ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರೀಕ್ಷೆ ಮೀರಿದ ಮಳೆ: ಶೇ 85 ಬಿತ್ತನೆ

ಯಳಂದೂರು: ಮೆಕ್ಕೆಜೋಳ ಬಿತ್ತನೆಗೆ ವೇಗ, ಭತ್ತ ಕ್ಷೇತ್ರ ಆವರಿಸಿದ ಹೈಬ್ರಿಡ್ ಕಬ್ಬು
Last Updated 17 ಆಗಸ್ಟ್ 2021, 1:33 IST
ಅಕ್ಷರ ಗಾತ್ರ

ಯಳಂದೂರು: ಕೆರೆ ನೀರಾವರಿ ಮತ್ತು ಸತತ ಮಳೆಯಿಂದ ಸಮೃದ್ಧವಾದ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮು ಈ ಬಾರಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ತೋಟಗಾರಿಕಾ ಬೆಳೆಗಳ ಜೊತೆ ವಾಣಿಜ್ಯ ಕೃಷಿಯೂ ರೈತರ ಕೈಹಿಡಿದಿದ್ದು, ಕೃಷಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿದೆ.

ಮುಂಗಾರು ಪೂರ್ವದಲ್ಲಿ ಒಂದೆರಡು ಬಾರಿ ಮಳೆ ಸುರಿದಿತ್ತು, ಇದರಿಂದ ಉತ್ತೇಜಿತರಾದಬೇಸಾಯಗಾರರು ಉದ್ದು, ಹಸರು ಮತ್ತು ಅಲಸಂದೆ ಬಿತ್ತನೆ ಮಾಡಿದ್ದರು. ಈ ಬೆಳೆಗಳುಜೂನ್ ನಲ್ಲಿ ಸಾಧಾರಣ ಇಳುವರಿ ತಂದುಕೊಟ್ಟಿತ್ತು. ಜುಲೈ-ಆಗಸ್ಟ್ ನಡುವೆ ಹೆಚ್ಚು ಮಳೆ ಸುರಿದ ಕಾರಣ, ರೈತರು ಕಬ್ಬು, ಮೆಕ್ಕೆ ಜೋಳ ನಾಟಿಗೆ ಭೂಮಿ ಹಸನು ಮಾಡಿಕೊಂಡು, ಭತ್ತದ ಸಸಿಮಡಿಗೆ ಸಿದ್ಧತೆ ನಡೆಸಿದ್ದಾರೆ.

ತಾಲ್ಲೂಕಿನಲ್ಲಿ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಭೂಮಿ ವ್ಯಾಪಿಸಿದೆ. ಶೇ 35 ತೆಂಗು, ಬಾಳೆ ಮತ್ತು ಹಣ್ಣಿನ ಬೆಳೆಗಳು ಆವರಿಸಿದ್ದರೆ, ಶೇ 30 ಕಬ್ಬು, ಶೇ 20 ಭತ್ತ ಹಾಗೂ ಶೇ 15 ಮುಸುಕಿನಜೋಳ ಬೆಳೆಯುವತ್ತ ರೈತರು ಒಲವು ತೋರಿದ್ದಾರೆ. ಇತ್ತೀಚಿಗೆ ಭತ್ತಕ್ಕೆ ಬದಲಾಗಿ ಹೆಚ್ಚಿನ ಇಳುವರಿ ನೀಡುವ ಕಬ್ಬು ಬಿತ್ತನೆಗೆ ಕೃಷಿಕರು ಮುಂದಾಗುತ್ತಿದ್ದಾರೆ.

ಕೆಸ್ತೂರು ಗ್ರಾಮ ಬಿಟ್ಟು ಉಳಿದ 11 ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಕಸಬಾ ಮತ್ತು ಅಗರ ಹೋಬಳಿಗಳಲ್ಲಿ ಶೇ 90 ಬಿತ್ತನೆ ಬೀಜ ಪೂರೈಸಲಾಗಿದೆ. ಜುಲೈನಲ್ಲಿ ಕಾಲುವೆಯಲ್ಲಿ ನೀರು ಬಿಟ್ಟ ಕ್ಷಣದಿಂದ ಸಸಿಮಡಿ ತಯಾರಿಗೆ ಹಿಡುವಳಿದಾರರು ಮುಂದಾಗಿದ್ದಾರೆ.

ಆಗಸ್ಟ್ 2ನೇ ವಾರದ ವೇಳೆಗೆ 6 ಸಾವಿರ ಹೆಕ್ಟೇರ್ ನಲ್ಲಿ ಕಬ್ಬು, ಭತ್ತ ಮತ್ತು ಮುಸುಕಿನಜೋಳ ಬಿತ್ತನೆಯ ಗುರಿಯನ್ನು ಹೊಂದಲಾಗಿದ್ದು, ಈ ಬೆಳೆಗಳು ಶೇ 100 ಗುರಿಯನ್ನು ಮೀರಿದೆ. ಉಳಿದ ಅರೆ ನೀರಾವರಿ ಪ್ರದೇಶಗಳಲ್ಲಿ ಟೊಮೊಟೊ, ಬದನೆ, ಬಾಳೆ ಬಿತ್ತನೆಯಗೆ ಹೆಚ್ಚಿನ ಅವಕಾಶ ದೊರೆತಿದೆ. ಆಗಸ್ಟ್ ನಲ್ಲಿ ಉತ್ತಮ ಮಳೆ ಆಗಿದೆ. ನಿಗದಿತ ಗುರಿಯನ್ನು ಮೀರಿ ನಾಟಿ ಕಾರ್ಯ ನಡೆಯುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

'ಹುರುಳಿ, ದ್ವಿದಳಧಾನ್ಯ ಕೊಯ್ಲು ಮಾಡಿ, ಅದೇ ಭೂಮಿಗೆ ತ್ಯಾಜ್ಯವನ್ನು ಸೇರಿಸಲಾಗುತ್ತದೆ. ಇದನ್ನೇ ಹಸಿರೆಲೆ ಗೊಬ್ಬರವಾಗಿ ಕೊಳೆಸಿ ಭತ್ತ ಬಿತ್ತನೆ ಮಾಡುವ ಪ್ರಕ್ರಿಯೆಗಳು ವೇಗ ಪಡೆದಿವೆ. ಶ್ರಮಿಕರ ಕೊರತೆ ಇದ್ದರೂ, ಈ ಬಾರಿ ಕುಟುಂಬಸ್ಥರು

ಒಟ್ಟಾಗಿ ಸೇರಿ ಕೃಷಿ ಕಾಯಕದಲ್ಲಿ ತೊಡಗಿರುವ ದೃಶ್ಯ ಅಲ್ಲಲ್ಲಿ ಕಂಡುಬರುತ್ತಿದೆ. ಈ ಬಾರಿ ಉತ್ತಮ ಮಳೆ ಸುರಿಯುತ್ತಿದ್ದು, 8 ಎಕರೆ ಭೂಮಿಗೆ ಮೆಕ್ಕೆಜೋಳ ಬಿತ್ತನೆ ಮಾಡಿದ್ದೇವೆ' ಎಂದು ಗುಂಬಳ್ಳಿ ರೈತ ಶಂಕರಪ್ಪ ಹೇಳಿದರು.

'ಮಳೆ ರೈತರ ಕೈ ಹಿಡಿದಿದೆ. ಕಾಡಂಚಿನ ಭೂಮಿಗಳಲ್ಲಿ ಮುಸುಕಿನಜೋಳ ಬಿತ್ತನೆಗೆ ಒತ್ತು ನೀಡಿದ್ದೇವೆ. ತುಂತುರು ಹನಿ ಬೀಳುತ್ತಿದ್ದು, ಅಲ್ಫಾವಧಿ ಬೆಳೆ ಈ ಬಾರಿ ಕೈಸೇರಲಿದೆ' ಎಂದು ಕೃಷಿಕ ಮಹಿಳೆ ಯರಗಂಬಳ್ಳಿಯ ತಾಯವ್ವ 'ಪ್ರಜಾವಾಣಿ'ಗೆ ತಿಳಿಸಿದರು.

ತೋಟಗಾರಿಕಾ ಬೆಳೆಗೆ ಒತ್ತು

ತಾಲ್ಲೂಕಿನಲ್ಲಿ ರೈತರು ತೋಟಗಾರಿಕಾ ಬೆಳೆಗೂ ಒತ್ತು ನೀಡುತ್ತಿದ್ದಾರೆ.

‘2,000 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದೆ. ಈ ಪೈಕಿ 500 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ, 300 ಹೆಕ್ಟೇರ್‌ನಲ್ಲಿ ತರಕಾರಿ ಮತ್ತು ಹೂವು 300 ಹೆಕ್ಟೇರ್‌ ಹಾಗೂ 750 ಹೆಕ್ಟೇರ್ ಪ್ರದೇಶದದಲ್ಲಿ ತೆಂಗು-ಅಡಿಕೆವ್ಯಾಪಿಸಿದೆ’ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿ ಬಿ.ಎಸ್.ರಾಜು ಅವರು ಹೇಳಿದರು.

ಹೆಚ್ಚು ಮಳೆ ಬಂದರೆ ತೊಂದರೆ: 'ಕೆಲವು ರೈತರು ತೋಟಗಾರಿಕಾ ಬೆಳೆಗಳನ್ನೇ ನಂಬಿಕೊಂಡಿದ್ದು, ಮುಂಗಾರು ಹಂಗಾಮಿನಲ್ಲಿ ಹೆಚ್ಚು ಮಳೆ ಕಂಡುಬಂದರೆ ಈರುಳ್ಳಿ ಮತ್ತು ಪುಷ್ಪಕೃಷಿಗೆ ಹಿನ್ನಡೆ ಆಗಲಿದೆ. ಸರ್ಕಾರ ಸಹಾಯಧನ ನೀಡಿ ಅನ್ನದಾತರನ್ನು ಪ್ರೋತ್ಸಾಹಿಸಬೇಕಿದೆ' ಎಂದು ಅಗರ ಗ್ರಾಮದ ಕೆ.ಸಿದ್ದರಾಜು ಅವರು ಹೇಳಿದರು.

-

ಮುಂಗಾರು ಅವಧಿಯಲ್ಲಿ ಶೇ 85 ಭಾಗ ಬಿತ್ತನೆ ನಡೆದಿದೆ. ರೈತರು ಬೆಳೆ ಸರ್ವೆಗೆ ಒತ್ತು ನೀಡಬೇಕು. ವಿಮೆ, ಸಾಲಸೌಲಭ್ಯ ಪಡೆಯಬೇಕು.
ಎನ್.ಜಿ.ಅಮೃತೇಶ್ವರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ

---

ಈ ಬಾರಿ ಮೆಕ್ಕೆ ಜೋಳಕ್ಕೆ ಸೈನಿಕ ಹುಳು ಬಾಧಿಸಿದೆ. ಕೃಷಿಕರು ಔಷಧೋಪಚಾರ ಮಾಡಬೇಕು. ಉತ್ತಮ ಇಳುವರಿ ಕಬ್ಬನ್ನು ನಾಟಿಗೆ ಒಳಪಡಿಸಬೇಕು
ಎ.ವೆಂಕಟರಂಗಶೆಟ್ಟಿ, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT