ಶುಕ್ರವಾರ, ಸೆಪ್ಟೆಂಬರ್ 25, 2020
29 °C
ಎರಡನೇ ದಿನವೂ ಕೇರಳಕ್ಕೆ ಸಂಪರ್ಕ ಕಡಿತ, ದಾರಿ ಮಧ್ಯೆ ನೀರಿನಲ್ಲಿ ನಿಂತ ವಾಹನಗಳು

ಬಂಡೀಪುರ: ಕೋಡಿ ಬೀಳುತ್ತಿವೆ ಕೆರೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಾಲ್ಕು ದಿನಗಳಿಂದ ಸುರಿಯುತ್ತಿರುವ ಸತತ ಮಳೆಗೆ ಕಾಡಂಚಿನ ಕೆರೆಗಳು ತುಂಬಿ ಕೋಡಿ ಬೀಳಲು ಆರಂಭಿಸಿವೆ. 

ಶುಕ್ರವಾರ ಬೆಳಿಗ್ಗೆ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಹಿರಿಕೆರೆ ತುಂಬಿ ಕೋಡಿ ಬಿದ್ದು ಹಂಗಳ ಗ್ರಾಮದ ದೊಡ್ಡಕೆರೆಗೆ ನೀರು ರಭಸದಿಂದ ಹರಿಯುತ್ತಿದೆ. ಬೇರಾಂಬಾಡಿ ಬಳಿ ಕೆಂಪುಸಾಗರ ಕೆರೆಗೂ ನೀರು ಹರಿಯುತ್ತಿದ್ದು, ಒಂದೆರಡು ದಿನದಲ್ಲಿ ಕೋಡಿ ಬೀಳಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮನೆ ಕುಸಿತ: ನಿರಂತರವಾಗಿ ಸುಳಿಯುತ್ತಿರುವ ಮಳೆಗೆ ಮಂಗಲ ಗ್ರಾಮದ ಜವನಯ್ಯ ಎಂಬುವರ ಮನೆ ಕುಸಿದಿದೆ. ಚಿಕ್ಕಟಿ ಗ್ರಾಮದ ಕುಮಾರಸ್ವಾಮಿ, ರಾಜೇಗೌಡ, ಚಿಕ್ಕತಾಯಮ್ಮ, ತಿಮ್ಮಪ್ಪ ಅವರ ಮನೆಗಳ ಗೊಡೆಗಳೂ ಕುಸಿದಿವೆ. ಕಾಂಗ್ರೆಸ್ ಯುವ ಮುಖಂಡ ಎಚ್.ಎಂ.ಗಣೇಶ್ ಪ್ರಸಾದ್ ಅವರು ಚಿಕ್ಕಟಿ ಗ್ರಾಮದಲ್ಲಿ ಮನೆ ಕಳೆದುಕೊಂಡವರಿಗೆ ವೈಯಕ್ತಿಕಧನ ಸಹಾಯ ಮಾಡಿದರು.  

ಊಟಿಯಲ್ಲೂ ಮಳೆ: ತಮಿಳುನಾಡಿನ ಊಟಿಯಲ್ಲೂ ಭಾರಿ ಮಳೆಯಾಗುತ್ತಿರುವುದರಿಂದ ಗೂಡಲೂರು, ಟಿ.ಆರ್, ಬಜಾರ್, ಹನುಮಪುರಂ, ಪೈಕಾರ ಮುಂತಾದ ಜಾಗಗಳಲ್ಲಿ ರಸ್ತೆ ಕುಸಿದಿದೆ. ಊಟಿಗೆ ಸಂಚರಿಸಲು ಅಡಚಣೆ ಇಲ್ಲದಿದ್ದರೂ ಪ್ರಯಾಣ ಬೆಳೆಸುವರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗುತ್ತಿದೆ. 

ಎರಡನೇ ದಿನವೂ ಕೇರಳ ಸಂಪರ್ಕ ಕಡಿತ
ಈ ಮಧ್ಯೆ, ಕೇರಳದ ವಯನಾಡಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸತತ ಎರಡನೇ ದಿನವೂ ನೆರೆ ರಾಜ್ಯದೊಂದಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕೇರಳ ಗಡಿ ಭಾಗದ ಮುತಾಂಗ್‌ ಚೆಕ್‌ಪೋಸ್ಟ್‌ ಹಾಗೂ ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ಹೆದ್ದಾರಿಯಲ್ಲಿ ವಾಹನಗಳು ಸಿಲುಕಿಕೊಂಡಿದ್ದು ಸಣ್ಣ ವಾಹನಗಳು ನೀರಿನಲ್ಲಿ ಮುಳುಗಿವೆ. ಲಾರಿಗಳೆಲ್ಲ ಅರ್ಧದಷ್ಟು ಹೆಚ್ಚು ಮುಳುಗಿವೆ. 

ಎರಡನೇ ದಿನವೂ ತಾಲ್ಲೂಕಿನ ಮದ್ದೂರಿನಲ್ಲಿರುವ ಚೆಕ್‌ಪೋಸ್ಟ್‌ ಅನ್ನು ಬಂದ್‌ ಮಾಡಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ತುರ್ತಾಗಿ ಕೇರಳಕ್ಕೆ ಹೋಗಬೇಕಾದವರಿಗೆ ಬಂಡೀಪುರ –ಗೂಡಲೂರು ಮೂಲಕ ಹೋಗಲು ಅರಣ್ಯ ಅಧಿಕಾರಿಗಳು ಸೂಚಿಸಿದರು. 

‘ಮಳೆಯಿಂದಾಗಿ ಕೇರಳ ಮತ್ತು ತಮಿಳುನಾಡಿನ ರಸ್ತೆಗಳು ಕುಸಿದು ಬಿರುಕು ಬಿಟ್ಟಿರುವುದರಿಂದ ಭಾರಿ ವಾಹನಗಳು ಪಟ್ಟಣದಲ್ಲಿ ಬೀಡುಬಿಟ್ಟಿವೆ. ಕಾಡಿನ ಮಧ್ಯೆ ವಾಹನಗಳು ಸಿಕ್ಕಿ ಹಾಕಿಕೊಂಡರೆ, ಕಾಡು ಪ್ರಾಣಿಗಳಿಂದ ತೊಂದರೆಯಾಗುತ್ತದೆ. ಕೇರಳದ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವ ಕಾರಣ ಇನ್ನೂ ಎರಡು ಮೂರು ದಿನ ಈ ರಸ್ತೆಯನ್ನು ಮುಚ್ಚಲಾಗುತ್ತದೆ’ ಎಂದು ಮೂಲೆಹೊಳೆ ವಲಯಾರಣ್ಯಾಧಿಕಾರಿ ಮಹದೇವ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು