ಮಂಗಳವಾರ, ಜನವರಿ 31, 2023
19 °C
ಎಸ್‌ಸಿ, ಎಸ್‌ಟಿ ಹಿತರಕ್ಷಣಾ ಸಮಿತಿ ಸಭೆ: ಹಲವು ಸಮಸ್ಯೆಗಳ ಪ್ರಸ್ತಾಪ

ಕಾಲಮಿತಿಯಲ್ಲಿ ಸಮಸ್ಯೆ ಇತ್ಯರ್ಥಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಚರ್ಚಿತವಾಗುವ ವಿಷಯಗಳಿಗೆ ಸಂಬಂಧಿಸಿದಂತೆ ಕಾಲಮಿತಿಯಲ್ಲಿ ಪರಿಹಾರ ಸಿಗುವಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಗುರುವಾರ ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೆ ಕೆಡಿಪಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಸಭೆಯ ಆರಂಭದಲ್ಲೇ ಮಾತನಾಡಿದ ಸಮುದಾಯದ ಮುಖಂಡರು, ‘ಹಿಂದಿನ ಸಭೆಯಲ್ಲಿ ನಡೆದ ವಿಷಯಗಳು ಚರ್ಚೆಗಳು ನಡಾವಳಿಯಲ್ಲಿ ಸರಿಯಾಗಿ ದಾಖಲಾಗಿಲ್ಲ. ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ’ ಎಂದು ಆಕ್ಷೇಪಿಸಿದರು. 

ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ‘ಸಭೆಯಲ್ಲಿ ನಡೆಯುವ ವಿಷಯಗಳು ಚರ್ಚೆಗಳು ವಿವರವಾಗಿ ದಾಖಲಾಗಬೇಕು. ಪ್ರಸ್ತಾಪಿಸಲಾದ ಸಮಸ್ಯೆಗಳಿಗೆ ಯಾವ ಕ್ರಮ ವಹಿಸಲಾಗಿದೆ, ಪರಿಹಾರ ದೊರೆತಿದೆಯೇ ಎಂಬ ಬಗ್ಗೆ ಸ್ಪಷ್ಟವಾಗಿ ನಮೂದು ಮಾಡಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನರ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ದೊರೆಯುವಂತೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು’ ಎಂದರು. 

ಚಾಮರಾಜನಗರ ತಾಲ್ಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ಇತ್ತೀಚೆಗೆ ವರದಿಯಾದ ಅಸ್ಪೃಶ್ಯತೆ ಆಚರಣೆ ಪ‍್ರಕರಣ ಸಭೆಯಲ್ಲಿ ಪ್ರಸ್ತಾಪವಾಯಿತು.

ಪ್ರಕರಣ ಸಂಬಂಧ ಗ್ರಾಮದಲ್ಲಿ ಶಾಂತಿ ಸಭೆ ಕರೆಯುವುದಾಗಿ ತಿಳಿಸಿದ್ದರೂ ಈವರೆಗೂ ಸಭೆ ನಡೆಸಲಾಗಿಲ್ಲ. ಸಭೆಗೆ ದಿನಾಂಕ ನಿಗದಿ ಮಾಡಬೇಕು. ಅಲ್ಲದೇ ಗ್ರಾಮದ ಇತರೆ ಹಲವು ವಿಷಯಗಳು ಬಗೆಹರಿಯಬೇಕು. ಗ್ರಾಮದಲ್ಲಿ ಸಿದ್ದರಾಮೇಶ್ವರ ದೇವಾಲಯದಲ್ಲಿ ದಲಿತರಿಗೆ ಪ್ರವೇಶ ಇಲ್ಲ. ದೇವಾಲಯವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿಸಬೇಕು. ಇಲ್ಲದಿದ್ದರೆ ನಾವೇ ದೇವಾಲಯಕ್ಕೆ ನುಗ್ಗಲು ನಿರ್ಧರಿಸಿದ್ದೇವೆ’ ಎಂದು ಗ್ರಾಮದ ಮುಖಂಡ ಕುಮಾರ್‌ ಒತ್ತಾಯಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ರಮೇಶ್‌ ಇದೇ 12ರಂದು ಸಭೆ ನಡೆಸುವುದಾಗಿ ಭರವಷೆ ನೀಡಿದರು.  

₹50 ಲಕ್ಷದೊಳಗಿನ ಕಾಮಗಾರಿ ನಿರ್ವಹಣೆಗೆ ಪರಿಶಿಷ್ಟರಿಗೆ ಸೇರಿದ ಗುತ್ತಿಗೆದಾರರಿಗೂ ಅವಕಾಶವಾಗಬೇಕು. ಪ್ರತಿಷ್ಠಿತ ಶಾಲೆಗಳ ಪಟ್ಟಿಗೆ ಇತರೆ ಅರ್ಹ ಶಾಲೆಗಳನ್ನು ಸೇರ್ಪಡೆ ಮಾಡಬೇಕು. ಎಚ್‌ಡಿ ಫಾರೆಸ್ಟ್ ಸೇರಿದಂತೆ ಇತರೆ ಭೂಮಿಯನ್ನು ಪರಿಶಿಷ್ಟ ಜನಾಂಗದವರಿಗೆ ನೀಡುವ ನಿಟ್ಟಿನಲ್ಲಿ ಸೂಕ್ತ ಕ್ರಮವಾಗಿಲ್ಲ. ಪರಿಶಿಷ್ಟರಿಗೆ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಸಿಗುತ್ತಿಲ್ಲ, ಸ್ಮಶಾನ ಮಂಜೂರಾತಿ, ಜಲಜೀವನ್ ಮಿಷನ್ ಕಾಮಗಾರಿ ಬಳಿಕ ರಸ್ತೆಗಳ ಗುಂಡಿ ಮುಚ್ಚದಿರುವುದು ಸೇರಿದಂತೆ ಇನ್ನಿತರ ಹಲವು ಸಮಸ್ಯೆಗಳನ್ನು ಮುಖಂಡರು ಸಭೆಯಲ್ಲಿ ಪ್ರಸ್ತಾಪಿಸಿದರು. 

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ, ಉಪವಿಭಾಗಾಧಿಕಾರಿ ಗೀತಾ ಹುಡೇದ, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣಿಕೊಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ್, ಜಿಲ್ಲಾ ವಿಶೇಷ ದಳ ಇನ್‌ಸ್ಪೆಕ್ಟರ್ ಮಹದೇವಶೆಟ್ಟಿ, ಮುಖಂಡರಾದ ಸಿ.ಕೆ. ಮಂಜುನಾಥ್, ಸಿ.ಎಂ. ಕೃಷ್ಣಮೂರ್ತಿ, ಕೆ.ಎಂ.ನಾಗರಾಜು, ಆರ್.ಪಿ.ನಂಜುಂಡಸ್ವಾಮಿ, ಅಣಗಳ್ಳಿ ಬಸವರಾಜು, ಸಿದ್ದರಾಜು ಕೆಂಪನಪಾಳ್ಯ, ಸಿ.ಕೆ.ರವಿಕುಮಾರ್, ಚಾ.ಗು. ನಾಗರಾಜು, ಚಂಗುಮಣಿ, ರಾಮಸಮುದ್ರ ನಾಗರಾಜು, ಶ್ರೀಕಂಠ, ಸುರೇಶ್‌ನಾಯಕ, ಜಿ. ಬಂಗಾರು, ಶಿವಣ್ಣ, ಸಂಘಸೇನ, ಬ್ಯಾಡಮೂಡ್ಲು ಬಸವಣ್ಣ ಇತರರು ಇದ್ದರು.  

ಎಸ್‌ಪಿ, ಸಿಇಒ ಬಾರದ್ದಕ್ಕೆ ಆಕ್ರೋಶ

ಸಭೆಯ ಆರಂಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ, ಎಸ್‌ಪಿ ಟಿ.ಪಿ.ಶಿವಕುಮಾರ್‌ ಅವರು ಇರಲಿಲ್ಲ. 

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಖಂಡರು, ಸಭೆಗೆ ಇಲಾಖೆಗಳ ಮುಖ್ಯಸ್ಥರು ಬಾರದಿದ್ದರೆ ಹೇಗೆ ಎಂದು ಪ್ರಶ್ನಿಸಿದರು. ಸಭೆಗೆ ಕರೆಸಬೇಕು ಎಂದು ಪಟ್ಟು ಹಿಡಿದರು. ಆ ಬಳಿಕ ಜಿಲ್ಲಾ ಪಂಚಾಯಿತಿ ಸಿಇಒ ಬಂದರು. ಎಸ್‌ಪಿ ಬದಲು ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಸಭೆಯಲ್ಲಿ ಭಾಗಿಯಾದರು. 

‘ಜೀತ ಮುಕ್ತರಿಗೆ ಸೌಲಭ್ಯ ಸಿಕ್ಕಿಲ್ಲ’

ಮುಖಂಡ ಸಿ.ಎಂ.ಕೃಷ್ಣಮೂರ್ತಿ ಮಾತನಾಡಿ, ‘ಜೀತದಿಂದ ಮುಕ್ತರಾದವರಿಗೆ ಸೌಲಭ್ಯಗಳು ಸಿಗುತ್ತಿಲ್ಲ. ನಿಗಮಗಳು ಸಾಲ ನೀಡುತ್ತಿಲ್ಲ. ಜೀತ ಮುಕ್ತರ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಪ್ರತಿ ಬಾರಿ ಚರ್ಚೆಯಾಗುತ್ತದೆ. ಆದರೆ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜೀತ ಪದ್ಧತಿ ಕಂಡು ಬಂದಿಲ್ಲ ಎಂದು ಕೆಳಹಂತದ ಅಧಿಕಾರಿಗಳು ವರದಿ ನೀಡುತ್ತಾರೆ’ ಎಂದು ದೂರಿದರು. 

ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ‘ನಿರ್ದಿಷ್ಟ ಪ್ರಕರಣಗಳನ್ನು ಉಲ್ಲೇಖಿಸಿ ಮಾತನಾಡಿದರೆ ಕ್ರಮ ಕೈಗೊಳ್ಳಬಹುದು’ ಎಂದರು. 

‘ಈಗಾಗಲೇ ತಹಶೀಲ್ದಾರ್‌ ಅವರಿಗೆ ತಿಳಿಸಲಾಗಿದೆ. ಪ್ರತಿ ಬಾರಿಯೂ ಕೊಡಬೇಕು ಅಂದರೆ ಹೇಗೆ’ ಎಂದು ಕೃಷ್ಣಮೂರ್ತಿ ಖಾರವಾಗಿ ಕೇಳಿದರು.

‘ಜೀತ ಮುಕ್ತರಾದವರ ಬಗ್ಗೆ ಸಭೆ ನಡೆಯುವಾಗ ಈ ಬಗ್ಗೆ ವಿವರವಾಗಿ ಚರ್ಚಿಸಲಾಗುವುದು’ ಎಂದು ರಮೇಶ್‌ ಹೇಳಿದರು. 

ನಮ್ಮ ಕ್ಲಿನಿಕ್‌ ಸ್ಥಳಾಂತರಕ್ಕೆ ಆಕ್ಷೇಪ

ರಾಮಸಮುದ್ರದ ನಾಗರಾಜ್‌ ಮಾತನಾಡಿ, ‘ಆರೋಗ್ಯ ಇಲಾಖೆಯು ಕರಿನಂಜನಪುರದಲ್ಲಿ ಆರಂಭಿಸಲಾಗಿರುವ ನಮ್ಮ ಕ್ಲಿನಿಕ್‌, ಈ ಹಿಂದೆ ರಾಮಸಮುದ್ರದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿತ್ತು. ರಾಮಸಮುದ್ರ ನಿಜವಾದ ಕೊಳಗೇರಿ. ಆದರೆ, ಅದನ್ನು ದೂರದ ಕರಿನಂಜನಪುರದಲ್ಲಿ ಆರಂಭಿಸಲಾಗಿದೆ. ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಿಗೆ ಸೇರಿದ ಮನೆಯನ್ನು ಬಾಡಿಗೆಗೆ ಪಡೆದು ಕ್ಲಿನಿಕ್‌ ಆರಂಭಿಸಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.