ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ | ಬಿಸಿಲಿನ ಝಳ: ವ್ಯಾಪಾರಕ್ಕೆ ಹೊಡೆತ

ಜ್ಯೂಸ್‌ ಅಂಗಡಿಗಳಲ್ಲಿ ಗ್ರಾಹಕರ ದಟ್ಟಣೆ, ಹಣ್ಣುಗಳಿಗೂ ಬೇಡಿಕೆ
ಅವಿನ್ ಪ್ರಕಾಶ್ ವಿ.
Published 17 ಏಪ್ರಿಲ್ 2024, 5:38 IST
Last Updated 17 ಏಪ್ರಿಲ್ 2024, 5:38 IST
ಅಕ್ಷರ ಗಾತ್ರ

ಕೊಳ್ಳೇಗಾಲ: ದಿನದಿಂದ ದಿನಕ್ಕೆ ಬಿಸಿಲಿನ ತೀವ್ರತೆ ಹೆಚ್ಚುತ್ತಿರುವುದರಿಂದ ಜನರು ತಾಲ್ಲೂಕು ಕೇಂದ್ರಗಳಿಗೆ ಬರುವುದು ಕಡಿಮೆ ಮಾಡಿದ್ದು, ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. 

ಜ್ಯೂಸ್‌, ಮಜ್ಜಿಗೆ, ಎಳನೀರು ಸೇರಿದಂತೆ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಈ ಮಳಿಗೆಗಳಲ್ಲಿ ಗ್ರಾಹಕರ ದಟ್ಟಣೆ ಕಂಡು ಬರುತ್ತಿದೆ.

ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಕೊಳ್ಳೇಗಾಲದಲ್ಲಿ ವಾತಾವರಣದ ಉಷ್ಣತೆ 38 ಡಿಗ್ರಿ ಸೆಲ್ಸಿಯಸ್‌ನಿಂದ 40 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದೆ. ಜನರು ಬಿಸಿಲಿನಲ್ಲಿ ಓಡಾಡುವುದಕ್ಕೆ ಪ್ರಯಾಸ ಪಡುವಂತಾಗಿದ್ದು, ಅನಿವಾರ್ಯ ಇದ್ದರೆ ಮಾತ್ರ ಜನರು ಮನೆಯಿಂದ ಹೊರಗಡೆ ಬರುತ್ತಿದ್ದಾರೆ. ಗ್ರಾಮೀಣ ಭಾಗಗಳ ಜನರು ಅಷ್ಟೇ. ಅಗತ್ಯ ಬಿದ್ದರೆ ಮಾತ್ರ ತಾಲ್ಲೂಕು ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಾರೆ. 

ಬಡಗುಟ್ಟುವ ರಸ್ತೆಗಳು: ಬೆಳಿಗ್ಗೆ 8 ಗಂಟೆಗೆ ಬಿಸಿಲಿನ ತೀವ್ರತೆ ಏರತೊಡಗುತ್ತದೆ. 10 ಗಂಟೆಯ ಬಳಿಕ ರಸ್ತೆಯಲ್ಲಿ ನಡೆದಾಡಲು ಸಾಧ್ಯವಾಗದಂತಹ ಸ್ಥಿತಿ ಇದೆ. ನಗರದ ಪ್ರಮುಖ ಸ್ಥಳಗಳು ಹಾಗೂ ಸಾರ್ವಜನಿಕರು ಹೆಚ್ಚು ಓಡಾಡುವ ಸ್ಥಳಗಳು ಖಾಲಿ ಖಾಲಿ ಆಗಿ ಕಾಣುತ್ತವೆ. 

ಡಾ.ರಾಜ್‌ಕುಮಾರ್ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಎಂ.ಜಿ.ಎಸ್‌.ಸಿ ರಸ್ತೆ, ಚಿನ್ನದ ಅಂಗಡಿ ಬೀದಿ ಹಾಗೂ ಚೌಡೇಶ್ವರಿ ಕಲ್ಯಾಣ ಮಂಟಪ ರಸ್ತೆಗಳು ಬೆಳಿಗ್ಗೆಯಿಂದ ಸಂಜೆಯವರೆಗೂ ಜನರು, ವಾಹನಗಳಿಂದ ತುಂಬಿರುತ್ತವೆ. ಆದರೆ, ಈಗ ಬೆಳಿಗ್ಗೆ 10 ಗಂಟೆಯ ನಂತರ ಜನ ಸಂಚಾರ ಕಡಿಮೆಯಾಗುತ್ತಿದೆ. 

ಇದು ವ್ಯಾಪಾರದ ಮೇಲೆ ಪರಿಣಾಮ ಬೀರಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಹೆಚ್ಚು ತೊಂದರೆಯಾಗಿದೆ. ಬಿಸಿಲಿನ ಬೇಗೆ ಒಂದೆಡೆಯಾದರೆ, ವ್ಯಾಪಾರ ಇಲ್ಲದಿರುವುದು ಅವರನ್ನು ಜರ್ಜರಿತರನ್ನಾಗಿ ಮಾಡಿದೆ. 

‘ಹಣ್ಣಿನ ಅಂಗಡಿಗಳು ಹಾಗೂ ತಂಪು ಪಾನೀಯ ಅಂಗಡಿಗಳಲ್ಲಿ ಬಿಟ್ಟರೆ ಬೇರೆ ಅಂಗಡಿಗಳಲ್ಲಿ ಹೆಚ್ಚು ವ್ಯಾಪಾರ ನಡೆಯುತ್ತಿಲ್ಲ. ಇದರಿಂದಾಗಿ ಕೆಲವು ತಳ್ಳುಗಾಡಿ ವ್ಯಾಪಾರಿಗಳು ಬೇರೆ ಕೆಲಸಗಳನ್ನು ಅವಲಂಬಿಸಿದ್ದಾರೆ. ಹಲವು ವರ್ಷಗಳಿಂದ ನಾನು ತಳ್ಳುಗಾಡಿಯಲ್ಲಿ ಪ್ಲಾಸ್ಟಿಕ್ ಸಾಮಗ್ರಿ ಸೇರಿದಂತೆ ಇತರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದೇವೆ. ಈ ಬಿರು ಬೇಸಿಗೆಯಿಂದ ಜನರು ಬರುತ್ತಿಲ್ಲ. ಹೀಗಾಗಿ ವ್ಯಾಪಾರ ಕಡಿಮೆಯಾಗಿದೆ’ ಎಂದು ವ್ಯಾಪಾರಿ ನಜೀರ್ ಅಹಮದ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ತಂಪು ಪಾನೀಯ ವ್ಯಾಪಾರ ಜೋರು: ಬಿಸಿಲಿಗೆ ಬೆಂಡಾದ ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ರಸ್ತೆ ಬದಿ, ಬಸ್‌ ನಿಲ್ದಾಣ ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಎಳನೀರು, ಮಜ್ಜಿಗೆ, ಜ್ಯೂಸ್‌, ಕಬ್ಬಿನ ಹಾಲಿನ ವ್ಯಾಪಾರ ಜೋರಾಗಿದೆ. ಹೊಸ ಅಂಗಡಿ ತೆರೆದವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಕಲ್ಲಂಗಡಿ, ಖರಬೂಜ ಸೇರಿದಂತೆ ವಿವಿಧ ಹಣ್ಣುಗಳನ್ನು ಸೇವಿಸುವವರ ಸಂಖ್ಯೆಯೂ ಜಾಸ್ತಿಯಾಗಿದೆ. 

ಸಣ್ಣಪುಟ್ಟ ಅಂಗಡಿಗಳಲ್ಲಿ ಹಾಗೂ ತಳ್ಳುಗಾಡಿಗಳಲ್ಲಿ ₹10 ನಿಂಬೆ ಷರಬತ್ತು ಮಾರಾಟ ಮಾಡುತ್ತಿದ್ದಾರೆ. 

‘ಕಲ್ಲಂಗಡಿ, ಖರಬೂಜ ಹಣ್ಣುಗಳನ್ನು ಗ್ರಾಹಕರು ಖರೀದಿಸುತ್ತಿದ್ದಾರೆ. ಪ್ರತಿ ವಾರ ಹತ್ತಾರು ಲಾರಿಗಳು ಕಲ್ಲಂಗಡಿ, ಖರಬೂಜ, ದ್ರಾಕ್ಷಿ ಹಣ್ಣುಗಳನ್ನು ತುಂಬಿಕೊಂಡು ನಗರಕ್ಕೆ ಬರುತ್ತಿವೆ. ಕಳೆದ ವರ್ಷದಕ್ಕಿಂತ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಂಗಡಿ ದಾಸ್ತಾನು ಬಂದಿದೆ. ಪ್ರತಿ ಕೆಜಿಗೆ  ₹20 ಇದೆ. ಪ್ರದಿದಿನ ಸರಾಸರಿ 500 ಕೆಜಿ ಮಾರಾಟ ಮಾಡುತ್ತಿದ್ದೇವೆ’ ಎಂದು ಕಲ್ಲಂಗಡಿ ವ್ಯಾಪಾರಿ ಸುದೀಪ್ ‘ಪ್ರಜಾವಾಣಿ’ಗೆ ತಿಳಿಸಿದರು. 

ಕೊಳ್ಳೇಗಾಲದ ಜ್ಯೂಸ್‌ ಅಂಗಡಿಯೊಂದರ ಮುಂದೆ ಸೇರಿದ್ದ ಗ್ರಾಹಕರು
ಕೊಳ್ಳೇಗಾಲದ ಜ್ಯೂಸ್‌ ಅಂಗಡಿಯೊಂದರ ಮುಂದೆ ಸೇರಿದ್ದ ಗ್ರಾಹಕರು

ಭಯ ಬೇಡ ಎಚ್ಚರಿಕೆ ಇರಲಿ..

‘ಕೆಲವು ವರ್ಷಗಳಿಂದ ಬೇಸಿಗೆಯಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ಜನರು ಬಿಸಿಲಿಗೆ ಭಯಪಡುವ ಅಗತ್ಯವಿಲ್ಲ. ಎಚ್ಚರವಿದ್ದರೆ ಸಾಕು ಎಂದು ಹೇಳುತ್ತಾರೆ ವೈದ್ಯರು.  ಬಿಸಿಲು ಜಾಸ್ತಿ ಇದ್ದ ಸಂದರ್ಭದಲ್ಲಿ ಅನಾವಶ್ಯಕವಾಗಿ ಜನರು ಹೊರಗಡೆ ಓಡಾಡಬಾರದು. ಅವಶ್ಯಕತೆ ಇದ್ದರೆ ಮಾತ್ರ ಹೋದರೆ ಸಾಕು. ಕಪ್ಪು ಹಾಗೂ ನೀಲಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಬೇಡ. ಹಣ್ಣಿನ ರಸಗಳು ಹಾಗೂ ನೀರನ್ನು ಹೆಚ್ಚು ಕುಡಿಯಬೇಕು. ಮಾಂಸಾಹಾರವನ್ನು ಸೇವನೆ ಮಿತಿಯಲ್ಲಿದ್ದರೆ ಒಳ್ಳೆಯದು. ಹತ್ತಿ ಬಟ್ಟೆಗಳನ್ನು ಧರಿಸುವುದು ಉತ್ತಮ’ ಎಂದು ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಜಶೇಖರ್ ಸಲಹೆ ನೀಡಿದರುಇ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT