ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಅವಧಿ ಮುಗಿದ ನಂತರ ಬಂತು ಮೀಸಲಾತಿ

ಅಧ್ಯಕ್ಷ ಅವಧಿ ಪೂರ್ಣಗೊಳಿಸಿದ ಉಪಾಧ್ಯಕ್ಷೆ
Last Updated 10 ಅಕ್ಟೋಬರ್ 2020, 20:15 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ನಗರಸಭೆ ಗೊಂದಲದ ಗೂಡಾಗಿದೆ. 2013ರಲ್ಲಿ ಮೀಸಲಾತಿ ಪ್ರಕಟಿಸಲು ವಿಳಂಬ ಮಾಡಿದರೆ, 2017ರಲ್ಲಿ ಅಭ್ಯರ್ಥಿಯ ಜಾತಿ ಗೊಂದಲದಿಂದಾಗಿ ಅರ್ಹ ಅಭ್ಯರ್ಥಿಗೆ ಅಧ್ಯಕ್ಷರಾಗುವ ಅವಕಾಶವೇ ದೊರೆಯಲಿಲ್ಲ. ಇದೀಗ ಬೀದರ್‌ ನಗರಸಭೆಯ ಮೀಸಲಾತಿ ಪ್ರಕಟಿಸಿದರೂ ಚುನಾಯಿತ ಮಂಡಳಿಯೇ ಅಸ್ತಿತ್ವದಲ್ಲಿ ಇಲ್ಲ.

ಬೀದರ್ ನಗರಸಭೆಗೆ 2013ರಲ್ಲಿ ಚುನಾವಣೆ ನಡೆದರೂ ಸರ್ಕಾರ ಒಂದು ವರ್ಷದ ವರೆಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನೇ ಪ್ರಕಟಿಸಿರಲಿಲ್ಲ. ಒಂದು ವರ್ಷ ತಡವಾಗಿ ಮೀಸಲಾತಿ ಪ್ರಕಟವಾದ ನಂತರ ಅಂದು ಸಂಸದರಾಗಿದ್ದ ಧರ್ಮಸಿಂಗ್‌ ಅವರ ಆರ್ಶೀವಾದದಿಂದಾಗಿ ಮೊದಲ ಅವಧಿಗೆ ಹಿಂದುಳಿದ ಮಹಿಳೆಗೆ ಮೀಸಲಿದ್ದ ಅಧ್ಯಕ್ಷ ಹುದ್ದೆಗೆ ಫಾತಿಮಾ ಅನ್ವರ್‌ಅಲಿ ಹಾಗೂ ಸಾಮಾನ್ಯ ಅಭ್ಯರ್ಥಿಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಗಂಗಮ್ಮ ಮಹಾಂತಯ್ಯ ಸ್ವಾಮಿ ಆಯ್ಕೆಯಾಗಿದ್ದರು.

ಎರಡನೇ ಅವಧಿಗೆ ಪರಿಶಿಷ್ಟ ಪಂಗಡದ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಾಗಿತ್ತು. ಸದಸ್ಯರೊಬ್ಬರು ಹೈಕೋರ್ಟ್‌ ಮೊರೆ ಹೋದ ಕಾರಣ ತೀರ್ಪು ಬರುವಷ್ಟರಲ್ಲಿ ನಗರಸಭೆ ಸದಸ್ಯರ ಅವಧಿಯೇ ಮುಗಿಯಿತು. ಹಿಂದುಳಿದ ವರ್ಗದ ಮಹಿಳೆಗೆ ಮೀಸಲಿದ್ದ ಸ್ಥಾನದಿಂದ ಉ‍ಪಾಧ್ಯಕ್ಷರಾಗಿದ್ದ ಜೆಡಿಎಸ್‌ನ ಶಾಲಿನಿ ಚಿಂತಾಮಣಿ ಅವರೇ ಪ್ರಭಾರ ಅಧ್ಯಕ್ಷರಾಗಿ ಅವಧಿ ಪೂರ್ಣಗೊಳಿಸಿದರು.

ಹೈಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥಗೊಂಡರೂ ಜಿಲ್ಲಾಡಳಿತ ಸರ್ಕಾರಕ್ಕೆ ಸಕಾಲದಲ್ಲಿ ಮಾಹಿತಿಯನ್ನೇ ಸಲ್ಲಿಸಲಿಲ್ಲ ಎಂದು ನಗರಸಭೆ ಸದಸ್ಯರು ಹೇಳಿದರೆ, ಎಲ್ಲ ತೀರ್ಮಾನಗಳು ಸರ್ಕಾರಕ್ಕೆ ಸಂಬಂಧಪಟ್ಟದ್ದು ಎಂದು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಹೇಳುತ್ತಾರೆ.

2018ರ ಮಾರ್ಚ್‌ 22 ರಂದು ಚುನಾಯಿತ ಪ್ರತಿನಿಧಿಗಳ ಅವಧಿ ಐದು ವರ್ಷಗಳ ಅವಧಿ ಪೂರ್ಣಗೊಂಡರೂ ಮೀಸಲಾತಿ ವಿಳಂಬ ಮಾಡಿದ್ದಕ್ಕೆ ರಾಜ್ಯ ಸರ್ಕಾರ ನಗರಸಭೆಯ ಚುನಾಯಿತ ಮಂಡಳಿಯ ಅವಧಿಯನ್ನು 2019ರ ಮಾರ್ಚ್‌ 22ರ ವರೆಗೆ ವಿಸ್ತರಿಸಲಾಗಿತ್ತು.

‘ಜಿಲ್ಲಾಡಳಿತದ ಲೋಪದಿಂದಾಗಿ ಜನಪ್ರತಿನಿಧಿಗಳು ತೊಂದರೆ ಅನುಭವಿಸಬೇಕಾಯಿತು. ಅವಧಿ ಮುಗಿದ ನಂತರ ಮೀಸಲಾತಿ ಪ್ರಕಟಿಸಿರುವುದು ಸರ್ಕಾರ ಮುಜುಗರಕ್ಕೆ ಒಳಗಾಗುವಂತೆ ಮಾಡಿದೆ. ಚುನಾಯಿತ ಪ್ರತಿನಿಧಿಗಳೇ ಇಲ್ಲದಿದ್ದರೂ ಮೀಸಲಾತಿ ಪ್ರಕಟಿಸಿರುವುದು ಹಾಸ್ಯಾಸ್ಪದ’ ಎನ್ನುತ್ತಾರೆ ನಗರಸಭೆ ನಿಕಟಪೂರ್ವ ಸದಸ್ಯ ನಬಿ ಖುರೇಶಿ.

ನಗರಸಭೆಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಐದು ವರ್ಷಗಳ ಅವಧಿಯಲ್ಲಿ ನಾಲ್ವರು ಆಯುಕ್ತರು ಬಂದು ಹೋಗಿದ್ದಾರೆ. ನಗರಸಭೆಯ ಖಜಾನೆಯಲ್ಲಿ ಕೋಟ್ಯಂತರ ಹಣ ಇದ್ದರೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಸರ್ಕಾರ ಎಲ್ಲ ಗೊಂದಲಗಳಿಗೂ ತೆರೆ ಎಳೆಯಬೇಕಿದೆ’ ಎಂದು ನಗರಸಭೆಯ ಇನ್ನೊಬ್ಬ ನಿಕಟಪೂರ್ವ ಸದಸ್ಯ ಮನ್ಸೂರ್‌ ಖಾದ್ರಿ ಹೇಳುತ್ತಾರೆ.

’2013ರಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟಿಸಲು ಒಂದು ವರ್ಷ ವಿಳಂಬ ಮಾಡಲಾಯಿತು. 2019ರಲ್ಲೂ ನಡೆದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟಿಸಲು ವಿಳಂಬ ಮಾಡಲಾಗಿದೆ. ಬೀದರ್‌ನಲ್ಲಿ ಒಂದೇ ಚುನಾಯಿತ ಮಂಡಳಿ ಏಳು ವರ್ಷ ಇರುವಂತಾಯಿತು. ಕಾಲಮಿತಿಯಲ್ಲಿ ಮೀಸಲಾತಿ ಪ್ರಕಟಿಸಿದರೆ ಅಭಿವೃದ್ಧಿಗೂ ಅನುಕೂಲವಾಗುತ್ತದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT