ರಸಭರಿತ ಹಣ್ಣಿನಂತೆ ಮೋದಿ ಗಾಳಿ: ಭಗವಂತ ಖೂಬಾ

ಶುಕ್ರವಾರ, ಏಪ್ರಿಲ್ 26, 2019
24 °C
ಬಿಜೆಪಿ ಅಭ್ಯರ್ಥಿ

ರಸಭರಿತ ಹಣ್ಣಿನಂತೆ ಮೋದಿ ಗಾಳಿ: ಭಗವಂತ ಖೂಬಾ

Published:
Updated:
Prajavani

ಬೀದರ್‌: 2014ರ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರನ್ನು ಸೋಲಿಸಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ಭಗವಂತ ಖೂಬಾ ಈ ಬಾರಿ ಮತ್ತೆ ಚುನಾವಣಾ ಕಣದಲ್ಲಿದ್ದಾರೆ. ಈ ಬಾರಿಯೂ ಮೋದಿ ಗಾಳಿಯೇ ಸುಲಭವಾಗಿ ತಮ್ಮನ್ನು ಗೆಲುವಿನ ದಡ ಸೇರಿಸಲಿದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ, ವೀರಶೈವ–ಲಿಂಗಾಯತ ಮುಖಂಡ ಈಶ್ವರ ಖಂಡ್ರೆ ಕಣಕ್ಕಿಳಿದ ನಂತರ ಕ್ಷೇತ್ರದಲ್ಲಿ ಪೈಪೋಟಿ ಹೆಚ್ಚಿದೆ. ಭಗವಂತ ಖೂಬಾ ಅವರು ಹದಿನೈದು ದಿನಗಳ ಹಿಂದೆಯೇ ಪ್ರಚಾರ ಆರಂಭಿಸಿದ್ದಾರೆ. ಪ್ರಚಾರದ ಮಧ್ಯೆಯೇ ಒಂದಿಷ್ಟು ಬಿಡುವು ಮಾಡಿಕೊಂಡು ಪ್ರಜಾವಾಣಿ’ಯೊಂದಿಗೆ ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ.

1. ಕ್ಷೇತ್ರದ ಅಭಿವೃದ್ಧಿಗೆ ಏನು ಯೋಜನೆ ರೂಪಿಸಿದ್ದೀರಿ?

–ಘೋಷಣೆ ಅಥವಾ ಭರವಸೆಗಳಿಂದ ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಾಗದು. ಒಂದು ಕ್ಷೇತ್ರದ ಅಭಿವೃದ್ಧಿಗಾಗಿಯೇ ಪ್ರತ್ಯೇಕ ಯೋಜನೆ ರೂಪಿಸುವ ಅಧಿಕಾರ ಸಂಸದರಿಗೆ ಇಲ್ಲ. ಆದರೆ, ದೇಶದ ಅಭಿವೃದ್ಧಿ ದೃಷ್ಟಿಯಿಂದ ಸಮಗ್ರವಾಗಿ ರೂಪಿಸಲಾಗುವ ಯೋಜನೆಗಳೇ ನಮ್ಮ ಕ್ಷೇತ್ರಕ್ಕೂ ಅನ್ವಯವಾಗುತ್ತದೆ. ಅವುಗಳನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಬೇಕು. ಅಲ್ಲಿಂದಲೇ ಪರಿವರ್ತನೆ ಶುರುವಾಗುತ್ತದೆ.

2. ಹುಮನಾಬಾದ್‌ನಲ್ಲಿ ನಡೆದ ಬಿಜೆಪಿ ಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶಕ್ಕೆ ಹುಮನಾಬಾದ್ ಹಾಗೂ ಬೀದರ್‌ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಬರದಿರಲು ಕಾರಣವೇನು?

–ಕಾರ್ಯಕರ್ತರ ನಡುವಿನ ಸಂಪರ್ಕದ ಕೊರತೆಯಿಂದ ಶಕ್ತಿ ಕೇಂದ್ರದ ಸಮಾವೇಶಕ್ಕೆ ಹುಮನಾಬಾದ್‌ ಹಾಗೂ ಬೀದರ್‌ ಕ್ಷೇತ್ರದ ಕಾರ್ಯಕರ್ತರು ಬಂದಿರಲಿಲ್ಲ. ಇದೀಗ ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದೇವೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಸಿ ಕಾರ್ಯಕರ್ತರು ಹುಮ್ಮಸ್ಸಿನಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

3. ನಿಮ್ಮ ಅವಧಿಯಲ್ಲಿನ ಒಂದು ಕಾಮಗಾರಿಯೂ ಪೂರ್ಣಗೊಂಡಿಲ್ಲ ಎನ್ನುವ ಆರೋಪಗಳಿವೆಯಲ್ಲ?

–ಕಾಂಗ್ರೆಸ್‌ ಅವಧಿಯಲ್ಲಿನ ಕೆಲ ಕಾರ್ಯಗಳು 10 ವರ್ಷಗಳಾದರೂ ಪೂರ್ಣಗೊಂಡಿಲ್ಲ. ರಾಜಕೀಯದಲ್ಲಿ ಆರೋಪಗಳು ಸಹಜ. ಉಪಾಹಾರ ತಯಾರಿಕೆಗೆ ಅಗತ್ಯವಿರುವ ಎಲ್ಲ ಸಾಮಗ್ರಿಗಳು ಮನೆಯಲ್ಲಿ ಇದ್ದರೂ ಅತಿಥಿಗಳು ಬಂದಾಗ ತಕ್ಷಣಕ್ಕೆ ಉಪಾಹಾರ ಹಾಗೂ ಚಹಾ ಕೊಡಲು ಸಾಧ್ಯವಾಗುವುದಿಲ್ಲ. ಯೋಜನೆ, ಪ್ರಸ್ತಾವ ಹಾಗೂ ಅನುಷ್ಠಾನಕ್ಕೆ ಸಮಯ ಬೇಕಾಗುತ್ತದೆ. ಹೈದರಾಬಾದ್–ಸೊಲ್ಲಾಪುರ ಹೆದ್ದಾರಿ ಮೇಲ್ದರ್ಜೆಗೇರಿಸುವ ಕಾಮಗಾರಿ ಆಗಲೇ ಪೂರ್ಣಗೊಂಡಿದೆ. ಬೀದರ್‌–ಕಲಬುರ್ಗಿ ರೈಲು ಮಾರ್ಗಕ್ಕೆ ₹1,200 ಕೋಟಿ ತಂದು ಕಾಮಗಾರಿ ಪೂರ್ಣಗೊಳಿಸಿದ್ದೇನೆ. ಜಿಲ್ಲೆಯಲ್ಲಿ ಹಾದು ಹೋಗಿರುವ ಇನ್ನುಳಿದ ಹೆದ್ದಾರಿ ಕಾಮಗಾರಿಗಳು ಪ್ರಗತಿಯಲ್ಲಿವೆ.

4. ಕಳೆದ ಬಾರಿ ಮೋದಿ ಗಾಳಿಯಲ್ಲಿ ದಡ ಸೇರಿದಿರಿ, ಕ್ಷೇತ್ರದಲ್ಲಿ ಈಗಲೂ ಮೋದಿ ಗಾಳಿ ಇದೆಯೇ?

–2014ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಗಾಳಿ ಹೂವಿನ ರೂಪದಲ್ಲಿತ್ತು. ಈ ಚುನಾವಣೆಯಲ್ಲಿ ಕಾಯಿಯಾಗಿ ರಸಭರಿತ ಹಣ್ಣಿನ ಹಣ್ಣಿನ ಸುವಾಸನೆಯ ಸ್ವರೂಪ ಪಡೆದುಕೊಂಡಿದೆ. ಅದರ ಲಾಭ ಹೇಗೆ ಪಡೆಯಬೇಕು ನ್ನುವುದು ಮತದಾರರಿಗೆ ತಿಳಿದಿದೆ. ಈ ಬಾರಿಯೂ ಮೋದಿ ಗಾಳಿ ನನ್ನನ್ನು ಗೆಲುವಿನ ದಡ ಸೇರಿಸಲಿದೆ.

5. ಜನರು ನಿಮಗೇಕೆ ಮತ ಕೊಡಬೇಕು?

–ಕಾಂಗ್ರೆಸ್‌ ಹಾಗೂ ಬಿಜೆಪಿ ಸಂಸದರ ಅವಧಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳನ್ನು ಹೋಲಿಕೆ ಮಾಡಿದರೆ ನನ್ನ ಅಭಿವೃದ್ಧಿಯಲ್ಲಿ ವೇಗ ಹೆಚ್ಚಿದೆ. ಜನಸಾಮಾನ್ಯರ ಜೀವನ ಮಟ್ಟವನ್ನು ಹೆಚ್ಚಿಸುವ ದಿಸೆಯಲ್ಲಿ ಮೋದಿ ಸರ್ಕಾರ ಹೆಜ್ಜೆಗಳನ್ನು ಇಟ್ಟಿದೆ. ಬಿಜೆಪಿ ಜನರ ಬೇಡಿಕೆಗಳನ್ನು ಈಡೇರಿಸಲಿದೆ ಎನ್ನುವ ಭರವಸೆ ಜನರಲ್ಲಿ ಇದೆ. ಅವರ ಬೇಕು,ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮತದಾರರು ನನ್ನ ಪರವಾಗಿ ಮತ ಚಲಾಯಿಸಬೇಕು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !