ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ ಲೋಕಸಭಾ ಕ್ಷೇತ್ರ | ಉರಿ ಬಿಸಿಲಿಗೆ ಸೆಡ್ಡು ಹೊಡೆದ ಮತದಾರರು

ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಶೇ 65ರಷ್ಟು ಮತದಾನ; 2019ಕ್ಕಿಂತ ಹೆಚ್ಚಾದ ಮತ ಪ್ರಮಾಣ; ಸಂಪೂರ್ಣ ಶಾಂತಿಯುತ
Published 8 ಮೇ 2024, 5:37 IST
Last Updated 8 ಮೇ 2024, 5:37 IST
ಅಕ್ಷರ ಗಾತ್ರ

ಬೀದರ್‌: ಕೆಂಡದಂತಹ ಬಿಸಿಲು, ಉಷ್ಣ ಅಲೆಗಳಿಗೆ ಸೆಡ್ಡು ಹೊಡೆದು ಬೀದರ್‌ ಲೋಕಸಭಾ ಕ್ಷೇತ್ರದ ಮತದಾರರು ಮಂಗಳವಾರ ಹಕ್ಕು ಚಲಾಯಿಸಿದರು.

ಸಂಪೂರ್ಣ ಶಾಂತಿಯುತ ಮತದಾನ ನಡೆದದ್ದು ವಿಶೇಷ. ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ 65ರಷ್ಟು ಮತದಾನವಾಗಿದೆ. ಇದು 2019ರ ಚುನಾವಣೆಯಲ್ಲಾದ ಮತದಾನದ ಪ್ರಮಾಣಕ್ಕಿಂತ ತುಸು ಹೆಚ್ಚು. 2019ರ ಚುನಾವಣೆಯಲ್ಲಿ ಶೇ 62.58ರಷ್ಟು ಮತದಾನವಾಗಿತ್ತು. ಜಿಲ್ಲಾ ಚುನಾವಣಾ ಆಯೋಗ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿ ಮತದಾನದ ಪ್ರಮಾಣ ಹೆಚ್ಚಿಸಲು ಸಾಕಷ್ಟು ಕಸರತ್ತು ನಡೆಸಿತ್ತು. ವಿವಿಧ ಚಟುವಟಿಕೆಗಳನ್ನು ನಡೆಸಿತ್ತು. ಆದರೆ, ಕೆಂಡದಂತಹ ಬಿಸಿಲು ಇರುವ ಕಾರಣ ಜನ ಮತಗಟ್ಟೆಗಳಿಗೆ ಬರುತ್ತಾರೋ ಅಥವಾ ಇಲ್ಲವೋ ಎಂಬ ಚಿಂತೆ ಕಾಡಿತ್ತು. ಆದರೆ, ಸಂಜೆಯಾಗುತ್ತಲೆ ಅದು ದೂರವಾಯಿತು. ಆದರೆ, ಶೇ 80ರಷ್ಟು ಮತದಾನದ ಗುರಿ ತಲುಪಬೇಕೆಂಬ ಅವರ ಆಸೆ ಸಾಕಾರಗೊಳ್ಳಲಿಲ್ಲ.

ಬೆಳಿಗ್ಗೆ ಉತ್ಸಾಹ, ಮಧ್ಯಾಹ್ನ ಮಂದ, ಸಂಜೆ ಚುರುಕು:

ಇಡೀ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 2,024 ಮತಗಟ್ಟೆಗಳಲ್ಲಿ ಮಂಗಳವಾರ ಬೆಳಂಬೆಳಿಗ್ಗೆ ಜನಜಾತ್ರೆ ಕಂಡು ಬಂತು. ಎಲ್ಲ ಮತಗಟ್ಟೆಗಳಲ್ಲಿ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಸ್ವತಃ ಚುನಾವಣಾ ಅಧಿಕಾರಿಗಳೇ ಅಚ್ಚರಿಗೊಂಡರು.

ಬೆಳಿಗ್ಗೆ ಏಳು ಗಂಟೆಗೆ ಸರಿಯಾಗಿ ಮತದಾನ ಆರಂಭಿಸಲು ಮತಗಟ್ಟೆಗಳಲ್ಲಿ ಸಿ‌ಬ್ಬಂದಿ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಕೆಲವರು 6.30ಕ್ಕೆಲ್ಲ ಮತಗಟ್ಟೆಗಳ ಎದುರು ಜಮಾಯಿಸಿದರು. ಆದರೆ, ಸಮಯ ಆಗದ ಕಾರಣ ಮತದಾನ ಪ್ರಕ್ರಿಯೆ ಆರಂಭಗೊಂಡಿರಲಿಲ್ಲ. ಏಳು ಗಂಟೆಗೆ ಮತದಾನ ಆರಂಭವಾಗುತ್ತಿದ್ದಂತೆ ಮತಗಟ್ಟೆಗಳ ಎದುರು ಜನಜಂಗುಳಿ ಹೆಚ್ಚಾಗ ತೊಡಗಿತು. ಜನ ಕುಟುಂಬ ಸದಸ್ಯರೊಡನೆ ಕಾರು, ಆಟೊ, ಬೈಕ್‌ಗಳಲ್ಲಿ ಬಂದು ಸರತಿಯಲ್ಲಿ ನಿಂತು ಮತದಾನ ಮಾಡಿದರು.

ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ 42ರಿಂದ 43 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗುತ್ತಿದೆ. ಜೊತೆಗೆ ದಿನವಿಡೀ ಉಷ್ಣ ಅಲೆಗಳು ಬೀಸುತ್ತಿವೆ. ಮಂಗಳವಾರವೂ ಇದೇ ಪರಿಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇದನ್ನು ಅರಿತ ಮತದಾರರು ಎಳೆ ಬಿಸಿಲಿನಲ್ಲಿ ಮತಗಟ್ಟೆಗಳತ್ತ ಹೆಜ್ಜೆ ಹಾಕಿದರು. ಬೆಳಿಗ್ಗೆ ಏಳರಿಂದ 9ರ ವರೆಗೆ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಸಾಲು ಬೆಳೆಯುತ್ತಲೇ ಹೋಯಿತು. ಭದ್ರತಾ ಸಿಬ್ಬಂದಿ, ವಯಸ್ಸಾದವರು, ಗರ್ಭಿಣಿಯರು, ಬಾಣಂತಿಯರು, ಹಸುಗೂಸುಗಳೊಂದಿಗೆ ಬಂದವರು, ಅನಾರೋಗ್ಯದಿಂದ ಬಳಲುತ್ತಿರುವವರು, ಅಂಗವಿಕಲರಿಗೆ ನೇರ ಮತಗಟ್ಟೆಗಳಿಗೆ ಕಳಿಸಿ ಮತದಾನಕ್ಕೆ ವ್ಯವಸ್ಥೆ ಮಾಡಿದರು. ಬೆಳಿಗ್ಗೆ 9ಕ್ಕೆ ಶೇ 10ರಷ್ಟು ಮತದಾನ ಪೂರ್ಣಗೊಂಡಿತು.

ಬೆಳಿಗ್ಗೆ 11 ಗಂಟೆಯ ವರೆಗೆ ಮತಗಟ್ಟೆಗಳ ಮುಂದೆ ಜನರ ಸಾಲು ಇತ್ತು. ಬಿಸಿಲೇರುತ್ತಿದ್ದಂತೆ ಜನರ ಸಂಖ್ಯೆ ತಗ್ಗುತ ಹೋಯಿತು. ಮಧ್ಯಾಹ್ನ 12 ಗಂಟೆಯ ನಂತರ ಬಹುತೇಕ ಮತಗಟ್ಟೆಗಳಲ್ಲಿ ಬೆರಳೆಣಿಕೆಯ ಜನ ಕಂಡು ಬಂದರು. ಮಧ್ಯಾಹ್ನ 2ಗಂಟೆಗೆ ಅನೇಕ ಮತಗಟ್ಟೆಗಳಲ್ಲಿ ಜನರೇ ಇರಲಿಲ್ಲ. ಮತಗಟ್ಟೆ ಸಿಬ್ಬಂದಿ ಇದೇ ಸಂದರ್ಭ ಬಳಸಿಕೊಂಡು ಮಧ್ಯಾಹ್ನದ ಊಟ ಮುಗಿಸಿದರು. ಪ್ರಮುಖ ರಸ್ತೆಗಳೆಲ್ಲ ಬಿಕೋ ಎನ್ನುತ್ತಿದ್ದವು. ಅಘೋಷಿತ ಬಂದ್‌ ವಾತಾವರಣ ಕಂಡು ಬಂತು. ಇಷ್ಟೊತ್ತಿಗೆ ಶೇ 25ರಿಂದ 30ರಷ್ಟು ಮತದಾನ ದಾಖಲಾಗಿತ್ತು.

ಜಿಲ್ಲೆಯ ಔರಾದ್‌ ತಾಲ್ಲೂಕಿನ ಕೌಠಾ (ಬಿ), ಬೀದರ್‌ ತಾಲ್ಲೂಕಿನ ಜನವಾಡ, ಅಲಿಯಂಬರ್‌ ಮತಗಟ್ಟೆಗಳ ಎದುರು ಬೆರಳೆಣಿಕೆ ಮತದಾರರು ಕಂಡು ಬಂದರೆ, ಭಾಲ್ಕಿ ತಾಲ್ಲೂಕಿನ ನಿಟ್ಟೂರ ಗ್ರಾಮದ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 51ರಿಂದ 54ರಲ್ಲಿ ಮತದಾರರೇ ಇರಲಿಲ್ಲ. ಬೀದರ್‌ ನಗರ, ಬೀದರ್‌ ದಕ್ಷಿಣ, ಹುಮನಾಬಾದ್‌, ಬಸವಕಲ್ಯಾಣ, ಚಿಟಗುಪ್ಪದಲ್ಲೂ ಇದೇ ಪರಿಸ್ಥಿತಿ ಇತ್ತು. ಸಂಜೆ 5ರ ವರೆಗೆ ಇದೇ ವಾತಾವರಣ ಇತ್ತು. ಈ ವೇಳೆಗೆ ಮತದಾನದ ಪ್ರಮಾಣದ ಶೇ 60ರ ಗಡಿ ದಾಟಿತ್ತು. ಆದರೆ, ಮತದಾನಕ್ಕೆ ಇನ್ನೊಂದೇ ಗಂಟೆ ಬಾಕಿ ಇರುವಾಗ ಕೆಲವು ಮತಗಟ್ಟೆಗಳತ್ತ ಜನ ದೌಡಾಯಿಸಿ ಕೊನೆಯ ಕ್ಷಣದಲ್ಲಿ ಹಕ್ಕು ಚಲಾಯಿಸಿದರು. ಕ್ಷೇತ್ರದ 106 ಮತಗಟ್ಟೆಗಳಲ್ಲಿ ಸಂಜೆ 6ರ ನಂತರವೂ ಮತದಾರರು ಸಾಲಿನಲ್ಲಿ ನಿಂತಿದ್ದರು. ಅವರೆಲ್ಲರಿಗೂ ಹಕ್ಕು ಚಲಾವಣೆಗೆ ಅವಕಾಶ ನೀಡಲಾಯಿತು. ರಾತ್ರಿ 7ರ ವರೆಗೂ ಮತದಾನ ಮುಂದುವರೆದಿತ್ತು. ಆರು ಗಂಟೆಯ ನಂತರ ಬಂದವರಿಗೆ ಮತದಾನಕ್ಕೆ ಭದ್ರತಾ ಸಿಬ್ಬಂದಿ ಅವಕಾಶ ಕಲ್ಪಿಸಲಿಲ್ಲ. ಇದರಿಂದ ಕೆಲವರು ನಿರಾಶರಾಗಿ ಹಿಂತಿರುಗಿದರು.

ರಾತ್ರಿ ವಿವಿಧ ಮತಗಟ್ಟೆಗಳಿಂದ ಚುನಾವಣಾ ಸಿಬ್ಬಂದಿ ನಗರದ ಬಿ.ವಿ.ಬಿ ಕಾಲೇಜಿನ ಸ್ಟ್ರಾಂಗ್‌ ರೂಮ್‌ಗೆ ತಂದು ಇವಿಎಂ, ವಿವಿಪ್ಯಾಟ್‌ ಹಾಗೂ ಅಗತ್ಯ ದಾಖಲೆಗಳನ್ನು ಒಪ್ಪಿಸಿ ಮನೆಗಳಿಗೆ ಹಿಂತಿರುಗಿದರು. ಏನೋ ಸಾಧಿಸಿದ ಸಾರ್ಥಕತೆ ಅವರಲ್ಲಿ ಕಂಡು ಬಂತು.

ಜೆಡಿಎಸ್‌ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಅವರು ಬೀದರ್‌ನ ಎಲ್‌ಐಜಿ ಕಾಲೊನಿಯ 132ನೇ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು
ಜೆಡಿಎಸ್‌ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಅವರು ಬೀದರ್‌ನ ಎಲ್‌ಐಜಿ ಕಾಲೊನಿಯ 132ನೇ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು
ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್‌ ಮಲ್ಕಾಪೂರೆ ಅವರು ಬೀದರ್‌ನ ತಾಯಿ ಮಗು ವೃತ್ತ ಸಮೀಪದ ನ್ಯಾಷನಲ್‌ ಕಾಲೇಜಿನ ಮತಗಟ್ಟೆಗೆ ಕುಟುಂಬ ಸದಸ್ಯರೊಂದಿಗೆ ತೆರಳಿ ಮತ ಹಾಕಿದರು
ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್‌ ಮಲ್ಕಾಪೂರೆ ಅವರು ಬೀದರ್‌ನ ತಾಯಿ ಮಗು ವೃತ್ತ ಸಮೀಪದ ನ್ಯಾಷನಲ್‌ ಕಾಲೇಜಿನ ಮತಗಟ್ಟೆಗೆ ಕುಟುಂಬ ಸದಸ್ಯರೊಂದಿಗೆ ತೆರಳಿ ಮತ ಹಾಕಿದರು
ಬೀದರ್‌ ತಾಲ್ಲೂಕಿನ ಮರಕಲ್‌ ಗ್ರಾಮದ ಮತಗಟ್ಟೆ ಸಂಖ್ಯೆ 35ರಲ್ಲಿ ನೀಲಾಂಬಿಕಾ 37ರಲ್ಲಿ ಅರ್ಚನಾ ಶಿವರಾಜ ಭೂತ ಅವರು ಹಕ್ಕು ಚಲಾಯಿಸಿ ಸಂಭ್ರಮಿಸಿದರು
ಬೀದರ್‌ ತಾಲ್ಲೂಕಿನ ಮರಕಲ್‌ ಗ್ರಾಮದ ಮತಗಟ್ಟೆ ಸಂಖ್ಯೆ 35ರಲ್ಲಿ ನೀಲಾಂಬಿಕಾ 37ರಲ್ಲಿ ಅರ್ಚನಾ ಶಿವರಾಜ ಭೂತ ಅವರು ಹಕ್ಕು ಚಲಾಯಿಸಿ ಸಂಭ್ರಮಿಸಿದರು
ಬೀದರ್‌ ತಾಲ್ಲೂಕಿನ ಅಲಿಯಂಬರ್‌ ಗ್ರಾಮದ ಮತಗಟ್ಟೆ ಸಂಖ್ಯೆ 19ರಲ್ಲಿ ಮೊದಲ ಸಲ ಮತ ಹಾಕಿದ ವೈಭವ್‌
ಬೀದರ್‌ ತಾಲ್ಲೂಕಿನ ಅಲಿಯಂಬರ್‌ ಗ್ರಾಮದ ಮತಗಟ್ಟೆ ಸಂಖ್ಯೆ 19ರಲ್ಲಿ ಮೊದಲ ಸಲ ಮತ ಹಾಕಿದ ವೈಭವ್‌
ಪೌರಾಡಳಿತ ಸಚಿವ ರಹೀಂ ಖಾನ್‌ ಅವರು ಬೀದರ್‌ನ ನ್ಯಾಷನಲ್‌ ಶಾಲೆಯ 151ನೇ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು
ಪೌರಾಡಳಿತ ಸಚಿವ ರಹೀಂ ಖಾನ್‌ ಅವರು ಬೀದರ್‌ನ ನ್ಯಾಷನಲ್‌ ಶಾಲೆಯ 151ನೇ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು
ಬೀದರ್‌ನ ನೌಬಾದ್‌ ಸರ್ಕಾರಿ ಡಯಟ್‌ ಕಾಲೇಜಿನ 147ನೇ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ ಆನಂದ ನಗರದ ನಿವಾಸಿ ಲಕ್ಷ್ಮಿ ಅಪ್ಪಾರಾವ್ ಸೌದಿ 
ಬೀದರ್‌ನ ನೌಬಾದ್‌ ಸರ್ಕಾರಿ ಡಯಟ್‌ ಕಾಲೇಜಿನ 147ನೇ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ ಆನಂದ ನಗರದ ನಿವಾಸಿ ಲಕ್ಷ್ಮಿ ಅಪ್ಪಾರಾವ್ ಸೌದಿ 
ಭಾಲ್ಕಿ ತಾಲ್ಲೂಕಿನ ನಿಟ್ಟೂರಿನ ಮತಗಟ್ಟೆ ಸಂಖ್ಯೆ 51ರಲ್ಲಿ ಮಂಗಳವಾರ ಮಧ್ಯಾಹ್ನ 2ಗಂಟೆಗೆ ಮತದಾರರೇ ಇಲ್ಲದೆ ಬಿಕೋ ಎನ್ನುತ್ತಿತ್ತು
ಭಾಲ್ಕಿ ತಾಲ್ಲೂಕಿನ ನಿಟ್ಟೂರಿನ ಮತಗಟ್ಟೆ ಸಂಖ್ಯೆ 51ರಲ್ಲಿ ಮಂಗಳವಾರ ಮಧ್ಯಾಹ್ನ 2ಗಂಟೆಗೆ ಮತದಾರರೇ ಇಲ್ಲದೆ ಬಿಕೋ ಎನ್ನುತ್ತಿತ್ತು
ಮತ ಚಲಾವಣೆಗೆ ಸರತಿ ಸಾಲಲ್ಲಿ ನಿಂತಿರುವ ಮತದಾರರು
ಮತ ಚಲಾವಣೆಗೆ ಸರತಿ ಸಾಲಲ್ಲಿ ನಿಂತಿರುವ ಮತದಾರರು
ಬೀದರ್‌ನ ಮನಿಯಾರ್‌ ತಾಲೀಮ್ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಹಕ್ಕು ಚಲಾವಣೆಗೆ ಸರತಿ ಸಾಲಿನಲ್ಲಿ ನಿಂತಿರುವ ಮಹಿಳೆಯರು
ಬೀದರ್‌ನ ಮನಿಯಾರ್‌ ತಾಲೀಮ್ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಹಕ್ಕು ಚಲಾವಣೆಗೆ ಸರತಿ ಸಾಲಿನಲ್ಲಿ ನಿಂತಿರುವ ಮಹಿಳೆಯರು
ಬೀದರ್‌ನ ಮನಿಯಾರ್‌ ತಾಲೀಮ್‌ನ ಮತಗಟ್ಟೆ ಸಂಖ್ಯೆ 105ರಲ್ಲಿ ಶತಾಯುಷಿ ಇಕ್ಬಾಲ್‌ ಬೇಗಂ ಅವರು ಹಕ್ಕು ಚಲಾಯಿಸಿ ಹೊರಬಂದರು
ಬೀದರ್‌ನ ಮನಿಯಾರ್‌ ತಾಲೀಮ್‌ನ ಮತಗಟ್ಟೆ ಸಂಖ್ಯೆ 105ರಲ್ಲಿ ಶತಾಯುಷಿ ಇಕ್ಬಾಲ್‌ ಬೇಗಂ ಅವರು ಹಕ್ಕು ಚಲಾಯಿಸಿ ಹೊರಬಂದರು
ಜಿಲ್ಲಾ ಚುನಾವಣಾಧಿಕಾರಿ ಗೋವಿಂದ ರೆಡ್ಡಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಅವರು ಬೀದರ್‌ನ ಸಖಿ ಮತಗಟ್ಟೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು
ಜಿಲ್ಲಾ ಚುನಾವಣಾಧಿಕಾರಿ ಗೋವಿಂದ ರೆಡ್ಡಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಅವರು ಬೀದರ್‌ನ ಸಖಿ ಮತಗಟ್ಟೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು

ರಾಜಕೀಯ ಪಕ್ಷಗಳ ಮುಖಂಡರಿಂದ ಮತದಾನ: ಬೀದರ್‌ ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತಗಟ್ಟೆಗಳಿಗೆ ತೆರಳಿ ಹಕ್ಕು ಚಲಾಯಿಸಿದರು. ಪೌರಾಡಳಿತ ಸಚಿವ ರಹೀಂ ಖಾನ್‌ ಅವರು ನಗರದ ನ್ಯಾಷನಲ್‌ ಶಾಲೆಯ 151ನೇ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. ವಿಧಾನ ಪರಿಷತ್‌ ಸದಸ್ಯ ಅರವಿಂದ ಅರಳಿ ಅವರು ನಗರದ ಕೆೆಎಚ್‌ಬಿ ಕಾಲೊನಿಯ 132ನೇ ಮತಗಟ್ಟೆಗೆ ಕುಟುಂಬ ಸದಸ್ಯರೊಂದಿಗೆ ತೆರಳಿ ಹಕ್ಕು ಚಲಾವಣೆ ಮಾಡಿದರು. ಇನ್ನೊಬ್ಬ ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್‌ ಮಲ್ಕಾಪೂರೆ ಅವರು ನಗರದ ತಾಯಿ ಮಗು ವೃತ್ತ ಸಮೀಪದ ನ್ಯಾಷನಲ್‌ ಕಾಲೇಜಿನ ಮತಗಟ್ಟೆಗೆ ಕುಟುಂಬ ಸದಸ್ಯರೊಂದಿಗೆ ತೆರಳಿ ಮತ ಹಾಕಿದರು. ಮಾಜಿಸಚಿವರೂ ಆದ ಜೆಡಿಎಸ್‌ ಮುಖಂಡ ಬಂಡೆಪ್ಪ ಕಾಶೆಂಪುರ್‌ ಅವರು ನಗರದ ಮನಿಯಾರ್‌ ತಾಲೀಮ್‌ನ 106ನೇ ಮತಗಟ್ಟೆಯಲ್ಲಿ ಮನೆಯವರೊಂದಿಗೆ ತೆರಳಿ ಮತ ಹಾಕಿದರು. ಇನ್ನು ಇಲ್ಲಿನ ಗಣೇಶ ನಗರದ ಮತಗಟ್ಟೆ ಸಂಖ್ಯೆ 212ರಲ್ಲಿ ಬೀದರ್‌ ದಕ್ಷಿಣ ಕ್ಷೇತ್ರದ ಮಾಜಿಶಾಸಕ ಅಶೋಕ ಖೇಣಿ ಮತದಾನ ಮಾಡಿದರು. ಜೆಡಿಎಸ್‌ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಅವರು ಎಲ್‌ಐಜಿ ಕಾಲೊನಿಯ 132ನೇ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.

ಮೊದಲ ಸಲ ಮತದಾನದ ಪುಳಕ: ಬೀದರ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 36533 ಯುವ ಮತದಾರರಿದ್ದು ಈ ಪೈಕಿ ಬಹುತೇಕರು ಮೊದಲ ಸಲ ಹಕ್ಕು ಚಲಾಯಿಸಿ ಪುಳಕಿತರಾದರು. ಮೊದಲ ಬಾರಿಗೆ ಮತಗಟ್ಟೆ ಕೇಂದ್ರದೊಳಗೆ ತೆರಳಿ ಬೆರಳಿಗೆ ಶಾಹಿ ಹಾಕಿಸಿಕೊಂಡು ಎಲೆಕ್ಟ್ರಾನಿಕ್‌ ಮತಯಂತ್ರದ ಮೂಲಕ ಹಕ್ಕು ಚಲಾಯಿಸಿ ಹೊಸ ಅನುಭವಕ್ಕೆ ಸಾಕ್ಷಿಯಾದರು. ‘ಪ್ರಥಮ ಬಾರಿಗೆ ಮತದಾನ ನನ್ನಲ್ಲಿ ಉತ್ಸಾಹ ಇಮ್ಮಡಿಸಿದೆ. ಇಷ್ಟೇ ಅಲ್ಲ ನಾವೂ ಜವಾಬ್ದಾರರು ಎಂಬ ಜಾಗೃತಿ ಮೂಡಿಸಿದೆ. ದೇಶದ ಪ್ರಜಾಪ್ರಭುತ್ವದಲ್ಲಿ ನಮ್ಮದೂ ಒಂದು ಮತ ಇರುತ್ತೆ ಎಂಬ ಸಂತಸಕ್ಕೆ ಪಾರವೇ ಇಲ್ಲ. ನಮ್ಮ ಮನೆಯ ಹಿರಿಯರೊಂದಿಗೆ ನಾನೂ ಜವಾಬ್ದಾರಿ ನಿಭಾಯಿಸುತ್ತಿದ್ದೇನೆ. ನಮಗೂ ಹಕ್ಕು ಸಿಕ್ಕಿದೆ ಎಂಬುವುದೇ ಹೆಮ್ಮೆ’ ಎಂದು ಇಲ್ಲಿನ ನೌಬಾದ್‌ ಸರ್ಕಾರಿ ಡಯಟ್‌ ಕಾಲೇಜಿನ 147ನೇ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ ಆನಂದ ನಗರದ ನಿವಾಸಿ ಲಕ್ಷ್ಮಿ ಅಪ್ಪಾರಾವ್ ಸೌದಿ ಹೇಳಿದರು. ತಾಲ್ಲೂಕಿನ ಅಲಿಯಂಬರ್‌ ಗ್ರಾಮದ ಮತಗಟ್ಟೆ ಸಂಖ್ಯೆ 19ರಲ್ಲಿ ಮೊದಲ ಸಲ ಮತ ಹಾಕಿದ ವೈಭವ್‌ ಕೂಡ ಇದೇ ರೀತಿಯ ಅಭಿಪ್ರಾಯ ಹೇಳಿದರು. ‘ಈಗ ನನಗೆ 19 ವರ್ಷ ವಯಸ್ಸು. ಆ ಸಲ ಮೊದಲ ಬಾರಿಗೆ ಮತ ಹಾಕಿದ್ದೇನೆ. ಬಹಳ ಖುಷಿಯಾಗುತ್ತಿದೆ’ ಎಂದರು. ತಾಲ್ಲೂಕಿನ ಮರಕಲ್‌ ಗ್ರಾಮದ ಮತಗಟ್ಟೆ ಸಂಖ್ಯೆ 35ರಲ್ಲಿ ನೀಲಾಂಬಿಕಾ 37ರಲ್ಲಿ ಅರ್ಚನಾ ಶಿವರಾಜ ಭೂತ ಅವರು ಹಕ್ಕು ಚಲಾಯಿಸಿ ಸಂಭ್ರಮಿಸಿದರು. ಹೀಗೆ ಹಲವು ಮತಗಟ್ಟೆಗಳಲ್ಲಿ ಯುವ ಮತದಾರರು ಅವರ ಹಕ್ಕು ಚಲಾಯಿಸಿದರು.

ಬೀದರ್‌ ಲೋಕಸಭೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರವಾರು ಮತದಾನದ ವಿವರ ಕ್ಷೇತ್ರದ ಹೆಸರು; ಮತದಾನದ ಪ್ರಮಾಣ (ಶೇಕಡಾವಾರು) ಬೀದರ್‌; 00 ಬೀದರ್‌ ದಕ್ಷಿಣ; 00 ಬಸವಕಲ್ಯಾಣ; 00 ಭಾಲ್ಕಿ; 00 ಹುಮನಾಬಾದ್‌; 00 ಔರಾದ್‌; 00 ಆಳಂದ; 00 ಚಿಂಚೋಳಿ; 00 ಒಟ್ಟು; 65

ಶತಾಯುಷಿಗಳಿಂದ ಮತದಾನ: ಬೀದರ್‌ ಲೋಕಸಭಾ ಕ್ಷೇತ್ರದ ಹಲವೆಡೆ ಶತಾಯುಷಿಗಳು ಉತ್ಸಾಹದಿಂದ ಹಕ್ಕು ಚಲಾಯಿಸಿದ್ದು ವಿಶೇಷವಾಗಿತ್ತು. ಕುಟುಂಬ ಸದಸ್ಯರ ನೆರವಿನೊಂದಿಗೆ ವೀಲ್‌ ಚೇರ್‌ನಲ್ಲಿ ಬಂದು ಮತದಾನ ಮಾಡಿದರು. ಬೀದರ್‌ ನಗರದ ಮನಿಯಾರ್‌ ತಾಲೀಮ್‌ನ 105ನೇ ಮತಗಟ್ಟೆಯಲ್ಲಿ ಶತಾಯುಷಿ ಇಕ್ಬಾಲ್‌ ಬೇಗಂ ಅಬ್ದುಲ್‌ ಹನ್ನಾನ್‌ ಸಾಬ್‌ ಎಂಬುವರು ಉತ್ಸಾಹದಿಂದ ಮತ ಚಲಾಯಿಸಿದರು. ಬೀದರ್‌ನ ಮೈಲೂರ್‌ ಸರ್ಕಾರಿ ಶಾಲೆಯಲ್ಲಿ 95 ವರ್ಷದ ವೆಂಕಟರಾವ್‌ ಕೂಡ ಸ್ವತಃ ಅವರು ಕಾಲ್ನಡಿಗೆಯಲ್ಲಿ ಬಂದು ಹಕ್ಕು ಚಲಾಯಿಸಿದರು. ಕ್ಷೇತ್ರದ ಹಲವೆಡೆ ಅನೇಕ ಜನ ಶತಾಯುಷಿಗಳು ಮತ ಹಾಕಿದರು.

ಶಾಮಿಯಾನ ತಂಪು ನೀರು ಫ್ಯಾನ್‌ ಕೆಂಡದಂತಹ ಬಿಸಿಲು ಇರುವುದು ಖಾತ್ರಿ ಇದ್ದದ್ದರಿಂದ ಜಿಲ್ಲಾ ಚುನಾವಣಾ ಆಯೋಗವು ಎಲ್ಲ ಮತಗಟ್ಟೆಗಳ ಎದುರು ಶಾಮಿಯಾನ ಹಾಕಿಸಿತ್ತು. ಇದರಿಂದ ಮತದಾರರು ಬಿಸಿಲಿನಲ್ಲಿ ಸರತಿಯಲ್ಲಿ ನಿಲ್ಲುವುದು ತಪ್ಪಿತು. ಇನ್ನು ಮತಗಟ್ಟೆಗಳಲ್ಲಿ ಶುದ್ಧ ತಂಪಾದ ಕುಡಿಯುವ ನೀರಿಗೂ ವ್ಯವಸ್ಥೆ ಮಾಡಲಾಗಿತ್ತು. ಮತಗಟ್ಟೆ ಸಿಬ್ಬಂದಿಗೆ ಬಿಸಿಲಿನಿಂದ ಕಷ್ಟವಾಗದಿರಲೆಂದು ಫ್ಯಾನ್‌ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರು ಬೀಡು ಬಿಟ್ಟಿದ್ದರು. ಒಆರ್‌ಎಸ್‌ ಪೊಟ್ಟಣಗಳನ್ನು ನೀಡಲಾಗಿತ್ತು. ಆಯಾ ಗ್ರಾಮ ಪಂಚಾಯಿತಿಗಳಿಗೆ ಉಪಾಹಾರ ಊಟದ ಹೊಣೆ ವಹಿಸಲಾಗಿತ್ತು. ಜನರನ್ನು ಆಕರ್ಷಿಸಲು ಬಿದ್ರಿ ಕಲೆ ಅನುಭವ ಮಂಟಪ ಸೇರಿದಂತೆ ಜಿಲ್ಲೆಯ ಪ್ರಮುಖ ಸ್ಥಳಗಳು ‘ಸಖಿ’ ಮತಗಟ್ಟೆಗಳನ್ನು ಸ್ಥಾಪಿಸಿ ಅಲಂಕರಿಸಲಾಗಿತ್ತು. ಜಿಲ್ಲಾ ಚುನಾವಣಾಧಿಕಾರಿಯೂ ಆದ ಗೋವಿಂದ ರೆಡ್ಡಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಉಪವಿಭಾಗಾಧಿಕಾರಿ ಲವೀಶ್‌ ಒರ್ಡಿಯಾ ಅವರು ದಿನವಿಡೀ ಮತಗಟ್ಟೆಗಳಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ಸೂಕ್ಷ್ಮ ಮತಗಟ್ಟೆಗಳ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದರು. ಇದರಿಂದಾಗಿ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ.

ಪಿಂಕ್‌ ಮತಗಟ್ಟೆಗಳಲ್ಲಿ ಪಿಂಕ್‌ ಡ್ರೆಸ್‌ ಸಖಿ ಅಥವಾ ಪಿಂಕ್‌ ಮತಗಟ್ಟೆ ಸಿಬ್ಬಂದಿ ಪಿಂಕ್‌ ಬಣ್ಣದ ಉಡುಪುಗಳನ್ನು ಧರಿಸಿ ಗಮನ ಸೆಳೆದರು. ಇಡೀ ಮತಗಟ್ಟೆಯನ್ನು ಪಿಂಕ್‌ ಬಲೂನ್‌ಗಳಿಂದ ಅಲಂಕರಿಸಿದ್ದು ವಿಶೇಷವಾಗಿತ್ತು. ಇದೇ ರೀತಿ ಬೀದರ್‌ನ ವಿಶೇಷ ಚೇತನರ ಮತಗಟ್ಟೆಗಳ ಸಿಬ್ಬಂದಿ ಬಿಳಿ ಬಣ್ಣದ ಟೀ ಶರ್ಟ್‌ಗಳನ್ನು ಧರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT