ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಳಲ್ಲಿ ಹಬ್ಬದ ವಾತಾವರಣ, ಮಕ್ಕಳಿಗೆ ಶಿಕ್ಷಕರಿಂದ ಸಂಭ್ರಮದ ಸ್ವಾಗತ

ಪಠ್ಯಪುಸ್ತಕ, ಸಮವಸ್ತ್ರ ನೀಡಿ ವಿದ್ಯಾರ್ಥಿಗಳಿಗೆ ಸ್ವಾಗತ
Last Updated 29 ಮೇ 2019, 3:24 IST
ಅಕ್ಷರ ಗಾತ್ರ

ಬೀದರ್‌: ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಬುಧವಾರ ಆರಂಭವಾಗಲಿವೆ. ಒಂದೂವರೆ ತಿಂಗಳು ಬೇಸಿಗೆ ರಜೆಯ ಮಜಾ ಅನುಭವಿಸಿರುವ ಜಿಲ್ಲೆಯ 2,888 ಶಾಲೆಗಳ ವಿದ್ಯಾರ್ಥಿಗಳು ಬುಧವಾರ ಮತ್ತೆ  ಶಾಲೆಯತ್ತ ಹೆಜ್ಜೆ ಹಾಕಲಿದ್ದಾರೆ.

ಶಾಲೆಗಳಲ್ಲಿ ಪ್ರಾರಂಭೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಾಲೆಯ ಆವರಣ, ಕೊಠಡಿಗಳನ್ನು ಸ್ವಚ್ಛಗೊಳಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಎಸ್‌ಡಿಎಂಸಿ, ಸ್ಥಳೀಯ ಗಣ್ಯರು, ಸಾರ್ವಜನಿಕರು ಮತ್ತು ಪೋಷಕರ ಉಪಸ್ಥಿತಿಯಲ್ಲಿ ಶಾಲಾ ಪ್ರಾರಂಭೋತ್ಸವ ನಡೆಸಬೇಕು. ಒಂದನೇ ತರಗತಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ಸ್ಮರಣೆಯಲ್ಲಿರುವಂತೆ ಕಾರ್ಯಕ್ರಮ ಆಯೋಜಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಶಾಲಾ ಪ್ರಾರಂಭೋತ್ಸವವನ್ನು ಹಬ್ಬದ ರೀತಿಯಲ್ಲಿ ಆಚರಿಸಲು ಹಾಗೂ ಮಕ್ಕಳಿಗೆ ಸಿಹಿ ವಿತರಿಸಿ ಬರ ಮಾಡಿಕೊಳ್ಳಲು ಎಲ್ಲ ಶಾಲೆಗಳ ಮುಖ್ಯಶಿಕ್ಷಕರಿಗೆ ಶಿಕ್ಷಣ ಇಲಾಖೆ ಸೂಚಿಸಿದೆ. ಮುಖ್ಯಶಿಕ್ಷಕರು ಮೊದಲ ದಿನವೇ ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಣೆ ಮಾಡಿ ಸಿಹಿ ವಿತರಿಸಿ ಅವರ ಸಂಭ್ರಮ ಇಮ್ಮಡಿಗೊಳಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಬೀದರ್‌ ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಇದ್ದರೂ ಸಮಶೀತೋಷ್ಣ ವಲಯದಲ್ಲಿ ಗುರುತಿಸಿಕೊಂಡಿದೆ. ಶಿಕ್ಷಕರ ಸಂಘಟನೆಗಳು ಬಿಸಿಲಿನ ಧಗೆ ಇರುವ ಕಾರಣ ಜೂನ್‌ 11ರಿಂದ ಶಾಲೆ ಅರಂಭಿಸುವಂತೆ ಮನವಿ ಮಾಡಿದ್ದರೂ ಜಿಲ್ಲಾಧಿಕಾರಿ ಒಪ್ಪಿಗೆ ಸೂಚಿಸಿಲ್ಲ. ನಿಗದಿತ ಅವಧಿಯಲ್ಲೇ ಶಾಲೆಗಳು ಆರಂಭವಾಗಲಿವೆ.

ಈಗಾಗಲೇ ಕೆಲವು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಪದಾಧಿಕಾರಿಗಳು ಶಾಲಾ ಕಟ್ಟಡಕ್ಕೆ ಸುಣ್ಣಬಣ್ಣ ಮಾಡಿಸಿದ್ದಾರೆ. ಶಾಲೆಯ ಪ್ರವೇಶ ದ್ವಾರದಲ್ಲಿ ತಳಿರು ತೋರಣ ಕಟ್ಟಿದ್ದಾರೆ. ಮಕ್ಕಳಿಗೆ ಶಿರಾ, ಇಡ್ಲಿ, ಚಟ್ನಿ ಕೊಡಲು ತಯಾರಿ ಮಾಡಿಕೊಂಡಿದ್ದಾರೆ. ಬೇಸಿಗೆಯಲ್ಲೂ ಬಿಸಿಯೂಟ ವಿತರಿಸಲು ಶಾಲೆಗಳು ಆರಂಭವಾದ್ದರಿಂದ ಕೆಲವರು ಆಸಕ್ತಿ ತೋರಿಸಿಲ್ಲ.

ಜಿಲ್ಲೆಯ ಶೇಕಡ 65ರಷ್ಟು ಶಾಲೆಗಳಿಗೆ ಶಾಲಾ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಣೆ ಮಾಡಲಾಗಿದೆ. ಒಂದು ವಾರದಲ್ಲಿ ಎಲ್ಲ ಮಕ್ಕಳಿಗೆ ಶಾಲಾ ಸಮವಸ್ತ್ರ ವಿತರಿಸಲಾಗುವುದು. ಶಾಲಾ ಪ್ರಾರಂಭೋತ್ಸವಕ್ಕೆ ಮಂಗಳವಾರ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಶಿಕ್ಷಣಾಧಿಕಾರಿ ಶಿವಕುಮಾರ ಸ್ವಾಮಿ ತಿಳಿಸಿದರು.

‘ಬೇಸಿಗೆಯಲ್ಲೂ ವಿದ್ಯಾರ್ಥಿಗಳಿಗೆ ಬಿಸಿಯೂಟ ಕೊಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಇರುವ ಶಾಲೆಗಳಿಗೆ ನೀರಿನ ವ್ಯವಸ್ಥೆ ಮಾಡುವಂತೆ ಆಯಾ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ. ಒಂದು ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಬೂಟ್‌ ಹಾಗೂ ಸಾಕ್ಸ್, ಮಧ್ಯಂತರ ರಜೆಯ ಮೊದಲೇ ಸೈಕಲ್ ವಿತರಿಸಲಾಗುವುದು’ ಎಂದು ಹೇಳಿದರು.

‘ಬೇಸಿಗೆ ರಜೆಯಲ್ಲಿ ಶಾಲಾ ಕಟ್ಟಡಕ್ಕೆ ಬಣ್ಣ ಬಳಿದು ಶಾಲಾ ಕಟ್ಟಡದ ಅಂದವನ್ನು ಹೆಚ್ಚಿಸಲಾಗಿದೆ. ಮಕ್ಕಳು ಮೊದಲ ದಿನ ಆಸಕ್ತಿಯಿಂದ ಬರುವಂತೆ ಶಿರಾ, ಅನ್ನ ಹಾಗೂ ನುಗ್ಗೆ, ತೊಗರಿ ಬೇಳೆ ಸಾರು ಮಾಡಿ ಮಕ್ಕಳಿಗೆ ಉಣ ಬಡಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಬೀದರ್‌ ತಾಲ್ಲೂಕಿನ ಬಾವಗಿ ಗ್ರಾಮದ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಹಮ್ಮದ್‌ ಉಸ್ತಾದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT