ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಾವೃತ ಪ್ರದೇಶಗಳಿಗೆ ಸಿಇಒ ಭೇಟಿ

ಜನರಿಗೆ ಅನುಕೂಲ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ, ಆರೋಗ್ಯ ಕಾಳಜಿಗೆ ಸಲಹೆ
Last Updated 7 ಆಗಸ್ಟ್ 2022, 7:47 IST
ಅಕ್ಷರ ಗಾತ್ರ

ಚಾಮರಾಜನಗರ: ಸತತ ಮಳೆ ಹಾಗೂ ಸುವರ್ಣಾವತಿ ನದಿ ನೀರಿನ ಮಟ್ಟ ಏರಿಕೆಯಿಂದಾಗಿ ಕೋಡಿ ಬಿದ್ದಿರುವ ಕೆರೆಗಳು ಹಾಗೂ ಜಲಾವೃತವಾಗಿರುವ ವಿವಿಧ ಭಾಗಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲ್ಲೂಕಿನ ಹೊಂಗನೂರಿನ ಹಿರಿಕೆರೆಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರೊಂದಿಗೆ ಸಮಾಲೋಚಿಸಿ ಅವರ ಅಹವಾಲುಗಳನ್ನು ಆಲಿಸಿದರು. ಇರಸವಾಡಿ ಕೆರೆಗೂ ಭೇಟಿ ನೀಡಿ ಕೋಡಿ ಬಿದ್ದಿರುವ ಬಗ್ಗೆ ವೀಕ್ಷಣೆ ಮಾಡಿದರು. ಸ್ಥಳೀಯರೊಂದಿಗೆ ಮಾತನಾಡಿ ವಿವರ ಪಡೆದುಕೊಂಡರು.

ಯಳಂದೂರು ತಾಲ್ಲೂಕಿನ ಯರಿಯೂರಿನ ಹೊಸ ಬಡಾವಣೆಗೆ ಭೇಟಿ ನೀಡಿ ಸುವರ್ಣಾವತಿ ನದಿಯಿಂದ ನಾಲೆ ಮೂಲಕ ನೀರು ಬಡಾವಣೆಗೆ ನುಗ್ಗಿರುವ ಬಗ್ಗೆ ಪರಿಶೀಲಿಸಿದರು. ಗ್ರಾಮ ಪಂಚಾಯಿತಿಯಿಂದ ಬಡಾವಣೆಯಲ್ಲಿ ನೀರು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುತ್ತಿರುವ ಕೆಲಸವನ್ನು ವೀಕ್ಷಿಸಿದರು. ಜನರಿಗೆ ತೊಂದರೆಯಾಗದಂತೆ ತ್ವರಿತವಾಗಿ ಹಾಗೂ ಸಮರ್ಪಕವಾಗಿ ಓಡಾಡಲು ಹಾಗೂ ಜನರಿಗೆ ಅನುಕೂಲವಾಗುವಂತೆ ಕಾಮಗಾರಿ ನಿರ್ವಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನೀರು ಪರೀಕ್ಷೆಗೆ ಸೂಚನೆ: ಸ್ಥಳದಲ್ಲಿಯೇ ಇದ್ದ ಜಿಲ್ಲಾ ಆರೋಗ್ಯ ಮತ್ತರು ಕುಟುಂಬ ಕಲ್ಯಾಣಾ ಅಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಜಗದೀಶ್ ಹಾಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರಿಗೆ ಗ್ರಾಮಕ್ಕೆ ಪೂರೈಸಲಾಗುತ್ತಿರುವ ಕುಡಿಯುವ ನೀರನ್ನು ಪರೀಕ್ಷಿಸಲು ನಿರ್ದೇಶನ ನೀಡಿದರು.

‘ಮಳೆ ಹಾಗೂ ಪ್ರವಾಹ ಸಂದರ್ಭದಲ್ಲಿ ಕೊಳವೆಬಾವಿ ಸೇರಿದಂತೆ ಇತರೆ ಕುಡಿಯುವ ನೀರು ಸರಬರಾಜಿನಲ್ಲಿ ಯಾವುದೇ ಕಲುಷಿತ ಅಂಶಗಳು ಸೇರ್ಪಡೆಯಾಗದಂತೆ ಎಚ್ಚರಿಕೆ ವಹಿಸಬೇಕಿದೆ. ಹೀಗಾಗಿ ಕುಡಿಯುವ ನೀರು ಕುಡಿಯಲು ಯೋಗ್ಯವೇ ಎಂಬ ಬಗ್ಗೆ ಪರೀಕ್ಷಿಸಿ ಕೂಡಲೇ ದೃಢೀಕರಿಸಬೇಕು. ಎಲ್ಲ ಗ್ರಾಮಗಳಲ್ಲಿಯೂ ಕುಡಿಯುವ ನೀರು ಪರೀಕ್ಷೆ ಕಾರ್ಯ ಆಗಬೇಕು ಎಂದು ಕೆ.ಎಂ.ಗಾಯಿತ್ರಿ ಸೂಚಿಸಿದರು.

‘ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಾಂತರ ಭಾಗಗಳಲ್ಲಿ ಜನರ ಆರೋಗ್ಯದ ಬಗ್ಗೆ ತಿಳಿವಳಿಕೆ ನೀಡಬೇಕು. ಗ್ರಾಮದಲ್ಲಿ ಜನರ ಆರೋಗ್ಯದಲ್ಲಿ ಏರುಪೇರಾದರೆ, ತೊಂದರೆ ಕಂಡು ಬಂದರೆ ಕೂಡಲೇ ಆರೋಗ್ಯ ತಪಾಸಣೆ ಮಾಡಬೇಕು. ಗ್ರಾಮಗಳಿಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದರು.

‘ಮಳೆ, ಪ್ರವಾಹ ಸಂದರ್ಭದಲ್ಲಿ ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕುದಿಸಿ ಆರಿಸಿದ ನೀರನ್ನು ಸೇವಿಸಿ. ಆರೋಗ್ಯದಲ್ಲಿ ಯಾವುದಾದರೂ ಬದಲಾವಣೆಯಾದರೆ ತಕ್ಷಣವೇ ವೈದ್ಯರ ಬಳಿ ತೆರಳಿ ಪರೀಕ್ಷಿಸಿಕೊಳ್ಳಿ’ ಎಂದು ಗ್ರಾಮಸ್ಥರಿಗೆ ಸಿಇಒ ಅವರು ಸಲಹೆ ನೀಡಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ, ಇತರೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT