ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲು ನದಿ ಪುನಶ್ಚೇತನ: ಹೆಚ್ಚಿದ ಕೂಗು

ಗುಂಡ್ಲುಪೇಟೆ: ಬತ್ತಿ ಹೋಗಿದೆ ತಾಲ್ಲೂಕಿನ ಅಸ್ಮಿತೆಯಾಗಿದ್ದ ನದಿ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ
Last Updated 25 ಅಕ್ಟೋಬರ್ 2021, 3:46 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಅಂತರ್ಜಲ ಮಟ್ಟ ತೀವ್ರವಾಗಿ ಕುಸಿತಗೊಂಡಿರುವ ತಾಲ್ಲೂಕಿನಲ್ಲಿ ಈಗ ಜಲಮೂಲಗಳನ್ನು ‌ಸಂರಕ್ಷಿಸಬೇಕು ಎಂಬ ಕೂಗು ಕೇಳಿ ಬರಲಾರಂಭಿಸಿದೆ.

ಮೊದಲ ಹಂತವಾಗಿ, ತಾಲ್ಲೂಕಿನ ಹೆಗ್ಗುರುತಾಗಿದ್ದ, ಸಾವಿರಾರು ರೈತರ ಜೀವನಾಡಿಯಾಗಿದ್ದ ಹಾಗೂ ಪಟ್ಟಣಕ್ಕೆ ಗುಂಡ್ಲುಪೇಟೆ ಎಂಬ ಹೆಸರು ಬರಲು ಕಾರಣವಾಗಿದ್ದ ಗುಂಡ್ಲು ನದಿಯ ಪುನಶ್ಚೇತನದ ಬಗ್ಗೆ ಚರ್ಚೆ ಆರಂಭವಾಗಿದೆ. ಪಟ್ಟಣ ಹಾಗೂ ತಾಲ್ಲೂಕಿನ ಪ್ರಜ್ಞಾವಂತ ನಾಗರಿಕರು ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಗುಂಡ್ಲು ನದಿ ಸಂರಕ್ಷಣೆಯ ಅಗತ್ಯದ ಬಗ್ಗೆ ಅಭಿಯಾನ ಆರಂಭಿಸಿದ್ದಾರೆ. ಅಭಿಯಾನಕ್ಕೆ ಜನರ ಬೆಂಬಲವನ್ನು ಕ್ರೋಡೀಕರಿಸಲು ಪ್ರಯತ್ನಿಸುತ್ತಿದ್ದಾರೆ.

ಮೂರು ನಾಲ್ಕು ದಶಕಗಳ ಹಿಂದಿನವರೆಗೂ ಜೀವಂತವಾಗಿದ್ದ ಗುಂಡ್ಲು ನದಿಯ ಹರಿವು 50 ಕಿ.ಮೀ ದೂರದವರೆಗೂ ಇತ್ತು. ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ವಿವಿಧ ಕೆರೆಗಳಿಂದ ಉಗಮವಾಗುತ್ತಿದ್ದ ಗುಂಡ್ಲು ನದಿ, ನಂಜನಗೂಡಿನ ಬಳಿ ಕಪಿಲೆ ನದಿಯನ್ನು ಸೇರುವುದಕ್ಕೂ ಮೊದಲು ನೂರಾರು ಗ್ರಾಮಗಳಿಗೆ ಜೀವಸೆಲೆಯಾಗಿತ್ತು. ಅಭಿವೃದ್ಧಿ ಚಟುವಟಿಕೆ ಹೆಚ್ಚುತ್ತಿದ್ದಂತೆಯೇ ನೀರಿನ ಹರಿವು ಕಡಿಮೆಯಾಗುತ್ತ, ಈಗ ನದಿ ಬತ್ತಿಯೇ ಹೋಗಿದೆ.

ನದಿಯ ಹರಿಯುವಿಕೆ ಹೀಗಿತ್ತು: ಎರಡು ಮೂರು ಕಡೆಗಳಿಂದ ಹರಿಯುವ ನೀರು ಸಂಗಮಗೊಂಡು ಗುಂಡ್ಲು ನದಿ ಸೃಷ್ಟಿಯಾಗಿತ್ತು. ಗೋಪಾಲಸ್ವಾಮಿ ಬೆಟ್ಟ ತಪ್ಪಲಿನಲ್ಲಿರುವ ಹಿರಿಕೆರೆಯಲ್ಲಿನ ನೀರು ಹಂಗಳ ದೊಡ್ಡಕೆರೆಗೆ ಸಾಗಿ ಅಲ್ಲಿಂದ ಪಟ್ಟಣದ ಹಿರಿಕೆರೆಯೆಡೆಗೆ ಬರುತ್ತಿತ್ತು. ಅದೇ ರೀತಿಕುಂದುಕೆರೆ ಗ್ರಾಮದಲ್ಲಿರುವ ಹಿರಿಕೆರೆ ತುಂಬಿ ಯರಿಯೂರು, ವಡೆಯನಪುರ, ಕೊಡಹಳ್ಳಿ ಕೆರೆಗಳ ಮೂಲಕ ಹರಿದು ಗುಂಡ್ಲುಪೇಟೆಯ ಹಿರಿಕೆರೆಗೆ ಹರಿಯುತ್ತಿತ್ತು. ನೀರಿನ ಇನ್ನೊಂದು ಕವಲು ಬೇರಂಬಾಡಿ ಕೆಂಪುಸಾಗರ ಕೆರೆಯಿಂದ ಮಲ್ಲಯ್ಯನಪುರ ಕೆರೆಯ ಮೂಲಕ ಗುಂಡ್ಲುಪೇಟೆ ಕೆರೆಗೆ ಹರಿಯುತ್ತಿದ್ದು. ಇಲ್ಲಿಂದ ಮುಂದಕ್ಕೆ ಹರಿಯುತ್ತಿದ್ದ ನೀರಿನ ಹಳ್ಳ ಗುಂಡ್ಲು ನದಿಯಾಗಿ ನಂಜನಗೂಡಿನತ್ತ ಸಾಗುತ್ತಿತ್ತು. ಈ ನೀರಿನ ಹರಿವಿಗೆ ಬರಗಿ, ಮುಂಟಿಪುರ, ದೇವಲಾಪುರ, ರಾಘವಾಪುರ, ಕಮರಹಳ್ಳಿ ಮೂಲಕ ಹರಿಯುವ ತೊರೆ ಹಾಗೂ ತ್ರಿಯಂಬಕಪುರ ಕಡೆಯಿಂದ ಬರುವ ತೊರೆ ಸೇರಿ ಇನ್ನಷ್ಟು ರಭಸದಿಂದ ಹರಿದು ನಂಜನಗೂಡಿನ ಬಳಿ ಕಪಿಲೆಯನ್ನು ಸೇರುತ್ತಿತ್ತು.

ತುಂಬದ ಕೆರೆಗಳು:ಬಂಡೀಪುರ ಹುಲಿ ಸಂರಕ್ಷಿತ ವ್ಯಾಪ್ತಿಯಲ್ಲಿ ಸುರಿಯುತ್ತಿದ್ದ ಮಳೆಯೇ ಗುಂಡ್ಲು ನದಿಯ ಜಲಮೂಲ. ಕಾಡಿನಲ್ಲಿ ಸುರಿದ ಮಳೆಯು ಕಾಡಂಚಿನ ಭಾಗದ ಕೆರೆಗಳನ್ನು ತುಂಬುವಂತೆ ಮಾಡುತ್ತಿದ್ದವು. ಭರ್ತಿಯಾದ ಕೆರೆಗಳಿಂದ ಹೊರಕ್ಕೆ ಹರಿಯುವ ನೀರು ತೊರೆಯ ರೂಪ ತಾಳಿ ಗುಂಡ್ಲುಪೇಟೆಯ ಹಿರಿಕೆರೆಯನ್ನು ಸೇರುತ್ತಿತ್ತು. ಅಲ್ಲಿಂದ ಗುಂಡ್ಲು ನದಿ ಹೆಸರಿನಲ್ಲಿ ನೀರಿನ ಹರಿವು ಆರಂಭವಾಗುತ್ತಿತ್ತು.

ಆದರೆ, ಈಗ ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಮಳೆ ಬಂದರೂ ಕಾಡಂಚಿನ ಕೆರೆಗಳಿಗೆ ಸರಿಯಾಗಿ ನೀರು ಹರಿಯುತ್ತಿಲ್ಲ. ಉದಾಹರಣೆಗೆ ಮಳೆಗಾಲ ಆರಂಭಗೊಂಡು ಐದು ತಿಂಗಳು ಕಳೆದಿದ್ದರೂ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಹಿರಿಕೆರೆಗೆ ನೀರು ಹರಿದಿಲ್ಲ. ಈಗ ನಾಲ್ಕೈದು ದಿನಗಳ ಹಿಂದಿನಿಂದ ಸ್ವಲ್ಪ ಪ್ರಮಾಣದಲ್ಲಿ ನೀರು ಹರಿಯಲು ಆರಂಭಿಸಿದೆ.

ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ನೀರಿಗಾಗಿ ನಿರ್ಮಿಸಿರುವ ಚೆಕ್ ಡ್ಯಾಂಗಳು ಅವೈಜ್ಞಾನಿಕವಾಗಿರುವುದರಿಂದ ಕಾಡಿನಲ್ಲಿ ಹೆಚ್ವಿನ ಮಳೆಯಾದರೂ ಕೆರೆಗಳಿಗೆ ನೀರು ಹರಿದು ಬರುತ್ತಿಲ್ಲ ಎಂಬುದು ಕಾಡಂಚಿನ ಗ್ರಾಮಗಳ ರೈತರ ಆರೋಪ. ಗುಂಡ್ಲು ನದಿಗೆ ಸೇರುತ್ತಿದ್ದ ಜಲಮೂಲಗಳೆಲ್ಲ ಕಣ್ಮರೆಯಾಗಿರುವುದರಿಂದ ನದಿ ಬತ್ತಿರುವುದಕ್ಕೆ ಕಾರಣ ಎಂದು ಹೇಳುತ್ತಾರೆ ಹಿರಿಯರು.

ಹಲವು ಕಾರಣ:ವ್ಯವಸಾಯ ಭೂಮಿ ಹೆಚ್ಚಾಗುತ್ತಿರುವುದರಿಂದಲೂ, ಕೆರೆಗಳಿಗೆ ನೀರು ಹರಿಯುತ್ತಿದ್ದ ಕಾಲುವೆ/ದಾರಿಗಳು ಮುಚ್ಚಿವೆ. ಕಾಲುವೆಗಳ ಒತ್ತುವರಿಯೂ ಆಗಿದೆ. ಬೇಸಾಯದಲ್ಲಿ ರೈತರು ಹೆಚ್ಚಾಗಿ ಯೂರಿಯ ಬಳಕೆ ಮಾಡುವುದರಿಂದ, ಭೂಮಿಯ ಮೇಲೆ ಹೆಚ್ಚು ನೀರು ನಿಲ್ಲುತ್ತಿಲ್ಲ. ಯೂರಿಯ ವಾತಾವರಣದಲ್ಲಿರುವ ಸಾರಜನಕವನ್ನು ಹಿಡಿದಿಟ್ಟುಕೊಳ್ಳುತ್ತದೆ. ಭೂಮಿಯ ಜೈವಿಕ ಫಲವತ್ತತೆಯನ್ಬು ನಾಶ ಮಾಡುತ್ತದೆ. ನದಿಯ ಜಲ ಮೂಲಗಳು ಬತ್ತಿ ಹೋಗಲು ಇದೂ ಕಾರಣವಿರಬಹುದು. ಅವ್ಯಾಹತವಾಗಿ ನಡೆಯುತ್ತಿದ್ದ ಮರಳು ಗಣಿಗಾರಿಕೆ ಇನ್ನೊಂದು ಕಾರಣ ಎಂದು ಹೇಳುತ್ತಾರೆ ಪರಿಸರ ಪ್ರಿಯರು.

ಸುಲಭವಲ್ಲ: ‘ನದಿಯಲ್ಲಿ ಮತ್ತೆ ಜಲ ವೈಭವವನ್ನು ಮರುಕಳಿಸಬೇಕಾದರೆ ಸುಲಭವಾಗಿ ಆಗುವ ಕೆಲಸ ಅಲ್ಲ. ನದಿ ಪಾತ್ರವನ್ನು ತಂಪುಗೊಳಿಸಬೇಕು, ಇದಕ್ಕಾಗಿ ನದಿ ಜಾಡಿನ ಇಕ್ಕೆಲಗಳಲ್ಲಿ ಸಸಿಗಳನ್ನು ನೆಟ್ಟು ನೆರಳು ಮಾಡಬೇಕು. ಆಯಾ ಗ್ರಾಮದ ರೈತರು-ಯುವಕರಿಗೆ ಅರಿವನ್ನು ಮೂಡಿಸಬೇಕು. ಇದರ ಜೊತೆಯಲ್ಲಿ ನದಿ ಉಗಮವಾಗುವ ಪ್ರದೇಶಗಳಿಗೆ ಹೋಗಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕನ ಮಾಡಿ, ಮಳೆ ಬಂದಾಗ ನೀರು ಬೇರೆ ಕಡೆಗೆ ಹರಿಯದೇ ನೇರವಾಗಿ ಮೂಲ ಜಾಡಿನಲ್ಲಿ ಬರುವಂತೆ ಮಾಡುವ ಕೆಲಸವಾಗಬೇಕಿದೆ. ಕಾಲುವೆ, ಹಳ್ಳಗಳು ಮುಚ್ಚಿ ಹೋಗಿರುವುದನ್ನು ಸರಿಪಡಿಸಬೇಕು ಅಥವಾ ಒತ್ತುವರಿಯಾಗಿರುವುದನ್ನು ಸ್ಥಳೀಯ ಜನರಿಗೆ ಮೂಡಿಸಿ ಜಾಗೃತಿ ಮೂಡಿಸಬೇಕು. ಶಾಲಾ-ಕಾಲೇಜುಗಳಿಗೆ ಭೇಟಿ ಕೊಟ್ಟು ಗುಂಡ್ಲು ನದಿಯ ಇತಿಹಾಸವನ್ನು ತಿಳಿಸಿ, ಜೀವಂತಿಕೆ ಮರಳಲು ಏನು ಮಾಡಬೇಕು ಎನ್ನುವ ಬಗ್ಗೆ ಚರ್ಚೆ, ಸ್ಪರ್ಧೆ, ಸಂಕಿರಣಗಳನ್ನು ನಡೆಸಬೇಕು’ ಎಂದು ಕೆರೆಗಳ ಬಗ್ಗೆ ಅಧ್ಯಯನ ಮಾಡುತ್ತಿರುವ ಬೆಂಡರವಾಡಿ ಗ್ರಾಮದ ಆನಂದ್ ಅವರು ‘ಪ್ರಜಾವಾಣಿ‍’ಗೆ ತಿಳಿಸಿದರು.

--

ನದಿ ಉಳಿಸಲು ಅಭಿಯಾನ ಅನಿವಾರ್ಯ

70, 80ರ ದಶಕದಲ್ಲಿ ತಾಲೂಕಿನ ಜನತೆಗೆ ಜೀವನದಿಯಂತಿದ್ದ ತಾಲ್ಲೂಕಿನ ಅಸ್ಮಿತೆಯಾಗಿದ್ದ ಗುಂಡ್ಲು ನದಿಯ ಸಂರಕ್ಷಣೆಗಾಗಿ ತಾಲ್ಲೂಕಿನ ಜನರು ಒಗ್ಗಟ್ಟಿನಿಂದ ಕೈ ಜೋಡಿಸುವುದು ಅನಿವಾರ್ಯವಾಗಿದೆ. ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇದೆ. ನೀರಿಗಾಗಿ ಕೊಳವೆ ಬಾವಿಗಳನ್ನೇ ಅವಲಂಬಿಸಿರುವುದರಿಂದ ಅಂತರ್ಜಲಮಟ್ಟ ಕುಸಿದಿದೆ. ತಾಲ್ಲೂಕಿನ ಎಲ್ಲ ಜನಪರ ಸಂಘಟನೆಗಳು, ನಾಗರಿಕರು, ರೈತರು, ಯುವಕರು, ವಿದ್ಯಾರ್ಥಿಗಳು ರಾಜಕಾರಣಿಗಳು.. ಹೀಗೆ ಪ್ರತಿಯೊಬ್ಬರೂ ಪಕ್ಷ ಹಾಗೂ ಜಾತಿ ಭೇದ ಮರೆತು ಗುಂಡ್ಲು ನದಿ ಪುನಶ್ಚೇತನಕ್ಕೆ ಹಮ್ಮಿಕೊಂಡಿರುವ ಅಭಿಯಾನಕ್ಕೆ ಕೈ ಜೋಡಿಸಬೇಕು

-ರಾಘವೇಂದ್ರ ಅಪುರ, ಅಗತಗೌಡನಹಳ್ಳಿ

---

ವೈಜ್ಞಾನಿಕ ಚೆಕ್‌ಡ್ಯಾಂ ನಿರ್ಮಿಸಲಿ

ಕಾಡಿನಲ್ಲಿ ಅವೈಜ್ಞಾನಿಕವಾಗಿಚೆಕ್ ಡ್ಯಾಂಗಳನ್ನು ನಿರ್ಮಿಸಿರುವುದರಿಂದ ಕಾಡಂಚಿನ ಕೆರೆಗಳಿಗೆ ನೀರು ಸರಿಯಾಗಿ ಬರುತ್ತಿಲ್ಲ. ಐದಾರು ವರ್ಷಗಳ ಹಿಂದೆ, ಕಾಡಂಚಿನಲ್ಲಿ ಸಣ್ಣ ಪ್ರಮಾಣದ ಮಳೆಯಾದರೂ ಕೆರೆಗೆ ನೀರು ಹರಿದುಬಂದು ಕೋಡಿ ಬಿದ್ದು ಉಳಿದ ಕೆರೆಗಳಿಗೂ ನೀರು ಬರುತ್ತಿತ್ತು. ಈ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆಯಾದರೂ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಹಿರಿಕೆರೆ ಇನ್ನೂ ತುಂಬಿಲ್ಲ, ಆದ್ದರಿಂದ ಕಾಡಿನಲ್ಲಿ ಪ್ರಾಣಿಗಳಿಗೂ ಅನುಕೂಲ ಆಗುವಂತೆ ಮತ್ತು ಕೆರೆಗಳಿಗೆ ನೀರು ಹರಿಯುವಂತೆ ಚೆಕ್ ಡ್ಯಾಂ ನಿರ್ಮಾಣ ಮತ್ತು ಕಾಲುವೆಗಳನ್ನು ಸರಿಪಡಿಸಿದರೆ ಉಪಯೋಗ ಆಗುತ್ತದೆ

-ಮಾಧು, ರೈತ ಮುಖಂಡ, ಹಂಗಳ

---

ಸಮುದಾಯದ ಕಾರ್ಯಕ್ರಮ ಆಗಬೇಕು‌

ಗುಂಡ್ಲು ನದಿಗೆ ಜೀವ ತುಂಬಬೇಕಾದರೆ, ಈ ಅಭಿಯಾನ ಸಮುದಾಯ ಕಾರ್ಯಕ್ರಮ ಆಗಬೇಕು. ಆಯಾ ಗ್ರಾಮದಲ್ಲಿ ಕೆರೆಗೆ ನೀರು ಬರುತ್ತಿದ್ದ ಮೂಲಗಳನ್ನು ಸರಿಪಡಿಸಿಕೊಳ್ಳಲು ಗ್ರಾಮದ ಯುವಜನತೆ ಸಿದ್ಧರಾಗಬೇಕು. ಇದಕ್ಕಾಗಿ ನರೇಗಾ ಯೋಜನೆ ಬಳಸಿಕೊಳ್ಳುವುದಕ್ಕೆ ಅವಕಾಶ ಇದೆ. ನದಿಪಾತ್ರದ ಪ್ರದೇಶಗಳಲ್ಲಿ ಜಲ ಸಂರಕ್ಷಣೆಯ ಕೆಲಸವಾದರೆ ನದಿ ಪುನಶ್ಚೇತನ ಸಾಧ್ಯವಾಗುತ್ತದೆ. ಗುಂಡ್ಲು ನದಿಯಲ್ಲಿ ಮತ್ತೆ ನೀರು ಹರಿದರೆ ತಾಲ್ಲೂಕಿನಲ್ಲಿ ಇರುವ ನೀರಿನ ಸಮಸ್ಯೆಗೆ ಮುಕ್ತಿ ಸಿಗಲಿದೆ

-ಚಿದಾನಂದ, ಗುಂಡ್ಲುಪೇಟೆ

--

‘ಶ್ರಮ ಹಾಕಿದರೆ ನದಿಗೆ ಜೀವ ತುಂಬಬಹುದು’

ಬತ್ತಿಹೋಗಿರುವ ನದಿಗೆ ಜೀವ ತುಂಬಲು ಹಲವು ಮಾರ್ಗಗಳು ಇವೆ ಎಂದು ಹೇಳುತ್ತಾರೆ ಮಂಡ್ಯ ಜಿಲ್ಲೆಯ ಕೆ.ಬಿ.ದೊಡ್ಡಿಯ ಕೃಷಿ ವಿದ್ಯಾಲಯದ ಪ್ರಾಧ್ಯಾಪಕರಾದಡಾ.ಎಚ್.ಆರ್.ಪ್ರಕಾಶ್ ಅವರು.

‘ಮರಳುಗಾಡು ರಾಜಸ್ಥಾನದಲ್ಲಿ ರಾಜೇಂದ್ರಸಿಂಗ್ ನೇತೃತ್ವದ ತಂಡ ಬತ್ತಿ ಹೋದ ಐದು ನದಿಗಳಿಗೆ ಜೀವ ನೀಡಿದೆ. ಹಾಗಿರುವಾಗ, ಸಾಕಷ್ಟು ಮಳೆ ಬೀಳುವ ಗುಂಡ್ಲುಪೇಟೆಯಲ್ಲಿ ನದಿಯ ಪುನಶ್ಚೇತನ ಮಾಡಲು ಖಂಡಿತ ಸಾಧ್ಯ. ಅದಕ್ಕಾಗಿ ಸ್ವಲ್ಪ ಶ್ರಮ ಹಾಕಬೇಕು. ಅಭಿಯಾನ ಆರಂಭಿಸಿರುವ ಯುವಜನರು ರಾಜಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ನಡೆಸಿರುವ ಪ್ರಯೋಗವನ್ನು ಅಧ್ಯಯನ ಮಾಡಿ ಬಂದು ಅದನ್ನು ಇಲ್ಲಿಯೂ ಅಳವಡಿಸಿಕೊಳ್ಳಬೇಕು. ಇದಲ್ಲದೇನದಿ ಪಾತ್ರದ ಎರಡೂ ಬದಿಗಳಲ್ಲಿ ಇಂಗು ಗುಂಡಿ ನಿರ್ಮಾಣ, ನದಿ ಪಾತ್ರದ ಪ್ರದೇಶದಲ್ಲಿ ಕೃಷಿ ಹೊಂಡ, ನಾಲಾಬದು ನಿರ್ಮಾಣ, ರಾಜಕಾಲುವೆ ಮಾಡಿ ಕೆರೆಗಳ ಹೂಳು ತೆಗೆಯುವುದು, ಮರಗಳನ್ನು ಬೆಳೆಸುವುದು‌, ಅರಣ್ಯ ರಕ್ಷಣೆಯ ಮಾರ್ಗಗಳ ಮೂಲಕವೂ ಗುಂಡ್ಲು ನದಿ ಮತ್ತೆ ಹರಿಯುವಂತೆ ಮಾಡಬಹುದು’ ಎಂದು ಸಲಹೆ ನೀಡುತ್ತಾರೆ ಅವರು.

---

ಗುಂಡ್ಲು ನದಿ ಉಳಿಸುವ ಅಭಿಯಾನದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು, ನಂತರ ಈ ಬಗ್ಗೆ ಸಂಬಂಧಿಸಿದವರೊಂದಿಗೆ ಸಭೆ ನಡಸಿದ ಬಳಿಕ ಪ್ರತಿಕ್ರಿಯಿಸುವೆ
-ಸಿ.ಎಸ್.ನಿರಂಜನಕುಮಾರ್, ಶಾಸಕ

--

ನದಿ ಪುನಶ್ಚೇತನ ಸುಲಭದ ಕೆಲಸ ಅಲ್ಲ. ಕೆಲವೇ ಮಂದಿಯಿಂದ ಸಾಧ್ಯವೂ ಇಲ್ಲ. ಜನರಲ್ಲಿ ಜಾಗೃತಿ ಮೂಡಬೇಕು. ಪ್ರಜ್ಞಾವಂತ ಮನಸ್ಸುಗಳು ಒಂದಾಗಬೇಕು

-ಆನಂದ್, ಬೆಂಡರವಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT