ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಶೀಘ್ರ ಎಂ.ಪಾಸ್‌ಪೋರ್ಟ್‌

ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಗೆ ಪ್ರಸ್ತಾವ ಸಲ್ಲಿಕೆ, ಪೊಲೀಸ್‌ ಸಿಬ್ಬಂದಿಗೆ ತರಬೇತಿ
Last Updated 9 ಸೆಪ್ಟೆಂಬರ್ 2018, 18:45 IST
ಅಕ್ಷರ ಗಾತ್ರ

ಬೀದರ್‌: ರಾಜಧಾನಿ ಹೊರತುಪಡಿಸಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಎಂ.ಪಾರ್ಸ್‌ಪೋರ್ಟ್‌ ಕೇಂದ್ರ ಆರಂಭಿಸಲು ಪೊಲೀಸ್‌ ಇಲಾಖೆ ಸಿದ್ಧತೆ ನಡೆಸಿದೆ.

ಮೊಬೈಲ್‌ ಫೋನ್‌ ಮೂಲಕ ಪಾಸ್‌ಪೋರ್ಟ್‌ (ಎಂ.ಪಾರ್ಸ್‌ಪೋರ್ಟ್‌)ಗೆ ಅರ್ಜಿ ಸಲ್ಲಿಸುವ ಹೊಸ ಸೇವೆ ಈಗಾಗಲೇ ಬೆಂಗಳೂರಲ್ಲಿ ಆರಂಭವಾಗಿದೆ. ಬೀದರ್‌ನಲ್ಲೂ ಎಂ.ಪಾಸ್‌ಪೋರ್ಟ್‌ ಆರಂಭಿಸಲು ಅನುಮತಿ ಕೋರಿ ಜಿಲ್ಲಾ ಪೊಲೀಸರು ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಗೆ ಪ್ರಸ್ತಾವ ಕಳಿಸಿದ್ದಾರೆ.

ರಾಷ್ಟ್ರದ ಯಾವುದೇ ಮೂಲೆಯಲ್ಲಿ ನೆಲೆಸಿದ್ದರೂ ಮೊಬೈಲ್‌ ಆಪ್‌ ಮೂಲಕ ಬೀದರ್ ಪಾಸ್‌ಪೋರ್ಟ್‌ ಕಚೇರಿಯಲ್ಲಿ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗಲಿದೆ. ಪೊಲೀಸರು ವಾಸ ಸ್ಥಳದ ದಾಖಲೆ ಪರಿಶೀಲನೆಗೆ ಬರುವ ಮೊದಲು ಅರ್ಜಿ ಸಲ್ಲಿಸಿದ ವ್ಯಕ್ತಿಗೆ ಸಂದೇಶ ಬರಲಿದೆ.

ಜಿಲ್ಲೆಯಲ್ಲಿ 29 ಪೊಲೀಸ್‌ ಠಾಣೆಗಳಿವೆ. ಹೀಗಾಗಿ ಪ್ರತಿಯೊಂದು ಠಾಣೆಗೆ ಒಂದರಂತೆ 29 ಟ್ಯಾಬ್‌ ಕೊಟ್ಟು ಸಿಬ್ಬಂದಿಗೆ ತರಬೇತಿ ನೀಡುವ ಉದ್ದೇಶ ಇದೆ. ಟ್ಯಾಬ್‌ಗೆ ಕನಿಷ್ಠ 2ಜಿಬಿ ಡಾಟಾ ಬೇಕಾಗಲಿದೆ. ಒಮ್ಮೆ ಕೇಂದ್ರ ಶುರುವಾದರೆ ಅಭ್ಯರ್ಥಿಯು ಅರ್ಜಿ ಸಲ್ಲಿಸಿದ ನಂತರ ಎಲ್ಲ ಬಗೆಯ ಪ್ರಕ್ರಿಯೆ ಏಕಕಾಲದಲ್ಲಿ ಶುರುವಾಗಲಿದೆ. ಒಂದು ವಾರದಲ್ಲೇ ಅಭ್ಯರ್ಥಿಗಳಿಗೆ ಪಾಸ್‌ಪೋರ್ಟ್‌ ದೊರೆಯಲಿದೆ.

‘ಪೊಲೀಸ್‌ ಸಿಬ್ಬಂದಿ ಅಭ್ಯರ್ಥಿಯ ನಿವಾಸಕ್ಕೆ ಬಂದು ಮೊಬೈಲ್‌ನಲ್ಲಿ ಭಾವಚಿತ್ರ ಸೆರೆ ಹಿಡಿದು ದಾಖಲು ಮಾಡಿಕೊಳ್ಳಲಿದ್ದಾರೆ. ಇದರಿಂದ ಎರಡನೇ ಹಂತದಲ್ಲಿ ಅಭ್ಯರ್ಥಿಗಳ ಮನೆಗಳನ್ನು ಹುಡುಕಲು ಸಮಸ್ಯೆ ಆಗದು. ಅಷ್ಟೇ ಅಲ್ಲ ಠಾಣೆಯಲ್ಲಿ ಕುಳಿತು ನಿಖರ ಮಾಹಿತಿ ಸಂಗ್ರಹಿಸಲು ಕೂಡ ಸಾಧ್ಯವಾಗಲಿದೆ’ ಎನ್ನುತ್ತಾರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಧರ.

‘ಎಂ.ಪಾಸ್‌ಪೋರ್ಟ್ ಸೇವಾ’ ಮೊಬೈಲ್ ಆಪ್‌ ಮೂಲಕ ಪಾರ್ಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ ನಂತರ, ಪಾಸ್‌ಪೋರ್ಟ್ ಕಚೇರಿಯಿಂದ ನಿಮ್ಮ ಅರ್ಜಿ ವಿಲೇವಾರಿಯ ಮಾಹಿತಿ ಪಡೆಯಬಹುದು. ಅರ್ಜಿ ಯಾವ ಹಂತದಲ್ಲಿ ಇದೆ ಎನ್ನುವುದನ್ನೂ ತಿಳಿಯಬಹುದು’ ಎಂದು ಹೇಳುತ್ತಾರೆ.

‘ಪೊಲೀಸ್ ಅಧಿಕಾರಿಗಳು ಯಾವ ಕಾರಣಕ್ಕೂ ವಿಳಂಬ ಮಾಡುವ ಹಾಗಿಲ್ಲ. ವಿಳಂಬ ಮಾಡಿದರೆ ಕಾರಣವನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು.
ಉದ್ದೇಶ ಪೂರ್ವಕ ವಿಳಂಬವಾಗಿರುವುದು ಕಂಡು ಬಂದರೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ’ ಎಂದು ತಿಳಿಸುತ್ತಾರೆ.

‘ಪ್ರಸ್ತುತ 21 ದಿನಗಳ ಒಳಗೆ ಪಾಸ್‌ಪೋರ್ಟ್‌ ಪರಿಶೀಲನೆ ನಡೆದು ಹೋಗುತ್ತದೆ. ಹೊಸ ಆ್ಯಪ್‌ ಬಂದ ಮೇಲೆ ವಾರದೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT