ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ತ್ಯಾಜ್ಯಕ್ಕೆ ಬೆಂಕಿ: ಮಣ್ಣಿನ ಆರೋಗ್ಯಕ್ಕೆ ಮಾರಕ

ಮಾಗಿ ಉಳುಮೆಗೆ ರೈತರ ಸಿದ್ಧತೆ, ತರಗು, ಹುಲ್ಲು ಸೋಗು ಕಿಚ್ಚು ಹಾಕದಂತೆ ಸಲಹೆ
Last Updated 23 ಫೆಬ್ರುವರಿ 2023, 16:23 IST
ಅಕ್ಷರ ಗಾತ್ರ

ಯಳಂದೂರು: ಬೇಸಿಗೆ ಅವಧಿಯಲ್ಲಿ ಭತ್ತ, ಕಬ್ಬು, ಬಾಳೆ ಕಟಾವು ಮುಗಿದಿದೆ. ಭೂಮಿ ಹಸನುಗೊಳಿಸುವ ಕ್ರಿಯೆ ಆರಂಭವಾಗಿದೆ. ಮಾಗಿ ಉಳುಮೆಗೆ ರೈತರು ಸಿದ್ಧತೆಗೆ ಒತ್ತು ನೀಡಿದ್ದಾರೆ.

ಇದೇ ವೇಳೆ ಕೃಷಿ ಭೂಮಿಯಲ್ಲಿ ಸಂಗ್ರಹವಾಗಿರುವ ತರಗು, ಹುಲ್ಲು, ಸೋಗು ಮತ್ತಿತರ ತ್ಯಾಜ್ಯಗಳಿಗೆ ಬೆಂಕಿ ಇಟ್ಟು ಭಸ್ಮ ಮಾಡಲಾಗುತ್ತಿದೆ. ಈ ಪದ್ಧತಿಯಿಂದ ಭೂಮಿ ಮಣ್ಣಿನ ಆರೋಗ್ಯ ಕುಸಿದು, ಮುಂದಿನ ದಿನಗಳಲ್ಲಿ ಸರಾಸರಿ ಇಳುವರಿ ಕುಸಿಯುವ ಆತಂಕ ಎದುರಾಗಿದೆ.

ತಾಲ್ಲೂಕಿನಲ್ಲಿ ಹಿಡುವಳಿ ಪ್ರಮಾಣ 10 ಸಾವಿರ ಹೆಕ್ಟೇರ್ ಪ್ರದೇಶ ವ್ಯಾಪಿಸಿದೆ. ಪ್ರತಿ ವರ್ಷ ಬೇಸಿಗೆ ಅವಧಿಯಲ್ಲಿ ಕೃಷಿ ತ್ಯಾಜ್ಯ ಉತ್ಪಾದನೆ ಆಗುತ್ತಿದೆ. ಪ್ರತಿ ಹೆಕ್ಟೇರ್ ಗೆ ಸರಾಸರಿ ನಾಲ್ಕು ಟನ್ ತ್ಯಾಜ್ಯ ಸಂಗ್ರಹವಾಗುತ್ತಿದೆ. ಇದರಲ್ಲಿ ಎಲ್ಲ ರೀತಿಯ ಪೋಷಕಾಂಶ ಒಳಗೊಂಡಿದ್ದು, ಸಾರಜನಕ, ಪೊಟ್ಯಾಸಿಯಂ, ರಂಜಕದ ಪ್ರಮಾಣವನ್ನು ಹೇರಳವಾಗಿ ಹೊಂದಿದೆ. ಇಂತಹ ಅಮೂಲ್ಯ ಸವಕಳಿಗೆ ಅಗ್ನಿ ಸ್ಪರ್ಶಿಸುವುದರಿಂದ ಅಪಾರ ಪ್ರಮಾಣದ ಸಾವಯವ ಅಂಶ ಹಾಳಾಗುತ್ತಿದ್ದು, ಭೂ ಮೇಲ್ಪದರದ ಮಣ್ಣಿನಲ್ಲಿ ಬದುಕುವ ಸೂಕ್ಷ್ಮಾಣು ಜೀವಿಗಳ ನಾಶ ಆಗುತ್ತಿದೆ.

'ಪ್ರತಿ ಎಕರೆಯಲ್ಲಿ 3 ರಿಂದ 4 ಟನ್ ಕಬ್ಬಿನ ಸೋಗು ಸಿಗುತ್ತದೆ. ಇದನ್ನು ಬೆಂಕಿ ಹಚ್ಚದೆ ಭೂಮಿಯಲ್ಲಿ ಸೇರಿಸಿದರೆ ರಾಸಾಯನಿಕ ಗೊಬ್ಬರದ ಹೆಚ್ಚುವರಿ ಖರ್ಚು ಉಳಿಯುತ್ತದೆ. ಕೃಷಿ ತ್ಯಾಜ್ಯಕ್ಕೆ ಬೆಂಕಿ ಇಟ್ಟರೆ ಇಂಗಾಲ, ವಿಷಕಾರಕ ಅನಿಲಗಳು ವಾತಾವರಣಕ್ಕೆ ಸೇರುತ್ತದೆ. ಮಣ್ಣಿನ ಆರೋಗ್ಯ ಕುಸಿದು ನೀರು ಇಡಿದಿಟ್ಟುಕೊಳ್ಳುವ ಸಾಮರ್ಥ್ಯ ಕುಸಿಯುತ್ತದೆ. ಹಾಗಾಗಿ, ಕೃಷಿ ಅನುಪಯುಕ್ತ ಕಸವನ್ನು ಜಾನುವಾರುಗಳಿಗೆ ಮೇವಾಗಿ ಬಳಸಬೇಕು. ಅವು ವಿಸರ್ಜಿಸುವ ಸಗಣಿ ಮತ್ತು ಮೂತ್ರವನ್ನು ಭೂಮಿಗೆ ಸೇರಿಸಬೇಕು. ಗೊಬ್ಬರದ ಜೊತೆ ಮುಚ್ಚಿಗೆಯಾಗಿ ಬಳಸಬೇಕು' ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.

ಆಳುಕಾಳಿನ ಕೊರತೆ: 'ಮಳೆ ಋತುವಿಗೂ ಮೊದಲು ಭೂಮಿ ಉಳುಮೆ ಮಾಡಿ, ಬಿತ್ತನೆ ಪೂರೈಸಬೇಕು. ಶ್ರಮಿಕರ ಕೊರತೆ ಹಿನ್ನಲೆಯಲ್ಲಿ ಭತ್ತ, ರವದಿ, ಕಡಲೆ ಹಾಗೂ ತೋಟಗಾರಿಕಾ ತ್ಯಾಜ್ಯಗಳಿಗೆ ಬೆಂಕಿ ಹಾಕಿ ಹಸನು ಮಾಡಬೇಕಿದೆ. ಆಳು ಕಾಳಿನ ಖರ್ಚಿಲ್ಲದೆ ಗದ್ದೆ ಹಸನಾಗುವುದರಿಂದ ಬೇಸಿಗೆಯಲ್ಲಿ ಬೆಂಕಿ ಇಡುವುದು ಅನಿವಾರ್ಯ ಆಗಿದೆ. ಆದರೆ, ಹಿಡುವಳಿದಾರರು ತ್ಯಾಜ್ಯವನ್ನು ಮಣ್ಣನಲ್ಲಿ ಸೇರಿಸುವುದರಿಂದ ಗೊಬ್ಬರದ ಅಗತ್ಯತೆ ನೀಗುತ್ತದೆ ಎಂಬುದರ ಬಗ್ಗೆ ಇನ್ನೂ ಅವರಿಗೆ ಅರಿವಿಲ್ಲ' ಎನ್ನುತ್ತಾರೆ ಕೃಷಿಕ ಹೊನ್ನೂರು ರೇವಣ್ಣ.

ಹುಲ್ಲು, ತರಗನ್ನು ಮಣ್ಣಿಗೆ ಹಾಕಿ

ಕೃಷಿಯಲ್ಲಿ ಅನುಪಯುಕ್ತ ಎಂಬುದಿಲ್ಲ. ಹುಲ್ಲು, ಕಡಲೆಗಿಡ, ನಾರು, ಸೋಗು ಮೊದಲಾದ ತ್ಯಾಜ್ಯವನ್ನು ಬೆಂಕಿಯಲ್ಲಿ ಸುಡಬಾರದು. ಬದಲಾಗಿ ನೀರಿನಲ್ಲಿ ಕೊಳೆಸಬೇಕು. ನಂತರ ಮಣ್ಣಿನಲ್ಲಿ ಸೇರಿಸಬೇಕು. ಪ್ರತಿ ಟನ್ ಗೆ 5.5 ಕೆಜಿ ಸಾರಜನಕ, 2.5 ಕೆಜಿ ರಂಜಕ, 25 ಕೆಜಿ ಪೊಟ್ಯಾಸಿಯಂ ಅನಾಯಾಸವಾಗಿ ರೈತರ ಬಳಕೆಗೆ ಬರುತ್ತದೆ. ತ್ಯಾಜ್ಯ ಹೊತ್ತಿ ಉರಿದರೆ ಒಂದೂವರೆ ಟನ್ ಮಿಥೇನ್, ಇಂಗಾಲದ ಮಾನೋಕ್ಸೈಡ್, ನೈಟ್ರಸ್ ಆಕ್ಸೈಡ್ ಮತ್ತಿತರ ವಿಷಕಾರಕಗಳು ನೇರವಾಗಿ ವಾತಾವರಣಕ್ಕೆ ಸೇರುತ್ತವೆ. ಮಣ್ಣಿನ ಆರೋಗ್ಯಕ್ಕೆ ಕಾರಣವಾಗುವ ಎರೆಹುಳು ಮತ್ತು ಸೂಕ್ಷ್ಮಾಣು ಜೀವಿ ನಾಶವಾಗುತ್ತವೆ. ಹಾಗಾಗಿ ಕೃಷಿ ತ್ಯಾಜ್ಯವನ್ನು ಮಣ್ಣಿಗೆ ಸೇರಿಸುವತ್ತ ರೈತರು ಮುಂದಾಗಬೇಕು' ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ 'ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT