ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಐಎಂಎ ಬೀದರ್‌ ಘಟಕದ ಪದಾಧಿಕಾರಿಗಳು
Last Updated 8 ನವೆಂಬರ್ 2019, 15:22 IST
ಅಕ್ಷರ ಗಾತ್ರ

ಬೀದರ್‌: ಬೆಂಗಳೂರಿನ ಮಿಂಟೊ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿದ್ದ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಜಿಲ್ಲೆಯಲ್ಲಿ ಬಹುತೇಕ ಆಸ್ಪತ್ರೆಗಳು ತೆರೆದಿದ್ದರೂ ಪ್ರವೇಶ ದ್ವಾರದಲ್ಲೇ ‘ಇಂದು ಓಪಿಡಿ ಸೇವೆ ಲಭ್ಯವಿಲ್ಲ’ ಎಂದು ಬರೆದು ಗೋಡೆಯ ಮೇಲೆ ಅಂಟಿಸಲಾಗಿತ್ತು.

ಬೆಂಗಳೂರಲ್ಲಿ ಪ್ರತಿಭಟನಾ ನಿರತ ವೈದ್ಯರು ಆರೋಪಿಗಳ ಬಂಧನಕ್ಕೆ ಬೆಳಿಗ್ಗೆ 11 ಗಂಟೆಯ ಗಡುವು ವಿಧಿಸಿದ್ದರು. ಹೀಗಾಗಿ ಕೆಲ ವೈದ್ಯರು ಒಪಿಡಿ ಬಂದ್‌ ಮಾಡಬೇಕೋ ಅಥವಾ ಸೇವೆ ಮುಂದುವರಿಸಬೇಕೋ ಎನ್ನುವ ಗೊಂದಲದಲ್ಲಿದ್ದರು. ಮಧ್ಯಾಹ್ನ ರಾಜ್ಯ ಘಟಕದಿಂದ ಸ್ಪಷ್ಟ ಸಂದೇಶ ಬಂದ ನಂತರ ಪ್ರತಿಭಟನೆ ನಡೆಸಿದರು.

ಗ್ರಾಮೀಣ ಪ್ರದೇಶದಿಂದ ಚಿಕಿತ್ಸೆ ಪಡೆಯಲು ನಗರದ ಖಾಸಗಿ ಆಸ್ಪತ್ರೆಗೆ ಬಂದಿದ್ದ ರೋಗಿಗಳು ಹಾಗೂ ಅವರ ಸಂಬಂಧಿಗಳು ತೊಂದರೆ ಅನುಭವಿಸಬೇಕಾಯಿತು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸ್ಥಗಿತಗೊಂಡಿದ್ದಕ್ಕೆ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದರು.

ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳ ಸಂಖ್ಯೆ ಸಹಜವಾಗಿ ಹೆಚ್ಚಿತ್ತು. ಸ್ವಲ್ಪ ತಡವಾದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯಿತು. ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿತ್ತು.

‘ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ವೈದ್ಯರಿಗೆ ಕಡ್ಡಾಯವಾಗಿ ಸೇವೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುವಂತೆ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾಗಿಲ್ಲ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿ.ಜಿ.ರೆಡ್ಡಿ ತಿಳಿಸಿದರು.

‘ವೈದ್ಯರ ಮೇಲೆ ಹಲ್ಲೆ ಮಾಡಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಂಗಳೂರಿನ ವಿ.ವಿ.ಪುರಂ ಪೊಲೀಸ್‌ ಠಾಣೆಗೆ ಶರಣಾದ ಕಾರಣ ಸಂಜೆ 4 ಗಂಟೆಗೆ ಒಪಿಡಿ ಬಂದ್‌ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು’ ಎಂದು ಐಎಂಎ ಬೀದರ್‌ ಘಟಕದ ಅಧ್ಯಕ್ಷ ಡಾ.ನಾಗರಾಜ್‌ ವಿ.ವಿ. ಹೇಳಿದರು.

ಇದಕ್ಕೂ ಮೊದಲು ಐಎಂಎ ಬೀದರ್‌ ಘಟಕದ ಪದಾಧಿಕಾರಿಗಳು ಅಧ್ಯಕ್ಷ ಡಾ.ನಾಗರಾಜ್‌ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿಗೆ ವೈದ್ಯರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ವೈದ್ಯರಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಡಾ. ಸಿ.ಆನಂದ ರಾವ್, ಡಾ. ವೈಜನಾಥ ಮದನಾ, ವಿಜಯ ಬಲ್ಲೂರ್‌ಕರ್, ಸತೀಶ ಮುಡಬಿ, ವಿನಯ ಹಲಮಡಗೆ, ಮಹೇಶ ಜೋಜನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT