ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಕರಿಸಿ: ಎಡಿಸಿ

Published 26 ಆಗಸ್ಟ್ 2023, 6:46 IST
Last Updated 26 ಆಗಸ್ಟ್ 2023, 6:46 IST
ಅಕ್ಷರ ಗಾತ್ರ

ಚಾಮರಾಜನಗರ: ಮತದಾರರ ಪಟ್ಟಿಯಿಂದ ಯಾವುದೇ ಅರ್ಹ ಮತದಾರರು ಹೊರಗುಳಿಯಬಾರದು ಎನ್ನುವ ಮಹತ್ತರ ಉದ್ದೇಶದೊಂದಿಗೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಹಮ್ಮಿಕೊಂಡಿದ್ದು, ದೋಷರಹಿತ ಮತದಾರರ ಪಟ್ಟಿ ತಯಾರಿಕೆಗೆ ರಾಜಕೀಯ ಪಕ್ಷಗಳು ಸಹಕಾರ ನೀಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಶುಕ್ರವಾರ ತಿಳಿಸಿದರು. 

ನಗರದ ಹೆಚ್ಚುವರಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮತಗಟ್ಟೆಗಳ ಪುನರ್ ವಿಂಗಡಣೆ ಕಾರ್ಯ ಸಂಬಂಧ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಚುನಾವಣಾ ಆಯೋಗವು 2024ರ ಜನವರಿ 1ಕ್ಕೆ ಅರ್ಹತಾ ದಿನಾಂಕ ನಿಗದಿಪಡಿಸಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಹಮ್ಮಿಕೊಂಡಿದೆ. 18 ವರ್ಷ ಮತ್ತು ಮೇಲ್ಪಟ್ಟ ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಆಯೋಗವು ಅರ್ಹತಾ ದಿನಾಂಕವನ್ನು ಪರಿಷ್ಕರಿಸಿ, 1ನೇ ಜನವರಿ, 1ನೇ ಏಪ್ರಿಲ್, 1ನೇ ಜುಲೈ ಮತ್ತು 1ನೇ ಅಕ್ಟೋಬರ್‌ರಂತೆ ಅರ್ಹತಾ ದಿನಾಂಕ ನಿಗದಿಪಡಿಸಿದೆ’ ಎಂದರು. 

‘ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಮತಗಟ್ಟೆಗಳಿಗೆ ನೇಮಕ ಮಾಡಿರುವ ಮತಗಟ್ಟೆ ಮಟ್ಟದ ಅಧಿಕಾರಿಗಳು  ಮನೆ-ಮನೆ ಸಮೀಕ್ಷೆ  ನಡೆಸಿ  ಮತದಾರರ  ಪಟ್ಟಿಗೆ  ಹೆಸರು  ಸೇರ್ಪಡೆ,  ಬಿಡತಕ್ಕವು, ತಿದ್ದುಪಡಿ, ಸ್ಥಳಾಂತರಗಳಿಗೆ ಸಂಬಂಧಿಸಿದಂತೆ ಇದುವರೆಗೆ  ಒಟ್ಟು 18,360 ಅರ್ಜಿ ಪಡೆದಿದ್ದು, ಈ ಪೈಕಿ 13,290 ಅರ್ಜಿಗಳನ್ನು ಪರಿಶೀಲಿಸಿ, ಇತ್ಯರ್ಥಪಡಿಸಿ, ಅರ್ಹ ಮತದಾರರನ್ನು ಸೇರ್ಪಡೆಗೊಳಿಸಲು ಕ್ರಮ ವಹಿಸಲಾಗಿದೆ. ಆಯೋಗವು ನಿಗದಿಪಡಿಸಿರುವ ವೇಳಾಪಟ್ಟಿಯಂತೆ ಅಕ್ಟೋಬರ್ 17ರಂದು ಕರಡು ಪಟ್ಟಿ ಪ್ರಕಟಿಸಲಾಗುತ್ತದೆ’ ಎಂದರು.   

 ಅ.17ರಿಂದ ನ.30ರವರೆಗೆ ಸ್ವೀಕರಿಸಲಾಗುವ ಹಕ್ಕು, ಆಕ್ಷೇಪಣೆಗಳನ್ನು ಪರಿಶೀಲಿಸಿ ಡಿ.26ರೊಳಗೆ ಇತ್ಯರ್ಥಪಡಿಸಲಾಗುತ್ತದೆ. ಚುನಾವಣಾ ಆಯೋಗವು ನಿಗದಿಪಡಿಸುವ ಎರಡು ಶನಿವಾರಗಳಂದು ಮತ್ತು ಭಾನುವಾರಗಳಂದು ವಿಶೇಷ ಆಂದೋಲನ ನಡೆಸುತ್ತಿದ್ದು, ಅಂದು ಬಿಎಲ್ಒಗಳು ಬೆಳಿಗ್ಗೆ 9ರಿಂದ ಸಂಜೆ 5ಗಂಟೆಯವರೆಗೆ ಆಯಾ ಮತಗಟ್ಟೆಗಳಲ್ಲಿ ಹಾಜರಿದ್ದು, ಮತದಾರರ ಪಟ್ಟಿಗೆ ಸಂಬಂಧಿಸಿದಂತಹ ಸಾರ್ವಜನಿಕರಿಂದ ಬರುವ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ. ಕರಡು ಮತದಾರರ ಪಟ್ಟಿಯ ಪರಿಶೀಲಿಸಿಕೊಂಡು ಸೇರ್ಪಡೆ, ತೆಗೆಯುವುದನ್ನು ಒಟ್ಟುಗೂಡಿಸಿ ಆಯೋಗದ ಅನುಮೋದನೆಯೊಡನೆ 2024ರ ಜನವರಿ 5ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ’ ಎಂದು ಗೀತಾ ಹುಡೇದ ತಿಳಿಸಿದರು. 

ಉಪವಿಭಾಗಾಧಿಕಾರಿ ಮಹೇಶ್, ಚುನಾವಣಾ ತಹಶೀಲ್ದಾರ್ ರವಿಕುಮಾರ್ ಚ ವಸ್ತ್ರದ್, ಪಕ್ಷಗಳ ಪ್ರತಿನಿಧಿಗಳಾದ ಎಂ.ಚಿಕ್ಕಮಹದೇವು, ಎಸ್.ಬಾಲಸುಬ್ರಹ್ಮಣ್ಯಂ, ಗುರುಪ್ರಸಾದ್, ಬ್ಯಾಡಮೂಡ್ಲು ಬಸವಣ್ಣ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT