ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ಸಿಗದ ಸರ್ಕಾರಿ ಪ್ರೌಢಶಾಲೆ ಭಾಗ್ಯ: ಬಡ ವಿದ್ಯಾರ್ಥಿಗಳಿಗೆ ತೊಂದರೆ

ಮಾರ್ಟಳ್ಳಿ: ಎಂಟಕ್ಕೂ ಹೆಚ್ಚು ಗ್ರಾಮಗಳ ಬಡ ವಿದ್ಯಾರ್ಥಿಗಳಿಗೆ ತೊಂದರೆ
Last Updated 25 ಮೇ 2022, 4:21 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಮಾರ್ಟಳ್ಳಿ ಕ್ಲಸ್ಟರ್‌ನಲ್ಲಿ ಸರ್ಕಾರಿ ಪ್ರೌಢಶಾಲೆಯಿಲ್ಲದೇ ಬಡಕುಟುಂಬಗಳ ವಿದ್ಯಾರ್ಥಿಗಳು ಪ್ರೌಢಶಿಕ್ಷಣಕ್ಕಾಗಿ ಖಾಸಗಿ ಶಾಲೆ ಅಥವಾ ಬೇರೆ ಕ್ಲಸ್ಟರ್ ಶಾಲೆಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ.‌

ಈ ಕ್ಲಸ್ಟರ್‌ನಲ್ಲಿ ಬರುವ ನಾಲ್ ರೋಡ್, ಸುಳ್ವಾಡಿ, ಹಳೆ ಮಾರ್ಟಳ್ಳಿ, ಗೋಡೇಸ್ ನಗರ, ಕಡಬೂರು, ಬಿದರಳ್ಳಿ, ಎಲಚಿಕೆರೆ, ಅಂಥೋಣಿಯಾರ್ ಕೋಯಿಲ್ ಗ್ರಾಮಗಳಲ್ಲಿ ಸರ್ಕಾರಿ ಕಿರಿಯ, ಹಿರಿಯ ಹಾಗೂ ಉನ್ನತೀಕರಿಸಿದ ಶಾಲೆಗಳಿವೆ. ಪ್ರತಿ ವರ್ಷ ಒಂದೊಂದು ಶಾಲೆಯಿಂದ ಕನಿಷ್ಠ 10 ವಿದ್ಯಾರ್ಥಿಗಳಾದರೂ 7ನೇ ತರಗತಿ ಮುಗಿಸಿದರೆ 8 ಶಾಲೆಗಳಿಂದ 80 ಮಕ್ಕಳು ಪ್ರೌಢಶಿಕ್ಷಣ ಪಡೆಯಲು ದುಬಾರಿ ಹಣ ಖರ್ಚು ಮಾಡಿ ಖಾಸಗಿ ಶಾಲೆ ಸೇರಬೇಕು ಅಥವಾ ರಾಮಾಪುರ, ಕೌದಳ್ಳಿಗೆ ಬರಬೇಕಿದೆ.

2018ರ ಡಿಸೆಂಬರ್‌ 14ರಂದು ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣದಲ್ಲಿ ಮೃತಪಟ್ಟ ಕುಟುಂಬಕ್ಕೆ ಸಾಂತ್ವನ ಹೇಳಲು ಬಿದರಹಳ್ಳಿ ಗ್ರಾಮಕ್ಕೆ ಬಂದಿದ್ದ ಅಂದಿನ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ, ಈ ಭಾಗದಲ್ಲಿ ಒಂದು ಸರ್ಕಾರಿ ಪ್ರೌಢಶಾಲೆ ಆರಂಭಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ್ದ ಕುಮಾರಸ್ವಾಮಿ ಅವರು 2019-20 ಸಾಲಿನ ಶೈಕ್ಷಣಿಕ ವರ್ಷದಿಂದ ಬಿದರಹಳ್ಳಿ ಗ್ರಾಮದಲ್ಲಿ ಪ್ರೌಢಶಾಲೆ ಆರಂಭಿಸಲಾಗವುದು. ಇದಕ್ಕೆ ಸಂಬಂಧಿಸಿದಂತೆ ಪ್ರಸ್ತಾವ ಸಲ್ಲಿಸುವಂತೆ ಸೂಚಿಸಿದ್ದರು.

‌ಬಿದರಹಳ್ಳಿ ಗ್ರಾಮದಲ್ಲಿ ಪ್ರೌಢಶಾಲೆ ಆರಂಭಿಸಿದರೆ ನಾಲ್ ರೋಡ್, ಸಂದನಪಾಳ್ಯ ವಿದ್ಯಾರ್ಥಿಗಳಿಗೆ ಅಂತರ ಜಾಸ್ತಿಯಾಗಲಿದೆ ಎಂದು ಮನಗಂಡು ಹಳೇ ಮಾರ್ಟಳ್ಳಿ ಅಥವಾ ಗೋಡೇಸ್ ನಗರ ಗ್ರಾಮದಲ್ಲಿ ಪ್ರೌಢಶಾಲೆ ತೆರೆಯಲು ಸ್ಥಳಾವಕಾಶವಿರುವ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರಸ್ತಾವ ಸಲ್ಲಿಸಿದ್ದರು. 2019-20ನೇ ಸಾಲಿನ ಶೈಕ್ಷಣಿಕ ವರ್ಷದಿಂದಲೇ ಆರಂಭವಾಗಬೇಕಿದ್ದ ಪ್ರೌಢಶಾಲೆ ಎರಡು ಶೈಕ್ಷಣಿಕ ವರ್ಷ ಮುಗಿದರೂ ಆರಂಭವಾಗುವ ಲಕ್ಷಣ ಕಾಣುತ್ತಿಲ್ಲ.

‌‘ಖಾಸಗಿ ಶಾಲೆಗಳಿಗೆ ದುಬಾರಿ ವೆಚ್ಚ ಭರಿಸಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಾಗದೇ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಈ ಭಾಗದಲ್ಲಿ ಪ್ರತಿವರ್ಷ ಇಷ್ಟು ಮಕ್ಕಳು ಅಭ್ಯಾಸ ಮಾಡುತ್ತಿದ್ದರೂ ಸರ್ಕಾರ ಮಾತ್ರ ನಮ್ಮಲ್ಲಿ ಪ್ರೌಢಶಾಲೆ ಆರಂಭಿಸಲು ಮೀನ–ಮೇಷ ಎಣಿಸುತ್ತಿದೆ. ಹೀಗಾದರೆ ನಾವು ಮಕ್ಕಳ ಶಿಕ್ಷಣವನ್ನು ಪ್ರಾಥಮಿಕ ಹಂತದಲ್ಲೇ ಮೊಟಕುಗೊಳಿಸಬೇಕಾಗುತ್ತದೆ’ ಎನ್ನುತ್ತಾರೆ ಇಲ್ಲಿನ ಪೋಷಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT