ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿಗಳ ಆಶ್ರಯ ತಾಣ ಆರೋಗ್ಯ ಉಪ ಕೇಂದ್ರ!

Last Updated 26 ಜೂನ್ 2014, 6:34 IST
ಅಕ್ಷರ ಗಾತ್ರ

ಕಮಲನಗರ: ‘ಸರ್ಕಾರ ಗ್ರಾಮೀಣ ಪ್ರದೇಶದಲ್ಲಿರುವ ಜನತೆಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹಣವನ್ನು ಹೊಳೆಯಂತೆ ಹರಿಸುತ್ತಿದೆ.

ಆದರೆ, ಕಮಲನಗರದಿಂದ 5 ಕಿಲೋ ಮೀಟರ್‌ ಅಂತರದಲ್ಲಿರುವ ಮದನೂರ್‌ ಗ್ರಾಮದ ಪ್ರಾಥಮಿಕ ಆರೋಗ್ಯ ಉಪಕೇಂದ್ರಕ್ಕೆ ಒಂದು ಸಲ ಭೇಟಿ ನೀಡಿದರೆ ಆರೋಗ್ಯ ಇಲಾಖೆ ಗ್ರಾಮೀಣ ಜನರಿಗೆ ಆರೋಗ್ಯ ಸೇವೆ ಒದಗಿಸಲು ವಹಿಸಿರುವ ದಿವ್ಯ ನಿರ್ಲಕ್ಷ್ಯ ಕಂಡುಬರುತ್ತದೆ.
ಇಲ್ಲಿನ ಆರೋಗ್ಯ ಉಪಕೇಂದ್ರಕ್ಕೆ ಸೂಕ್ತ ಮೇಲುಸ್ತುವಾರಿ ಇಲ್ಲದ ಕಾರಣ ಇಲ್ಲಿನ ಕಟ್ಟಡ ಕುರಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ಆಸ್ಪತ್ರೆಗೆ ಆರೋಗ್ಯ ಸಿಬ್ಬಂದಿ ಬಾರದ ಕಾರಣ ಚಿಕಿತ್ಸೆ ಪಡೆಯಲು ರೋಗಿಗಳು ಪರದಾಡ­ಬೇಕಾಗಿದೆ ಎಂಬುದು ಗ್ರಾಮಸ್ಥರ ದೂರು.
‘ಮದನೂರ್‌ ಗ್ರಾಮದಲ್ಲಿರುವ ಆರೋಗ್ಯ ಉಪಕೇಂದ್ರಕ್ಕೆ ಖತಗಾಂವ್‌, ಹಕ್ಯಾಳ್‌ ಗ್ರಾಮಗಳು ಒಳಪಡುತ್ತವೆ. ಈ ಉಪಕೇಂದ್ರದಲ್ಲಿ ಸೇವೆ ಸಲ್ಲಿಸುವ ಆರೋಗ್ಯ ಸಹಾಯಕಿಯರು ಅನಧಿಕೃತವಾಗಿ ಗೈರು ಹಾಜರಾಗುತ್ತಾರೆ. ಹೀಗಾಗಿ ಜನತೆಗೆ ಆರೋಗ್ಯ ಸೇವೆ ಮರೀಚಿಕೆಯಾಗಿದೆ’ ಎಂದು ಮಹೇಶ ಪಾಟೀಲ ಆಪಾದಿಸಿದ್ದಾರೆ.

ಸುಮಾರು ನಾಲ್ಕು ದಶಕಗಳ ಹಿಂದೆ ನಿರ್ಮಾಣವಾದ ಆಸ್ಪತ್ರೆಯಲ್ಲಿ ಒಂದು ಕಿರಿಯ ಆರೋಗ್ಯ ಸಹಾಯಕಿಯರ ವಸತಿ ನಿಲಯವಿದೆ. ಆದರೆ ಇಲ್ಲಿ ಯಾರು ಇರುವುದಿಲ್ಲ. ಹೀಗಾಗಿ ಇಲ್ಲಿನ ಆಸ್ಪತ್ರೆ ಕಟ್ಟಡ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಕಿಟಕಿ, ಬಾಗಿಲುಗಳಿಲ್ಲದೇ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಆಸ್ಪತ್ರೆ ಸುತ್ತುಗೋಡೆಗೆ ಅಳವಡಿಸಿದ್ದ ಗೇಟ್‌ ಕಳ್ಳತನವಾಗಿದೆ. ಆಸ್ಪತ್ರೆ ಒಳಗಡೆ ಯಾರು ಬೇಕಾದರೂ ಬಂದು ಏನು ಬೇಕಾದರೂ ಮಾಡಬಹುದು. ಯಾರು ಹೇಳುವವರಿಲ್ಲ, ಕೇಳುವವರಿಲ್ಲ ಎಂಬ ಪರಿಸ್ಥಿತಿ ಇಲ್ಲಿದೆ.

ಇಲ್ಲಿನ ಜನತೆಗೆ ಆರೋಗ್ಯ ಸೇವೆಗಾಗಿ ಕಮಲನಗರದ ಸಮುದಾಯ ಆರೋಗ್ಯ ಕೇಂದ್ರವೇ ಗತಿ ಎಂಬಂತಾಗಿದೆ. ಪ್ರತಿಯೊಂದು ಕಾಯಿಲೆಗೂ 5 ಕಿ.ಮೀ. ದೂರದಲ್ಲಿರುವ ಕಮಲನಗರ ಆಸ್ಪತ್ರೆಗೆ ಹೋಗಬೇಕು. ತುರ್ತು ಸಂದರ್ಭಗಳಲ್ಲಿ ಇಷ್ಟು ದೂರದ ಪ್ರಯಾಣ ರೋಗಿಗಳಿಗೆ ತೊಂದರೆಯಾಗುತ್ತದೆ ಎಂದು ಮುಖಂಡ ರವಿ ಬಿರಾದಾರ್‌ ತಿಳಿಸಿದ್ದಾರೆ. ಸಂಬಂಧಪಟ್ಟವರು ಶೀಘ್ರವೇ ಆರೋಗ್ಯ ಉಪಕೇಂದ್ರಕ್ಕೆ ಕಾಯಕಲ್ಪ ಒದಗಿಸಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT