ಶನಿವಾರ, ಏಪ್ರಿಲ್ 4, 2020
19 °C

ಬಾರದ ಆಂಬುಲೆನ್ಸ್‌, ನೆರವಿಗೆ ಬಂದ ಅರಣ್ಯ ಇಲಾಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಆಸ್ಪತ್ರೆಗೆ ಕರೆ ತಂದಿದ್ದ ಅರಣ್ಯ ಇಲಾಖೆಯ ವಾಹನದಲ್ಲೇ ಸೋಲಿಗ ಮಹಿಳೆಗೆ ಹೆರಿಗೆಯಾಗಿರುವ ಪ್ರಕರಣ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಡೆದಿದೆ. 

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ವಲಯದಲ್ಲಿರುವ ಭೂತಾಣಿ ಪೋಡಿನ ನಿವಾಸಿ, ತುಂಬು ಗರ್ಭಿಣಿಯಾಗಿದ್ದ ಮಾದಮ್ಮ ಅವರಿಗೆ ಮಂಗಳವಾರ ಮಧ್ಯಾಹ್ನ ಹೆರಿಗೆ ನೋವು ಕಾಣಿಸಿಕೊಂಡಿತು. ಆಂಬುಲೆನ್ಸ್‌ಗೆ ಕರೆ ಮಾಡಿದರೂ ಬರಲಿಲ್ಲ. ನಂತರ ಅವರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ವಾಹನ ನೀಡುವಂತೆ ಮನವಿ ಮಾಡಿದರು. ತಕ್ಷಣ ಅಧಿಕಾರಿಗಳು ಸಫಾರಿ ಜೀಪನ್ನು ಕಳುಹಿಸಿದರು. 

ಮಾದಮ್ಮ ಅವರನ್ನು ಕರೆತಂದಿದ್ದ ಜೀಪು ಚಾಮರಾಜನಗರ ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಮುಂಭಾಗದಲ್ಲಿ ನಿಂತ ತಕ್ಷಣವೇ ಹೆರಿಗೆ ಯಾಗಿದೆ. 

ತಕ್ಷಣವೇ ಅವರನ್ನು ತುರ್ತು ನಿಗಾ ಘಟಕಕ್ಕೆ ದಾಖಲಿಸಿ ವೈದ್ಯರು ಚಿಕಿತ್ಸೆ ನೀಡಿದರು. ಆದರೆ, ಗಂಡು ಶಿಶು ಮೃತಪಟ್ಟಿತ್ತು. ಮಾದಮ್ಮ ಅವರಿಗೆ ಇದು ಮೂರನೇ ಹೆರಿಗೆ.

‘ಸೋಲಿಗ ಮಹಿಳೆಗೆ ಆಸ್ಪತ್ರೆಗೆ ಬಂದ ತಕ್ಷಣ ಹೆರಿಗೆ‌ಯಾಗಿದೆ. ಮಗು ಹೊಟ್ಟೆಯಲ್ಲೇ ಮೃತಪಟ್ಟಿತ್ತು. ಮಹಿಳೆ ಆರೋಗ್ಯವಾಗಿದ್ದಾರೆ’ ಎಂದು ಜಿಲ್ಲಾಸ್ಪತ್ರೆಯ ‍ಪ್ರಭಾರ ಮುಖ್ಯ ಸರ್ಜನ್‌ ಡಾ.ಕೃಷ್ಣಪ್ರಸಾದ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಮಾಧ್ಯಮಗಳೊಂದಿಗೆ ಮಾತನಾಡಿದ ಮಾದಮ್ಮ ಸೋದರಿ ಮಲ್ಲಮ್ಮ ಅವರು, ‘ಆಂಬುಲೆನ್ಸ್‌ಗೆ ಹಲವು ಬಾರಿ ಕರೆ ಮಾಡಿದೆವು. ಆದರೆ ಬರಲಿಲ್ಲ. ಮೈಸೂರಿಗೆ ಹೋಗಿದೆ ಎಂಬ ಉತ್ತರ ಬಂತು. ನಂತರ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದೆವು. ಅವರು ವಾಹನ ವ್ಯವಸ್ಥೆ ಮಾಡಿದರು’ ಎಂದರು. 

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಕೆ.ಗುಡಿ ವಲಯ ಅರಣ್ಯಾಧಿಕಾರಿ ಶಾಂತಪ್ಪ ಪೂಜಾರ್‌ ಅವರು, ‘ನಮ್ಮಲ್ಲಿಗೆ ಬಂದು ವಾಹನ ಕಳುಹಿಸುವಂತೆ ಮನವಿ ಮಾಡಿದರು. ಗರ್ಭಿಣಿಯ ಪರಿಸ್ಥಿತಿ ಅರಿವು ಸಫಾರಿ ಜೀಪಿನ ವ್ಯವಸ್ಥೆ ಮಾಡಿದೆವು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು