ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ನೇಮಕದಲ್ಲಿ ಲೋಪ; ಸಾಬೀತು

ಇಬ್ಬರು ಉಪನಿರ್ದೇಶಕರಿಂದ ಕರ್ತವ್ಯಲೋಪ
ಶಶಿಕಾಂತ ಎಸ್‌. ಶೆಂಬೆಳ್ಳಿ
Published 9 ಜುಲೈ 2024, 7:05 IST
Last Updated 9 ಜುಲೈ 2024, 7:05 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯಲ್ಲಿ 2021–2022ರ ಅವಧಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ನೇಮಕದಲ್ಲಿ ಗಂಭೀರ ಸ್ವರೂಪದ ಕರ್ತವ್ಯ ಲೋಪವಾಗಿದ್ದು, ಅಂದಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರೇ ಇದಕ್ಕೆ ಜವಾಬ್ದಾರರು ಎನ್ನುವುದು ತನಿಖೆಯಿಂದ ಗೊತ್ತಾಗಿದೆ.

2021ರಲ್ಲಿ ತಿಪ್ಪಣ್ಣ ಸಿರಸಗಿ, 2022ರಲ್ಲಿ ರವೀಂದ್ರ ರತ್ನಾಕರ್‌ ಅವರು ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕರಾಗಿದ್ದರು. ತಿಪ್ಪಣ್ಣ ಅವರ ಅವಧಿಯಲ್ಲಿ ಕರ್ತವ್ಯಲೋಪವಾದರೆ, ಆನಂತರ ಬಂದ ರವೀಂದ್ರ ರತ್ನಾಕರ್‌ ಅವರು ಈ ಕುರಿತು ಸರ್ಕಾರಕ್ಕೆ ಅನುಪಾಲನಾ ವರದಿ ಸಲ್ಲಿಸಲು ವಿಳಂಬ ಮಾಡಿ, ಅಧಿಕಾರಿಗಳನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ ಎಂದು ತನಿಖಾ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಈ ಸಂಬಂಧ ತಿಪ್ಪಣ್ಣ ಸಿರಸಗಿ ಹಾಗೂ ರವೀಂದ್ರ ರತ್ನಾಕರ್‌ ಅವರಿಗೆ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ರಶ್ಮಿ ಎಂ.ಎಸ್‌. ಅವರು ಕಾರಣ ಕೇಳಿ ನೋಟಿಸ್‌ ಕೊಟ್ಟಿದ್ದಾರೆ. ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಕ್ರಿಮಿನಲ್‌ ಹಿನ್ನೆಲೆ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರನ್ನು ಅಮಾನತುಗೊಳಿಸಲು ವಿಳಂಬ ತೋರಿಸಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಿಲ್ಲ. ಪೌಷ್ಟಿಕ ಆಹಾರಕ್ಕೆ ಸಂಬಂಧಿಸಿದಂತೆ ಅಂಗನವಾಡಿ ಕಟ್ಟಡ ಸ್ಥಳದ ಕೊರತೆ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ. ನಿಗದಿತ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ. ದಿಶಾ ಸಮಿತಿಯಲ್ಲಿ ಸದಸ್ಯ ಶಿವಯ್ಯ ಸ್ವಾಮಿ ಅವರು, ಎಂಟು ಜನರು ಸುಳ್ಳು ದಾಖಲಾತಿಗಳನ್ನು ಸಲ್ಲಿಸಿ ಆಯ್ಕೆಯಾಗಿದ್ದಾರೆ ಎಂದು ದಾಖಲೆಗಳ ಸಮೇತ ತಿಳಿಸಿದ್ದರೂ ಕ್ರಮ ಜರುಗಿಸಿಲ್ಲ. ದಿಶಾ ಸಮಿತಿ ಸಭೆಗೆ ಮಾಹಿತಿ ನೀಡಲು ಉದಾಸೀನತೆ ತೋರಿದ್ದಾರೆ. ಇದು ಗಂಭೀರ ಸ್ವರೂಪದ ಕರ್ತವ್ಯಲೋಪ ಎಂದು ತಿಪ್ಪಣ್ಣ ಸಿರಸಗಿ ವಿರುದ್ಧದ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ.

ಇನ್ನು, ರವೀಂದ್ರ ರತ್ನಾಕರ್‌ ಅವರು 2022ರ ಜೂನ್‌ 14ರಂದು ನಡೆದ ದಿಶಾ ಸಮಿತಿ ಸಭೆಗೆ ತಪ್ಪು ಮಾಹಿತಿ ನೀಡಿದ್ದಾರೆ. ಅನುಪಾಲನಾ ವರದಿ ಸಲ್ಲಿಸಲು ವಿಳಂಬ ಮಾಡಿದ್ದಾರೆ. ಜಿಲ್ಲಾಮಟ್ಟದ ಪ್ರಮುಖ ಸಭೆಗೆ ಮಾಹಿತಿ ನೀಡಲು ಉದಾಸೀನತೆ ತೋರಿ ಕರ್ತವ್ಯಲೋಪ ಎಸಗಿದ್ದಾರೆ ಎಂದು ಪ್ರಸ್ತಾಪಿಸಲಾಗಿದೆ.


ಆಗಿದ್ದೇನು?:

ತಿಪ್ಪಣ್ಣ ಸಿರಸಗಿ ಅವರ ಅವಧಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ನೇಮಕಾತಿ ನಿಯಮಬಾಹಿರವಾಗಿ ನಡೆದಿದೆ. ಅರ್ಹರಲ್ಲದವರನ್ನು, ಕ್ರಿಮಿನಲ್‌ ಹಿನ್ನೆಲೆ ಹೊಂದಿದವರನ್ನು ಆಯ್ಕೆ ಮಾಡಲಾಗಿದೆ. ಪೌಷ್ಟಿಕ ಆಹಾರ ಖರೀದಿಯಲ್ಲೂ ಅಕ್ರಮ ನಡೆದಿದೆ. ಆನಂತರ ಬಂದ ರವೀಂದ್ರ ರತ್ನಾಕರ್‌ ಅವರು ಕ್ರಮ ಕೈಗೊಳ್ಳುವುದು ಬಿಟ್ಟು ಭ್ರಷ್ಟರನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ  ಎಂದು ದಿಶಾ ಸಮಿತಿ ಸಭೆಯಲ್ಲಿ ಸದಸ್ಯ ಶಿವಯ್ಯ ಸ್ವಾಮಿ ವಿಷಯ ಪ್ರಸ್ತಾಪಿಸಿ ಕ್ರಮಕ್ಕೆ ಆಗ್ರಹಿಸಿದ್ದರು. ಪಕ್ಷಭೇದ ಮರೆತು ಜಿಲ್ಲೆಯ ಸಚಿವರು, ಸಂಸದರು, ಶಾಸಕರು ಅದರ ಪರ ಮಾತನಾಡಿದ್ದರು. ಆನಂತರ ಸಭೆಯಲ್ಲಿ ತನಿಖೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೇಂದ್ರ ಕಚೇರಿಗೆ ಪತ್ರ ಬರೆಯಲು ನಿರ್ಧರಿಸಲಾಯಿತು. ಅದರಂತೆ ಕೇಂದ್ರ ಕಚೇರಿಯಿಂದ ತನಿಖೆ ನಡೆಸಿದ್ದು, ಕರ್ತವ್ಯಲೋಪವಾಗಿರುವುದು ಬೆಳಕಿಗೆ ಬಂದಿದೆ. ಆದರೆ, ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ದಿಶಾ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಆರೋಪಿಸಿದ್ದಾರೆ. ‘ಇಬ್ಬರು ಅಧಿಕಾರಿಗಳು ಬೇರೆ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಕಾನೂನು ಕ್ರಮಕ್ಕೆ ಆಗ್ರಹ
‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಈ ಹಿಂದಿನ ಉಪನಿರ್ದೇಶಕರಾದ ತಿಪ್ಪಣ್ಣ ಸಿರಸಗಿ ಹಾಗೂ ರವೀಂದ್ರ ರತ್ನಾಕರ್‌ ಅವರು ಕರ್ತವ್ಯಲೋಪ ಎಸಗಿರುವುದು ಸಾಬೀತಾಗಿದ್ದು ಇಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ರವೀಂದ್ರ ರತ್ನಾಕರ್‌ ಅವರು ಸದ್ಯ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರ ವಿಶೇಷ ಕರ್ತವ್ಯ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದು ಯಾವ ಪ್ರಭಾವಕ್ಕೂ ಒಳಗಾಗದೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದಿಶಾ ಸಮಿತಿ ಮಾಜಿ ಸದಸ್ಯ ಶಿವಯ್ಯ ಸ್ವಾಮಿ ಆಗ್ರಹಿಸಿದ್ದಾರೆ. ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನಡೆದ ಅಕ್ರಮದ ಕುರಿತು ದಿಶಾ ಸಮಿತಿಯಲ್ಲಿ ಬಿಜೆಪಿ ಕಾಂಗ್ರೆಸ್‌ ಸೇರಿದಂತೆ ಎಲ್ಲರೂ ಪಕ್ಷಭೇದ ಮರೆತು ಇದರ ವಿರುದ್ಧ ಧ್ವನಿ ಎತ್ತಿ ತನಿಖೆಗೆ ಆಗ್ರಹಿಸಿದ್ದರು. ಈಗ ತನಿಖಾ ವರದಿ ಬಂದಿರುವುದರಿಂದ ವಿಳಂಬ ಮಾಡದೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT