ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮತ ಎಣಿಕೆ: ಸಹಕಾರಕ್ಕೆ ‍ಪಕ್ಷಗಳಿಗೆ ಮನವಿ

ಮುಖಂಡರೊಂದಿಗೆ ಸಭೆ ನಡೆಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ
Published 30 ಮೇ 2024, 5:33 IST
Last Updated 30 ಮೇ 2024, 5:33 IST
ಅಕ್ಷರ ಗಾತ್ರ

ಚಾಮರಾಜನಗರ: ಜೂನ್‌ 4ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯವನ್ನು ಯಶಸ್ವಿಯಾಗಿ ನಡೆಸಲು ಎಲ್ಲ ಸಹಕಾರ ನೀಡಬೇಕು ಎಂದು ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದರು.  

ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಪ್ರತಿನಿಧಿಗಳೊಂದಿಗೆ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಜೂನ್ 4ರಂದು ಬೆಳಿಗ್ಗೆ 8 ಗಂಟೆಗೆ ನಗರದ ನಂಜನಗೂಡು ರಸ್ತೆಯಲ್ಲಿರುವ ಬೇಡರಪುರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆರಂಭವಾಗಲಿದೆ. ಮತ ಎಣಿಕೆ ಕೇಂದ್ರಕ್ಕೆ ಅಭ್ಯರ್ಥಿಗಳು, ಏಜೆಂಟರು ಕಡ್ಡಾಯವಾಗಿ ಚುನಾವಣಾಧಿಕಾರಿಗಳು ನೀಡಿರುವ ಗುರುತಿನ ಚೀಟಿಯನ್ನು ಧರಿಸಿ ಆಗಮಿಸಬೇಕು. ಮತ ಎಣಿಕೆ ಕೇಂದ್ರದಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದವಾಗದಂತೆ ಎಣಿಕೆ ಕಾರ್ಯದ ಸಿದ್ದತಾ ಪ್ರಕ್ರಿಯೆಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಲಾಗಿದೆ’ ಎಂದರು.

‘ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಬ್ಲಾಕ್‍ನ ನೆಲಮಹಡಿಯಲ್ಲಿ ಎಚ್.ಡಿ. ಕೋಟೆ, ನಂಜನಗೂಡು, ವರುಣ ಹಾಗೂ ತಿ.ನರಸೀಪುರ ಕ್ಷೇತ್ರಗಳ ಮತ ಎಣಿಕೆ ನಡೆಯಲಿದ್ದು, ಹನೂರು, ಕೊಳ್ಳೇಗಾಲ, ಚಾಮರಾಜನಗರ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ಎಂಜಿನಿಯರಿಂಗ್ ಕಾಲೇಜಿನ ಮೆಕಾನಿಕಲ್ ಬ್ಲಾಕ್‍ನ ಮೊದಲನೇ ಮಹಡಿಯಲ್ಲಿ ನಡೆಯಲಿದೆ. ಅಲ್ಲದೆ ಮೆಕಾನಿಕಲ್ ಬ್ಲಾಕ್‍ನ ನೆಲಮಹಡಿಯಲ್ಲಿ ತೆರೆಯಲಾಗಿರುವ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಅಂಚೆ ಮತಪತ್ರಗಳ ಎಣಿಕೆ ನಡೆಸಲಾಗುವುದು’ ಎಂದು ತಿಳಿಸಿದರು.

‘ಮತ ಎಣಿಕೆ ಕೇಂದ್ರದ ಕೊಠಡಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್‍ಗಳಂತೆ, 8 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 112 ಮತ ಎಣಿಕೆ ಟೇಬಲ್‍ಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮತಎಣಿಕೆ ಕೇಂದ್ರದಲ್ಲಿ ಆಯಾ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ (ಎ.ಆರ್.ಒ) ಸಮ್ಮುಖದಲ್ಲಿ ಮತ ಎಣಿಕೆ ನಡೆಯಲಿದೆ. ಅಂಚೆ ಮತಪತ್ರಗಳ ಎಣಿಕೆಗಾಗಿ 8 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಸೇವಾ ಮತದಾರರು ಮತದಾನ ಮಾಡಿ ಕಳುಹಿಸಿರುವ ಮತಪತ್ರಗಳ ಎಣಿಕೆಯನ್ನು ಇ.ಟಿ.ಪಿ.ಬಿ.ಎಸ್ ತಂತ್ರಾಂಶದಲ್ಲಿ ನಡೆಸಲು 2 ಟೇಬಲ್‍ಗಳನ್ನು ಸ್ಥಾಪಿಸಲಾಗಿದೆ’ ಎಂದು ಗೀತಾ ಹೇಳಿದರು. 

‘ಅಂಚೆ ಮತಪತ್ರಗಳಿಗೆ ಸಂಬಂಧಿಸಿದಂತೆ 1,372 ಮತದಾರರು ಮನೆಯಲ್ಲಿಯೇ ಮತದಾನ ಮಾಡಿದ್ದಾರೆ. 2,382 ಚುನಾವಣಾ ಕರ್ತವ್ಯ ಅಧಿಕಾರಿ ಹಾಗೂ ಸಿಬ್ಬಂದಿ, 458 ಅತ್ಯಗತ್ಯ ಕರ್ತವ್ಯ ನಿರತ ಸಿಬ್ಬಂದಿ ಹಾಗೂ 192 ಸೇವಾ ಮತದಾರರು ಸೇರಿದಂತೆ ಒಟ್ಟು 4,404 ಅಂಚೆ ಮತಪತ್ರಗಳ ಎಣಿಕೆ ಕಾರ್ಯ ನಡೆಯಲಿದೆ. ಸೇವಾ ಮತದಾರರು (ಇ.ಟಿ.ಪಿ.ಬಿ.ಎಸ್) ಮತದಾನ ಮಾಡಿ ಕಳುಹಿಸುವ ಅಂಚೆ ಮತಪತ್ರಗಳನ್ನು ಮತ ಎಣಿಕೆ ಕಾರ್ಯ ನಡೆಯುವ ಜೂನ್ 4ರ ಬೆಳಿಗ್ಗೆ 7.50 ಗಂಟೆಯವರೆಗೂ ಸ್ವೀಕರಿಸಲಾಗುವುದು. ನಂತರ ಬರುವ ಸೇವಾ ಮತದಾರರ ಅಂಚೆ ಮತಪತ್ರವನ್ನು ತಿರಸ್ಕರಿಸಲಾಗುವುದು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ತಹಶೀಲ್ದಾರ್ ಕೀರ್ತನ, ಚುನಾವಣಾ ಶಿರಸ್ತೇದಾರ್ ಬಸವರಾಜು, ಬಿ.ಎಸ್.ಪಿ ಪಕ್ಷದ ಅಭ್ಯರ್ಥಿ ಎಂ. ಕೃಷ್ಣಮೂರ್ತಿ, ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಎಸ್. ನಿಂಗರಾಜು, ಕರ್ನಾಟಕ ರಾಷ್ಟ ಸಮಿತಿ ಪಕ್ಷದ ಅಭ್ಯರ್ಥಿ ಕಂದಳ್ಳಿ ಮಹೇಶ್, ಪಕ್ಷೇತರ ಅಭ್ಯರ್ಥಿಗಳಾದ ಎನ್. ಅಂಬರೀಷ್, ಬಿ.ಎಂ. ಮಹದೇವಸ್ವಾಮಿ, ಜಿ.ಡಿ. ರಾಜಗೋಪಾಲ, ಎಚ್.ಕೆ. ಸ್ವಾಮಿ, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎ.ಎಚ್. ನಸ್ರುಲ್ಲಾ ಖಾನ್, ಮಹೇಶ್, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT