ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದಲ್ಲಿ ಕುಸಿದ ಹಿಂದೂಗಳ ಸಂಖ್ಯೆ- ಸುಶೀಲ ಪಂಡಿತ ಕಳವಳ

ಕಾಶ್ಮೀರಿ ಹಿಂದೂ ಹಕ್ಕುಗಳ ಹೋರಾಟಗಾರ ಸುಶೀಲ ಪಂಡಿತ ಕಳವಳ
Last Updated 13 ನವೆಂಬರ್ 2022, 15:36 IST
ಅಕ್ಷರ ಗಾತ್ರ

ಬೀದರ್‌: ‘1951ರ ಪಾಕಿಸ್ತಾನದ ಜನಗಣತಿಯ ಪ್ರಕಾರ ಅಲ್ಲಿ ಶೇಕಡ 21ರಷ್ಟು ಹಿಂದೂಗಳಿದ್ದರು. 2011ರ ಜನಗಣತಿಯ ಪ್ರಕಾರ ಹಿಂದೂಗಳ ಸಂಖ್ಯೆ ಶೇಕಡ 1.5ಕ್ಕೆ ಕುಸಿದಿದೆ’ ಎಂದು ಕಾಶ್ಮೀರಿ ಹಿಂದೂ ಹಕ್ಕುಗಳ ಹೋರಾಟಗಾರ ಸುಶೀಲ ಪಂಡಿತ ಕಳವಳ ವ್ಯಕ್ತಪಡಿಸಿದರು.

ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಭಾರತೀಯ ಇತಿಹಾಸ ಸಂಕಲನ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಭಾರತೀಯ ಇತಿಹಾಸ, ಸಂಸ್ಕೃತಿ ಮತ್ತು ರಾಷ್ಟ್ರೀಯತೆ ಕುರಿತ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಪಾಕಿಸ್ತಾನದಲ್ಲಿ ಪ್ರತಿವರ್ಷ ಒಂದು ಸಾವಿರ ಹಿಂದೂ ಬಾಲಕಿಯರನ್ನು ಅಪಹರಿಸಿ ಒತ್ತಾಯದಿಂದ ‘ಕಲ್ಮಾ’ ಓದಿಸಿ ವಯಸ್ಕರು ಹಾಗೂ ದುಷ್ಕರ್ಮಿಗಳೊಂದಿಗೆ ಮದುವೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘ಬಾಂಗ್ಲದೇಶದಲ್ಲಿ ಪ್ರತಿದಿನ 600 ಹಿಂದೂಗಳು ಕಾಣೆಯಾಗುತ್ತಿದ್ದಾರೆ. 2050ರ ವೇಳೆಗೆ ಬಾಂಗ್ಲದೇಶದಲ್ಲಿ ಒಬ್ಬರೂ ಹಿಂದೂಗಳು ಉಳಿಯುವುದಿಲ್ಲ ಎಂದು ಅಂಕಿಅಂಶಗಳ ತಜ್ಞರು ದೃಢಪಡಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಕೇವಲ 43 ಹಿಂದೂಗಳು ಮಾತ್ರ ಉಳಿದಿದ್ದಾರೆ. ಇದು ಹಿಂದೂಗಳ ನರಮೇಧಕ್ಕೆ ಸಾಕ್ಷಿ. ಆದರೆ, ನಮ್ಮ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ಈ ದೇಶಗಳಿಗೆ ಉಚಿತ ಆಹಾರ ಧಾನ್ಯ ನೀಡುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತಿಹಾಸ ತಜ್ಞ ಡಾ.ಬಿ.ಸಿ.ಮಹಾಬಲೇಶ್ವರಪ್ಪ ಮಾತನಾಡಿದರು. ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನೆಯ ರಾಷ್ಟ್ರೀಯ ಸಂಘಟನಾ ಮಂತ್ರಿ ಡಾ.ಬಾಲಮುಕುಂದ ಪಾಂಡೆ ಸಮಾರೋಪ ಭಾಷಣ ಮಾಡಿದರು.

ನವದೆಹಲಿಯ ಐ.ಸಿ.ಎಚ್.ಆರ್. ಸದಸ್ಯ ಪ್ರೊ.ಎಂ.ಕೊಟ್ರೇಶ್, ಪ್ರೊ. ವಿಜಯಲಕ್ಷ್ಮಿ ಬಿರಾದಾರ, ಪ್ರೊ.ಭಾಗ್ಯವತಿ ಮಾತನಾಡಿದರು. ವಿಚಾರ ಸಂಕಿರಣದ ಮಹಾಪೋಷಕರಾದ ಡಾ.ಬಸವರಾಜ ಪಾಟೀಲ ಅಷ್ಟೂರ್ ಅಧ್ಯಕ್ಷತೆ ವಹಿಸಿದ್ದರು.

ಸಂಜೀವಕುಮಾರ ತಾಂದಳೆ, ಕೃಷ್ಣಮೂರ್ತಿ ಆರ್, ಭಗವಾನ ಬಿರಾದಾರ, ಹಾಲಪ್ಪಗೋಳ್ ಪೃಥ್ವಿರಾಜ, ವಿದ್ಯಾ ಪಾಟೀಲ, ಶಿವಕುಮಾರ ಬಿರಾದಾರ, ಸುರೇಂದ್ರ ಸಿಂಗ್, ಅಮರದೀಪ, ಪ್ರೊ.ಸುನೀಲ ಮೂಲಗೆ, ಬಾಪುರಾವ್ ಸಿರಗೆರೆ ಇದ್ದರು.

ಶಿವಕುಮಾರ ಉಪ್ಪೆ ಪ್ರಾಸ್ತಾವಿಕ ಮಾತನಾಡಿದರು. ಶೀಲಾ ಬಿರಾದಾರ, ನಿತೇಶಕುಮಾರ ಬಿರಾದಾರ ನಿರೂಪಿಸಿದರು. ಪ್ರೊ.ಬಸವರಾಜ ಬಿರಾದರ ಸ್ವಾಗತಿಸಿದರು. ವೀರಶೆಟ್ಟಿ ಮೈಲೂರಕರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT