ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ವಂಚಿತ ಕಮಲನಗರ ರೈಲು ನಿಲ್ದಾಣ

Last Updated 28 ಮಾರ್ಚ್ 2014, 10:12 IST
ಅಕ್ಷರ ಗಾತ್ರ

ಕಮಲನಗರ: ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಆದಾಯ ಸಂಗ್ರಹಿಸುವ ಹಾಗೂ ಸಾವಿರಾರು ಜನರು ಪ್ರಯಾಣಿಸುವ  ಕಮಲನಗರ ರೈಲ್ವೆ ನಿಲ್ದಾಣದಲ್ಲಿ ಮೂಲ ಸೌಲಭ್ಯಗಳೇ ಇಲ್ಲ.

ಹೈದರಾಬಾದ್‌, ಮಹಾರಾಷ್ಟ್ರದ ನಾಂದೇಡ್‌ ಮುಂತಾದ ಪ್ರಮುಖ ಪಟ್ಟಣಗಳ ಜನತೆ ರೈಲಿನಲ್ಲಿ ಪ್ರಯಾಣಿಸಬೇಕೆಂದರೆ ಈ ನಿಲ್ದಾಣವೇ ರಹದಾರಿ.ಅಂತರರಾಜ್ಯ ಸಂಪರ್ಕ ಸೇತುವೆಯಾಗಿರುವ ಈ ನಿಲ್ದಾಣವೂ ಅನೇಕ ಮೂಲಸೌಲಭ್ಯಗಳ ಕೊರತೆ ಎದುರಿಸುತ್ತಿದೆ.

ಇಲ್ಲದ ಮೇಲ್ಸೇತುವೆ: ಕಮಲನಗರ ರೈಲ್ವೆ ನಿಲ್ದಾಣದಲ್ಲಿ ಎರಡು ಹಳಿ ಮಾರ್ಗಗಳಿದ್ದು, ಎರಡು ಪ್ಲಾಟ್‌­ಫಾರ್ಮ್‌ಗಳಿವೆ. 1ನೇ ಪ್ಲಾಟ್‌­ಫಾರ್ಮ್‌ನಿಂದ 2ನೇ ಪ್ಲಾಟ್‌ಫಾರ್ಮ್‌ಗೆ ಹೋಗಲು ಮೇಲ್ಸೇತುವೆ ಇಲ್ಲದ ಕಾರಣ ಹಳಿ ದಾಟಿಯೇ ಹೋಗಬೇಕಾದ ಅನಿವಾರ್ಯತೆ ಪ್ರಯಾಣಿಕರದು.

ಹೀಗೆ ಹಳಿ ದಾಟುವ ಸಾಹಸದಲ್ಲಿ ಹಲವು ಅವಘಡಗಳು ಸಂಭವಿಸಿದ ಉದಾ­ಹರಣೆಗಳು ಸಾಕಷ್ಟಿವೆ. ಪ್ರಯಾಣಿಕರ ಸುಗಮ ಸಂಚಾರಕ್ಕೆ ನಿಲ್ದಾಣದಲ್ಲಿ ಮೇಲ್ಸೇತುವೆ ನಿರ್ಮಿಸುವುದು ಅಗತ್ಯವಾಗಿದೆ.ಇಲ್ಲದ ಶೌಚಾಲಯ: ನಿಲ್ದಾಣದಲ್ಲಿ ಶೌಚಾಲಯವಿದ್ದರೂ ಅದಕ್ಕೆ ಬೀಗ ಹಾಕಲಾಗಿದೆ. ಶೌಚಾಲಯದ ನಿರ್ವಹಣೆಗೆ ಕಾರ್ಮಿಕರು ಸಿಗುತ್ತಿಲ್ಲ. ಅಲ್ಲದೇ ನೀರಿನ ಸಮಸ್ಯೆಯೂ ಇರುವುದರಿಂದ ಮುಚ್ಚಲಾಗಿದೆ ಎಂದು ರೇಲ್ವೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಮಹಿಳಾ ಪ್ರಯಾಣಿಕರಿಗೆ ಇದರಿಂದ ತೊಂದರೆಯಾಗಿದೆ.

ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆಗೆ ಆಗ್ರಹ: ಮನಮಾಡ್‌–ಸಿಕಂದರಾಬಾದ್‌, ಪೂನಾ–ಹೈದರಾಬಾದ್‌ ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆ ಹಾಗೂ ನೂತನವಾಗಿ ಆರಂಭವಾದ ಬೀದರ್‌–ಸಿಕಂದರಾಬಾದ್‌ ಇಂಟರ್‌ಸಿಟಿ ರೈಲನ್ನು ಮಹಾರಾಷ್ಟ್ರದ ಚಾಕೂರ್‌ವರೆಗೆ ವಿಸ್ತರಿಸಲು ಕ್ರಮ ಕೈಗೊಳ್ಳಬೇಕೆಂಬುದು ಇಲ್ಲಿನ ನಾಗರಿಕರ ಆಗ್ರಹವಾಗಿದೆ.

ಔರಾದ್‌ ತಾಲ್ಲೂಕಿನ ಏಕೈಕ ರೈಲು ನಿಲ್ದಾಣವೆಂಬ ಖ್ಯಾತಿ ಪಡೆದ ಕಮಲನಗರ ರೈಲು ನಿಲ್ದಾಣದ ಮೂಲಕ ಬ್ರಾಡ್‌ಗೇಜ್‌ ರೈಲು ಹಳಿ ಹಾದು ಹೋಗಿದೆ. ಸುಸಜ್ಜಿತವಾದ ಎರಡು ಪ್ಲಾಟ್‌ಫಾರ್ಮಗಳಿವೆ. ಇಲ್ಲಿಂದ ಜಿಲ್ಲಾ ಕೇಂದ್ರ, ರಾಜಧಾನಿ ಬೆಂಗಳೂರಿಗೆ ಅಲ್ಲದೇ ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರದ ಪ್ರಮುಖ ನಗರಗಳಿಗೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ.

ಕಮಲನಗರ ಅಲ್ಲದೆ ಹೋಬಳಿಯ ಸುಮಾರು 50ಕ್ಕೂ ಹೆಚ್ಚಿನ ಗ್ರಾಮಸ್ಥರು ರೈಲು ಸೌಲಭ್ಯಕ್ಕಾಗಿ ಕಮಲನಗರ ರೈಲು ನಿಲ್ದಾಣವನ್ನೇ ಅವಲಂಬಿಸಿದ್ದಾರೆ. ಇಲ್ಲಿ ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆ ಮಾಡಿದರೆ ಜನತೆಗೆ ತುಂಬಾ ಅನುಕೂಲವಾಗಲಿದೆ.ನೂತನವಾಗಿ ಆರಂಭವಾದ ಬೀದರ್‌–ಸಿಕಂದರಾಬಾದ್‌ ಇಂಟರ್‌­ಸಿಟಿ ರೈಲನ್ನು ಚಾಕೂರ್‌ ಜಂಕ್ಷನ್‌ವರೆಗೆ ವಿಸ್ತರಿಸಿ, ಚಾಕೂರ್‌– ಸಿಕಂದರಾ­ಬಾದ್‌– ಕಮಲನಗರ ಮಾರ್ಗದಿಂದ ಸಾಗುವಂತೆ ಮಾಡಬೇಕು. ಇದರಿಂದ  ಈ ಭಾಗದ ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ ಎಂಬುದು ಈ ಭಾಗದ ಜನತೆ ಒತ್ತಾಯ.

ಕಮಲನಗರ ರೈಲ್ವೆ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರು, ವಿಶ್ರಾಂತಿ ಕೋಣೆ, ವಾಹನಗಳಿಗಾಗಿ ಪಾರ್ಕಿಂಗ್‌ ವ್ಯವಸ್ಥೆ ಸೌಲಭ್ಯಗಳು ಕಲ್ಪಿಸಬೇಕು. ಸಂಬಂಧಪಟ್ಟವರು ಇತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT