ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ: ಸಫಾರಿ ವಲಯ, ಊಟಿ ರಸ್ತೆಯಲ್ಲಿ ಅರಳಿ ನಿಂತ ಮರಗಳು

ಅರಣ್ಯಕ್ಕೆ ಕಕ್ಕೆ, ಮುತ್ತುಗದ ಹೂವಿನ ಅಲಂಕಾರ
Last Updated 25 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಸಫಾರಿಗೆ ಹೆಸರಾಗಿರುವ ಬಂಡೀಪುರದಲ್ಲಿ ಈಗ ಮರಗಳಲ್ಲಿ ಅರಳಿನಿಂತಿರುವ ಹೂವುಗಳು ಪ್ರವಾಸಿಗರು ಹಾಗೂ ವಾಹನ ಸವಾರರನ್ನು ಆಕರ್ಷಿಸುತ್ತಿವೆ.

ಊಟಿಗೆ ಹೋಗುವ ರಸ್ತೆಯಲ್ಲಿ ಮುತ್ತುಗದ ಮರ, ಕಕ್ಕೆ ಗಿಡಗಳು ಸೇರಿದಂತೆ ಹಲವು ಗಿಡ ಮರಗಳು ಹೂವುಗಳನ್ನು ಅರಳಿಸಿವೆ.

ಜನವರಿಯಿಂದ ಏಪ್ರಿಲ್‌– ಮೇ ತಿಂಗಳವರೆಗೆ ಈ ಎರಡು ಹೂಗಳು ಎಲ್ಲೆಂದರಲ್ಲಿ ಕಾಣ ಸಿಗುತ್ತವೆ. ಬೇಸಿಗೆಯಲ್ಲಿ ಎಲೆ ಉದುರಿದ ಕಾಡಿಗೆ ಕೆಂಪು ಮತ್ತು ಹಳದಿ ಬಣ್ಣದಲ್ಲಿ ಆಲಂಕಾರ ಮಾಡಿದಂತೆ ಇವು ಗೋಚರಿಸುತ್ತವೆ.

ಕಕ್ಕೆ, ಕೊಂದೆ, ಹೊನ್ನೆ, ಸ್ವರ್ಣಪುಷ್ಪ ಎಂಬ ಹೆಸರುಗಳಿಂದ ಕರೆಯುವ ಹಳದಿ ಹೂವು ದೇವತೆಗಳಿಗೆ ಇಷ್ಟವಾದ ಹೂವು ಎಂದು ಹೇಳಲಾಗುತ್ತಿದೆ. ಯುಗಾದಿ ಸಮಯದಲ್ಲಿ ಅರಳುವ ಈ ಹೂವಿಗೆ ಕೇರಳ, ದಕ್ಷಿಣ ಕನ್ನಡ ಭಾಗಗಳಲ್ಲಿ ಪ್ರಾಮುಖ್ಯ ಇದೆ. ಕೇರಳದಲ್ಲಿ ಸೌರಮಾನ ಯುಗಾದಿ (ವಿಷು ಹಬ್ಬ) ಆಚರಣೆಗೆ ಈ ಹೂವು ಬೇಕೇ ಬೇಕು.

ಇಂಗ್ಲಿಷ್‌ನಲ್ಲಿ ಗೋಲ್ಡನ್ ಶವರ್ ಟ್ರೀ ಎಂದು ಕರೆಯುವ ಈ ಹೂವು ಥಾಯ್ಲೆಂಡ್‌ನ ರಾಷ್ಟ್ರೀಯ ಪುಷ್ಪ. ಕ್ಯಾಸಿಯಾ ಪಿಸ್ತುಲಾ ಎಂಬ ಸಸ್ಯ ಶಾಸ್ತ್ರೀಯ ಹೆಸರಿನ ಮರ, ಸಂಸ್ಕೃತದಲ್ಲಿ ಸುವಾರ್ಣಾಕ ಹೂ ಎಂಬ ಹೆಸರಿದೆ.

ಔಷಧೀಯ ಗುಣ ಹೊಂದಿರುವ ಈ ಮರದ ತೊಗಟೆಯನ್ನು ಅರೆದು, ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯದಿಂದ ಬಳಲುತ್ತಿರುವ ಜಾನುವಾರುಗಳಿಗೆ ಕುಡಿಸುವ ಪದ್ಧತಿ ಗ್ರಾಮೀಣ ಭಾಗದಲ್ಲಿದೆ.

‘ಗಿಡದಎಲೆ, ತೊಗಟೆಯನ್ನು ಸಂಗ್ರಹಿಸಿ ಇಡುತ್ತೇವೆ. ಪಿತ್ತಕೋಶದ ಸಮಸ್ಯೆ, ತುರಿಕೆ, ಉಷ್ಣ, ಮೂತ್ರದ ಸಮಸ್ಯೆ ಸಮಯದಲ್ಲಿ ಬಳಕೆ ಮಾಡುತ್ತೇವೆ’ ಎಂದು ಹೇಳುತ್ತಾರೆ ಗಿರಿಜನರು.

ಬಂಡೀಪುರದ ಸಫಾರಿ ವಲಯ, ಊಟಿ ರಸ್ತೆಯಲ್ಲಿ ಮುತ್ತುಗದ ಮರಗಳು ಕೂಡ ಹೂವು ಅರಳಿಸಿವೆ.ಬಹೂಪಯೋಗಿಯಾಗಿರುವ ಮುತ್ತುಗದ ಎಲೆಗಳ ಬಳಕೆ ಈಗಲೂ ಚಾಲ್ತಿಯಲ್ಲಿದೆ.

ಬುಡಕಟ್ಟು ಜನರು ಮತ್ತು ನೆರೆಯ ತಮಿಳುನಾಡಿನ ಮದುಮಲೆ ಅರಣ್ಯ ಭಾಗದಲ್ಲಿರುವ ಗಿರಿಜನರಿಗೆ ಮುತ್ತುಗದ ಎಲೆ ಆದಾಯದ ಮೂಲವಾಗಿದೆ. ಆಹಾರ ಸೇವಿಸಲು ಪ್ಲಾಸ್ಟಿಕ್‌ ಪ್ಲೇಟ್, ಬಾಳೆ ಎಲೆ ಬದಲಿಗೆ ಮುತ್ತುಗದ ಎಲೆಯಿಂದ ಮಾಡಿದ ಪ್ಲೇಟ್‌ ಬಳಸುವವರು ಇದ್ದಾರೆ.ನೀಲಗಿರಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ಗೆ ನಿಷೇಧ ಹೇರಿರುವುದರಿಂದ ಸಭೆ, ಸಮಾರಂಭದಲ್ಲಿ ಈ ಎಲೆಗಳ ಬಳಕೆ ಹೆಚ್ಚು.

‘ಮುತ್ತುಗದ ಎಲೆಗಳನ್ನು ಜೋಡಿಸಿ ಇಟ್ಟರೆ ಎಷ್ಟೋ ದಿನಗಳವರೆಗೆ ಬಳಸಬಹುದು, ಆಧುನಿಕತೆಯ ಹೊಡೆತದಿಂದ ಕಾಡು ಮರದ ಎಲೆ, ಹೂ ಮತ್ತು ಸಸ್ಯಗಳು ಪ್ರಾಮುಖ್ಯ ಕಳೆದುಕೊಳ್ಳುತ್ತಿದೆ. ಕಾಡಂಚಿನ ಭಾಗ ಅಥವಾ ತಾಲ್ಲೂಕಿನಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿದರೆ ಪರಿಸರಕ್ಕೂ ಒಳಿತಾಗುತ್ತದೆ. ಜನರ ಆರೋಗ್ಯವು ಉತ್ತಮವಾಗುತ್ತದೆ’ ಎಂದು ಪರಿಸರ ಪ್ರೇಮಿ ಪಿಂಟು ಅವರು ತಿಳಿಸಿದರು.

‘ಗಿರಿಜನರಿಗೆ ಕಿರು ಅರಣ್ಯ ಸಂಪತ್ತು ಸಂಗ್ರಹಿಸಲು ಅರಣ್ಯ ಇಲಾಖೆ ಕಾಡಿನಲ್ಲಿ ಅವಕಾಶ ನೀಡಿದರೆ ಇಂತಹ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಆಸಿವಾಸಿ ಜನರ ಜೀವನಕ್ಕೂ ದಾರಿಯಾಗುತ್ತದೆ‘ ಎಂಬುದು ಪರಿಸರ ಪ್ರೇಮಿಗಳ ಆಶಯ.

ಅಲಂಕಾರಿಕ ಹೂ

ಕಕ್ಕೆ ಹಾಗೂ ಮುತ್ತುಗದ ಹೂವುಗಳು ಅಲಂಕಾರಕ್ಕೆ ಬಳಕೆಯಾಗುತ್ತದೆ.

ಗ್ರಾಮೀಣ ಭಾಗಗಳಲ್ಲಿ ಜನರು ಹಾಗೂ ಗಿರಿಜನರು ಹೆಚ್ಚು ವಾಸಿಸುವ ಹಾಡಿಗಳಲ್ಲಿ ಮದುವೆ ಸೇರಿದಂತೆ ಶುಭಸಮಾರಂಭಗಳ ಸಂದರ್ಭದಲ್ಲಿ ಚಪ್ಪರಗಳಿಗೆ ಕಕ್ಕೆ, ಮುತ್ತುಗದ ಹೂವುಗಳಿಂದ ಅಲಂಕಾರ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT