋಜನ ಆಗಿಲ್ಲ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಬಸವರಾಜ ಶೆಟ್ಟೆಪ್ಪ ಹೇಳುತ್ತಾರೆ.

* * *

ಔರಾದ್ : 182 ಪ್ರಾಥಮಿಕ ಶಾಲಾ ಕೊಠಡಿ ಶಿಥಿಲ

ಔರಾದ್ : ತಾಲ್ಲೂಕಿನ 63 ಸರ್ಕಾರಿ ಪ್ರಾಥಮಿಕ ಶಾಲೆಯ 182 ಕೊಠಡಿಗಳು ಶಿಥಿಲಗೊಂಡಿವೆ. ಈ ಕೊಠಡಿಗಳು ನೆಲಸಮ ಮಾಡುವಂತೆ ಶಿಕ್ಷಣ ಇಲಾಖೆಯು ಲೋಕೋಪಯೋಗಿ ಇಲಾಖೆಗೆ ತಿಳಿಸಿದೆ. ಶಾಲೆಗಳ ವಿವರವಾದ ಪಟ್ಟಿಯನ್ನೂ ನೀಡಿದೆ.
ಕೆಲ ಶಾಲೆಯಲ್ಲಿ ಶಿಥಿಲ ಕೊಠಡಿ ನೆಲಸಮ ಮಾಡದ ಕಾರಣ ಪಾಲಕರಲ್ಲಿ ಆತಂಕ ಎದುರಾಗಿದೆ. ಕೊಠಡಿಗಳ ಕೊರತೆ ಇರುವ ಕಾರಣ ಒಂದೇ ಕೊಠಡಿಯಲ್ಲಿ ಎರಡು ತರಗತಿಗಳ ಮಕ್ಕಳನ್ನು ಕೂಡಿಸಲಾಗುತ್ತಿದೆ. ಕೆಲ ಕಡೆ ಶಾಲಾ ಆವರಣದಲ್ಲಿ, ಮತ್ತೆ ಕೆಲ ಕಡೆ ಮರದ ಕೆಳಗೆ ಪಾಠ ಮಾಡಲಾಗುತ್ತಿದೆ.

ನಮ್ಮ ಊರಲ್ಲಿ 5ನೇ ತರಗತಿ ವರೆಗೆ ಶಾಲೆ ಇದೆ. ಎರಡು ಕೊಠಡಿ ಮಾತ್ರ ಸುಸ್ಥಿತಿಯಲ್ಲಿವೆ. ಒಂದು ಹಾಳಾಗಿದೆ. ಇದನ್ನು ತೆರವು ಮಾಡುವಂತೆ ನಾವು ಸಾಕಷ್ಟು ಬಾರಿ ಶಿಕ್ಷಣ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಕಿರಗುಣವಾಡಿ ನಿವಾಸಿ ಕೊಂಡಿಬಾರಾವ್ ಪಾಟೀಲ ಬೇಸರ ವ್ಯಕ್ತಪಡಿಸುತ್ತಾರೆ.

ಶಿಥಿಲ ಕೊಠಡಿ ನೆಲಸಮ ಹಾಗೂ ಅಗತ್ಯ ಹೊಸ ಕೊಠಡಿ ಮಂಜೂರಾತಿಗಾಗಿ ಬೇಡಿಕೆ ಸಲ್ಲಿಸಲಾಗಿದೆ ಎಂದು ಶಿಕ್ಷಣ ಸಂಯೋಜಕ ಬಲಭೀಮ ಕುಲಕರ್ಣಿ ಹೇಳುತ್ತಾರೆ.

* * *

ಹಳೆಯ ಕಟ್ಟಡ ತೆರವುಗೊಳಿಸಿರಿ

ಚಿಟಗುಪ್ಪ: ತಾಲ್ಲೂಕಿನ ಚಾಂಗಲೇರಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡ ಶಿಥಿಲವಾಗಿದ್ದರಿಂದ ಐದು ವರ್ಷಗಳ ಹಿಂದೆ ಪಕ್ಕದ ಆವರಣದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ.
ಮಕ್ಕಳು, ಸಿಬ್ಬಂದಿ ಹೊಸ ಕಟ್ಟಡದಲ್ಲಿ ಶೈಕ್ಷಣಿಕ ಚಟುವಟಿಕೆ ನಡೆಸುತ್ತಿದ್ದಾರೆ. ಮಳೆಗಾಲ ಆರಂಭವಾಗುವ ಕಾರಣ ಯಾವುದೇ ಕ್ಷಣದಲ್ಲೂ ಅದು ಕುಸಿಯುವ ಸಾಧ್ಯತೆ ಇದೆ. ಮಕ್ಕಳ ಹಿತದೃಷ್ಟಿಯಿಂದ ತಕ್ಷಣ ಹಳೆಯ ಕಟ್ಟಡ ತೆರವುಗೊಳಿಸಬೇಕು ಎಂದುಗ್ರಾಮದ ರಾಮಯ್ಯ ಹೇಳುತ್ತಾರೆ.

ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ(ಬಿ) ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಕಟ್ಟಡದ ಮೇಲ್ಛಾವಣಿ ಕಿತ್ತು ಹೋಗಿದೆ. ಪಕ್ಕದ ಇನ್ನೊಂದು ಕಟ್ಟಡದಲ್ಲಿ ಭೋದನೆ ನಡೆಯುತ್ತಿವೆ.
ದುಬಲಗುಂಡಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡವೂ ಮರು ದುರಸ್ತಿಗೆ ಬಂದಿದೆ. ಸದ್ಯ ಎರಡು ಹೊಸ ಕಟ್ಟಡದಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ.
ಹುಮನಾಬಾದ್ ತಾಲ್ಲೂಕಿನಲ್ಲಿರುವ ಶಾಲೆಗಳ ಮುಖ್ಯ ಶಿಕ್ಷಕರಿಂದ ಯಾವುದೇ ಪ್ರಸ್ತಾವ ಬಂದಿಲ್ಲ. ಹೀಗಾಗಿ ಎಷ್ಟು ಶಾಲೆಗಳ ಶಾಲಾ ಕೊಠಡಿಗಳು ದುಸ್ಥಿತಿಯಲ್ಲಿವೆ ಎನ್ನುವ ಮಾಹಿತಿ ಇಲ್ಲ ಎಂದು ಹುಮನಾಬಾದ್ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಗುಂಡಪ್ಪ ಹೇಳುತ್ತಾರೆ.

* * *

ಜಿಲ್ಲೆಯಲ್ಲಿರುವ ಶಾಲೆಗಳ ಸಂಖ್ಯೆ

ಕಿರಿಯ ಪ್ರಾಥಮಿಕ ಶಾಲೆ–747

ಹಿರಿಯ ಪ್ರಾಥಮಿಕ ಶಾಲೆ–1,377

ಪ್ರೌಢ ಶಾಲೆ –555

ಒಟ್ಟು= 2,679

* * *

ಸರ್ಕಾರಿ ಶಾಲೆ–1,410

ಅನುದಾನಿತ ಶಾಲೆ–351

ಅನುದಾನ ರಹಿತ ಶಾಲೆ–918

ಒಟ್ಟು–2,679

ಸಹಕಾರ: ಮಾಣಿಕ ಭೂರೆ, ಮನ್ಮಥ ಸ್ವಾಮಿ, ವೀರೇಶ ಮಠಪತಿ, ಗುಂಡು ಅತಿವಾಳ, ನಾಗೇಶ ಪ್ರಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT