ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಡಾಗದ ಬೆಂಡೆಕಾಯಿ ಬೆಲೆ

Last Updated 16 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಬೀದರ್‌: ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಮಳೆಯಾಗಿದೆ. ಆದರೆ, ಬೀದರ್ ಜಿಲ್ಲೆಯಲ್ಲಿ ಮಳೆಗಾಲದ ವಾತಾವರಣವೇ ಇಲ್ಲ. ಆಗಾಗ ಮೋಡ ಕವಿದ ವಾತಾವರಣ ಇದ್ದರೂ ಬೇಸಿಗೆಯಂತಹ ಬಿಸಿಲು ಕಡಿಮೆಯಾಗಿಲ್ಲ. ಇದೇ ಕಾರಣಕ್ಕೆ ಇಲ್ಲಿ ತರಕಾರಿ ಬೆಳೆ ಕಡಿಮೆಯಾಗಿದೆ. ಬೇರೆ ಜಿಲ್ಲೆಗಳಿಂದಲೇ ನಗರಕ್ಕೆ ತರಕಾರಿ ಬರುತ್ತಿದೆ.

ಅರಸಿಕೆರೆಯಿಂದ ಟೊಮೆಟೊ, ಹೈದರಾಬಾದ್‌ನಿಂದ ಮೆಣಸಿನಕಾಯಿ, ಬೀನ್ಸ್‌, ಗಜ್ಜರಿ, ಬೀಟ್‌ರೂಟ್‌, ಸೋಲಾಪುರದಿಂದ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಆವಕವಾಗಿದೆ. ಚಿಟಗುಪ್ಪ ತಾಲ್ಲೂಕಿನಿಂದ ಹೂಕೋಸು, ಬೆಂಡೆಕಾಯಿ, ಹಿರೇಕಾಯಿ, ಮೆಂತೆ, ಪಾಲಕ್‌ ಹಾಗೂ ಕರಿಬೇವು ಬಂದಿದೆ.

ಬೇಸಿಗೆಯಲ್ಲಿ ಪ್ರತಿ ಕೆ.ಜಿಗೆ ₹ 200ಗೆ ಮಾರಾಟವಾಗಿದ್ದ ಬೀನ್ಸ್‌ ಇದೀಗ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ₹80 ರಿಂದ ₹90ಗೆ ಮಾರಾಟವಾಗುತ್ತಿದೆ. ಈಗಲೂ ಬೇರೆ ತರಕಾರಿಗೆ ಹೋಲಿಸಿದರೆ ಬೀನ್ಸ್‌ ಬೆಲೆಯೇ ಅಧಿಕ ಇದೆ. ಕಿರೀಟಧಾರಿ ಬದನೆಕಾಯಿ ಹಾಗೂ ಕೊಂಬಿನ ಬೆಂಡೆಕಾಯಿ ಬೆಲೆ ನಂತರದ ಸ್ಥಾನದಲ್ಲಿವೆ.

ಬೆಳ್ಳುಳ್ಳಿ, ಕರಿಬೇವು, ಪಾಲಕ್‌ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 2 ಸಾವಿರ ಕಡಿಮೆಯಾಗಿದೆ. ಹಿರೇಕಾಯಿ, ಹಸಿ ಮೆಣಸಿನಕಾಯಿ, ಟೊಮೆಟೊ, ಗಜ್ಜರಿ, ಸಬ್ಬಸಗಿ, ಬಿಟ್‌ರೂಟ್ ಬೆಲೆ ಕ್ವಿಂಟಲ್‌ಗೆ ಒಂದು ಸಾವಿರ ರೂಪಾಯಿ ಇಳಿದಿದೆ. ಈರುಳ್ಳಿ, ಆಲೂಗಡ್ಡೆ, ತೊಂಡೆಕಾಯಿ, ಮೆಂತೆ ಸೊಪ್ಪು ಹಾಗೂ ಕೊತಂಬರಿ ಬೆಲೆ ಸ್ಥಿರವಾಗಿದೆ.

‘ಬಹುಬೇಡಿಕೆಯ ಬೀನ್ಸ್, ಬದನೆಕಾಯಿ, ಬೆಂಡೆಕಾಯಿ ಹಾಗೂ ಎಲೆಕೋಸು ಬೆಲೆಯಲ್ಲಿ ಏರಿಕೆಯಾಗಿದೆ. ಬೇರೆ ಜಿಲ್ಲೆಗಳಲ್ಲಿ ನೆರೆ ಹಾವಳಿ ಬಂದಿರುವ ಕಾರಣ ತರಕಾರಿ ಕೊಳೆಯುತ್ತಿದೆ. ಹೀಗಾಗಿ ಕೆಲ ತರಕಾರಿಗಳ ಬೆಲೆ ಕುಸಿದಿದೆ’ ಎಂದು ತರಕಾರಿ ವ್ಯಾಪಾರಿ ವಿಜಯಕುಮಾರ ಕಡ್ಡೆ ಹೇಳುತ್ತಾರೆ.

ಚಿಟಗುಪ್ಪ ತಾಲ್ಲೂಕಿನಲ್ಲಿ ಅಲ್ಲಲ್ಲಿ ತರಕಾರಿ ಸೊಪ್ಪು ಬೆಳೆಯಲಾಗುತ್ತಿದೆ. ಇಷ್ಟು ಬಿಟ್ಟರೆ ಬೇರೆ ತರಕಾರಿ ಮಾರುಕಟ್ಟೆಗೆ ಬರುತ್ತಿಲ್ಲ. ನೆರೆಯ ಮಹಾರಾಷ್ಟ್ರ ಹಾಗೂ ತೆಲಂಗಾಣದಲ್ಲಿ ತರಕಾರಿ ಬೆಳೆಯುತ್ತಿರುವ ರೈತರಿಗೆ ಬೀದರ್‌ ಮಾರುಕಟ್ಟೆಯೇ ಆರ್ಥಿಕ ಬಲ ನೀಡುತ್ತಿದೆ.

ಗ್ರಾಮೀಣ ಪ್ರದೇಶದಲ್ಲಿ ತರಕಾರಿ ಸೇವಿಸುವವರ ಸಂಖ್ಯೆ ಕಡಿಮೆ ಇದೆ. ಕೇವಲ ತೊಗರಿ ಬೇಳೆ, ಅನ್ನ ಹಾಗೂ ರೊಟ್ಟಿ ಜನರ ಪ್ರಮುಖ ಆಹಾರವಾಗಿದೆ. ಇದು ಅಪೌಷ್ಟಿಕತೆಗೂ ಕಾರಣವಾಗಿದೆ. ನಗರ ಪ್ರದೇಶದವರೇ ತರಕಾರಿ ಖರೀದಿಸುವ ಕಾರಣ ಹೈದರಾಬಾದ್‌ನಿಂದ ಅತಿ ಹೆಚ್ಚು ಕಾಯಿಪಲ್ಲೆ ಇಲ್ಲಿಗೆ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT