ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈ.ಕ. ಅಭಿವೃದ್ಧಿಗೆ ಇಚ್ಛಾಶಕ್ತಿ ಅಗತ್ಯ: ಮಹಾಬಳೇಶ್ವರಪ್ಪ

ವಿಶ್ರಾಂತ ಪ್ರಾಧ್ಯಾಪಕ ಡಾ. ಬಿ.ಸಿ. ಮಹಾಬಳೇಶ್ವರಪ್ಪ ಅಭಿಮತ
Last Updated 6 ಫೆಬ್ರುವರಿ 2019, 14:41 IST
ಅಕ್ಷರ ಗಾತ್ರ

ಬೀದರ್: ‘ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ರಾಜಕೀಯ ಇಚ್ಛಾಶಕ್ತಿಯ ಅಗತ್ಯ ಇದೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಬಿ.ಸಿ. ಮಹಾಬಳೇಶ್ವರಪ್ಪ ಅಭಿಪ್ರಾಯಪಟ್ಟರು.

ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಗರದ ಜಿಲ್ಲಾ ರಂಗಮಂದಿರದಲ್ಲಿ ಬುಧವಾರ ನಡೆದ ‘ಆಧುನಿಕ ಸಮಾಜದ ಬಿಕ್ಕಟ್ಟುಗಳು’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಾಂಸ್ಕೃತಿಕ ಹಾಗೂ ಚಾರಿತ್ರಿಕವಾಗಿ ಈ ಭಾಗ ಕರ್ನಾಟಕದ ಯಾವ ಭಾಗಕ್ಕೂ ಕಡಿಮೆ ಇಲ್ಲ. ಕನ್ನಡದ ಮೊದಲ ಗದ್ಯಶಾಸ್ತ್ರ ಗಂಥ ಕವಿರಾಜ ಮಾರ್ಗ, ಗದ್ಯ ಕೃತಿ ವಡ್ಡಾರಾಧನೆ, ವಚನ ಸಾಹಿತ್ಯ ರಚನೆಯಾದದ್ದು, ಅನುಭವ ಮಂಟಪ, ಮೊಟ್ಟ ಮೊದಲ ನಾಗಾವಿ ವಿಶ್ವವಿದ್ಯಾಲಯ, ಮಹಮೂದ್ ಗವಾನ್ ವಿಶ್ವವಿದ್ಯಾಲಯ ಸ್ಥಾಪನೆಯಾದದ್ದು ಈ ನೆಲದಲ್ಲಿಯೇ. ಇಲ್ಲಿ ಎಲ್ಲವೂ ಇದೆ. ಅದರ ಸದ್ಬಳಕೆ ಆಗಬೇಕಿದೆ’ ಎಂದು ಹೇಳಿದರು.

‘ಕಾವೇರಿ ಎಂದರೇನೆ ಕರ್ನಾಟಕ ಎಂದು ಭಾವಿಸಿರುವ ಮೈಸೂರು ಭಾಗದ ಜನರಿಗೆ ತುಂಗಭದ್ರಾ, ಭೀಮಾ, ಬೆಣ್ಣೆ ತೊರಾ, ಕಾರಂಜಾ ಬಗೆಗೆ ಗೊತ್ತಿಲ್ಲ. ಕಾವೇರಿಗಾಗಿ ಹೋರಾಟ ನಡೆಸುವ ಅವರಿಗೆ ಈ ಭಾಗಕ್ಕೆ ಏನೇ ಆದರೂ ನೋವು ಆಗುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬೆಣ್ಣೆ ತೊರಾ, ಕಾರಂಜಾ ಯೋಜನೆಗಳು ನೀರಾವರಿ ಯೋಜನೆಗಳಾಗದೆ, ಕುಡಿಯುವ ನೀರಿನ ಯೋಜನೆಗಳಾಗಿರುವುದು ಬೇಸರದ ಸಂಗತಿಯಾಗಿದೆ’ ಎಂದು ತಿಳಿಸಿದರು.

‘ಬಡತನ, ಹಸಿವು, ನೀರಾವರಿ ಇಲ್ಲದ ಕಾರಣ ಉದ್ಯೋಗ ಅರಸಿ ಜನ ಗುಳೆ ಹೋಗುವುದು ಹೈದರಾಬಾದ್ ಕರ್ನಾಟಕ ಹಿಂದುಳಿಯಲು ಕಾರಣವಾಗಿದೆ. ಈ ಭಾಗದ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸಬೇಕಾಗಿದೆ. ನಂಜುಂಡಪ್ಪ ವರದಿಯ ಸಮರ್ಪಕ ಅನುಷ್ಠಾನ, ವಲಸೆಗೆ ಪರಿಹಾರ ಸೇರಿದಂತೆ ಈ ಭಾಗದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕಾಗಿದೆ’ ಎಂದು ತಿಳಿಸಿದರು.

‘ಸಣ್ಣ ಸಣ್ಣ ರಾಜ್ಯಗಳು ಅಭಿವೃದ್ಧಿಗೆ ಪೂರಕ ಎನ್ನುವ ಮಾತಿನಲ್ಲಿ ಸತ್ಯ ಇದೆ. ಆಂಧ್ರಪ್ರದೇಶದಲ್ಲಿ ಉಳಿದುಕೊಂಡಿದ್ದರೆ ತೆಲಂಗಾಣ ಅಭಿವೃದ್ಧಿ ಆಗುತ್ತಿರಲಿಲ್ಲ. ಪ್ರತ್ಯೇಕ ರಾಜ್ಯ ಆದ ಮೇಲೆ ಪ್ರಗತಿ ಕಂಡಿದೆ’ ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಶಿವಕುಮಾರ ಸ್ವಾಮಿ ಮಾತನಾಡಿ, ಮಾತೃಭಾಷೆಯ ಶಿಕ್ಷಣದಿಂದ ಮಾತ್ರ ಮಕ್ಕಳ ಸಮಗ್ರ ಬೆಳವಣಿಗೆ ಸಾಧ್ಯವಿದೆ’ ಎಂದು ತಿಳಿಸಿದರು.

ಮೂಢ ಆಚರಣೆಗಳ ಕುರಿತು ಚಿಂತಕ ವಿಶ್ವರಾಧ್ಯ ಸತ್ಯಂಪೇಟೆ ಮಾತನಾಡಿದರು. ಸಮ್ಮೇಳನ ಸರ್ವಾಧ್ಯಕ್ಷೆ ಅಕ್ಕ ಅನ್ನಪೂರ್ಣ,
ಬಸವರಾಜ ಧನ್ನೂರ, ಪ್ರಭುರಾವ್ ವಸ್ಮತೆ, ರಾಜಕುಮಾರ ಪಾಟೀಲ, ಶ್ರೀಕಾಂತ ಸ್ವಾಮಿ, ಸಂಗಪ್ಪ ಹಿಪ್ಪಳಗಾಂವ್, ಮಠಪತಿ ಉಪಸ್ಥಿತರಿದ್ದರು. ಸಿದ್ಧಲಿಂಗ ನಿರ್ಣಾ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT