ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾ ಮಾನವತಾವಾದಿ ಶಿವಕುಮಾರ ಶ್ರೀ

ಪಿಎಸ್ಐ ಸಂತೋಷ ಎಲ್‌.ಟಿ. ಬಣ್ಣನೆ
Last Updated 1 ಏಪ್ರಿಲ್ 2021, 14:28 IST
ಅಕ್ಷರ ಗಾತ್ರ

ಬೀದರ್‌: ‘ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ 89 ವರ್ಷ ಜನತೆಯ ಕಲ್ಯಾಣಕ್ಕಾಗಿ ಅರ್ಪಿಸಿಕೊಂಡ ಮಹಾ ಮಾನವತಾವಾದಿ. ಜನ ಸೇವೆಯಿಂದಾಗಿಯೇ ನಾಡಿನ ಜನತೆಯ ಹೃದಯದಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ’ ಎಂದು ನ್ಯೂಟೌನ್‌ ಠಾಣೆಯ ಪಿಎಸ್ಐ ಸಂತೋಷ ಎಲ್‌.ಟಿ. ಬಣ್ಣಿಸಿದರು.

ತುಮಕೂರು ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ವತಿಯಿಂದ ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಶಿವಕುಮಾರ ಸ್ವಾಮೀಜಿ ಅವರ 114ನೇ ಜನ್ಮದಿನಾಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಿದ್ಧಗಂಗಾ ಮಠ ನಾಡಿನ ಎಲ್ಲ ಮಠಗಳಿಗೆ ಮಾದರಿಯಾಗಿದೆ. ಶ್ರೀಗಳು ಎಲ್ಲ ಸಮುದಾಯಗಳ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಅನ್ನ ದಾಸೋಹದ ಜತೆಗೆ ಅಕ್ಷರ ದಾಸೋಹ ಮಾಡಿದ್ದಾರೆ. ಅವರ ಮಾನವೀಯ ಸೇವೆಯನ್ನು ಮರೆಯಲಾಗದು’ ಎಂದು ಹೇಳಿದರು.

‘ಪರಮ ಪೂಜ್ಯರು ಮಾಡಿರುವ ತ್ರಿವಿಧ ಸೇವೆ ರಾಷ್ಟ್ರಕ್ಕೆ ಮಾದರಿಯಾಗಿದೆ. ಪ್ರತಿಫಲ ಬಯಸದೇ ಸೇವೆ ಮಾಡಿ ಭಕ್ತರ ಮನ ಗೆದ್ದಿದ್ದಾರೆ’ ಎಂದು ಸಾನ್ನಿಧ್ಯ ವಹಿಸಿದ್ದ ಹಲಬರ್ಗಾ ರಾಚೋಟೇಶ್ವರ ವಿರಕ್ತ ಮಠದ ಶೀ ಹಾವಗಿಲಿಂಗೇಶ್ವರ ಶಿವಾರ್ಚಾಯ ಸ್ವಾಮೀಜಿ ತಿಳಿಸಿದರು.

ಭಾರತೀಯ ಕುಟುಂಬ ಯೋಜನಾ ಸಂಸ್ಥೆಯ ವ್ಯವಸ್ಥಾಪಕ ಶ್ರೀನಿವಾಸ ಬಿರಾದರ ಮಾತನಾಡಿ, ‘ತುಮಕೂರು ಸಿದ್ಧಗಂಗಾ ಮಠದಲ್ಲಿ 10 ಸಾವಿರಕ್ಕೂ ಹೆಚ್ಚು ಬಡ ಮಕ್ಕಳು ವಿದ್ಯಾಭ್ಯಾಸ ಮಾಡಿ ಇಂದು ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದರು.

‘ಹಿಂದೆ ಸರ್ಕಾರದ ಯಾವುದೇ ನೆರವು ಪಡೆಯದೇ ಮಠವನ್ನು ಅತ್ಯುನ್ನತ ಸ್ಥಾನಕ್ಕೆ ತಲುಪಿಸಿದ ಕೀರ್ತಿ ಶಿವಕುಮಾರ ಸ್ವಾಮೀಜಿ ಅವರಿಗೆ ಸಲ್ಲುತ್ತದೆ. ಅವರು ತೋರಿಸಿರುವ ಮಾರ್ಗದಲ್ಲಿ ನಾವೆಲ್ಲ ಮುಂದೆ ಸಾಗಬೇಕಾಗಿದೆ’ ಎಂದು ಹೇಳಿದರು.

ಗಾಯಕ ನಾಗರಾಜ ಜೋಗಿ ಮಾತನಾಡಿ, ‘ಪರಮ ಪೂಜ್ಯರ ಸಮಾಜ ಸೇವೆ ಮಠಗಳಿಗೆ ಮಾದರಿಯಾಗಬೇಕು. ಕಲ್ಯಾಣ ಕರ್ನಾಟಕ ಮಠಗಳು ಇಂತಹ ಸೇವೆಯಲ್ಲಿ ತೊಡಗಿಸಿಕೊಳ್ಳುವ ಅಗತ್ಯ ಇದೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ‘ಶಿವಕುಮಾರ ಸ್ವಾಮೀಜಿ ಅವರ ದಾಸೋಹ ಸೇವೆ ಅನುಕರಣೀಯವಾಗಿದೆ’ ಎಂದು ಹೇಳಿದರು.

ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಿವಕುಮಾರ ಪಾಟೀಲ ತೇಗಂಪೂರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಚಂದ್ರಕಾಂತ ಎಂ. ಮಾತನಾಡಿದರು.

ಅಕ್ಕಮಹಾದೇವಿ ಕಲ್ಯಾಣ ಮಂಟಪದ ಅಪ್ಪರಾವ್ ನವಾಡೆ, ಸಂಘದ ಉಪಾಧ್ಯಕ್ಷ ರಮೇಶ ಪಾಟೀಲ ಪಾಶಾಪುರ, ಫ್ಯೂಚರ್ ಕಿಡ್ಸ್ ಶಾಲೆಯ ಅಧ್ಯಕ್ಷ ಸಂದೀಪ ಶೆಟಕಾರ, ಸಿದ್ದಾರಡ್ಡಿ ನಾಗೂರ ಇದ್ದರು.

ಅಕ್ಕಮಹಾದೇವಿ ಭಜನೆ ತಂಡದವರು ಪ್ರಾರ್ಥನೆ ನಡೆಸಿಕೊಟ್ಟರು, ನಾಗಭೂಷಣ ಹುಗ್ಗೆ ಸ್ವಾಗತಿಸಿದರು. ದೇವೇಂದ್ರ ಕರಂಜೆ ನಿರೂಪಿಸಿದರು. ನಾಗಶೆಟ್ಟಿ ಧರ್ಮಪುರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT