ಶುಕ್ರವಾರ, ಮೇ 20, 2022
21 °C

ಹಸಿರ ಒಡಲಿನ ಧ್ಯಾನ ಮಂಟಪ

ಬಸವರಾಜ್‌ ಎಸ್‌.ಪ್ರಭಾ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ಪಟ್ಟಣದ ಹೃದಯ ಭಾಗದ ಹಸಿರುಮಯ, ಉಲ್ಲಸಿತ, ಪ್ರಶಾಂತ, ಆಕರ್ಷಣೀಯ ಸ್ಥಳದಲ್ಲಿರುವ ಲಿಂ.ಡಾ.ಚನ್ನಬಸವ ಪಟ್ಟದ್ದೇವರ ಧ್ಯಾನ ಮಂಟಪ, ಆಶ್ರಮ ಭಕ್ತರ, ಸಾರ್ವಜನಿಕರ ಮನ ತಣಿಸುವ ತಾಲ್ಲೂಕಿನ ವಿವಿಧ ಹಳ್ಳಿಗಳ ವಿದ್ಯಾರ್ಥಿಗಳ ವಿಶ್ರಾಂತಿ ಕೇಂದ್ರವಾಗಿದ್ದು, ಪಟ್ಟಣದ ಅಂದ, ವೈಭವವನ್ನು ಹೆಚ್ಚಿಸಿದೆ.

ಕಲ್ಯಾಣ ಕರ್ನಾಟಕ ಭಾಗದ ನಡೆದಾಡುವ ದೇವರಾಗಿರುವ ಲಿಂ.ಡಾ.ಚನ್ನಬಸವ ಪಟ್ಟದ್ದೇವರು ಬಸವ ತತ್ವವನ್ನೇ ಉಸಿರಾಗಿಸಿಕೊಂಡು ತಮ್ಮ 109 ವರ್ಷಗಳ ಜೀವಿತಾವಧಿಯಲ್ಲಿ ಈ ಭಾಗಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಅವರ ಸಮಾಧಿ ಸ್ಥಳದಲ್ಲಿ ನಿರ್ಮಾಣಗೊಂಡಿರುವ ಧ್ಯಾನ ಮಂಟಪ ಪಟ್ಟಣ ವಾಸಿಗಳಿಗೆ ನೆಮ್ಮದಿಯ, ಬದುಕಿನ ಭರವಸೆಯ ಕೇಂದ್ರವಾಗಿ ಪರಿವರ್ತನೆಯಾಗಿದೆ.

ಧ್ಯಾನ ಮಂಟಪದ ಸುತ್ತಮುತ್ತಲಿನ ವಾತಾವರಣದಲ್ಲಿರುವ ತೆಂಗಿನ, ಬೇವಿನ ಸೇರಿದಂತೆ ಇತರ ಸುಮಾರು ಒಂದು ಸಾವಿರ ಗಿಡಗಳು ಈ ಸ್ಥಳವನ್ನು ಸದಾ ಪ್ರಶಾಂತ, ಲವಲವಿಕೆಯಿಂದ, ಚೈತನ್ಯಾತ್ಮಕವಾಗಿ ಇರುವಂತೆ ಮಾಡಿವೆ. ಪಟ್ಟಣ ವಾಸಿಗಳ ಆರಾಧ್ಯ ದೇವರಾಗಿರುವ ಲಿಂ.ಚನ್ನಬಸವ ಪಟ್ಟದ್ದೇವರ ಗದ್ದುಗೆ ದರ್ಶನಕ್ಕೆ ನಸುಕಿನ ಜಾವದಿಂದಲೇ ಭಕ್ತರು ಆಗಮಿಸಲು ಪ್ರಾರಂಭಿಸುತ್ತಾರೆ.

ಮನೆಯಲ್ಲಿ ನಡೆಯುವ ಎಲ್ಲ ಶುಭ ಕಾರ್ಯಗಳಿಗೂ ಮುನ್ನ, ವ್ಯಾಪಾರಿಗಳು ತಮ್ಮ ದಿನದ ವ್ಯವಹಾರ ಆರಂಭಿಸುವುದಕ್ಕಿಂತ ಮುಂಚೆ ಪಟ್ಟದ್ದೇವರ ಗದ್ದುಗೆ ದರುಶನ ಪಡೆಯುತ್ತಾರೆ. ಲಿಂ. ಪಟ್ಟದ್ದೇವರು ದೈವಿ ಕರುಣೆಯಿಂದ ತಮ್ಮ ಇಚ್ಛೆಗಳೆಲ್ಲವೂ ಪೂರ್ಣವಾಗುತ್ತವೆ ಎಂಬ ಅಪಾರವಾದ ನಂಬಿಕೆ ಭಕ್ತರದ್ದಾಗಿದೆ. ಸಂಜೆ ವೇಳೆಯಂತೂ ಚನ್ನಬಸವಾಶ್ರಮ ಜನರಿಂದ ಕಿಕ್ಕಿರಿದು ತುಂಬಿರುತ್ತದೆ. ತಾಲ್ಲೂಕು ಕೇಂದ್ರದ ವಿವಿಧ ಕಚೇರಿ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರು ಮಧ್ಯಾಹ್ನದ ವೇಳೆಯಲ್ಲಿ ಕುಳಿತುಕೊಳ್ಳಲು, ವಿಶ್ರಾಂತಿ ಪಡೆಯಲು ಆಸನ, ಮರಗಳ ನೆರಳಿನ ಆಶ್ರಯ ತುಂಬಾ ನೆರವಾಗಿದೆ.

ಈ ಸ್ಥಳವನ್ನು ಆಕರ್ಷಣೀಯ, ಪರಿಸರ ಸ್ನೇಹಿ ಮತ್ತು ಪೂಜ್ಯನೀಯ ವಾಗಿಸುವಲ್ಲಿ ಹಿರೇಮಠದ ಹಿರಿಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ, ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ಕ್ರಿಯಾ ಯೋಜನೆ, ಆಸಕ್ತಿ ಅಗಾಧ. ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಕಲ್ಯಾಣ ಕರ್ನಾಟಕ ಪರಕೀಯ ಆಳ್ವಿಕೆ, ಸ್ಥಳೀಯರ ಅಭಿಮಾನ ಶೂನ್ಯತೆ ಜನ ಮಾನಸದ ಅಸಹಕಾರ ಶೋಷಣೆಗೆ ಒಳಗಾದ ಜನಸಮುದಾಯಕ್ಕೆ ನೆರ ವಾಗಿ ಬಂದವರು ಡಾ.ಚೆನ್ನಬಸವ ಪಟ್ಟದೇವರು.

ಬಸವಣ್ಣನವರು ಕಂಡ ಜಾತಿ, ವಣ೯, ವಗ೯ರಹಿತ ಸಮಾಜದ ಕನಸನ್ನು, ಅವರ ತತ್ವ, ವಚನಗಳ ಆಶಯವನ್ನು ಸಾಕಾರಗೊಳಿಸಲು ತಮ್ಮ ಜೀವಿತಾವಧಿಯ 109 ವಷ೯ಗಳನ್ನು ಮೀಸಲಾಗಿಟ್ಟಿ ಸಮಾಜದ ಸವ೯ರಿಗೂ ಆದಶ೯ ಪ್ರಾಯರಾಗಿದ್ದಾರೆ ಎಂದು ಶ್ರೀಗಳನ್ನು ಸಮೀಪದಿಂದ ಕಂಡಿದ್ದ ರಮೇಶ ಪಟ್ನೆ ತಿಳಿಸುತ್ತಾರೆ.

ಲಿಂ.ಚನ್ನಬಸವ ಪಟ್ಟದ್ದೇವರ ಧಾರ್ಮಿಕ, ಶೈಕ್ಷಣಿಕ ಸೇರಿದಂತೆ ಇತರ ಮಾನವೀಯ ಕಾಯ೯ಗಳನ್ನು ಗುರುತಿಸಿ ಗುಲಬರ್ಗಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪ್ರಶಸ್ತಿ ನೀಡಿದೆ. ರಾಜ್ಯ ಸರ್ಕಾರ ಕರ್ನಾಟಕ ಏಕೀಕರಣ, ರಾಜ್ಯೋತ್ಸವ ನೀಡಿ ಗೌರವಿಸಿದೆ.

*ಲಿಂ.ಡಾ.ಚನ್ನಬಸವ ಪಟ್ಟದ್ದೇವರ ಧ್ಯಾನ ಮಂಟಪ, ಆಶ್ರಮ ಪಟ್ಟಣ ವಾಸಿಗಳ ಅಚ್ಚುಮೆಚ್ಚಿನ ಸ್ಥಳ. ಇಲ್ಲಿನ ಹಸಿರು ವಾತಾವರಣ ಸರ್ವರನ್ನೂ ಕೈ ಬೀಸಿ ಕರೆಯುತ್ತದೆ

ರಮೇಶ ಪಟ್ನೆ, ಪಟ್ಟಣದ ನಿವಾಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.