ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಂಚಕ್ಕೆ ಬೇಡಿಕೆ: ವಾಣಿಜ್ಯ ತೆರಿಗೆಯ ಇಬ್ಬರು ಇನ್‌ಸ್ಪೆಕ್ಟರ್‌ ಎಸಿಬಿ ಬಲೆಗೆ

Published : 4 ಡಿಸೆಂಬರ್ 2021, 15:15 IST
ಫಾಲೋ ಮಾಡಿ
Comments

ಚಾಮರಾಜನಗರ: ವಾಹನಗಳ ಬಿಡಿಭಾಗಗಳ ಅಂಗಡಿಯೊಂದರ ಮಾಲೀಕರಿಗೆ ದಂಡ ಕಟ್ಟಲು ನೀಡಿದ್ದ ನೋಟಿಸ್‌ ರದ್ದು ಮಾಡಲು ಹಾಗೂ ಜಿಎಸ್‌ಟಿ ನೋಂದಣಿ ಮಾಡಿಸದೇ ಇರಲು ₹7,000 ಲಂಚ ಪಡೆಯುತ್ತಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಇಬ್ಬರು ಇನ್‌ಸ್ಪೆಕ್ಟರ್‌ಗಳು ಶನಿವಾರ ನಗರದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಅವಿನಾಶ್‌ ಹಾಗೂ ರವಿಕುಮಾರ್‌ ಅವರು ಎಸಿಬಿ ಬಲೆಗೆ ಬಿದ್ದ ಇನ್‌ಸ್ಪೆಕ್ಟರ್‌ಗಳು. ಇಬ್ಬರನ್ನೂ ಎಸಿಬಿ ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ನಾಗವಳ್ಳಿ ಗ್ರಾಮದವರೊಬ್ಬರು ವಾಹನಗಳ ಬಿಡಿಭಾಗಗಳ ಅಂಗಡಿ ಇಟ್ಟುಕೊಂಡಿದ್ದರು. ಅವರು ಜಿಎಸ್‌ಟಿ ನೋಂದಣಿ ಮಾಡದೇ ಇರುವುದರ ಬಗ್ಗೆ, ದಂಡ ಪಾವತಿಸುವಂತೆ ಇನ್‌ಸ್ಪೆಕ್ಟರ್‌ ಅವಿನಾಶ್‌ ಅವರು ನೋಟಿಸ್‌ ನೀಡಿದ್ದರು.

‘ಅಂಗಡಿ ಮಾಲೀಕ, ಇದೇ 2ರಂದು ನಗರದಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆಯ ಕಚೇರಿಗೆ ಹೋಗಿದ್ದಾಗ ಇನ್‌ಸ್ಪೆಕ್ಟರ್‌ ಅವಿನಾಶ್‌ ಅವರು ದಂಡ ಪಾವತಿಸಲು ನೀಡಿದ ನೋಟಿಸ್‌ ಅನ್ನು ರದ್ದು ಮಾಡಲು ಹಾಗೂ ಜಿಎಸ್‌ಟಿ ನೋಂದಣಿ ಮಾಡಿಸದೇ ಇರಲು ₹10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ₹7,000ಕ್ಕೆ ಮಾತುಕತೆಯಾಗಿತ್ತು. ಅಂಗಡಿ ಮಾಲೀಕ ನಮಗೆ ದೂರು ನೀಡಿದ್ದರು. ಶನಿವಾರ ದೂರುದಾರರು ಲಂಚದ ಹಣ ನೀಡಲು ವಾಣಿಜ್ಯ ತೆರಿಗೆ ಇಲಾಖೆ ಕಚೇರಿಗೆ ಹೋಗಿದ್ದರು. ಇನ್‌ಸ್ಪೆಕ್ಟರ್‌ಗಳಾದ ಅವಿ‌ನಾಶ್‌ ಹಾಗೂ ರವಿಕುಮಾರ್‌ ಅವರು ₹7,000 ಹಣ ಪಡೆಯುತ್ತಿದ್ದಾಗ ಕಾರ್ಯಾಚಣೆ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ’ ಎಂದು ಎಸಿಬಿ ಡಿವೈಎಸ್‌ಪಿ ಸದಾನಂದಎ.ತಿಪ್ಪಣ್ಣವರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿ ಸದಾನಂದ ಎ.ತಿಪ್ಪಣ್ಣವರ್‌, ಇನ್‌ಸ್ಪೆಕ್ಟರ್‌ ಕಿರಣ್‌ಕುಮಾರ್, ಸಿಬ್ಬಂದಿ ಮಲ್ಲಿಕಾರ್ಜುನ, ಸತೀಶ್‌, ಮಹದೇವಸ್ವಾಮಿ, ಕೃಷ್ಣಕುಮಾರ್‌ ಮತ್ತು ನಾಗಲಕ್ಷ್ಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT