ಮಂಗಳವಾರ, ಜನವರಿ 18, 2022
15 °C
ಕೋವಿಡ್‌ ಹೆಚ್ಚುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ: ಸಚಿವರ ಅಸಮಾಧಾನ

ಸರ್ಕಾರದ ಹೆಸರು ಕೆಡಿಸಲೆತ್ನಿಸಿದರೆ ಸಹಿಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಅಧಿಕಾರಿಗಳು ಸಭೆಗಳಲ್ಲಿ ಸುಳ್ಳು ಮಾಹಿತಿ ನೀಡಿ ಸಚಿವರ ದಿಕ್ಕು ತಪ್ಪಿಸಿ ಸರ್ಕಾರದ ಹೆಸರು ಕೆಡಿಸಲು ಯತ್ನಿಸಿದರೆ ಸಹಿಸುವುದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಎಚ್ಚರಿಸಿದರು.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಕೋವಿಡ್‌ ನಿರ್ವಹಣೆ ಹಾಗೂ ನಿಯಂತ್ರಣ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕೋವಿಡ್‌ ನಿಯಂತ್ರಣ ಪರಿಶೀಲನಾ ಸಭೆ ನಡೆಸುವಂತೆ ಸೂಚಿಸಿದ್ದಾರೆ. ಅಧಿಕಾರಿಗಳು ಸಿದ್ಧತೆ ಮಾಡಿಕೊಂಡು ಸಭೆಗೆ ಬರುತ್ತಿಲ್ಲ. ಬೇಕು ಬೇಡಿಕೆಗಳ ಬಗ್ಗೆಯೂ ಪರಿಶೀಲನೆ ನಡೆಸಿ ಪ್ರಸಾವ ಸಲ್ಲಿಸುತ್ತಿಲ್ಲ. ಸರಿಯಾದ ಮಾಹಿತಿ ಕೊಡದಿದ್ದರೆ ಮುಖ್ಯಮಂತ್ರಿ ಸಭೆಯಲ್ಲಿ ಏನು ಉತ್ತರಿಸಬೇಕು’ ಎಂದು ಖಾರವಾಗಿ ಪ್ರಶ್ನಿಸಿದರು.

‘ಆರೋಗ್ಯ ಇಲಾಖೆಯ ಅಧಿಕಾರಿಗಳು ಕೆಲಸಕ್ಕಿಂತ ರಾಜಕೀಯ ಮಾಡುವುದೇ ಹೆಚ್ಚಾಗಿದೆ. ಅಧಿಕಾರಿಗಳಲ್ಲಿ ಸಮನ್ವಯದ ಕೊರತೆ ಇದೆ. ಸಿಟಿ ಸ್ಕ್ಯಾನ್ ಸೇರಿದಂತೆ ವೈದ್ಯಕೀಯ ಉಪಕರಣಗಳು ಜಿಲ್ಲೆಗೆ ಬಂದರೂ ಮಾಹಿತಿ ನೀಡುತ್ತಿಲ್ಲ. ವೈದ್ಯರ ಹುದ್ದೆಗಳು ಖಾಲಿ ಇದ್ದರೂ ಭರ್ತಿಗೆ ಮುಂದಾಗಿಲ್ಲ. ನನ್ನ ಗಮನಕ್ಕೂ ತಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹೋಮ್‌ ಕ್ವಾರಂಟೈನ್‌ನಲ್ಲಿ ಇರುವ ಕೋವಿಡ್‌ ಸೋಂಕಿತರ ಮೇಲೆ ಸರಿಯಾಗಿ ನಿಗಾ ಇಡುತ್ತಿಲ್ಲ. ಕೋವಿಡ್‌ ಪ್ರಕರಣಗಳ ಅಂಕಿಅಂಶಗಳನ್ನೂ ಆ್ಯಪ್‌ನಲ್ಲಿ ಸರಿಯಾಗಿ ಅಪ್‌ಲೋಡ್‌ ಮಾಡುತ್ತಿಲ್ಲ. ನಾನು ಸಲುಗೆಯಿಂದ ನಡೆದುಕೊಳ್ಳುತ್ತಿರುವುದನ್ನು ದೌರ್ಬಲ್ಯವೆಂದು ಭಾವಿಸುತ್ತಿದ್ದಾರೆ. ಕಾರ್ಯನಿರ್ವಹಣೆಯಲ್ಲಿ ನಿರ್ಲಕ್ಷ ವಹಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಅಧಿಕಾರಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಸಮಸ್ಯೆ ಇದ್ದರೆ ನೇರವಾಗಿ ನನ್ನ ಮೊಬೈಲ್‌ಗೆ ಕರೆ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಬೇಕು. ಬ್ರಿಮ್ಸ್‌ನಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ನನ್ನ ಮೊಬೈಲ್‌ಗೆ ದೊರಕುವಂತೆ ಅಪ್‌ಲೋಡ್‌ ಮಾಡಬೇಕು’ ಎಂದು ಸೂಚನೆ ನೀಡಿದರು.

‘ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ತಾಲ್ಲೂಕು ಮಟ್ಟದಲ್ಲಿ ಕಾರ್ಯಪಡೆಯ ಸಭೆಗಳನ್ನು ನಡೆಸಬೇಕು. ಪಿಡಿಒ, ಕಂದಾಯ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳನ್ನೂ ಸೇರಿಸಿಕೊಳ್ಳಬೇಕು’ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರತಿಕಾಂತ ಸ್ವಾಮಿ ಮಾತನಾಡಿ, ‘ಔರಾದ್‌ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞ ಹಾಗೂ ಅರವಳಿಕೆ ತಜ್ಞರ ಹುದ್ದೆ ಖಾಲಿ ಇದೆ. ಜಿಲ್ಲೆಯಲ್ಲಿ 33 ನರ್ಸ್‌ಗಳ ಹುದ್ದೆಗಳಿಗೆ ಹೊಸದಾಗಿ ನೇಮಕ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಬುಡಾ ಅಧ್ಯಕ್ಷ ಬಾಬು ವಾಲಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕೃಷ್ಣ ರೆಡ್ಡಿ, ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವಶಂಕರ, ಜಿಲ್ಲಾ ಸರ್ಜನ್‌ ಡಾ.ಶಿವಕುಮಾರ ಶೆಟಕಾರ, ಡಾ.ರಾಜಶೇಖರ ಪಾಟೀಲ ಇದ್ದರು.

ಕೋವಿಡ್: 356 ಮಂದಿಗೆ ಪರಿಹಾರ

‘ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟ 356 ಜನರ ವಾರಸುದಾರರಿಗೆ ಪರಿಹಾರ ಕೊಡಲಾಗಿದೆ. ಬಡತನ ರೇಖೆಗಿಂತ ಕೆಳಗಿರುವವವರ ಕುಟುಂಬಗಳಿಗೆ ₹ 1 ಲಕ್ಷ ಹಾಗೂ ಎಪಿಎಲ್‌ ಕುಟುಂಬಗಳಿಗೆ ₹ 50 ಸಾವಿರ ಪರಿಹಾರ ಕೊಡಲಾಗಿದೆ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್. ತಿಳಿಸಿದರು.
228 ಮಂದಿ ಕೋವಿಡ್‌ ಪಾಸಿಟಿವ್‌ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿದ ನಂತರ ಮೃತಪಟ್ಟಿದ್ದಾರೆ. ಕೋವಿಡ್‌ ಲಕ್ಷಣಗಳಿದ್ದ 1 ಸಾವಿರ ಜನ ಸಾವಿಗೀಡಾಗಿದ್ದಾರೆ. ಅವರಿಗೂ ಪರಿಹಾರ ಕೊಡುವಂತೆ ಶಾಸಕರು ಒತ್ತಾಯಿಸಿದ್ದಾರೆ. ಇದು ಸರ್ಕಾರದ ಮಟ್ಟದಲ್ಲಿ ತೀರ್ಮಾನ ಆಗಬೇಕಿದೆ’ ಎಂದು ಹೇಳಿದರು.

ಬ್ರಿಮ್ಸ್‌ ನಿಯಂತ್ರಣಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿ

ಬೀದರ್‌: ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ಕೊಡಲು ಹಾಗೂ ಆಸ್ಪತ್ರೆಯಲ್ಲಿನ ಗೊಂದಲಗಳ ನಿವಾರಣೆಗೆ ಒಬ್ಬ ಒಳ್ಳೆಯ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಅವರೇ ಸಚಿವರಿಗೆ ಮನವಿ ಮಾಡಿದರು.

‘ಅಲ್ಲಿ ಅಧಿಕಾರಿಗಳದ್ದೇ ದರ್ಬಾರು ನಡೆದಿದೆ. ಅನುಮತಿ ಇಲ್ಲದಿದ್ದರೂ ಹೆಚ್ಚುವರಿಯಾಗಿ ಮೂವರು ವೈದ್ಯರನ್ನು ನಿಯೋಜಿಸಿ ಪ್ರತಿ ತಿಂಗಳು ₹ 3.20 ಲಕ್ಷ ವ್ಯಯಿಸಲಾಗುತ್ತಿದೆ. ಆದರೆ, ಗ್ರುಪ್‌ ‘ಡಿ’ ನೌಕರರಿಗೆ ಸಕಾಲಕ್ಕೆ ವೇತನ ಪಾವತಿ ಮಾಡುತ್ತಿಲ್ಲ’ ಎಂದು ಸಚಿವರ ಗಮನಕ್ಕೆ ತಂದರು.

‘ವೈದ್ಯರ ಪ್ರೊಬೇಷನರಿ ಅವಧಿಯೇ ಮುಗಿದಿಲ್ಲ. ಅಂಥವರಿಗೆ ಪ್ರಮೋಷನ್‌ ನೀಡಲಾಗಿದೆ. ಕನ್ನಡ ಪರೀಕ್ಷೆ ಬರೆಯದ, ಕನ್ನಡ ಮಾತನಾಡಲು ಬಾರದ ಸೋಲಾಪುರದವರನ್ನು ಬ್ರಿಮ್ಸ್‌ನಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಭಾಷೆಯೇ ಬಾರದವರು ರೋಗಿಗಳ ಸಮಸ್ಯೆ ಅರಿತುಕೊಳ್ಳಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

‘ಎರಡು ತಿಂಗಳ ಹಿಂದೆಯೇ ಹೊಸ ಸಿಟಿಸ್ಕ್ಯಾನ್‌ ಯಂತ್ರ ಬ್ರಿಮ್ಸ್‌ಗೆ ಬಂದರೂ ನನಗಾಲಿ, ಸಚಿವರಿಗಾಗಿ ಮಾಹಿತಿ ನೀಡಿಲ್ಲ. ಸಿಟಿಸ್ಕ್ಯಾನ್‌ ಇನ್‌ಸ್ಟಾಲೆಷನ್‌ಗೆ ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ. ನಿರ್ಲಕ್ಷ ತೋರಿದರೆ ಇನ್ನು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಎರಡು ತಿಂಗಳ ಹಿಂದೆ ಹೊಸ ಸಿಟಿಸ್ಕ್ಯಾನ್‌ ಯಂತ್ರ ಬ್ರಿಮ್ಸ್‌ಗೆ ಬಂದಿದೆ. ಸಾಗಣೆ ಸಂದರ್ಭದಲ್ಲಿ ಮೂರು ಬಾರಿ ಅದರ ಗಾಜು ಒಡೆದಿದೆ. ಇನ್‌ಸ್ಟಾಲೆಷನ್‌ಗೆ ಸಮಯ ಸ್ವಲ್ಪ ಸಮಯಬೇಕಾಗಲಿದೆ’ ಎಂದು ಬ್ರಿಮ್ಸ್‌ ವೈದ್ಯಕೀಯ ನಿರ್ದೇಶಕ ಡಾ.ಚಂದ್ರಕಾಂತ ಚಿಲ್ಲರ್ಗಿ ಹೇಳಿದಾಗ ಸಚಿವರು ಗರಂ ಆದರು. ‘ಇನ್ನೂ ಎಷ್ಟು ಸಮಯ ಬೇಕು’ ಎಂದು ಏರಿದ ಧ್ವನಿಯಲ್ಲೇ ಕೇಳಿದರು.

ರೋಗಿಗಳಿಂದ ಹಣ ವಸೂಲಿ

ಬೀದರ್‌: ಬಸವಕಲ್ಯಾಣದಲ್ಲಿ ಸುಸಜ್ಜಿತ ತಾಲ್ಲೂಕು ಆಸ್ಪತ್ರೆ ಕಟ್ಟಡ ಹಾಗೂ ಅತ್ಯಾಧುನಿಕ ಸೌಲಭ್ಯದ ಆಂಬುಲೆನ್ಸ್‌ ಇದೆ. ತಾಲ್ಲೂಕು ಆರೋಗ್ಯ ಅಧಿಕಾರಿ ತಮ್ಮದೇಯಾದ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಕಳಿಸುತ್ತಿದ್ದಾರೆ. ಅಲ್ಲಿ ₹30ರಿಂದ 40 ಸಾವಿರ ಪಡೆದು ಸೀಸೆರಿಯನ್ ಮಾಡುತ್ತಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಅವರನ್ನು ಬೇರೆ ಕಡೆ ವರ್ಗಾಯಿಸಬೇಕು’ ಎಂದು ಬಸವಕಲ್ಯಾಣ ಶಾಸಕ ಶರಣು ಸಲಗರ ಒತ್ತಾಯಿಸಿದರು.

ಆಸ್ಪತ್ರೆಯಲ್ಲಿರುವ ಮೂವರು ನರ್ಸ್‌ಗಳು ಟಿಎಚ್‌ಒ ಅವರ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಹೆರಿಗೆಗೆ ಆಸ್ಪತ್ರೆಗೆ ಬರುವ ಮಹಿಳೆಯರ ದಿಕ್ಕು ತಪ್ಪಿಸಿ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಆಗುವಂತೆ ಮಾಡುತ್ತಿದ್ದಾರೆ. ಅವರನ್ನೂ ಬೇರೆ ಕಡೆ ವರ್ಗಾವಣೆ ಮಾಡಬೇಕು. ಇವರೆಲ್ಲರ ಹೆಸರುಗಳನ್ನು ಉಲ್ಲೇಖಿಸಿ ಜಿಲ್ಲಾಧಿಕಾರಿಗೆ ಲಿಖಿತ ದೂರು ನೀಡುತ್ತೇನೆ’ ಎಂದು ಹೇಳಿದರು.

‘ಸರ್ಕಾರ ಅತ್ಯಾಧುನಿಕ ಸೌಲಭ್ಯದ ಆಂಬುಲನ್ಸ್‌ ಮಂಜೂರು ಮಾಡಿದೆ. ಆದರೆ, ಚಾಲಕ ಯಾವಾಗಲೂ ಮದ್ಯದ ಅಮಲಿನಲ್ಲಿ ಇರುತ್ತಾನೆ. ಆಂಬುಲನ್ಸ್‌ ಉದ್ಘಾಟನೆ ದಿನವೇ ಗುಟಕಾ ತಿಂದು ಅದರ ಮೇಲೆ ಉಗಿದು ಗಲೀಜು ಮಾಡಿದ್ದಾನೆ. ಇಂತಹ ಚಾಲಕರನ್ನು ತಕ್ಷಣ ಬದಲಿಸಬೇಕು’ ಎಂದು ಶಾಸಕರು ಸಚಿವರಲ್ಲಿ ಮನವಿ ಮಾಡಿದರು.

ಬಡವರು ಎಲ್ಲಿಗೆ ಹೋಗಬೇಕು?

’ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಕೊಡದಿದ್ದರೆ ಬಡವರು ಎಲ್ಲಿಗೆ ಹೋಗಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವವರೇ ಹೊರಗೆ ಖಾಸಗಿ ಆಸ್ಪತ್ರೆ ತೆರೆದಿದ್ದಾರೆ. ಬೀದರ್ ನಗರದಲ್ಲೇ 100ಕ್ಕೂ ಅಧಿಕ ಖಾಸಗಿ ಆಸ್ಪತ್ರೆಗಳು ತೆರೆದುಕೊಂಡಿವೆ. ಖಾಸಗಿ ಆಸ್ಪತ್ರೆಗೆ ನನ್ನ ವಿರೋಧವಿಲ್ಲ. ಆದರೆ, ಇಲ್ಲಿಯವರೇ ಹೊರಗೆ ಉತ್ತಮ ಸೇವೆ ಕೊಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲೂ ಉತ್ತಮ ಸೇವೆ ಒದಗಿಸಬೇಕು’ ಎಂದು ಶಾಸಕ ಬಂಡೆಪ್ಪ ಕಾಶೆಂಪೂರ್‌ ಹೇಳಿದರು.

‘ಬ್ರಿಮ್ಸ್‌ನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ವೈದ್ಯರನ್ನು ನಿಯೋಜಿಸಲಾಗಿದೆ. ನುರಿತ ತಜ್ಞ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಆಸಕ್ತಿ ತೋರಿಸುತ್ತಿಲ್ಲ. ಬ್ರಿಮ್ಸನ್‌ಲ್ಲಿ ಸುಪರ್‌ ಸ್ಪೆಶಾಲಿಟಿ ಸೌಲಭ್ಯಗಳಿಲ್ಲ. ಗ್ರುಪ್‌ ಡಿ ನೌಕರರಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿಸುತ್ತಿಲ್ಲ. 14 ಲ್ಯಾಬ್‌ ಟೆಕ್ನಿಷಿಯನ್‌ಗಳನ್ನು ಕೆಲಸದಿಂದ ತೆಗೆಯಲಾಗಿದೆ. ಸರ್ಕಾರಿ ನೌಕರಿ ಎಂದು ಹೇಳಿಕೊಂಡು ಈಚೆಗೆ ಮದುವೆ ಮಾಡಿ ಕೊಂಡವರು ಗೋಳಾಡುತ್ತಿದ್ದಾರೆ’ ಎಂದರು.

‘ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ವೈದ್ಯರನ್ನು ನೇಮಕ ಮಾಡಿಕೊಳ್ಳಬೇಕು. ಕೋವಿಡ್‌ಗೆ ಸಂಬಂಧಿಸಿದ ವೈದ್ಯಕೀಯ ಸೌಲಭ್ಯಗಳು ಸ್ಥಳೀಯ ಮಟ್ಟದಲ್ಲೇ ದೊರಕುವಂತೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ಗಡಿಯಲ್ಲಿರುವ ಜನ ಚಿಕಿತ್ಸೆಗೆ ಬ್ರಿಮ್ಸ್‌ಗೆ ಬರುವಂತಾಗಬೇಕು. ಆದರೆ, ವಿಪರ್ಯಾಸ ಅಂದರೆ ಬೀದರ್ ಜನ ಉಮರ್ಗಾ ಹಾಗೂ ಸೋಲಾಪುರಕ್ಕೆ ಹೋಗುತ್ತಿದ್ದಾರೆ. ಇಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯದಿರುವುದೇ ಇದಕ್ಕೆ ಕಾರಣ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.