ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಯಲ್ಲಿ ಅರಳಿದ ಹೂಕೋಸು

ಸಾಮಾನ್ಯ ಗ್ರಾಹಕನ ಕೈಗೆಟುಕದ ಬೀನ್ಸ್‌ ದರ
Last Updated 21 ಜೂನ್ 2019, 15:47 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಇನ್ನೂ ಪೂರ್ಣಪ್ರಮಾಣದಲ್ಲಿ ಮುಂಗಾರು ಪ್ರವೇಶ ಮಾಡಿಲ್ಲ. ಶುಕ್ರವಾರ ಸಂಜೆ ಅಲ್ಲಲ್ಲಿ ಮಳೆ ಹನಿಗಳು ಉದುರಿವೆ ಅಷ್ಟೇ. ಜಿಲ್ಲೆಯಲ್ಲಿ ಎಲ್ಲಿಯೂ ಬಿತ್ತನೆ ಆರಂಭವಾಗಿಲ್ಲ. ತೋಟಗಾರಿಕೆ ಬೆಳೆಯೂ ಇಲ್ಲವಾಗಿದೆ.

ಚಿಟಗುಪ್ಪ ತಾಲ್ಲೂಕಿನಲ್ಲಿ ಅಧಿಕ ಪ್ರಮಾಣದಲ್ಲಿ ತರಕಾರಿ ಬೆಳೆಯಲಾಗುತ್ತದೆ. ರೈತರು ಎಲೆಕೋಸು, ಹೂಕೋಸು, ಕರಿಬೇವು ಹಾಗೂ ಕೊತಂಬರಿ ಬೆಳೆದು ಮಾರುಕಟ್ಟೆಗೆ ಸಾಗಿಸುತ್ತಾರೆ. ಈ ಬಾರಿ ನೀರಿನ ಅಭಾವದಿಂದ ಎಲೆಕೋಸು ಮಾತ್ರ ಮಾರುಕಟ್ಟೆಗೆ ಬಂದಿದೆ. ಬಹುದಿನಗಳ ನಂತರ ಮಾರುಕಟ್ಟೆಯಲ್ಲಿ ಹೂಕೋಸು ಅರಳಿದೆ.

ಹೂಕೋಸು ಪ್ರತಿ ಕ್ವಿಂಟಲ್‌ಗೆ ₹ 3 ಸಾವಿರ, ಆಲೂಗಡ್ಡೆ ₹ 1,300, ಬದನೆಕಾಯಿ ಹಾಗೂ ಸಬ್ಬಸಗಿ ₹ 1 ಸಾವಿರ, ತೊಂಡೆಕಾಯಿ ₹ 500 ಹಾಗೂ ಈರುಳ್ಳಿ ₹ 300 ಹೆಚ್ಚಳವಾಗಿದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಬೀನ್ಸ್‌ ಕೆಜಿಗೆ ₹160, ಕೊತಂಬರಿ ₹ 120 ಹಾಗೂ ಸಬ್ಬಸಗಿ ₹ 100 ಇದೆ. ಬೀನ್ಸ್‌ ಬೆಲೆ ಸ್ವಲ್ಪ ಮಟ್ಟಿಗೆ ಇಳಿದರೂ ಸಾಮಾನ್ಯ ಗ್ರಾಹಕನ ಕೈಗೆಟಕುವಂತಿಲ್ಲ. ಹೋಟೆಲ್‌ ಮಾಲೀಕರು, ಮದುವೆ, ಮುಂಜಿವೆ ಆಯೋಜಿಸಿರುವವರು ಮಾತ್ರ ಕೊಂಡುಕೊಳ್ಳುತ್ತಿದ್ದಾರೆ.

ಮೆಣಸಿನಕಾಯಿ, ಬೆಳ್ಳೂಳ್ಳಿ, ಗಜ್ಜರಿ, ಮೆಂತೆಸೊಪ್ಪು, ಬಿಟ್‌ರೂಟ್‌, ಕೊತಂಬರಿ ಹಾಗೂ ಬೆಂಡೆಕಾಯಿ ಬೆಲೆಯಲ್ಲಿ ಏರಿಳಿತ ಆಗಿಲ್ಲ. ಟೊಮೆಟೊ ಬೆಲೆ ಹಠಾತ್ ಪ್ರತಿ ಕ್ವಿಂಟಲ್‌ಗೆ ₹ 2,500 ಕುಸಿದಿದೆ. ಬೀನ್ಸ್, ಹಿರೇಕಾಯಿ ಹಾಗೂ ಕರಿಬೇವು ಬೆಲೆ ಒಂದು ಸಾವಿರ ರೂಪಾಯಿ ಕಡಿಮೆಯಾಗಿದೆ.

ಇಲ್ಲಿಯ ಮಾರುಕಟ್ಟೆಗೆ ಮಹಾರಾಷ್ಟ್ರದ ಸೋಲಾಪುರದಿಂದ ಬೀನ್ಸ್, ಮೆಂತೆಸೊಪ್ಪು, ಬೆಂಡೆಕಾಯಿ, ಬೆಳಗಾವಿ, ಹೈದರಾಬಾದ್‌, ಜಾಲನಾದಿಂದ ಮೆಣಸಿನಕಾಯಿ ಆವಕವಾಗಿದೆ. ಹೈದರಾಬಾದ್‌ನಿಂದ ಹೂಕೋಸು, ಟೊಮೆಟೊ, ಬದನೆಕಾಯಿ, ಹಿರೇಕಾಯಿ, ತೊಂಡೆಕಾಯಿ, ಬಿಟ್‌ರೂಟ್, ಬೆಳ್ಳೂಳ್ಳಿ ಬಂದಿದೆ.

‘ಚಿಟಗುಪ್ಪದಿಂದ ಕೇವಲ ಎಲೆಕೋಸು ಬಂದಿದೆ. ಚಿಟಗುಪ್ಪ ವಲಯದಲ್ಲಿ ಹೂಕೂಸು ಇಲ್ಲ. ಹೈದರಾಬಾದ್‌ನಿಂದ ಬರುತ್ತಿರುವ ಕಾರಣ ಸಹಜವಾಗಿ ಬೆಲೆ ಏರಿಕೆಯಾಗಿದೆ’ ಎನ್ನುತ್ತಾರೆ ತರಕಾರಿ ಸಗಟು ವ್ಯಾಪಾರಿ ಅಮೀರ್‌.

ಉತ್ತಮ ಬೆಳೆ ಬಂದರೆ ಮಾತ್ರ ಜಿಲ್ಲೆಯಲ್ಲಿ ಸೊಪ್ಪು ಮಾರುಕಟ್ಟೆಗೆ ಬರಲಿದೆ. ಬೆಲೆಯೂ ಕಡಿಮೆಯಾಗಲಿದೆ. ಮಳೆ ಕೈಕೊಟ್ಟರೆ ತರಕಾರಿ ಬೆಲೆ ಮತ್ತೆ ಗಗನದತ್ತ ಮುಖ ಮಾಡಲಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT