ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರಕದ ದ್ವಾರದಲ್ಲೇ ಗಟಾರ ನಿರ್ಮಾಣ

Last Updated 24 ಮೇ 2017, 6:18 IST
ಅಕ್ಷರ ಗಾತ್ರ

ಬೀದರ್‌: ಭಾರತೀಯ ಪುರಾತತ್ವ ಇಲಾಖೆ(ಎಎಸ್‌ಐ)ಗೆ ಸೇರಿದ ನಗರದ ‘ದುಲ್ಹನ್‌ ದರ್ವಾಜಾ’ದ ಬಳಿ ಜಿಲ್ಲಾ ನಗರಾಭಿವೃದ್ಧಿ ಕೋಶದ(ಡಿಯುಡಿಸಿ) ಅಧಿಕಾರಿಗಳು ಜೆಸಿಬಿ ಬಳಸಿ ಕಾಮಗಾರಿ ನಡೆಸಿದ್ದಾರೆ. ಪುರಾತತ್ವ ಇಲಾಖೆಯ ಫಲಕ ಇದ್ದರೂ ಮಹಾದ್ವಾರದ ಒಳಗಡೆಯೇ ದಾರಿಯಲ್ಲಿ ಗಟಾರ ನಿರ್ಮಿಸಿ ಸ್ಮಾರಕಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿರುವುದು ಇತಿಹಾಸ ಪ್ರೇಮಿಗಳಲ್ಲಿ ಆತಂಕ ಸೃಷ್ಟಿಸಿದೆ.

ಪ್ರವೇಶ ದ್ವಾರದಲ್ಲೇ ಹಾವಿನ ಆಕಾರದಲ್ಲಿ ಗಟಾರ ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ.  ಎಎಸ್‌ಐ ಅಧಿಕಾರಿಗಳು ಎಚ್ಚರಿಕೆ ನೀಡಿದರೂ ಡಿಯುಡಿಸಿ ಅಧಿಕಾರಿಗಳು ಕಾಮಗಾರಿ ಮುಂದುವರಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ನೀರಿನಿಂದ ನೆನೆದು ಕೋಟೆಯ ಗೋಡೆಯ ಒಂದು ಭಾಗ ಕುಸಿದು ಬಿದ್ದಿತು. ಮಣ್ಣಿನ ರಾಶಿ ಹಾಗೂ ಕಲ್ಲುಗಳನ್ನು ತೆರವುಗೊಳಿಸಿ ಅಲ್ಲಿ ಕಚ್ಚಾ ರಸ್ತೆ ನಿರ್ಮಿಸಲಾಗಿದೆ. ರಸ್ತೆ ಬದಿಯಲ್ಲಿ ಗಟಾರ ನಿರ್ಮಿಸಲು ಬೇ

‘ಐತಿಹಾಸಿಕ ಮಹತ್ವದ ದುಲ್ಹನ್‌ ದರ್ವಾಜಾದ ಒಳಗಡೆ ಗಟಾರ ನಿರ್ಮಾಣ ಮಾಡಿರುವುದು ಶಿಕ್ಷಾರ್ಹ ಅಪರಾಧವಾಗಿದೆ. ಎಎಸ್‌ಐ ಅನುಮತಿ ಪಡೆದ ನಂತರವೇ ಕಾಮಗಾರಿ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಿಯಮ ಉಲ್ಲಂಘಿಸಿ ಕಾಮಗಾರಿ ನಡೆಸಿರುವುದು ಸರಿ ಅಲ್ಲ. ಪುರಾತತ್ವ ಇಲಾಖೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ’ ಎಂದು ಭಾರತೀಯ ಪುರಾತತ್ವ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ವಿನಾಯಕ ಶಿರಹಟ್ಟಿ ಹೇಳುತ್ತಾರೆ.

‘ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಆಕ್ಷೇಪದ ನಡುವೆಯೂ ಡಿಯುಡಿಸಿಯವರು ಕಾಮಗಾರಿ ಮುಂದುವರಿಸಿದರೆ ಸ್ಮಾರಕಗಳು ಐತಿಹಾಸಿಕ ಮಹತ್ವ ಕಳೆದುಕೊಳ್ಳಲಿವೆ. ಕಲಬುರ್ಗಿಯಲ್ಲಿ ಇಂತಹದ್ದೇ ಪ್ರಕರಣ ನಡೆದಿದ್ದು, ಮಹಾನಗರಪಾಲಿಕೆ ಆಯುಕ್ತರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಬೀದರ್‌ನಲ್ಲಿ  ಡಿಯುಡಿಸಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಹಿಂಜರಿಯುವುದಿಲ್ಲ’ ಎನ್ನುತ್ತಾರೆ.

‘ಐತಿಹಾಸಿಕ ಮಹತ್ವದ ಸ್ಮಾರಕಗಳನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಜಿಲ್ಲಾಡಳಿತವು ಸ್ಮಾರಕದ ಎದುರು ರಸ್ತೆ ಇದ್ದರೂ ಪ್ರವೇಶ ದ್ವಾರದಲ್ಲಿ ಗಟಾರ ನಿರ್ಮಿಸಿರುವುದು ಅಚ್ಚರಿ ಮೂಡಿಸಿದೆ. ಅಧಿಕಾರಿಗಳಿಗೆ ಕನಿಷ್ಠ ಜ್ಞಾನವೂ ಇಲ್ಲದಿದ್ದರೆ ಹೇಗೆ? ’ ಎಂದು ‘ಟೀಮ್‌ ಯುವಾ’ ದ ನಾಗನಾಥ ಪಾಟೀಲ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಜಿಲ್ಲಾ ನಗರಾಭಿವೃದ್ಧಿ ಕೋಶದ ಮೂಲಕ ನಗರೋತ್ಥಾನ ಯೋಜನೆ ಅಡಿಯಲ್ಲಿ ಗಟಾರ ಹಾಗೂ ರಸ್ತೆ ನಿರ್ಮಾಣ ಕಾಮಗಾರಿ ನಡೆದಿದೆ. ಭಾರತೀಯ ಪುರಾತತ್ವ ಇಲಾಖೆಗೆ ಸೇರಿದ ಜಾಗದಲ್ಲಿ ಕಾಮಗಾರಿ ನಡೆಯುತ್ತಿದ್ದರೆ ತಕ್ಷಣ ತಡೆ ಹಿಡಿಯಲಾಗುವುದು’ ಎಂದು ಜಿಲ್ಲಾಧಿಕಾರಿ ಎಚ್‌.ಆರ್.ಮಹಾದೇವ ಹೇಳುತ್ತಾರೆ.

ದುಲ್ಹನ್‌ ದರ್ವಾಜಾದ ಮಹತ್ವ ಏನು?
ಬಹಮನಿ ಸಾಮ್ರಾಜ್ಯದ ಅರಸ ಎರಡನೆಯ ಅಲ್ಲಾವುದ್ದೀನ್್ ಮಗನಾದ ಹುಮಾಯೂನ್್ ಶಹಾ ‘ದುಲ್ಹನ್‌ ದರ್ವಾಜಾ’ ನಿರ್ಮಿಸಿದ್ದಾನೆ.ಕ್ರಿ.ಶ. 1458 ರಿಂದ 1461ರ ಅವಧಿಯಲ್ಲಿ ಸುಲ್ತಾನನಾಗಿದ್ದ ಹುಮಾಯೂನ್ ಶಹಾ ಮದ್ಯ ವ್ಯಸನಿಯೂ ಹಾಗೂ ಕಾಮಿಷ್ಟನೂ ಆಗಿದ್ದ.

ಹುಮಾಯೂನ್ ನವವಧುಗಳನ್ನು ತನ್ನ ಅಂತಃಪುರಕ್ಕೆ ಕರೆಸಿಕೊಂಡು ಕಾಮತೃಪ್ತಿ ಪಡಿಸಿಕೊಂಡು ಕಳಿಸಿಕೊಡುತ್ತಿದ್ದ. ನವವಧು ಕರೆತರಲೆಂದೇ ಕೋಟೆ ಹಿಂಬದಿಯಲ್ಲಿ ‘ದುಲ್ಹನ್ ದರ್ವಾಜಾ’ ನಿರ್ಮಿಸಿದ್ದ ಎಂದು ಇತಿಹಾಸದಲ್ಲಿ ಉಲ್ಲೇಖ ಇದೆ. 

ಹುಮಾಯೂನ್, ಮುಂದಾಲೋಚನೆ ಮಾಡದೆ ಸಲೀಸಾಗಿ ನರಬಲಿ ಕೊಡುತ್ತಿದ್ದ. ಈತನ ಕ್ರೂರ ಪ್ರವೃತ್ತಿಯಿಂದ ಪ್ರಜೆಗಳು ‘ಜಾಲಿಂ ಸುಲ್ತಾನ್’ ಎಂದೇ ಕರೆಯುತ್ತಿದ್ದರು. ಕ್ರಿ.ಶ.1461ರಲ್ಲಿ ನವವಧುವೊಬ್ಬಳನ್ನು ಎತ್ತಿಕೊಂಡು ಬಂದಾಗ ಅವಳು ರಾತ್ರಿ ಮಲಗಿದ್ದಾಗ ಆತನ ಕೊಲೆ ಮಾಡಿದಳು ಎಂದು ಹೇಳಲಾಗುತ್ತಿದೆ.

ಸುಲ್ತಾನನ ಕ್ರೂರ ಕೃತ್ಯದಿಂದ ಬೇಸತ್ತಿದ್ದ ರಾಣಿಯೇ ಸೈನಿಕನ ನೆರವಿನೊಂದಿಗೆ ಕೊಲೆ ಮಾಡಿಸಿರಬಹುದು ಎಂದು ಇತಿಹಾಸ ತಜ್ಞ ಸಮದ್‌ಭಾರತಿ ಹೇಳುತ್ತಾರೆ. ಬೀದರ್‌ ತಾಲ್ಲೂಕಿನ ಅಷ್ಟೂರ್‌ನಲ್ಲಿ ಹುಮಾಯೂನ್‌ನ ಸಮಾಧಿ ಇದೆ. ಸಿಡಿಲು ಬಡಿದು ಗೋರಿಯ ಮೇಲಿನ ಗುಮ್ಮಟದ ಅರ್ಧ ಭಾಗ ಕುಸಿದು ಬಿದ್ದಿದೆ. ‘ದುಲ್ಹನ್‌ ದರ್ವಾಜಾ’ ಸುಲ್ತಾನನ ಕ್ರೂರತೆಯ ಕುರುಹು ಆಗಿ ಉಳಿದಿದೆ.

* * 

ಭಾರತೀಯ ಪುರಾತತ್ವ ಇಲಾಖೆಗೆ ಸೇರಿದ ಸ್ಮಾರಕದೊಳಗೆ ಗಟಾರ ನಿರ್ಮಿಸುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಗಟಾರ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಲಾಗುವುದು.
ಎಚ್‌.ಆರ್.ಮಹಾದೇವ
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT