ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ಇಬ್ಬರು ಮುಖಂಡರ ನಡುವಿನ ಮುಸುಕಿನ ಗುದ್ದಾಟ ಬೀದಿಗೆ

Last Updated 3 ನವೆಂಬರ್ 2022, 14:18 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಕೊಳ್ಳೇಗಾಲದಲ್ಲಿ ಶಾಸಕ ಎನ್‌.ಮಹೇಶ್‌ ಮತ್ತು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ, ಮುಂದಿನ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ ಆಕಾಂಕ್ಷಿ ಜಿ.ಎನ್.ನಂಜುಂಡಸ್ವಾಮಿ ಅವರ ನಡುವೆ ನಡೆಯುತ್ತಿದ್ದಮುಸುಕಿನ ಗುದ್ದಾಟ ಬಹಿರಂಗವಾಗಿದೆ.

ನಗರಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸಂಬಂಧಿಸಿದಂತೆ ಗುರುವಾರ ನಂಜುಂಡಸ್ವಾಮಿ ಅವರು ಪತ್ರಿಕಾಗೋಷ್ಠಿ ನಡೆಸಿ ಮಹೇಶ್‌ ವಿರುದ್ಧ ವಾಗ್ದಾಳಿ ನಡೆಸಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮತ್ತೆ ಗೆಲ್ಲಲಿ ಎಂದು ಸವಾಲು ಹಾಕಿದರು.

‘ಕುತಂತ್ರ ಮಾಡಿಯೇ ರಾಜಕಾರಣಕ್ಕೆ ಬಂದ ಎನ್‌.ಮಹೇಶ್‌ ಅವರು ಪಕ್ಷವನ್ನು ಹಾಳು ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಗರದಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿಸೋಮವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಮಹೇಶ್‌, ‘ಕೆಲವರು ಪಕ್ಷವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.ಉಪಚುನಾವಣೆ ಫಲಿತಾಂಶ ಹೊರ ಬಂದ ಮೇಲೆ, ನಾನು ಉಪಚುನಾವಣೆಯಲ್ಲಿ ಯಾವುದೇ ಕೆಲಸವನ್ನು ಮಾಡಿಲ್ಲ ಎಂದು ಗೆದ್ದಂತಹ ಸದಸ್ಯರು ಬಿಂಬಿಸುತ್ತಿದ್ದಾರೆ. ಶಾಸಕರೂ ಇದೇ ರೀತಿ ಹೇಳುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.

‘ಅಭಿನಂದನಾ ಸಮಾರಂಭಕ್ಕೆ ನನ್ನನ್ನು ಆಹ್ವಾನಿಸಿಲ್ಲ. ಆ ಕಾರ್ಯಕ್ರಮ ಅಧಿಕೃತವಲ್ಲ. ಅದರಲ್ಲಿ ಮಂಡಲ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಜಿಲ್ಲೆಯ ಪದಾಧಿಕಾರಿಗಳು ಯಾರೂ ಭಾಗವಹಿಸಿಲ್ಲ. ಅದು ಪಕ್ಷದ ಶಿಸ್ತಿಗೆ ವಿರುದ್ಧವಾದ ಕಾರ್ಯಕ್ರಮ’ ಎಂದು ದೂರಿದರು.

ರಾಜೀನಾಮೆ ನೀಡಲಿ: ‘ಶಾಸಕ ಮಹೇಶ್ ಅವರು ತಾನು ಅತೀ ಬುದ್ದಿವಂತ ಎಂದು ತಿಳಿದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ತನಗೇ ಎಂದು ಹೇಳಿಕೊಳ್ಳುತ್ತಿದ್ದಾರೆ. ಚುನಾವಣೆಗೆ ಇನ್ನೂ ಆರು ತಿಂಗಳು ಇದೆ. ಅವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ, ಚುನಾವಣೆಗೆ ಸ್ಪರ್ಧಿಸಿ ಗೆಲ್ಲಲಿ. ಗೆದ್ದರೆ ರಾಜ್ಯಕ್ಕೆ ಒಳ್ಳೆಯ ಸಂದೇಶ ಹೋಗುತ್ತದೆ’ ಎಂದರು.

‘ನಾನು ಜಿಲ್ಲೆಯ ಮೂಲೆ ಮೂಲೆಯ ಹಳ್ಳಿಗಳಿಗೆ ಹೋಗಿ ಕಮಲದ ಬಾವುಟಗಳನ್ನು ಕಟ್ಟಿದ್ದೇನೆ. ಕಷ್ಟಕಾಲದಲ್ಲಿ ಪಕ್ಷವನ್ನು ಕಟ್ಟಿ ಅನೇಕ ಮುಖಂಡರನ್ನು ಬೆಳೆಸಿದ್ದೇನೆ. ಮಹೇಶ್ ಅವರನ್ನು ನಾನೇ ಬಿಜೆಪಿಗೆ ಕರೆದುಕೊಂಡು ಬಂದೆ. ಕೇಂದ್ರ ಮತ್ತು ರಾಜ್ಯದ ನಾಯಕರು ನನಗೆ ಮತ್ತು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರಿಗೆ ಕರೆ ಮಾಡಿ ಶಾಸಕ ಎನ್.ಮಹೇಶ್ ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ ಎಂದು ಹೇಳಿದಾಗ ನಾವೇ ಕರೆ ತಂದು ಪಕ್ಷಕ್ಕೆ ಸೇರ್ಪಡೆ ಮಾಡಿಸಿಕೊಂಡೆವು’ ಎಂದು ನಂಜುಂಡಸ್ವಾಮಿ ಹೇಳಿದರು.

ನಗರಸಭೆ ಸದಸ್ಯ ಜಿ.ಪಿ.ಶಿವಕುಮಾರ್, ನಾಗೇಂದ್ರ, ಧರಣೇಶ್, ಮುಖಂಡ ಮಹದೇವಪ್ಪ, ರಾಜೇಂದ್ರ, ಶೇಖರಪ್ಪ, ಕುಮಾರ್, ರೇವಣ್ಣ ಸೇರಿದಂತೆ ಅನೇಕರು ಇದ್ದರು.

‘ಸೋಮಣ್ಣ ವರ್ತನೆಯಿಂದ ನೋವು’

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಕೆಲವು ಸಭೆ ಸಮಾರಂಭಗಳಲ್ಲಿ ಶಾಸಕ ಎನ್.ಮಹೇಶ್ ಅವರಿಗೆ ಟಿಕೆಟ್ ಎಂದು ಹೇಳುತ್ತಿದ್ದಾರೆ. ಅದು ಸರಿ ಇಲ್ಲ. ರಾಜ್ಯ ಸಮಿತಿ ಮತ್ತು ಕೇಂದ್ರ ಸಮಿತಿಗೆ ಟಿಕೆಟ್‌ ನೀಡುವ ಅಧಿಕಾರ ಇದೆಯೇ ವಿನಾ, ಇವರಿಗಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಗುಸು, ಗುಸು, ಪಿಸು ಪಿಸು ಮಾತುಗಳನ್ನೂ ಆಡಬಾರದು. ಇದರಿಂದ ಬಿಜೆಪಿ ಕಾರ್ಯಕರ್ತರಿಗೆ, ಮುಖಂಡರಿಗೆ ನೋವಾಗುತ್ತಿದೆ’ ಎಂದು ನಂಜುಂಡಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT