ಮಂಗಳವಾರ, ಏಪ್ರಿಲ್ 20, 2021
31 °C
ಪ್ರೇಕ್ಷಕರ ಮನಸೂರೆಗೊಂಡ ಅದ್ಭುತ ಚಿತ್ರ ಪ್ರದರ್ಶನ

ವಿದ್ಯಾವತಿ ಕಡ್ಲೂರ್ ಚಿತ್ರಕಲೆ ಮೋಡಿ

ಮನ್ಮಥಪ್ಪ ಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಔರಾದ್: ಇಲ್ಲಿಯ ಕಲಾವಿದೆಯೊಬ್ಬರು ವೈವಿಧ್ಯಮಯ ಚಿತ್ರ ಬಿಡಿಸುವ ಮೂಲಕ ಕಲಾಪ್ರೇಮಿಗಳನ್ನು ಮೋಡಿ ಮಾಡಿದ್ದಾರೆ. ತಾಲ್ಲೂಕಿನ ಸುಂದಾಳ ಗ್ರಾಮದ ನಾಲಂದಾ ಅನುದಾನಿತ ಪ್ರೌಢ ಶಾಲೆಯಲ್ಲಿ ಕ್ಲರ್ಕ್ ಆಗಿರುವ ವಿದ್ಯಾವತಿ ಕಡ್ಲೂರ್ ಅವರು ಬಿಡಿಸಿದ ನೂರಾರು ಚಿತ್ರಗಳು ಜನಮನಸೂರೆಗೊಂಡಿವೆ.

ಈಚೆಗೆ ಇಲ್ಲಿ ನಡೆದ ತಾಲ್ಲೂಕು ಮಟ್ಟದ 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಿದ್ದ ಚಿತ್ರ ಪ್ರದರ್ಶನ ಕನ್ನಡಾಭಿಮಾನಿಗಳಲ್ಲೂ ಸಂತಸ ಮನೆ ಮಾಡಿತ್ತು. ಸ್ಥಳೀಯ ಅಮರೇಶ್ವರ ದೇವರು ಹಾಗೂ ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರು, ಬಸವಣ್ಣ, ಅಕ್ಕಮಹಾದೇವಿ ಸೇರಿದಂತೆ ಶರಣರು, ಸಂತರು ಸೇರಿದಂತೆ 200 ಚಿತ್ರಗಳು ಪ್ರದರ್ಶನದಲ್ಲಿ ಅನಾವರಣಗೊಂಡು ಸಮ್ಮೇಳನದ ಕಳೆ ಹೆಚ್ಚಿಸಿತ್ತು.

ಮೂಲತಃ ಕಲಬುರ್ಗಿ ಜಿಲ್ಲೆಯವರಾದ ವಿದ್ಯಾವತಿ ಕಡ್ಲೂರ್ ತಾಲ್ಲೂಕಿನ ಸುಂದಾಳ ಖಾಸಗಿ ಪ್ರೌಢ ಶಾಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಂ.ಎ. ಫೈನ್ ಆರ್ಟ್ ಪದವಿ ಪಡೆದ ಇವರು ಕೆಲ ಕಾಲ ಕಲಬುರ್ಗಿಯಲ್ಲಿ ವೃತ್ತಿ ಶಿಕ್ಷಣ (ಜೆಒಸಿ) ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಸರ್ಕಾರ ಈ ಕೋರ್ಸ್ ರದ್ದು ಪಡಿಸಿದ ನಂತರ ಇಲ್ಲಿಗೆ ಬಂದು ಕ್ಲರ್ಕ್ ಹುದ್ದೆಗೆ ಸೇರಿಕೊಂಡಿದ್ದಾರೆ.

ಪ್ರತಿಭೆ ಮನುಷ್ಯನಿಗೆ ಸುಮ್ಮನೆ ಕೂಡಲು ಬಿಡುವುದಿಲ್ಲ. ಹೀಗಾಗಿ ಅವರು ತಮ್ಮ ವೃತ್ತಿ ಜತೆಗೆ ವಿದ್ಯಾರ್ಥಿಗಳಿಗೆ ಚಿತ್ರಕಲೆ ಹೇಳಿಕೊಡುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನವರು ಅವರ ಪ್ರತಿಭೆ ಗುರುತಿಸಿ ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟು ಜಿಲ್ಲೆಯ ಜನರಿಗೆ ಅವರ ಕಲಾ ಪ್ರತಿಭೆ ಪರಿಚಯಿಸಿದ್ದಾರೆ.

‘ನನಗೆ ಬಾಲ್ಯದಿಂದಲೂ ಚಿತ್ರ ಬಿಡಿಸುವ ಹವ್ಯಾಸವಿದೆ. ಹೀಗಾಗಿ ಡ್ರಾಯಿಂಗ್ ಕೋರ್ಸ್ ಆಯ್ಕೆ ಮಾಡಿ ಕೊಂಡೆ. ವಿದ್ಯಾರ್ಥಿನಿ ಯಾಗಿದ್ದಾಗ ಮುಂಬೈನಲ್ಲಿ ನಡೆದ ರಾಷ್ಟ್ರಮಟ್ಟದ ರಂಗೋಲಿ ಸ್ಪರ್ಧೆಯಲ್ಲಿ ಬಹುಮಾನ ಗಿಟ್ಟಿಸಿಕೊಂಡಿದ್ದೆ. ಈಗಲೂ ನನಗೆ ಚಿತ್ರಕಲೆಯಲ್ಲಿ ಉತ್ಸಾಹ ಕಮ್ಮಿಯಾಗಿಲ್ಲ’ ಎನ್ನುತ್ತಾರೆ ವಿದ್ಯಾವತಿ ಕಡ್ಲೂರ್.

‘ಸದ್ಯ ನನ್ನ ಬಳಿ 800 ಚಿತ್ರಗಳು ಇವೆ. ನೈಜ ಚಿತ್ರ, ಕ್ರಿಯಾತ್ಮಕ ಚಿತ್ರ, ರೇಖಾ ಚಿತ್ರ, ಅಮೂರ್ತ ಸ್ವರೂಪದ ವೈವಿಧ್ಯ ಚಿತ್ರಗಳಿವೆ. ಹಂಪಿ, ಐಹೊಳೆ, ಪಟ್ಟದಕಲ್ಲು, ಬೇಲೂರು, ಹಳೆಬೀಡು ಸೇರಿದಂತೆ ಕರ್ನಾಟಕ ಹಾಗೂ ಹೊರ ರಾಜ್ಯದ ಐತಿಹಾಸಿಕ ಸ್ಥಳಗಳ ಚಿತ್ರಗಳನ್ನು ಬಿಡಿಸಿದ್ದೇನೆ. ಕಲಬುರ್ಗಿಯಲ್ಲೂ ಚಿತ್ರಪ್ರದರ್ಶನ ಆಗಿದೆ. ಈಗಲೂ ಜನ ನನ್ನ ಕಲೆ ಇಷ್ಟಪಡುತ್ತಾರೆ. ಹೀಗಾಗಿ ನನ್ನ ಕಲೆ ಮೇಲೆ ನನಗೆ ಅಭಿಮಾನ ಹಾಗೂ ಸಂತೃಪ್ತಿ ಇದೆ’ ಎನ್ನುತ್ತಾರೆ ಅವರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.