ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾದಿ ಉತ್ಪನ್ನ ಬಳಕೆಗೆ ಮುಂದಾಗಿ: ಸಚಿವ ಚವಾಣ್ ಮನವಿ

ಆತ್ಮನಿರ್ಭರ ಭಾರತ: ಖಾದಿ ಗ್ರಾಮೊದ್ಯೋಗ ಸಂಘ- ಹೋಂ ಶಾಪ್ 24 ಡಾಟ್ ಇನ್ ಒಪ್ಪಂದ
Last Updated 15 ಆಗಸ್ಟ್ 2020, 15:47 IST
ಅಕ್ಷರ ಗಾತ್ರ

ಬೀದರ್: ಆತ್ಮನಿರ್ಭರ ಭಾರತ ಅಭಿಯಾನ ಭಾಗವಾಗಿ ಖಾದಿ ಉತ್ಪನ್ನಗಳಿಗೆ ಉತ್ತೇಜನ ನೀಡಲು ಇಲ್ಲಿಯ ಹೋಂ ಶಾಪ್ 24 ಡಾಟ್ ಇನ್ ಹಾಗೂ ಖಾದಿ ಗ್ರಾಮೊದ್ಯೋಗ ಸಂಘಗಳು ಒಪ್ಪಂದ ಮಾಡಿಕೊಂಡಿವೆ.

ನಗರದ ನೌಬಾದ್ ಸಮೀಪ ನಡೆದ ಬಿಜೆಪಿ ಜಿಲ್ಲಾ ಭವನದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಆತ್ಮನಿರ್ಭರ ಭಾರತ ಅಭಿಯಾನದಡಿ ಹೋಂ ಶಾಪ್ 24 ಡಾಟ್ ಇನ್ ಫಲಕ ಪ್ರದರ್ಶಿಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರು, ಸಾಂಪ್ರದಾಯಿಕ ಖಾದಿ ಉತ್ಪನ್ನಗಳು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿವೆ. ಹೀಗಾಗಿ ಜನ ಅವುಗಳ ಬಳಕೆಗೆ ಮುಂದಾಗಬೇಕು ಎಂದು ತಿಳಿಸಿದರು.

ಸ್ಥಳೀಯರು ಸ್ಥಳೀಯ ಉತ್ಪನ್ನಗಳನ್ನು ಕೊಂಡುಕೊಂಡರೆ ಉದ್ಯಮಗಳಿಗೆ ಪ್ರೋತ್ಸಾಹ ದೊರೆಯುತ್ತದೆ. ಉತ್ಪಾದನೆ ಹೆಚ್ಚುತ್ತದೆ. ಸ್ಥಳೀಯರಿಗೆ ಉದ್ಯೋಗಾವಕಾಶವೂ ಲಭಿಸುತ್ತದೆ ಎಂದು ಹೇಳಿದರು.

ಉತ್ಕೃಷ್ಟ ಖಾದಿ ಉತ್ಪನ್ನಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಖಾದಿ ಗ್ರಾಮೊದ್ಯೋಗ ಸಂಘದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೋಂ ಶಾಪ್ 24 ಡಾಟ್ ಇನ್ ಪ್ರಧಾನ ವ್ಯವಸ್ಥಾಪಕ ಸಚ್ಚಿದಾನಂದ ಚಿದ್ರೆ ತಿಳಿಸಿದರು.

ಬಿ.ಎಸ್. ಕುದರೆ ಅವರ ಅಧ್ಯಕ್ಷತೆಯ ಖಾದಿ ಗ್ರಾಮೊದ್ಯೋಗ ಸಂಘವು ಉತ್ತರ ಕರ್ನಾಟಕ ಭಾಗದಲ್ಲೇ ಅತ್ಯಂತ ಹಳೆಯ ಸಂಘವಾಗಿದೆ. ಸ್ವಂತ ಉತ್ಪಾದನಾ ಘಟಕ ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ಹೊಂದಿದೆ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸುವುದು ಸಂಘದ ಉದ್ದೇಶವಾಗಿದೆ. ಒಪ್ಪಂದದಿಂದ ಹೊಸ ತಂತ್ರಜ್ಞಾನದೊಂದಿಗೆ ಖಾದಿ ಉತ್ಪನ್ನಗಳು ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ತಲುಪಲು ಸಾಧ್ಯವಾಗಲಿದೆ. ನಿರುದ್ಯೋಗಿಗಳ ಕೈಗೆ ಉದ್ಯೋಗ ಸಿಗಲಿದೆ ಎಂದು ಹೇಳಿದರು.

ಸ್ಥಳೀಯ ಹೋಮ್ ಶಾಪ್ 24 ಡಾಟ್ ಇನ್ ಈಗಾಗಲೇ 3,000ಕ್ಕೂ ಹೆಚ್ಚು ವಿವಿಧ ಬಗೆಯ ಉತ್ಪನ್ನಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಜಿಲ್ಲೆಯ ಜನ ಖಾದಿ ಉತ್ಪನ್ನಗಳನ್ನು ನೆಚ್ಚಿಕೊಳ್ಳಲಿದ್ದಾರೆ. ಬರುವ ದಿನಗಳಲ್ಲಿ ಖಾದಿಗೆ ಇನ್ನೂ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವೊಕಲ್ ಫಾರ್ ಲೊಕಲ್ ಘೋಷವಾಕ್ಯ ಅನುಷ್ಠಾನಕ್ಕೆ ಬರಬೇಕು. ಸದೃಢ ರಾಷ್ಟ್ರ ಕಟ್ಟಲು ಪ್ರತಿಯೊಬ್ಬರು ಸ್ವದೇಶಿ ಉತ್ಪನ್ನಗಳನ್ನೇ ಬಳಸಬೇಕು ಎಂದು ಮನವಿ ಮಾಡಿದರು.

ಸಂಸದ ಭಗವಂತ ಖೂಬಾ, ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ಮುಖಂಡರಾದ ಗುರುನಾಥ ಕೊಳ್ಳೂರ, ಈಶ್ವರಸಿಂಗ್ ಠಾಕೂರ್, ಅಶೋಕ ಹೊಕ್ರಾಣೆ, ಹೋಂ ಶಾಪ್ 24 ಡಾಟ್ ಇನ್ ಮುಖ್ಯಸ್ಥೆ ಶಿವಲೀಲಾ ಎಸ್. ಚಿದ್ರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT