ಎಂಬಿಬಿಎಸ್: ವಚನಶ್ರೀ ಪಾಟೀಲ 10 ಚಿನ್ನದ ಪದಕಗಳ ಸಾಧನೆ

ಬೀದರ್: ಇಲ್ಲಿಯ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿದ್ಯಾರ್ಥಿನಿ ವಚನಶ್ರೀ ಬಸವಕುಮಾರ ಪಾಟೀಲ ಬ್ಯಾಚುಲರ್ ಆಫ್ ಮೆಡಿಸಿನ್ ಆ್ಯಂಡ್ ಬ್ಯಾಚುಲರ್ ಆಫ್ ಸರ್ಜರಿ (ಎಂ.ಬಿ.ಬಿ.ಎಸ್) ಪದವಿಯಲ್ಲಿ 10 ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
ನಗರದ ಝೀರಾ ಕನ್ವೆನ್ಶನ್ ಹಾಲ್‍ನಲ್ಲಿ ನಡೆದ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ 10ನೇ ಘಟಿಕೋತ್ಸವದಲ್ಲಿ ಅವರು ಅತಿಹೆಚ್ಚು ಚಿನ್ನದ ಪದಕಗಳಿಗೆ ಕೊರಳೊಡ್ಡಿದರು.
ವಚನಶ್ರೀ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ಹಾಗೂ ವೈದ್ಯೆ ಡಾ. ಹೇಮಲತಾ ಪಾಟೀಲ ಅವರ ಸುಪುತ್ರಿ. ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪೂರೈಸಿರುವ ಅವರು, 2016ರಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯ ವೈದ್ಯಕೀಯ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ರ್‍ಯಾಂಕ್ ಪಡೆಯುವ ಮೂಲಕ ಗಮನ ಸೆಳೆದಿದ್ದರು.
ಇದೀಗ ಎಂ.ಬಿ.ಬಿ.ಎಸ್ ಪದವಿಯಲ್ಲೂ ಸಾಧನೆ ಮೆರೆದಿದ್ದಾರೆ. ಪದವಿ ಪರೀಕ್ಷೆಗಳಲ್ಲಿ ಶೇ 80.55 ಅಂಕಗಳೊಂದಿಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಮೂರನೇ ರ್‍ಯಾಂಕ್ ಗಳಿಸಿದ್ದಾರೆ.
‘ಅತಿ ಹೆಚ್ಚು ಚಿನ್ನದ ಪದಕಗಳು ಲಭಿಸಿರುವುದು ಸಂತಸ ಉಂಟು ಮಾಡಿದೆ. ನನಗೆ ದೊರೆತ ಪದಕಗಳನ್ನೆಲ್ಲ ನನ್ನ ಆರಾಧ್ಯದೈವ ಬಸವಣ್ಣನವರಿಗೆ ಸಮರ್ಪಿಸುವೆ’ ಎಂದು ವಚನಶ್ರೀ ಪಾಟೀಲ ತಿಳಿಸಿದರು.
ಪ್ರಾಧ್ಯಾಪಕರ ಮಾರ್ಗದರ್ಶನ, ಪಾಲಕರ ಪ್ರೋತ್ಸಾಹ ಹಾಗೂ ಕಠಿಣ ಪರಿಶ್ರಮದಿಂದಾಗಿ ಪದವಿಯಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.
‘ಜನರಲ್ ಮೆಡಿಸಿನ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಹಾಗೂ ವೈದ್ಯೆಯಾಗಿ ಬಡ ಜನರಿಗೆ ವೈದ್ಯಕೀಯ ಸೇವೆ ಒದಗಿಸುವ ಗುರಿ ಇದೆ’ ಎಂದು ತಮ್ಮ ಮನದಾಳವನ್ನು ಹಂಚಿಕೊಂಡರು.
ಕಾಲೇಜಿನ ಪ್ರಾಧ್ಯಾಪಕರು ವಚನಶ್ರೀ ಪಾಟೀಲ ಅವರ ಸಾಧನೆಯನ್ನು ಕೊಂಡಾಡಿದರು. ಡಾ. ಬಿ.ಸಿ.ರಾಯ್ ಪ್ರಶಸ್ತಿ ಪುರಸ್ಕೃತರೂ ಆದ ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ ನಿಷ್ಠಿ, ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ. ಚಂದ್ರಕಾಂತ ಚಿಲ್ಲರ್ಗಿ, ಪ್ರಾಚಾರ್ಯ ಡಾ. ರಾಜೇಶ ಪಾರಾ, ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ ಶೆಟಕಾರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.