ಶನಿವಾರ, ಆಗಸ್ಟ್ 13, 2022
24 °C
ಆತಂಕದಲ್ಲಿ ಮಾಲೀಕರು, ಕಾರ್ಮಿಕರು

ಬಾರ್‌ ಆ್ಯಂಡ್ ರೆಸ್ಟೋರಂಟ್ ಖಾಲಿ ಖಾಲಿ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

 ಬೀದರ್‌: ಜಿಲ್ಲೆಯಲ್ಲಿ ಲಾಕ್‌ಡೌನ್‌ ತೆರವುಗೊಳಿಸಿದ ಬಳಿಕ ರಾಜ್ಯ ಮದ್ಯ ಮಾರಾಟಕ್ಕೆ ಅನುಮತಿ ನೀಡಿತ್ತು. ಮಂಗಳವಾರದಿಂದ ಬಾರ್‌ ಆ್ಯಂಡ್‌ ರೆಸ್ಟೋರಂಟ್‌ನಲ್ಲಿ ಮದ್ಯ ಸೇವನೆಗೂ ಅವಕಾಶ ಕಲ್ಪಿಸಿದೆ. ಆದರೆ, ಲಾಕ್‌ಡೌನ್‌ ಸಂದರ್ಭದಲ್ಲಿ ಅರ್ಥ ವ್ಯವಸ್ಥೆಯ ಮೇಲೆ ಬೀರಿದ ಪರಿಣಾಮವಾಗಿ ಗ್ರಾಹಕರು ಬಾರ್‌ಗಳಿಗೆ ಬರಲು ಹಿಂಜರಿಯುತ್ತಿದ್ದಾರೆ.

ಜಿಲ್ಲೆಯಲ್ಲಿ 160 ಬಾರ್‌ ಆ್ಯಂಡ್‌ ರೆಸ್ಟೋರಂಟ್‌ಗಳಿವೆ. ಆರು ಸಾವಿರದಿಂದ ಎಂಟು ಸಾವಿರ ಜನ ಕಾರ್ಮಿಕರು ಬಾರ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್‌ ನಂತರ ಅನೇಕ ನೌಕರರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ರಾಜ್ಯ ಸರ್ಕಾರ ಬಾರ್‌ ಆ್ಯಂಡ್‌ ರೆಸ್ಟೋರಂಟ್‌ ಆರಂಭಿಸಲು ಅನುಮತಿ ನೀಡಿರುವ ಸುದ್ದಿ ಕೇಳಿ ಸಂತಸ ಪಟ್ಟಿದ್ದರು. ಆದರೆ, ಬಾರ್‌ಗಳಿಗೆ ಗ್ರಾಹಕರೇ ಬಾರದ ಕಾರಣ ಕಾರ್ಮಿಕರನ್ನು ನಿಯೋಜಿಸಿಕೊಳ್ಳಲು ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ.

ಕೆಲ ಕಚೇರಿಗಳಲ್ಲಿ ಸಿಬ್ಬಂದಿ ಕಡಿತ ಮಾಡಲಾಗಿದೆ. ವ್ಯಾಪಾರ ವಹಿವಾಟು ಮೊದಲಿನಂತೆ ನಡೆಯುತ್ತಿಲ್ಲ. ಜನ ಅಗತ್ಯವಿರುವಷ್ಟು ಸಾಮಗ್ರಿಗಳ ಖರೀದಿಗೆ ಮಾತ್ರ ಹಣ ಖರ್ಚು ಮಾಡುತ್ತಿದ್ದಾರೆ. ಆದಾಯಕ್ಕೂ ಕತ್ತರಿ ಬಿದ್ದಿರುವ ಕಾರಣ ಹವ್ಯಾಸಕ್ಕೆ ಕುಡಿಯಲು ಬರುತ್ತಿದ್ದವರು ಮದ್ಯ ಸೇವನೆ ನಿಲ್ಲಿಸಿದ್ದಾರೆ.

2020-2021ನೇ ಸಾಲಿಗೆ ಒಟ್ಟು 164 ಅಬಕಾರಿ ಸನ್ನದುಗಳನ್ನು ನವೀಕರಿಸಲಾಗಿದೆ. ಜಿಲ್ಲಾಧಿಕಾರಿ ರಾಮಚಂದ್ರನ್‌ ಅಧಿಕಾರ ವಹಿಸಿಕೊಂಡ ತಿಂಗಳಲ್ಲೇ ಅಬಕಾರಿ ಉಪ ಆಯುಕ್ತ ಮಂಜುನಾಥ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲೇ ತಾಲ್ಲೂಕಿಗೆ ತಲಾ ಒಬ್ಬರಂತೆ ಐವರಿಗೆ ಸಾಂಕೇತಿಕವಾಗಿ ಲೈಸನ್ಸ್‌ಗಳನ್ನು ವಿತರಿಸಿದ್ದರು. ಲಾಕ್‌ಡೌನ್‌ ತೆರವುಗೊಳಿಸಿದ ನಂತರ ಮಾರುಕಟ್ಟೆ ಸಹಜ ಸ್ಥಿತಿಗೆ ಬರಲಿದೆ ಎನ್ನುವ ಮಾಲೀಕರ ಲೆಕ್ಕಾಚಾರ ಬುಡಮೇಲಾಗಿದೆ.

‘ಲಾಕ್‌ಡೌನ್‌ ನಿಂದಾಗಿ ಅರ್ಥ ವ್ಯವಸ್ಥೆಯಲ್ಲಿ ಭಾರಿ ಕುಸಿತ ಉಂಟಾಗಿದೆ. ಮಾರುಕಟ್ಟೆ ಚೇತರಿಕೆ ಕಂಡು ಬಂದಿಲ್ಲ. ಅನೇಕ ಉದ್ಯಮಿಗಳು ಹಾಗೂ ವ್ಯಾಪಾರಿಗಳು ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ. ಅತಿವೃಷ್ಟಿಯಿಂದ ಹೆಸರು ಬೆಳೆಯೂ ನಷ್ಟವಾಗಿದೆ. ಕೆಲಸವಿಲ್ಲದ ಕಾರಣ ಕೈತುಂಬ ಹಣವೂ ಇಲ್ಲ. ಹೀಗಾಗಿ ಬಾರ್‌ಗಳಿಗೆ ಗ್ರಾಹಕರು ಬರುತ್ತಿಲ್ಲ’ ಎಂದು ಬೀದರ್‌ ಜಿಲ್ಲಾ ಬಾರ್‌ ಆ್ಯಂಡ್‌ ರೆಸ್ಟೋರಂಟ್‌ ಮಾಲೀಕರ ಸಂಘದ ನಾರಾಯಣರಾವ್‌ ಹೇಳುತ್ತಾರೆ.

‘ಬಾರ್‌ ಆ್ಯಂಡ್‌ ರೆಸ್ಟೋರಂಟ್‌ ಮಾಲೀಕರು ಪ್ರತಿ ತಿಂಗಳು ₹ 60 ಸಾವಿರ ಲೈಸನ್ಸ್‌ ಶುಲ್ಕ ಪಾವತಿಸಬೇಕು. ಬಾಡಿಗೆ ಕಟ್ಟಡದಲ್ಲಿ ಬಾರ್‌ ನಡೆಸುತ್ತಿರುವವರ ಸ್ಥಿತಿ ಇನ್ನೂ ಗಂಭೀರವಾಗಿದೆ. ಲಾಕ್‌ಡೌನ್‌ ನಂತರ ಆರಂಭವಾದ ಬಾರ್‌ಗಳಿಗೆ ಗ್ರಾಹಕರೇ ಬರುತ್ತಿಲ್ಲ. ಇದು ಮಾಲೀಕರನ್ನು ಚಿಂತೆಗೀಡು ಮಾಡಿದೆ’ ಎನ್ನುತ್ತಾರೆ.

‘ನಾನು ಒಂದು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಲಾಕ್‌ಡೌನ್‌ನಲ್ಲಿ ಎರಡು ತಿಂಗಳು ಹೋಟೆಲ್‌ ಬಂದಾಯಿತು. ಕೆಲಸ ಇದ್ದಾಗ ಸ್ವಲ್ಪ ಮದ್ಯ ಸೇವಿಸುತ್ತಿದ್ದೆ. ಈಗ ಮನೆ ನಡೆಸುವುದೇ ಕಷ್ಟವಾಗಿದೆ. ಮದ್ಯ ಸೇವನೆಗೆ ಎಲ್ಲಿಂದ ಹಣ ತರಬೇಕು. ಹೀಗಾಗಿ ಕುಡಿಯುವುದನ್ನೇ ನಿಲ್ಲಿಸಿದ್ದೇನೆ’ ಎಂದು ಸಾಯಿನಾಥ ಹೇಳುತ್ತಾರೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.