ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ಜಯಂತಿ ಸರಳ ಆಚರಣೆ

ಗೆಲುವೆನೆಂಬ ಭಾಷೆ ಭಕ್ತನದು ಎಂಬಂತೆ ಕೊರೊನಾ ವಿರುದ್ಧ ಜಯಿಸಲು ಕರೆ
Last Updated 15 ಮೇ 2021, 4:01 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್ ಕಾರಣದಿಂದಾಗಿ ಸತತ 2ನೇ ವರ್ಷವೂ ಬಸವ ಜಯಂತಿಯನ್ನು ಜಿಲ್ಲೆಯಲ್ಲಿ ಅತ್ಯಂತ ಸರಳವಾಗಿ ಆಚರಿಸಲಾಯಿತು.

ಇಲ್ಲಿನ ಸಿದ್ಧಮಲ್ಲೇಶ್ವರ ವಿರಕ್ತ ಮಠದಲ್ಲಿ ಶುಕ್ರವಾರ ಚನ್ನಬಸವ ಸ್ವಾಮೀಜಿ ಅವರು ಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಬಸವ ಜಯಂತಿಯನ್ನು ಆಚರಿಸಿದರು. ಈ ವೇಳೆ ಕೆಲವೇ ಕೆಲವು ಮಂದಿಯಷ್ಟೇ ಹಾಜರಿದ್ದರು. ಕೋವಿಡ್ ಕಾರಣದಿಂದಾಗಿ ಹೆಚ್ಚಿನ ಮಂದಿಗೆ ಆಹ್ವಾನ ನೀಡಿರಲಿಲ್ಲ.

ನಂತರ ಮಾತನಾಡಿದ ಚನ್ನಬಸವ ಸ್ವಾಮೀಜಿ, ಬಸವ ಜಯಂತಿಯ ಹೇಳಿದರು.

‘ಪ್ರಸ್ತುತ ಕೊರೊನಾ ವೈರಸ್‌ ಎಲ್ಲೆಡೆ ಆತಂಕ ಸೃಷ್ಟಿಸಿದೆ. ‘ಕೊಲುವೆನೆಂಬ ಭಾಷೆ ದೇವನದು ಗೆಲುವೆನೆಂಬ ಭಾಷೆ ಭಕ್ತನದು’ ಎಂಬ ವಚನದಂತೆ ಎಲ್ಲರೂ ಗೆಲುವು ಸಾಧಿಸುತ್ತೇವೆ ಎಂಬ ಆತ್ಮಸ್ಥೈರ್ಯ ತಂದು ಕೊಳ್ಳಬೇಕು. ಸರ್ಕಾರದ ನಿಯಮಗಳನ್ನು ಪಾಲಿಸಿ, ಮಾಸ್ಕ್ ಹಾಕಿಕೊಂಡು, ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಈ ಮೂಲಕ ಕೊರೊನಾ ಮುಕ್ತ ಕರ್ನಾಟಕ ನಿರ್ಮಾಣವಾಗಲು ಪಣತೊಡಬೇಕು’ ಎಂದು ಕರೆ ನೀಡಿದರು.

‘ಇವನಾರವ ಇವನಾರವ ಎನ್ನಿಸದೇ ಇವನಮ್ಮವ ಇವನಮ್ಮವ ಎಂದೆನಿಸಯ್ಯ’ ಎಂದು ಬಸವಣ್ಣನವರು ಹೇಳಿದಂತೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಮೇಲು ಕೀಳಿನ ವಿರುದ್ಧ ಹೋರಾಡಿದ ಅವರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು.

ಪ್ರತಿವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬರುತ್ತಿದ್ದರು. ಪಾನಕ, ಮಜ್ಜಿಗೆ, ಪ್ರಸಾದ ವಿತರಣೆ ನಡೆಯುತ್ತಿತ್ತು. ಹಲವು ಗ್ರಾಮಗಳಲ್ಲಿ ಬಸವಣ್ಣನವರ ಭಾವಚಿತ್ರ ಇಟ್ಟು ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಗುತ್ತಿತ್ತು. ಆದರೆ, ಕಳೆದ ಬಾರಿ ಮತ್ತು ಈ ಬಾರಿ ಕೊರೊನಾ ಸೋಂಕಿನ ಕಾರಣದಿಂದ ಸರಳವಾಗಿ ಆಚರಣೆ ನಡೆಯುತ್ತಿದೆ.

ಕೆಲವು ಗ್ರಾಮಗಳಲ್ಲಿರುವ ಬಸವೇಶ್ವರ ದೇಗುಲಗಳಲ್ಲಿ ಸರಳವಾಗಿ ಬಸವ ಜಯಂತಿಯನ್ನು ಆಚರಿಸಲಾಯಿತು.

ಯುವ ವೇದಿಕೆಯಿಂದ ಆಚರಣೆ
ಚಾಮರಾಜನಗರ:
ಕಾಯಕ ತತ್ವದ ಮೂಲಕ ಸಮ ಸಮಾಜ ನಿರ್ಮಿಸಿದ ಮಹಾನ್ ಜ್ಞಾನಿ ಬಸವಣ್ಣನವರು ಎಂದು ವೀರಶೈವ ಲಿಂಗಾಯತ ಯುವ ವೇದಿಕೆ ಜಿಲ್ಲಾ ಅಧ್ಯಕ್ಷ ಅರಳಿಕಟ್ಟೆ ಗುರುಮಲ್ಲಪ್ಪ ತಿಳಿಸಿದರು.

ತಾಲ್ಲೂಕಿನ ಅರಳಿಕಟ್ಟೆ ಗ್ರಾಮದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಶುಕ್ರವಾರ ಸರಳವಾಗಿ ನಡೆದ ವಿಶ್ವಗುರು ಬಸವಣ್ಣ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ವಚನಗಳ ಮೂಲಕ ಸಮಾಜವನ್ನು ತಿದ್ದಿದ ಬಸವಣ್ಣನವರು ಅನುಭವ ಮಂಟಪ ನಿರ್ಮಿಸಿ ಸಮಾನತೆ ಬಗ್ಗೆ ವಿಶ್ವಕ್ಕೆ ಮಾದರಿಯಾದರು. ಅವರ ತತ್ವ, ವಚನಗಳು ಸಾರ್ವಕಾಲಿಕ ಮೌಲ್ಯಗ ಳಾಗಿದ್ದು, ಅದನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದು ತಿಳಿಸಿದರು.

ಬಸವ ಜಯಂತಿ ಅಂಗವಾಗಿ ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿ ಕೊರೊನಾ ಜಾಗೃತಿ ಸಹ ಮೂಡಿಸಲಾಯಿತು.

ಕುಲಗಾಣ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹೇಂದ್ರ, ಸದಸ್ಯರಾದ ದೊರೆಸ್ವಾಮಿ, ಸವಿತಾ ಮಹದೇವಸ್ವಾಮಿ, ಜಿಲ್ಲಾ ಸಂಚಾಲಕರಾದ ಬಿ.ಪ್ರಕಾಶ್, ಆನಂದ್, ಮಹೇಶ್, ಮಲ್ಲೇಶ್, ರವಿ, ಚೇತನ್, ಮಹಿ, ಜಯಪ್ಪ, ಸ್ವಾಮಿ, ನಾಗೇಂದ್ರ, ರೈತ ಸಂಘದ ರೇಚಣ್ಣ ಇದ್ದರು ಎಂದು ಪ್ರಕಟಣೆ ತಿಳಿಸಿದೆ.

ಕೊಳ್ಳೇಗಾಲ ವರದಿ
ಕೊಳ್ಳೇಗಾಲ:
ಪಟ್ಟಣದಲ್ಲಿ ಶುಕ್ರವಾರ ಬಸವ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು.

ನಗರದ ಪ್ರವಾಸಿ ಮಂದಿರದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆಶಾಸಕ ಎನ್.ಮಹೇಶ್ ಅವರು ನಮನ ಸಲ್ಲಿಸಿದರು.

ನಂತರ ಮಾತನಾಡಿದ ಶಾಸಕರು, ‘ಮಹಾನ್ ಚೇತನ ಬಸವಣ್ಣನವರು 12ನೇ ಶತಮಾನದಲ್ಲಿ ಅಸಮಾನತೆ ವಿರುದ್ಧ ಹೋರಾಟ ನಡೆಸಿ ಎಲ್ಲರ ನಡುವೆ ಸಮಾನತೆ ತಂದರು’ ಎಂದು ಹೇಳಿದರು.

‘ಪ್ರತಿಯೊಬ್ಬರೂ ಅಂತರ ಕಾಯ್ದು ಕೊಂಡು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕೋವಿಡ್‌ ಮಾರ್ಗಸೂಚಿ ಪಾಲಿಸಬೇಕು’ ಎಂದು ಸಲಹೆ ನೀಡಿದರು.

ನಗರಸಭೆ ಸದಸ್ಯ ರಾಮಕೃಷ್ಣ, ನಟರಾಜು, ಮುಖಂಡ ಜಗದೀಶ್, ವೀರಭದ್ರಸ್ವಾಮಿ, ಮಲ್ಲಿಕ್, ಸೋಮಣ್ಣ ಉಪ್ಪಾರ್, ಸ್ವಾಮಿ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT