ಬುಧವಾರ, ನವೆಂಬರ್ 25, 2020
25 °C
ಏಳು ತಿಂಗಳ ಬಾಕಿ ವೇತನ ಬಿಡುಗಡೆಗೆ ಒತ್ತಾಯ

ಹೊರ ಗುತ್ತಿಗೆ ನೌಕರರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಏಳು ತಿಂಗಳ ಬಾಕಿ ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ, ಕಿತ್ತೂರು ರಾಣಿ ಚೆನ್ನಮ್ಮ, ಡಾ. ಬಿ.ಆರ್. ಅಂಬೇಡ್ಕರ್, ಶ್ರೀಮತಿ ಇಂದಿರಾ ಗಾಂಧಿ ಹಾಗೂ ಏಕಲವ್ಯ ವಸತಿ ಶಾಲೆಗಳ ಹೊರ ಗುತ್ತಿಗೆ ಪ್ರಥಮ ದರ್ಜೆ ಸಹಾಯಕರು, ಶುಶ್ರೂಷಕರು ಹಾಗೂ ಗ್ರೂಪ್ ಡಿ ನೌಕರರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಪ್ರಥಮ ದರ್ಜೆ ಸಹಾಯಕರು ಹಾಗೂ ಶುಶ್ರೂಷಕರ (ಹೊರ ಸಂಪನ್ಮೂಲ) ಸಮಿತಿಯ ನೇತೃತ್ವದಲ್ಲಿ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಅವರಿಗೆ ಸಲ್ಲಿಸಿದರು.

ಜಿಲ್ಲೆಯ 29 ವಸತಿ ಶಾಲೆಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 400 ನೌಕರರು ಕೋವಿಡ್ ಪ್ರಯುಕ್ತ ವಿಧಿಸಲಾದ ಲಾಕ್‍ಡೌನ್ ನಂತರ ಏಳು ತಿಂಗಳಿಂದ ವೇತನ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್‍ಡೌನ್ ಅವಧಿಯ ವೇತನ ಪಾವತಿಸಲು ಆದೇಶಿಸಿದ್ದರೂ, ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ದೂರಿದರು.

ಅಲ್ಪಸಂಖ್ಯಾತರ ಇಲಾಖೆಯ ಹೊರ ಗುತ್ತಿಗೆ ನೌಕರರಿಗೆ ಲಾಕ್‍ಡೌನ್‍ನಿಂದ ಈವರೆಗಿನ ವೇತನ ನೀಡಲಾಗುತ್ತಿದೆ. ಹೀಗಾಗಿ ತಮಗೂ ವೇತನ ಬಿಡುಗಡೆ ಮಾಡಿ ಸೇವೆಯಲ್ಲಿ ಮುಂದುವರಿಸಬೇಕು. ಇಲ್ಲವಾದಲ್ಲಿ ದಯಾ ಮರಣಕ್ಕೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಪ್ರಥಮ ದರ್ಜೆ ಸಹಾಯಕರು ಹಾಗೂ ಶುಶ್ರೂಷಕರ (ಹೊರ ಸಂಪನ್ಮೂಲ) ಸಮಿತಿಯ ಜಿಲ್ಲಾ ಘಟಕದ ಗೌರವಾಧ್ಯಕ್ಷ ರಾಜಕುಮಾರ ಜಟಗೊಂಡ, ಅಧ್ಯಕ್ಷ ಗೋಪಾಲ ಕುಲಕರ್ಣಿ, ಉಪಾಧ್ಯಕ್ಷರಾದ ಗಿರಿನಾಗರಾಜ ಮುಸ್ಲಿ, ಕಲ್ಲಪ್ಪ ಮೋಳಕೆರೆ, ವಸಂತ ರಾಠೋಡ್, ಅಮೃಪಾಲಿ ಎ. ಸಿಂಧೆ, ಪ್ರಧಾನ ಕಾರ್ಯದರ್ಶಿ ರಜನಿಕಾಂತ ಶಿಂಧೆ, ಕಾರ್ಯದರ್ಶಿ ಸೋಮಶೇಖರ ಬಿರಾದಾರ, ಜಂಟಿ ಕಾರ್ಯದರ್ಶಿ ಸಿದ್ದು ಶೆಟಕಾರ್, ಅನೂಪಕುಮಾರ ಗಾಯಕವಾಡ, ಮೈಲಾರಪ್ಪ ಬುಕ್ಕಾ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.