ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಮೀಸಲಾತಿ ಪರವಾಗಿರುವ ಬಿಜೆಪಿ ಬೆಂಬಲಿಸಿ: ನಾರಾಯಣಸ್ವಾಮಿ ಮನವಿ

ಮಾದಿಗ ಸಮುದಾಯದ ಮುಖಂಡರು, ಕಾರ್ಯಕರ್ತರ ಸಮಾವೇಶ: ಕೇಂದ್ರ ಸಚಿವ ನಾರಾಯಣಸ್ವಾಮಿ ಮನವಿ
Published 23 ಏಪ್ರಿಲ್ 2024, 4:50 IST
Last Updated 23 ಏಪ್ರಿಲ್ 2024, 4:50 IST
ಅಕ್ಷರ ಗಾತ್ರ

ಚಾಮರಾಜನಗರ: 'ಒಳ ಮೀಸಲಾತಿ ಯಾಕೆ ಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸುತ್ತಿದ್ದಾರೆ. ಅಂತಹವರಿಗೆ ಮತ ಹಾಕಬೇಕಾ? 30 ವರ್ಷಗಳ ಹೋರಾಟದ ಫಲವಾಗಿ ಒಳ ಮೀಸಲಾತಿ ಕೊಡಲು ಹೊರಟಿರುವ ಬಿಜೆಪಿಗೆ ಸಮುದಾಯದವರು ಮತ ನೀಡಬೇಕು’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ ಸೋಮವಾರ ಕರೆ ನೀಡಿದರು.

ನಗರದಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ಹಮ್ಮಿಕೊಂಡಿದ್ದ ಮಾದಿಗ ಸಮುದಾಯದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಮಾದಿಗರು ಎಂದರೆ ಮೋದಿ, ಮೋದಿ ಎಂದರೆ ಮಾದಿಗರು ಎಂಬ ಚರ್ಚೆ ನಡೆಯುತ್ತಿದೆ. ಒಳಮೀಸಲಾತಿ ಅಗತ್ಯವಿದೆ ಎಂದು 30 ವರ್ಷಗಳಿಂದ ಹೋರಾಟ ನಡೆಯುತ್ತಿವೆ. ಒಳ ಮೀಸಲಾತಿ ಇಲ್ಲದೆ ಮಾದಿಗ ಮತ್ತು ಉಪಜಾತಿಗಳು ಅನ್ಯಾಯಕ್ಕೆ ಒಳಗಾಗುತ್ತಿವೆ. ಶಿಕ್ಷಣ ಉದ್ಯೋಗ, ರಾಜಕೀಯ ಕ್ಷೇತ್ರದಲ್ಲಿ ಸಮುದಾಯದವರಿಗೆ ಅವಕಾಶ ಸಿಗುತ್ತಿಲ್ಲ’ ಎಂದರು.

‘ನಮ್ಮ ಮಕ್ಕಳು ಬೇರೆಯವರೊಂದಿಗೆ ಸ್ಪರ್ಧಿಸಲು ಆಗುತ್ತಿಲ್ಲ. ಒಳ ಮೀಸಲಾತಿ ಜಾರಿಯಾಗದೆ ಹೋದರೆ ನಿಮ್ಮ ಮಕ್ಕಳು ಫುಟ್‌ಪಾತ್‌ನಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಇರಬೇಕಾಗುತ್ತದೆ. ಇಲ್ಲಿಯವರೆಗೆ ಯಾವ ಸರ್ಕಾರಗಳೂ ಈ ಬಗ್ಗೆ ಗಮನಹರಿಸಿಲ್ಲ. ಆದರೆ, ಬಿಜೆಪಿ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಯಡಿಯೂರಪ್ಪ ಅವರು ಸದಾಶಿವ ಆಯೋಗಕ್ಕೆ ₹12.5 ಕೊಟಿ ಕೊಟ್ಟಿದ್ದರು. ಒಳಮೀಸಲಾತಿ ಅಗತ್ಯವಿದೆ ಎಂದು ಶಿಫಾರಸು ಮಾಡಿದ್ದು ಬೊಮ್ಮಾಯಿ ನೇತೃತ್ವದ ಬೊಮ್ಮಾಯಿ ಸರ್ಕಾರ. ಮೀಸಲಾತಿ ಪ್ರಮಾಣವನ್ನು ಶೇ 17ಕ್ಕೆ ಹೆಚ್ಚಿಸಿದ್ದು ಬಿಜೆಪಿ ಸರ್ಕಾರ’ ಎಂದರು.

‘ಮೋದಿ ಪ್ರಧಾನಿಯಾಗಬೇಕು ಎಂದು ವಿಶ್ವದಲ್ಲಿ ಚರ್ಚೆಯಾಗುತ್ತಿದೆ. ಒಳ ಮೀಸಲಾತಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಅದಕ್ಕಾಗಿ ಅವರನ್ನು ಗೆಲ್ಲಿಸಬೇಕು. ಕ್ಷೇತ್ರದಲ್ಲಿ ಎಸ್‌.ಬಾಲರಾಜು ಅವರನ್ನು ಬೆಂಬಲಿಸಬೇಕು’ ಎಂದು ನಾರಾಯಣ ಸ್ವಾಮಿ ಮನವಿ ಮಾಡಿದರು.

ವಿಧಾನ ಪರಿಷತ್ತಿನ ಮಾಜಿ ಸದಸ್ಯ ಸಿ.ರಮೇಶ್‌ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರು ಮೀಸಲಾತಿ ವರ್ಗೀಕರಣ ಬೇಕು ಎಂದು ಸಮಿತಿ ಮಾಡಿದ್ದಾರೆ. ಕೇಂದ್ರ ಸಮಾಜ ಕಲ್ಯಾಣ ಸಚಿವರು ಕಾರ್ಯೋನ್ಮುಖರಾಗಿದ್ದಾರೆ. ನಾರಾಯಣಸ್ವಾಮಿ ಕೂಡ ಪ್ರಯತ್ನ ಪಡೆಯುತ್ತಿದ್ದಾರೆ’ ಎಂದರು.

‘ಈಗಿನ ಕಾಂಗ್ರೆಸ್‌ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷವಲ್ಲ. ಸಿದ್ದರಾಮಯ್ಯನವರ ಕಾಂಗ್ರೆಸ್‌ ಬುಡುಬುಡುಕೆ ಕಾಂಗ್ರೆಸ್‌. ಅವರಿಗೆ ಮತ ಹಾಕಿ ನಮಗೆ ಇರುವ ಮರ್ಯಾದೆಯನ್ನು ಯಾಕೆ ಕಡಿಮೆ ಮಾಡಿಕೊಳ್ಳಬೇಕು’ ಎಂದು ಪ್ರಶ್ನಿಸಿದರು.

ಜೆಡಿಎಸ್‌ ನಾಯಕ ಆಲ್ಕೋಡು ಹನುಮಂತಪ್ಪ, ವಿಧಾನ ಪರಿಷತ್‌ ಮಾಜಿ ಸದಸ್ಯ ವೀರಯ್ಯ ಮಾತನಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್‌.ನಿರಂಜನ್‌ಕುಮಾರ್‌, ಉಪಾಧ್ಯಕ್ಷ ಅರಕಲವಾಡಿ ನಾಗೇಂದ್ರ, ಕೇಂದ್ರ ಬರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಮುಖಂಡರಾದ ಆರ್.ಸುಂದರ್, ಮಹದೇವಯ್ಯ, ರಾಚಯ್ಯ, ಗಣೇಶ್ ಇತರರು ಭಾಗವಹಿಸಿದ್ದರು.

‘ಗುಲಾಮಗಿರಿ ಪ್ರೋತ್ಸಾಹಿಸುವ ಸರ್ಕಾರ ಬೇಡ’

ಬಿಜೆಪಿ ನಾಯಕಿ ನಾಗಶ್ರೀ ಪ್ರತಾಪ್‌ ಮಾತನಾಡಿ ‘ಕಾಂಗ್ರೆಸ್‌ನವರು ಹೆಣ್ಣುಮಕ್ಕಳನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಸ್ವಾಭಿಮಾನದಿಂದ ಬದುಕುವ ಸಾಮರ್ಥ್ಯ ನಮಗೆ ಇರುವಾಗ ಸರ್ಕಾರ ಬಿಟ್ಟಿ ಯೋಜನೆಗಳನ್ನು ಕೊಡುತ್ತಿದೆ. ಮೋದಿಯವರು ಹೆಣ್ಣುಮಕ್ಕಳಿಗೆ ಶೇ 33ರಷ್ಟು ಮೀಸಲಾತಿ ನೀಡಿ ನಾರಿ ಶಕ್ತಿಯನ್ನು ಹೆಚ್ಚಿಸಲು ಶ್ರಮಿಸುತ್ತಿದ್ದಾರೆ. ನಮಗೆ ಸ್ವಾಭಿಮಾನದಿಂದ ತಲೆ ಎತ್ತಿ ನಡೆಯುವಂತಹ ಮಾಡುವ ಸರ್ಕಾರ ಬೇಕೇ ವಿನಾ ಗುಲಾಮಗಿರಿ ಪ್ರೋತ್ಸಾಹಿಸುವ ಸರ್ಕಾರ ಅಲ್ಲ. ಹಾಗಾಗಿ ಮಹಿಳೆಯರು ಬಿಜೆಪಿಯನ್ನು ಬೆಂಬಲಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT