ಗುರುವಾರ , ಸೆಪ್ಟೆಂಬರ್ 23, 2021
26 °C
ಅಂತರ್ಜಲ ಮಟ್ಟ ಹೆಚ್ಚಳ; ಮಣ್ಣು, ನೀರು ಸಂರಕ್ಷಣೆಗೆ ಅನುಕೂಲ, ನೀಗಿದ ಪ್ರಾಣಿಗಳ ದಾಹ

ಬರಡು ಭೂಮಿಗೆ ಕಳೆತಂದ ಇಂಗುಗುಂಡಿ

ಮನ್ಮಥಪ್ಪ ಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಔರಾದ್: ಇಂಗು ಗುಂಡಿ ನಿರ್ಮಾಣದಿಂದ ತಾಲ್ಲೂಕಿನ ಶೆಂಬೆಳ್ಳಿ ಹಾಗೂ ಲಿಂಗದಳ್ಳಿ ಅರಣ್ಯ ಪ್ರದೇಶಕ್ಕೆ ಜೀವ ಕಳೆ ಬಂದಿದೆ.
ಈ ಅರಣ್ಯ ಪ್ರದೇಶದಲ್ಲಿ ತೋಡಿದ ಒಂದು ಸಾವಿರ ಇಂಗು ಗುಂಡಿಯಿಂದಾಗಿ ಇಡೀ ಪ್ರದೇಶ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಅಷ್ಟೇ ಅಲ್ಲ ಸುತ್ತಲಿನ ಗ್ರಾಮಗಳಲ್ಲಿ ಅಂತರ್ಜಲಮಟ್ಟ ಹೆಚ್ಚಾಗಿ ಹಳೆಯ ಕೊಳವೆ ಬಾವಿ, ತೆರೆದ ಬಾವಿಗಳಿಗೂ ಜೀವ ಕಳೆ ಬಂದಿದೆ. ಕುಡಿಯಲು ನೀರಿಗಾಗಿ ಪರದಾಡುತ್ತಿದ್ದ ನವಿಲು, ಜಿಂಕೆಯಂತಹ ಪ್ರಾಣಿಗಳ ದಾಹ ತೀರಿದೆ.

ಇಷ್ಟೆಲ್ಲ ಆದದ್ದು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಆರ್ಥಿಕ ನೆರವು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಪ್ರಾಮಾಣಿಕ ಪ್ರಯತ್ನದಿಂದ. ತಾಲ್ಲೂಕಿನ ಶೆಂಬೆಳ್ಳಿ ಹಾಗೂ ಲಿಂಗದಳ್ಳಿ ಬಳಿ ಸುಮಾರು 80 ಎಕರೆ ಅರಣ್ಯ ಪ್ರದೇಶವಿದೆ. ಆದರೆ ಕಳೆದ ಕೆಲ ವರ್ಷಗಳಿಂದ ಮಳೆ ಪ್ರಮಾಣ ಕಡಿಮೆಯಾಗಿ ಗಿಡ ಮರಗಳು ಹಾಳಾಗುತ್ತಿವೆ. ಪಶು ಪಕ್ಷಿಗಳು ನೀರು, ಆಹಾರ ಅರಸಿ ಬೇರೆ ಬೇರೆ ಕಡೆ ವಲಸೆ ಹೋಗುತ್ತಿವೆ. ಇದನ್ನು ಮನಗಂಡ ಅರಣ್ಯ ಇಲಾಖೆ ಅಧಿಕಾರಿಗಳು ಇಂಗು ಗುಂಡಿ ನಿರ್ಮಾಣ ಮಾಡುವ ಯೋಜನೆ ರೂಪಿಸಿದರು.

ಮೇಲಧಿಕಾರಿಗಳ ಸಹಯೋಗದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಳಸಿಕೊಂಡು ಒಂದು ಸಾವಿರ ಇಂಗು ಗುಂಡಿ ನಿರ್ಮಿಸಿದ್ದು, ಅದು ಈಗ ಬಹು ಉಪಯೋಗಕಾರಿಯಾಗಿ ಮೆಚ್ಚುಗೆ ಪಡೆದಿದೆ.

‘ಲಾಕ್‍ಡೌನ್‍ನಲ್ಲಿ ಸಂತ್ರಸ್ತ ಕಾರ್ಮಿಕರಿಗೆ ಕೆಲಸ ಕೊಡಲು ಸರ್ಕಾರ ಆದೇಶ ಮಾಡಿತ್ತು. ಇದು ನಮಗೆ ವರವಾಗಿ ಪರಿಣಮಿಸಿತ್ತು. ಶೆಂಬೆಳ್ಳಿ ಹಾಗೂ ಸುತ್ತಲಿನ ಕಾರ್ಮಿಕರನ್ನು ಬಳಸಿಕೊಂಡು 4 ಮೀಟರ್ ಉದ್ದ, 1 ಮೀಟರ್ ಅಗಲ ಹಾಗೂ 50 ಸೆ.ಮೀ. ಆಳದ ಒಟ್ಟು 1 ಸಾವಿರ ಇಂಗು ಗುಂಡಿ ತೋಡಿಸಿದೆವು. ಒಂದೊಂದು ಇಂಗುಗುಂಡಿಯಲ್ಲಿ 2 ಸಾವಿರ ಲೀಟರ್‌ನಂತೆ ಒಟ್ಟು 20 ಲಕ್ಷ ಲೀಟರ್ ನೀರು ಸಂಗ್ರಹವಾಗಿ ಇಡೀ ಅರಣ್ಯ ಪ್ರದೇಶಕ್ಕೆ ಹೊಸ ಕಳೆ ಬಂದಿದೆ. 100 ಜನ ಕಾರ್ಮಿಕರು ಎರಡು ತಿಂಗಳು ಕೆಲಸ ಮಾಡಿದ್ದಾರೆ. ಈ ಕೆಲಸ ಪೂರ್ಣವಾಗಿ ಕಾರ್ಮಿಕರಿಂದಲೇ ಆಗಿರುವುದರಿಂದ ಅವರ ಖಾತೆಗೆ ₹ 7 ಲಕ್ಷ ಕೂಲಿ ಹಣ ಪಾವತಿಯಾಗಿದೆ’ ಎಂದು ಸಾಮಾಜಿಕ ಅರಣ್ಯ ವಲಯದ ಉಪ ವಲಯ ಅರಣ್ಯಾಧಿಕಾರಿ ರಾಜಶೇಖರ್ ರಾಮಪುರೆ ತಿಳಿಸಿದ್ದಾರೆ.

‘ಅರಣ್ಯ ಪ್ರದೇಶದಲ್ಲಿ ಇಂಗು ಗುಂಡಿ ನಿರ್ಮಾಣ ಮಾಡಿದ್ದರಿಂದ ಹೆಚ್ಚಿನ ಉಪಯೋಗವಾಗಿದೆ. ಮೇಲಧಿಕಾರಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲೆಲ್ಲಿ ಅರಣ್ಯ ಪ್ರದೇಶವಿದೆಯೋ, ಅಲ್ಲಲ್ಲಿ ಈ ರೀತಿ ಇಂಗು ಗುಂಡಿ ತೋಡಿ ಅರಣ್ಯ ಪ್ರದೇಶ ಅಭಿವೃದ್ಧಿಪಡಿಸುವುದು ನಮ್ಮ ಮುಂದಿನ ಗುರಿ’ ಎಂದು ವಲಯ ಅರಣ್ಯಾಧಿಕಾರಿ ವೀರೇಶ ಕಲ್ಯಾಣಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು