ಶನಿವಾರ, ಜೂನ್ 19, 2021
21 °C

ಒಡೆದ ಶಾಖಾ ಕಾಲುವೆ; ನೀರು ನುಗ್ಗಿ ಬೆಳೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ ಜಿಲ್ಲೆಯ ನಾಲತವಾಡ ಸಮೀಪದ ಲೊಟಗೇರಿ ಗ್ರಾಮದ ಬಳಿ ಆಲಮಟ್ಟಿ ಎಡದಂಡೆಯ ಶಾಖಾ ಕಾಲುವೆ ಮಂಗಳವಾರ ಒಡೆದು, ಜಮೀನುಗಳಿಗೆ ನೀರು ನುಗ್ಗಿರುವುದು

ನಾಲತವಾಡ (ವಿಜಯಪುರ): ಪಟ್ಟಣ ಸನಿಹದ ಲೊಟಗೇರಿ ಗ್ರಾಮದ ಬಳಿ ಹಾದು ಹೋಗಿರುವ ಆಲಮಟ್ಟಿ ಎಡದಂಡೆಯ ಶಾಖಾ ಕಾಲುವೆ ಮಂಗಳವಾರ ಒಡೆದಿದ್ದು, ಪಕ್ಕದಲ್ಲಿನ ರೈತರ ಜಮೀನುಗಳಿಗೆ ನೀರು ನುಗ್ಗಿ, ಬೆಳೆ–ಹೊಲಕ್ಕೆ ಹಾನಿಯಾಗಿದೆ.

ಕಾಲುವೆ ಒಡೆದಿದ್ದರಿಂದ ಪಕ್ಕದಲ್ಲಿನ ಹೊಲಗಳಿಗೆ ಏಕಾಏಕಿ ನೀರು ನುಗ್ಗಿದೆ. ಹೊಲದಲ್ಲಿನ ಬೆಳೆಯ ಜತೆ, ಮಣ್ಣು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಹೊಲಗಳಿಗೆ ಹಾಕಿದ್ದ ಒಡ್ಡು ಸಹ ಒಡೆದಿವೆ ಎಂದು ರೈತರು ತಿಳಿಸಿದರು.

‘ಬೆಳಿಗ್ಗೆ ಹೊಲಕ್ಕೆ ಬರುವ ವೇಳೆಗೆ ಕಾಲುವೆ ಒಡೆದು ನೀರು ನುಗ್ಗಿತ್ತು. ತಕ್ಷಣವೇ ನೀರು ನಿಲ್ಲಿಸುವಂತೆ ಹೇಳಲು ಆಲಮಟ್ಟಿಯ ಕೆಬಿಜೆಎನ್‌ಎಲ್‌ ಎಂಜಿನಿಯರ್‌ಗಳಿಗೆ ಮೊಬೈಲ್‌ ಕರೆ ಮಾಡಿದರೂ, ಸಂಬಂಧಿಸಿದ ಯಾರೊಬ್ಬರೂ ಸ್ವೀಕರಿಸಲಿಲ್ಲ. ಸಂಜೆಯ ವೇಳೆಗೆ 300 ಎಕರೆಗೂ ಹೆಚ್ಚಿನ ಭೂಮಿಯಲ್ಲಿದ್ದ ತೊಗರಿ, ಸಜ್ಜೆ ಬೆಳೆ ಹಾನಿಗೀಡಾಗಿದೆ’ ಎಂದು ರೈತ ಲಕ್ಕಪ್ಪ ನಾಯಕಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸುದ್ದಿ ತಿಳಿಯುತ್ತಿದ್ದಂತೆ ಹೊಲದ ರೈತರು ಜೆಸಿಬಿಯಿಂದ ಕಾಲುವೆ ಒಡೆದ ಸ್ಥಳಕ್ಕೆ ಮಣ್ಣು ಹಾಕಲು ಅತೀವ ಯತ್ನ ನಡೆಸಿದರು. ಇದು ಫಲಪ್ರದವಾಗಲಿಲ್ಲ. ನೀರಿನ ಹರಿವು ರಭಸದಿಂದ ಕೂಡಿದ್ದರಿಂದ ಮಣ್ಣಿನ ಒಡ್ಡು ಹಾಕುವ ಕೆಲಸ ವಿಫಲವಾಯ್ತು. ಲೊಟಗೇರಿ–ಘಾಳಪೂಜಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆಯೂ ನೀರು ಹರಿಯಿತು. ಎರಡೂ ಗ್ರಾಮಗಳ ಸಮೀಪಕ್ಕೂ ನೀರಿನ ಹರಿವು ವ್ಯಾಪಿಸಿತ್ತು’ ಎಂದು ಸ್ಥಳೀಯರು ಮಾಹಿತಿ ನೀಡಿದರು.

‘ಕಾಲುವೆಯ ಎಂಬ್ಯಾಕ್‌ಮೆಂಟ್‌ ಸ್ಥಳದಲ್ಲಿ ಪಂಪ್‌ಸೆಟ್‌ನಿಂದ ನೀರೆತ್ತಲು ರೈತರೇ ಒಡೆದಿದ್ದರು. ಇದನ್ನು ಸಮರ್ಪಕವಾಗಿ ಮುಚ್ಚದಿದ್ದರಿಂದ ಕಾಲುವೆ ಒಡೆದಿದೆ. ಎರಡು ದಿನ ತಾತ್ಕಾಲಿಕವಾಗಿ ನೀರು ಹರಿಸುವುದನ್ನು ಸ್ಥಗಿತಗೊಳಿಸಿದ್ದೇವೆ. ದುರಸ್ತಿ ಪೂರ್ಣಗೊಂಡ ಬಳಿಕ ಯಥಾಪ್ರಕಾರ ನೀರು ಹರಿಸಲಾಗುವುದು’ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಕೆಬಿಜೆಎನ್‌ಎಲ್‌ನ ಮುಖ್ಯ ಎಂಜಿನಿಯರ್‌ ಎಸ್‌.ಎಚ್‌.ಮಂಜಪ್ಪ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು