ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಾಲ ಯುಗದಲ್ಲೂ ಕಳಚದ ‘ಗಾಳಿಪಟ’

‘ಪಟಗಳ ಹಬ್ಬ’ವಾಗಿ ಸಂಕ್ರಾಂತಿ ಗಾಳಿಪಟ ಖರೀದಿ ಜೋರು
Last Updated 14 ಜನವರಿ 2017, 12:08 IST
ಅಕ್ಷರ ಗಾತ್ರ
* ಹೈ.ಕ ಭಾಗದಲ್ಲಿ ಪ್ರಸಿದ್ಧಿ  * ಪರಂಪರೆ ಉಳಿವಿಗೆ ಹಿರಿಯರ ಪ್ರೋತ್ಸಾಹ
* ಚಿಣ್ಣರಿಂದ ವೃದ್ಧರೆಲ್ಲರೂ ಗಾಳಿಪಟ ಆಟದಲ್ಲಿ ಭಾಗಿ * ಸಕಲ ಸಿದ್ಧತೆ
 
**
ಹುಮನಾಬಾದ್: ದೇಶದೆಲ್ಲಡೆ ಸಂಕ್ರಾಂತಿ ಹಬ್ಬ ಎಳ್ಳು–ಬೆಲ್ಲ ಪರಸ್ಪರ ವಿನಿಮಯಕ್ಕೆ ಸೀಮಿತ. ಆದರೆ, ಬೀದರ್‌ ಜಿಲ್ಲೆ ಹುಮನಾಬಾದ್ ಪಟ್ಟಣದಲ್ಲಿ ಇದನ್ನು ‘ಗಾಳಿಪಟ ಹಬ್ಬ’ವಾಗಿ ಆಚರಿಸುವುದು ವಿಶೇಷ.
 
ಗಾಳಿಪಟವನ್ನು ವಿಶೇಷವಾಗಿ ಸಂಕ್ರಾಂತಿ ಹಬ್ಬದಲ್ಲೇ ಆಚರಿಸುವುದರ ಹಿಂದೆ ವಿಶೇಷತೆ ಇದೆ. ಸಂಕ್ರಾಂತಿ ವೇಳೆ ಉತ್ತರಾಯಣ ಸೂರ್ಯ ಪ್ರವೇಶಿಸುವ ಕಾರಣ ನೀಲಿಯಿಂದ ಕೂಡಿದ ಆಗಸ ನೋಡುವುದರಿಂದ ದೃಷ್ಟಿದೋಷ ಸುಧಾರಿಸುತ್ತದೆ. ಜೊತೆಗೆ ಉತ್ತಮ ಗಾಳಿಯೂ ಈ ಸಂದಭರ್ದಲ್ಲಿ ಇರುವ ಕಾರಣ ಈ ಅವಧಿಯಲ್ಲಿ ಪಟ ಹಾರಿಸುವುದಕ್ಕಾಗಿ ಆಯ್ಕೆ ಮಾಡಿಕೊಂಡಿರುವ ಸಾಧ್ಯತೆಗಳಿವೆ ಎಂದು ಹಿರಿಯ ನಾಗರಿಕ ಶಿವಶಂಕರ ತರನಳ್ಳಿ ಹೇಳುತ್ತಾರೆ.
 
ಪ್ರತಿ ವರ್ಷ ಜನವರಿ ತಿಂಗಳ 14, 15ರಂದು ಸಂಕ್ರಾಂತಿ ಹಬ್ಬದಂದೇ ಗಾಳಿಪಟ ಹಾರಿಸಿದರೂ ಪಟ ಹಾರಿಸಲು ಅತ್ಯವಶ್ಯವಾದ ದಾರ ಮಾಂಜಾ ಮಾಡುವುದು ಮತ್ತು ಪಟ ತಯಾರಿಸುವುದು ಒಳಗೊಂಡಂತೆ ಅಗತ್ಯ ಸಿದ್ಧತೆಗಳನ್ನು ಡಿಸೆಂಬರ್‌ ತಿಂಗಳಲ್ಲೇ ಆರಂಭಿಸುತ್ತಾರೆ. ಅಂದಹಾಗೆ ಮೂರು ದಶಕದ ಹಿಂದೆ ಇಣುಕಿದಾಗ ಗಾದಾ ಓಣಿಯ ಮಾಣಿಕಪ್ಪ ಬುನ್ನಾ 85 ವರ್ಷ ವಯಸ್ಸಿನವರೆಗೂ ಗಾಳಿಪಟ ತಯಾರಿಸುವುದನ್ನೇ ಕಾಯಕವಾಗಿಸಿಕೊಂಡಿದ್ದರು. ವಿಜಯಕುಮಾರ ಮೂಳೆ, ಮಹಾದೇವಪ್ಪ ಪೋಚಂಪಳ್ಳಿ, ಶಿವಪ್ಪ ಅಗಡಿ, ಮಹಾದೇವ ಪೂಜಾರಿ, ಚಾಂದಸಾಬ್‌ ಪ್ರತಿ ವರ್ಷ ಜೂನ್‌ ತಿಂಗಳಿಂದಲೇ ಪಟ ತಯಾರಿಸುವ ಕೆಲಸ ಆರಂಭಿಸುತ್ತಿದ್ದರು. ಸುಮಾರು ನಾಲ್ಕೈದು ದಶಕಗಳ ಕಾಲ ಪಟ ಸಿದ್ಧಪಡಿಸಿ ಮಾರಾಟ ಮಾಡುವುದನ್ನೇ ಕಾಯಕವಾಗಿಸಿಕೊಂಡಿದ್ದರು. ಇವರು ಸಿದ್ಧಪಡಿಸಿದ ಪಟಗಳು ಬೀದರ್‌ ಜಿಲ್ಲೆ ಮಾತ್ರವಲ್ಲದೆ ಪಕ್ಕದ ಈಗಿನ ತೆಲಂಗಾಣ ಹಾಗೂ ಮಹಾರಾಷ್ಟ್ರಗಡಿ ಜಿಲ್ಲೆಗಳಲ್ಲೂ ಭಾರಿ ಬೇಡಿಕೆ ಇತ್ತು. ಹಬ್ಬ ಇನ್ನೂ 6 ತಿಂಗಳು ಇರುವಾಗಲೇ ಮುಂಗಡ ಹಣ ನೀಡಿ, ಪಟ ಸಿದ್ಧಪಡಿಸಲು ಬೇಡಿಕೆ ಇಡುತ್ತಿದ್ದರು ಎಂದು ಬಾಲ್ಯದಲ್ಲಿ ಅವರ ಬಳಿ ಚೌಕಾಸಿ ಮಾಡಿ ಚಿಕ್ಕ ಪಟ ಖರೀದಿಸುತ್ತಿದ್ದ ದತ್ತಕುಮಾರ ಚಿದ್ರಿ, ಬಾಬುರಾವ ಶಂಕರಶೆಟ್ಟಿ, ನಾಗರಾಜ ರಘೋಜಿ, ಲಕ್ಷ್ಮಣರಾವ ಹಣಕುಣಿ ಹಳೆ ಸ್ಮರಿಸುತ್ತಾರೆ.
 
ಹಬ್ಬಕ್ಕೂ ಒಂದುದಿನ ಮುನ್ನ ನಗರದ ಬಹುತೇಕ ಮನೆಗಳ ಛಾವಣಿ ಮೇಲೆ ಶಾಮಿಯಾನ ಹಾಕಲಾಗುತ್ತದೆ. ಜ.14ಕ್ಕೆ ಪಟ ಹಾರಿಸುವ ವೇಳೆ 20–25ಜನರ ಯುವಕರು ಗುಂಪು ಕಟ್ಟಿಕೊಂಡು ತಮ್ಮಟೆ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾರೆ. ಇದು ಹಿಂದೂಗಳ ಹಬ್ಬವಾದರೂ ಕೂಡ ಜಾತಿಭೇದ ಎಣಿಸದರೇ ಹಿಂದೂ–ಮುಸ್ಲಿಮರಿಬ್ಬರೂ ಒಗ್ಗೂಡಿ ಹಬ್ಬ ಆಚರಿಸುವುದರಿಂದ ಪರಸ್ಪರರ ಮಧ್ಯೆ ಭಾವೈಕ್ಯತೆ ಬೆಸೆಯುತ್ತದೆ.
 
ಪೇಂಚ್‌ ಹಾಕುವುದು:  ಆಟದ ವೇಳೆ ಒಂದು ಪಟ ಇನ್ನೊಂದು ಪಟಕ್ಕೆ ಪೇಂಚ್‌ ಹಾಕುವುದನ್ನು ಸ್ಥಳೀಯವಾಗಿ ಢೀಲ್‌ ಎಂದು ಕರೆಯುತ್ತಾರೆ. ಪೇಂಚ್‌ ಬೀಳುತ್ತಿದ್ದಂತೆ ಎರಡೂ ಗುಂಪಿನವರು ಜೋರಾಗಿ ಚಡಾ ಢೀಲ್, ಚಡಾ ಢೀಲ್‌ ಎನ್ನತ್ತಲೇ ಯಾವುದಾರೊಂದು ಪಟ ಕಡಿತಗೊಂಡ ತಕ್ಷಣ ಪತಂಗ್‌ ಕಾಟಗೇ.....ಎಂದು ಕೂಗುತ್ತಾರೆ. ಈ ಹಬ್ಬದಲ್ಲಿ ಚಿಣ್ಣರಿಂದ ವೃದ್ಧರೂ ಭಾಗಿ ಆಗುವುದು ಗಾಳಿಪಟ ಹಬ್ಬದ ವಿಶೇಷ.
 
**
‘ಶತಮಾನದ ಇತಿಹಾಸ’ 
ಹುಮನಾಬಾದ್ ಗಾಳಿಪಟ ಆಟಕ್ಕೆ ಶತಮಾನದ ಇತಿಹಾಸವಿದೆ. ಹೋಳಿ ಇತರೆ ಹಬ್ಬಕ್ಕಿಂತ ಸಂಕ್ರಾಂತಿಗೆ ವಿಶೇಷ ಮಾನ್ಯತೆ. ಅದಕ್ಕಾಗಿ ದೇಶದ ಯಾವ ಮೂಲೆಯಲ್ಲಿದ್ದರೂ ಗಾಳಿಪಟ ಹಾರಿಸಲು ತಪ್ಪದೆ ಬರುತ್ತೇನೆ.
-ರಾಜಶೇಖರ ಬಿ.ಪಾಟೀಲ, ಭೂಸೇನಾ ನಿಗಮ ಅಧ್ಯಕ್ಷ
 
**
ಆಧುನಿಕ ಪಟ
ಹಾರಿಸುವ ಪಟಗಳಿಗೆ ಕಣ್ಣೇದಾರ್‌, ಟೋಪೇದಾರ್‌, ಚೌಕೇದಾರ್‌ ಇತ್ಯಾದಿ ಹೆಸರಿನಿಂದ ಕರೆಯತ್ತಿದ್ದರು. ಈಗ ಬಣ್ಣದ ಹಾಳೆ ಬದಲಿ ಪ್ಲಾಸ್ಟಿಕ್‌ನಿಂದ ಸಿದ್ಧಪಡಿಸಿದ ಪಟಗಳು ಮಾರುಕಟ್ಟೆ ಪ್ರವೇಶಿಸಿವೆ. ಮಾಂಜಾ ದಾರ ಬದಲಿಗೆ ಸಿದ್ಧ ದಾರ ಬರುತ್ತಿದೆ. ಹೀಗಾಗಿ ಇದೀಗ ಗಾಳಿಪಟ ಸಿದ್ಧಪಡಿಸುವ, ದಾರ ಮಾಂಜಾ ಮಾಡುವ ವ್ಯಕ್ತಿಗಳ ಕೊರತೆ ಇದ್ದರೂ ಇರುವ ಪಟಗಳನ್ನೇ ಅತ್ಯಂತ ಹರ್ಷೋಲ್ಲಾಸದಿಂದ ಗಾಳಿಪಟ ಹಾರಿಸಿ, ಸಂಭ್ರಮಿಸುವುದು ಇಲ್ಲಿನ ವಿಶೇಷ.
 
**
–ಶಶಿಕಾಂತ ಭಗೋಜಿ

 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT