ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೀದರ್‌ ಉತ್ಸವ’ಕ್ಕೆ ಸಂಘಟನೆಗಳ ವಿರೋಧ

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಗೆ ದೂರು
Last Updated 10 ಡಿಸೆಂಬರ್ 2018, 15:36 IST
ಅಕ್ಷರ ಗಾತ್ರ

ಬೀದರ್‌: ಬರದ ಸಂದರ್ಭದಲ್ಲಿ ಜನ ಹಿತ ಕಡೆಗಣಿಸಿ ಬೀದರ್ ಉತ್ಸವ ಆಚರಿಸುತ್ತಿರುವ ಜಿಲ್ಲಾ ಆಡಳಿತದ ಕ್ರಮಕ್ಕೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ದಲಿತ, ಶೋಷಿತ ಸಮಾಜ ಸಂಘರ್ಷ ಸಮಿತಿಯ ರಾಜ್ಯ ಉಪಾಧ್ಯಕ್ಷ ರಾಜಕುಮಾರ ಮೂಲಭಾರತಿ, ಮುಸ್ಲಿಮ್ ಹ್ಯೂಮನ್ ರೈಟ್ಸ್ ಅಸೋಸಿಯೇಶನ್ ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ವಹೀದ್ ಲಖನ್, ಸಿಪಿಐ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಾಬುರಾವ್ ಹೊನ್ನಾ, ಕರ್ನಾಟಕ ಮುಸ್ಲಿಮ್ ಕೌನ್ಸಿಲ್ ಜಿಲ್ಲಾ ಘಟಕದ ಉಪಾಧ್ಯಕ್ಷ ಸೈಯದ್ ಗಾಲೀಬ್ ಹಾಸ್ಮಿ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ತುಂಗಾ, ಎಚ್.ಆರ್.ಎಫ್.ಡಿ.ಎಲ್. ಕಲಬುರ್ಗಿ ವಿಭಾಗೀಯ ಸಂಯೋಜಕ ರವಿಕುಮಾರ ವಾಘಮಾರೆ ಈ ಕುರಿತು ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ರಾಜ್ಯದ ಅರ್ಧಕ್ಕೂ ಅಧಿಕ ಜಿಲ್ಲೆಗಳಲ್ಲಿ ಬರ ಇರುವ ಕಾರಣ ರಾಜ್ಯದಲ್ಲಿ ಈ ಬಾರಿ ನಡೆಯಲಿದ್ದ ಎಲ್ಲ ಉತ್ಸವಗಳನ್ನು ರದ್ದುಪಡಿಸಲಾಗಿದೆ. ಆದರೆ, ಜಿಲ್ಲಾ ಆಡಳಿತವು ಬೀದರ್ ಉತ್ಸವ ನಡೆಸಲು ಹೊರಟಿದೆ. ಬರದ ಸಂದರ್ಭದಲ್ಲಿ ಜನರ ಸಮಸ್ಯೆಗೆ ದನಿಯಾಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರು ಉತ್ಸವದ ಬಗ್ಗೆ ಹೆಚ್ಚು ಉತ್ಸುಕತೆ ತೋರುತ್ತಿದ್ದಾರೆ. ಉತ್ಸವ ನಡೆಸುವುದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬರದ ಕಾರಣದಿಂದ ಐದು ವರ್ಷದಿಂದ ಬೀದರ್ ಉತ್ಸವ ನಡೆದಿಲ್ಲ. ಈ ಸಲವೂ ಬರ ಇರುವ ಕಾರಣ ಉತ್ಸವದ ಅಗತ್ಯ ಇರಲಿಲ್ಲ. ಆದರೆ, ಜಿಲ್ಲಾ ಆಡಳಿತ ಉತ್ಸವಕ್ಕಾಗಿ ಒಂದೆರಡು ಸಭೆಗಳನ್ನು ನಡೆಸಿದೆ. ಈ ಸಭೆಗಳಲ್ಲಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳ ಬೆಂಬಲಿಗರು, ಕಲಾವಿದರ ಬುಕ್ಕಿಂಗ್, ವೇದಿಕೆ ನಿರ್ಮಾಣ ಮೊದಲಾದ ಕೆಲಸಗಳ ಮೂಲಕ ಲಾಭ ಮಾಡಿಕೊಳ್ಳುವಂತಹವರು ಮಾತ್ರ ಭಾಗವಹಿಸಿದ್ದರು. ಜನರ ನಾಡಿಮಿಡಿತ ಅರಿಯದೆ, ಸಭೆಗಳಲ್ಲಿ ತಾವೇ ಉತ್ಸವ ನಡೆಸುವ ನಿರ್ಣಯ ಕೈಗೊಂಡಿದ್ದಾರೆ. ದಿನಾಂಕಗಳನ್ನೂ ನಿಗದಿಪಡಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಬರದ ಕರಾಳ ಛಾಯೆ ಇರುವುದರಿಂದ ರಾಜ್ಯ ಸರ್ಕಾರ ಜಿಲ್ಲೆಯ ನಾಲ್ಕು ತಾಲ್ಲೂಕುಗಳನ್ನು ಈಗಾಗಲೇ ಬರಪೀಡಿತ ಎಂದು ಘೋಷಿಸಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದೆ. ತೆರೆದ ಬಾವಿಗಳು ಒಣಗುತ್ತಿವೆ. ಕೊಳವೆ ಬಾವಿಗಳು ಗ್ಯಾಪ್ ಕೊಡುತ್ತಿದೆ. ಹೊಸ ಕೊಳವೆಬಾವಿಗಳನ್ನು ತೋಡಿಸಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದರೆ ಜಿಲ್ಲಾಡಳಿತ ಕೊಳವೆ ಬಾವಿ ಕೊರೆಸುವುದನ್ನು ನಿರ್ಬಂಧಿಸಿದೆ ಎಂದು ಹೇಳಿದ್ದಾರೆ.

ನೆರೆಯ ಮಹಾರಾಷ್ಟ್ರ ಹಾಗೂ ತೆಲಂಗಾಣದಿಂದ ಜಿಲ್ಲೆಗೆ ಕಟ್ಟಡ ನಿರ್ಮಾಣಕ್ಕೆ ಯೋಗ್ಯವಾದ ಮರಳು ತಂದು ಮಾರಾಟ ಮಾಡಲಾಗುತ್ತಿದೆ. ಆದರೆ, ಅಧಿಕಾರಿಗಳು ಗಣಿಗಾರಿಕೆ ನೆಪದಲ್ಲಿ ಮರಳನ್ನು ಜಪ್ತಿ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಕೆಲವರು ಮೂರು ಪಟ್ಟು ಬೆಲೆಗೆ ಮರಳು ಮಾರಾಟ ಮಾಡುತ್ತಿದ್ದಾರೆ ಎಂದಿದ್ದಾರೆ.

ನೀರು ಹಾಗೂ ಮರಳಿನ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ ಕೆಲಸ ಸಂಪೂರ್ಣ ನಿಂತು ಹೋಗಿದೆ. ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವ ಸೆಂಟ್ರಿಂಗ್, ಪ್ಲಾಸ್ಟರ್, ಫರ್ಸಿ, ಎಲೆಕ್ಟ್ರಿಷಿಯನ್ ಹಾಗೂ ಇತರ ಕಾರ್ಮಿಕರಿಗೆ ಉದ್ಯೋಗವೇ ಇಲ್ಲವಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸದ್ಯ 10 ಸಾವಿರದಿಂದ 15 ಸಾವಿರ ಕಟ್ಟಡ ನಿರ್ಮಾಣ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಬಹಳಷ್ಟು ಜನ ಕೆಲಸ ಅರಸಿ ಹೈದರಾಬಾದ್ ಹಾಗೂ ಮುಂಬೈಗೆ ಗುಳೆ ಹೋಗಿದ್ದಾರೆ. ಕೆಲ ಕಾರ್ಮಿಕರು ಇಂಟರ್‌ಸಿಟಿ ರೈಲು ಬಳಸಿಕೊಂಡು ನಿತ್ಯ ಹೈದರಾಬಾದ್‌ಗೆ ಹೋಗಿ ಕೂಲಿ ಕೆಲಸ ಮಾಡಿ ಮರಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಟ್ಟಡ ನಿರ್ಮಾಣ ಕ್ಷೇತ್ರ ಅಷ್ಟೇ ಅಲ್ಲ; ಎಲ್ಲ ವ್ಯಾಪಾರಗಳ ಸ್ಥಿತಿಯೂ ಗಂಭೀರವಾಗಿದೆ. ಯಾವುದೇ ಅಂಗಡಿಗಳಲ್ಲಿ ಶೇ 25ಕ್ಕೂ ಹೆಚ್ಚು ವ್ಯಾಪಾರ ಇಲ್ಲ. ವ್ಯಾಪಾರಿಗಳು ಕಾರ್ಮಿಕರಿಗೆ ವೇತನ ಕೊಡದಂತಹ ಸ್ಥಿತಿಯಲ್ಲಿ ಇದ್ದಾರೆ ಎಂದು ತಿಳಿಸಿದ್ದಾರೆ.

ಐತಿಹಾಸಿಕ ಸ್ಮಾರಕಗಳತ್ತ ಪ್ರವಾಸಿಗರನ್ನು ಆಕರ್ಷಿಸಲು ಬೀದರ್ ಉತ್ಸವ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಆಡಳಿತ ಹೇಳುತ್ತಿದೆ. ಆದರೆ, 2006 ರಿಂದ ಈವರೆಗೆ ಬೀದರ್ ಉತ್ಸವಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಟರಿಂದ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಿದರೂ, 150 ಕಿ.ಮೀ. ದೂರದಲ್ಲಿರುವ ಹೈದರಾಬಾದ್‌ಗೆ ಪ್ರತಿ ದಿನ ನೂರಾರು ವಾಹನಗಳಲ್ಲಿ ಬರುವ ಪ್ರವಾಸಿಗರನ್ನು ಬೀದರ್‌ಗೆ ಆಕರ್ಷಿಸಲು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬೀದರ್‌ನ ಸ್ಮಾರಕಗಳ ಬಗ್ಗೆ ಸಮಗ್ರ ಮಾಹಿತಿ ನೀಡಬಲ್ಲ ಕನ್ನಡ, ಇಂಗ್ಲಿಷ್ ಹಾಗೂ ಉರ್ದು ಭಾಷೆಯ ಗೈಡ್‌ಗಳನ್ನು ನೇಮಕ ಮಾಡಲು ಆಡಳಿತಕ್ಕೆ ಸಾಧ್ಯವಾಗಿಲ್ಲ. ಗೈಡ್‌ಗಳನ್ನು ನೇಮಿಸದೆ ಉತ್ಸವ ನಡೆಸುವುದರಿಂದ ಪ್ರವಾಸೋದ್ಯಮದ ಬೆಳವಣಿಗೆ ಆಗದು ಎಂದು ಹೇಳಿದ್ದಾರೆ.

ಪರಿಣಿತ ಗೈಡ್‌ಗಳನ್ನು ನಿಯೋಜಿಸಿದರೆ ಜನ ತಾನಾಗಿಯೇ ಬೀದರ್‌ನ ಸ್ಮಾರಕಗಳತ್ತ ಹರಿದು ಬರುತ್ತಾರೆಯೇ ವಿನಃ ಎರಡು ದಿನಗಳ ಬೀದರ್ ಉತ್ಸವದಿಂದ ಅಲ್ಲ. ಹೀಗಾಗಿ ಮುಖ್ಯಮಂತ್ರಿ ಬೀದರ್ ಉತ್ಸವವನ್ನು ರದ್ದುಪಡಿಸಬೇಕು. ಉತ್ಸವದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಯುದ್ಧೋಪಾದಿಯಲ್ಲಿ ನಡೆಸಲು ಅಧಿಕಾರಿಗಳಿಗೆ ಆದೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT