ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಮನಾಬಾದ್ | ಶುದ್ಧ ನೀರಿಗಾಗಿ ಪರದಾಟ

ಬಾವಿ ನೀರು ಕಲುಷಿತ
ಗುಂಡು ಅತಿವಾಳ
Published 6 ಜುಲೈ 2024, 6:01 IST
Last Updated 6 ಜುಲೈ 2024, 6:01 IST
ಅಕ್ಷರ ಗಾತ್ರ

ಹುಮನಾಬಾದ್: ತಾಲ್ಲೂಕಿನ ಕಲ್ಲೂರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರ್ ತಾಂಡಾ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ.

ಗ್ರಾಮದಲ್ಲಿ 450ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, 120 ಮನೆಗಳಿವೆ. ಗ್ರಾಮದ ಹೊರವಲಯದ ಬಾವಿಯೊಂದೇ ಜನರ ದಾಹ ತಣಿಸುತ್ತಿತ್ತು . ಸದ್ಯ ಈ ನೀರು ಕುಡಿಯುವುದಕ್ಕೆ ಯೋಗ್ಯವಿಲ್ಲ ಎಂದು ಹೇಳುತ್ತಿದ್ದಾರೆ . ಈ ಬಾವಿ ಬಿಟ್ಟರೆ ಬೇರೆ ನೀರಿಲ್ಲ. ಕೊನೆಗೆ ಜಮೀನುಗಳಿಗೆ ಹೋಗಬೇಕು ಈ ನಮ್ಮ ಗೋಳು ಕೇಳೋರೂ ಇಲ್ಲ ಎಂದು ಗ್ರಾಮಸ್ಥರು ಅಧಿಕಾರಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈಚೆಗೆ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಈ ಬಾವಿ ನೀರು ಪರೀಕ್ಷೆ ನಡೆಸಿದ್ದಾರೆ. ವರದಿಯಲ್ಲಿ ನೀರು ಕಲುಷಿತವಾಗಿದೆ ಎಂದು ಬಂದಿದೆ. ಗ್ರಾಮದಲ್ಲಿನ ಸರ್ಕಾರಿ ಶಾಲೆಯ ಪಕ್ಕದಲ್ಲೇ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲಾಗಿದೆ. ಆದರೆ ಈಗ ಘಟಕದ ಶುದ್ಧೀಕರಣ ಯಂತ್ರ ಸರಿಯಾಗಿ ಕೆಲಸ ಮಾಡದ ಕಾರಣ ಬಂದಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

‘ಕಳೆದ ನಾಲ್ಕು ದಿನಗಳಿಂದ ಗ್ರಾಮದಲ್ಲಿ ನೀರಿಲ್ಲ. ಅನುಕೂಲ ಇದ್ದವರು ತಮ್ಮ ವಾಹನಗಳ ಮೇಲೆ ಜಮೀನುಗಳಿಂದ ನೀರು ತರುತ್ತಿದ್ದಾರೆ. ಇದು ಎಲ್ಲರಿಂದ ಸಾಧ್ಯವಿಲ್ಲ’ ಎಂದು ನಿವಾಸಿ ಕಿರಣ ತಿಳಿಸಿದರು.

‘ಇಡೀ ಗ್ರಾಮಕ್ಕೆ ಒಂದೇ ಬಾವಿ ಇದೆ. ಈ ನೀರು ಸಹ ಈಗ ಕಲುಷಿತವಾಗಿದೆ. ತಕ್ಷಣ ಕೊಳವೆ ಬಾವಿ ಕೊರೆಯಬೇಕು’ ಎಂದು ಕರ್ನಾಟಕ ದಲಿತ ಪ್ಯಾಂಥರ್ ಅಧ್ಯಕ್ಷ ಗಣಪತಿ ಅಷ್ಟೋರೆ ಆಗ್ರಹಿಸಿದ್ದಾರೆ.

ಜೆಜೆಎಂ ಕಳಪೆ: ಕಲ್ಲೂರ್ ತಾಂಡಾ ಗ್ರಾಮದಲ್ಲಿ ಈ ಹಿಂದೆ ಜಲ ಜೀವನ ಮಿಷನ್‌ ಯೋಜನೆಯ ಕಾಮಗಾರಿ ಆಗಿದೆ. ಈ ಕಾಮಗಾರಿಯು ಕಳಪೆಯಾಗಿದೆ . ಇಲ್ಲಿಯ ಅನೇಕ ಸಾರ್ವಜನಿಕರ ಮನೆಗಳಿಗೆ ನೀರು ಬರುತ್ತಿಲ್ಲ. ಸರ್ಕಾರದ ಲಕ್ಷಾಂತರ ರೂಪಾಯಿ ಹಾಳಾಗಿದೆ. ಮೇಲಧಿಕಾರಿಗಳು ಇದ್ದರ ಬಗ್ಗೆ ತನಿಖೆ ನಡೆಸಬೇಕು ಎಂದು ಕರ್ನಾಟಕ ಭೀಮ್ ಆರ್ಮಿ ಮುಖಂಡ ಗೌತಮ್ ಪ್ರಸಾದ್ ಒತ್ತಾಯಿಸಿದ್ದಾರೆ.

ಗ್ರಾಮಕ್ಕೆ ಹೊಸ ಕೊಳವೆ ಬಾವಿ ಕೊರೆಯಬೇಕು ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಈಗಾಗಲೇ ಪತ್ರ ಬರೆಯಲಾಗಿದೆ. ಈ ಬಾವಿಯ ನೀರು ಯಾರು ಸಹ ಬಳಸಬಾರದು ಎಂದು ತಿಳುವಳಿಕೆ ಮೂಡಿಸಲಾಗಿದೆ.

ಮಾಧವರಾವ್ ದೇಶಪಾಂಡೆ ಪಿಡಿಒ ಕಲ್ಲೂರ್ ಗ್ರಾ.ಪಂ.

ಬಾವಿ ನೀರು ಕುಡಿಯುವುದಕ್ಕೆ ಯೋಗ್ಯವಿಲ್ಲ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವರದಿ ನೀಡಿದೆ‌ ಗ್ರಾಮದಲ್ಲಿ ಪರಿಯಾಯ ವ್ಯವಸ್ಥೆ ಇಲ್ಲ‌. ಈ ಬಗ್ಗೆ ಶಾ‌ಸಕರ ಗಮನಕ್ಕೂ ತರಲಾಗಿದೆ.

-ಶಂಕರ್ ಪವರ್ ಅಧ್ಯಕ್ಷ ಗ್ರಾ.ಪಂ ಕಲ್ಲೂರ್

ಪ್ರತಿಭಟನೆ ಎಚ್ಚರಿಕೆ ಕಲ್ಲೂರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರ್ ತಾಂಡದಲ್ಲಿ ಕಳೆದ ನಾಲ್ಕು ದಿನಗಳಿಂದ ಶುದ್ಧ ಕುಡಿಯುವ ನೀರಿಲ್ಲದೆ ಗ್ರಾಮಸ್ಥರು ಹೈರಾಣಾಗಿದ್ದಾರೆ. ಗ್ರಾಮದಲ್ಲಿ ಬಹುತೇಕ ಜನರು ಕೂಲಿ ಕೆಲಸ ಮಾಡುವವರೆ ಇದ್ದಾರೆ. ಅವರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಕೇವಲ ನೀರಿಗಾಗಿ ತಮ್ಮ ಸಮಯ ಮೀಸಲಿಡುವ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಇಲ್ಲಿಯವರೆಗೆ ಯಾವೊಬ್ಬ ಅಧಿಕಾರಿಯೂ ಸಮಸ್ಯೆ ಬಗೆಹರಿಸಲು ಮುಂದಾಗದೇ ಇರುವುದು ಬೇಸರದ ಸಂಗತಿ. ತಕ್ಷಣ ಮೇಲಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕು ಇಲ್ಲದಿದ್ದರೆ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಿದೆ ಎಂದು ದಲಿತ ಪ್ಯಾಂಥರ್ ಅಧ್ಯಕ್ಷ ಗಣಪತಿ ಅಷ್ಟೋರೆ ದಲಿತ ಮುಖಂಡ ಗೌತಮ್ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT