ಶನಿವಾರ, ಅಕ್ಟೋಬರ್ 23, 2021
21 °C
ಪಂಚಾಯತ್‍ರಾಜ್ ಸಂಘಟನೆ ಸಮಾವೇಶ

ಬೀದರ್: ರಾಜ್ಯದಲ್ಲಿ ಪಂಚಾಯತ್‍ರಾಜ್ ಬಲ ಕುಗ್ಗಿಸುವ ಯತ್ನ -ನಾರಾಯಣ ಸ್ವಾಮಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ರಾಜ್ಯ ಬಿಜೆಪಿ ಸರ್ಕಾರವು ಪಂಚಾಯತ್‍ರಾಜ್ ವ್ಯವಸ್ಥೆ ಬಲ ಕುಗ್ಗಿಸಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್‍ನ ರಾಜೀವ್ ಗಾಂಧಿ ಪಂಚಾಯತ್‍ರಾಜ್ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಸಿ. ನಾರಾಯಣ ಸ್ವಾಮಿ ಆರೋಪಿಸಿದರು.

ನಗರದ ಶಿವಾ ಇಂಟರ್‌ನ್ಯಾಷನಲ್‍ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್‍ನ ರಾಜೀವ್ ಗಾಂಧಿ ಪಂಚಾಯತ್‍ರಾಜ್ ಸಂಘಟನೆಯ ಜಿಲ್ಲಾ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲಾತಿ ನೆಪದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಮಂದೂಡಲು ಹೊರಟಿದೆ ಎಂದು ಟೀಕಿಸಿದರು.

ಹಿಂದೆ ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ಮುಂದೂಡಲು ಮುಂದಾಗಿತ್ತು. ಆದರೆ, ಕಾಂಗ್ರೆಸ್ ನ್ಯಾಯಾಲಯದ ಮೊರೆ ಹೋದ ಕಾರಣ ಚುನಾವಣೆ ನಡೆಸಬೇಕಾಯಿತು ಎಂದು ಹೇಳಿದರು.

ಎರಡು-ಮೂರು ವರ್ಷಗಳಿಂದ ಗ್ರಾಮ ಪಂಚಾಯಿತಿಗಳಿಗೆ ಮನೆ ಹಂಚಿಕೆ ಮಾಡಿಲ್ಲ. ಕೆಲ ಹಣಕಾಸು ನೆರವು ಕೂಡ ನೀಡದೆ ಮಲತಾಯಿ ಧೋರಣೆ ತೋರುತ್ತಿದೆ. ಸದಸ್ಯರ ಹಕ್ಕುಗಳನ್ನು ಕಸಿಯಲು ಪ್ರಯತ್ನಿಸುತ್ತಿದೆ ಎಂದು ಆಪಾದಿಸಿದರು.

ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರು ಪಂಚಾಯತ್‍ರಾಜ್ ವ್ಯವಸ್ಥೆಯನ್ನು ಜಾರಿಗೊಳಿಸಿದ್ದರು. ಪಂಚಾಯತ್‍ರಾಜ್ ಬಲವರ್ಧನೆಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಭೆ, ಸಮಾವೇಶಗಳನ್ನು ನಡೆಸಲಾಗುತ್ತಿದೆ. ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಶಾಸಕ ರಹೀಂಖಾನ್, ಸಂಘಟನೆಯ ರಾಷ್ಟ್ರೀಯ ಸಲಹೆಗಾರರಾದ ಡಿ.ಆರ್. ಪಾಟೀಲ, ವಿ.ವೈ. ಘೋರ್ಪಡೆ, ರಾಜ್ಯ ಸಂಚಾಲಕ ವಿಜಯಸಿಂಗ್, ಸಹ ಸಂಚಾಲಕ ಶೌಕತ್ ಅಲಿ ಆಲೂರ, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಮುಖಂಡರಾದ ಅಮೃತರಾವ್ ಚಿಮಕೋಡೆ, ರೋಹಿದಾಸ್ ಘೋಡೆ, ಶಂಕರ ದೊಡ್ಡಿ, ಫರಿದ್‍ಖಾನ್, ನಿಸಾರ್ ಅಹಮ್ಮದ್, ಬಾಬುರಾವ್ ತುಂಬಾ, ಅಜ್ಮತ್ ಪಟೇಲ್, ಸಂಜುಕುಮಾರ ಡಿ.ಕೆ, ರಾಜಶೇಖರ ಪಾಟೀಲ ಅಷ್ಟೂರ ಇದ್ದರು.

ಕಾರ್ಯಕ್ರಮಕ್ಕೆ ಮುನ್ನ ಎರಡು ನಿಮಿಷಗಳ ಮೌನ ಆಚರಿಸಿ ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.